ಹೆಲ್ಮೆಟ್ ಧರಿಸುವುದರಿಂದ ನಿಜಕ್ಕೂ ಕೂದಲು ಉದುರುತ್ತಾ? ಈ ಬಗ್ಗೆ ತಜ್ಞರು ಹೇಳೋದೇನು
ಸುರಕ್ಷತೆಯ ದೃಷ್ಟಿಯಿಂದ ದ್ವಿಚಕ್ರ ವಾಹನ ಸವಾರರು ವಾಹನ ಚಲಾಯಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಲೇಬೇಕು ಎಂಬ ರೂಲ್ಸ್ ಇದೆ. ಆದ್ರೆ ಹೆಚ್ಚಿನವರು ಜಾಸ್ತಿ ಹೊತ್ತು ಹೆಲ್ಮೆಟ್ ಧರಿಸಿದ್ರೆ ಇದರಿಂದ ಕೂದಲು ಉದುರುವ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂಬ ಭಯದಿಂದ ಹೆಲ್ಮೆಟ್ ಧರಿಸುವುದಿಲ್ಲ. ಆದರೆ ನಿಜಕ್ಕೂ ಹೆಲ್ಮೆಟ್ ಕೂದಲು ಉದುರಲು ಕಾರಣವಾಗುತ್ತಾ? ಈ ಬಗ್ಗೆ ಡಾ. ಅಂಕುರ್ ಸರಿನ್ ಏನು ಹೇಳುತ್ತಾರೆ ನೋಡಿ.

ಸಂಚಾರ ನಿಯಮಗಳ ಪ್ರಕಾರ, ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಲೇಬೇಕು. ಸುರಕ್ಷತೆಯ ದೃಷ್ಟಿಯಿಂದಾಗಿ ದ್ವಿಚಕ್ರ ವಾಹನ ಸವಾರರು ವಾಹನ ಚಲಾಯಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಲೇಬೇಕು. ಆದರೆ ಕೆಲವರು ಕೂದಲು ಉದುರುತ್ತೆ ಅನ್ನೋ ಕಾರಣಕ್ಕೆ ಹೆಲ್ಮೆಟ್ ಧರಿಸಲು ಹಿಂದೇಟು ಹಾಕುತ್ತಾರೆ. ಇನ್ನೂ ಕೆಲವರು ಹೆಲ್ಮೆಟ್ ಧರಿಸುವುದನ್ನೇ ತಪ್ಪಿಸುತ್ತಾರೆ. ಆದರೆ ನಿಜಕ್ಕೂ ಹೆಲ್ಮೆಟ್ ಕೂಡಾ ಕೂದಲು ಉದುರುವಿಕೆಗೆ ಕಾರಣವೇ? (Is helmet cause to hair loss) ಹೆಲ್ಮೆಟ್ ಧರಿಸುವುದರಿಂದ ಕೂದಲು ಹೇಗೆ ಉದುರುತ್ತದೆ ? ಈ ವಿಷಯದ ಸತ್ಯಾಸತ್ಯತೆಯನ್ನು ಡಾ. ಅಂಕುರ್ ಸರಿನ್ (Dr. Ankur Sarin) ಶೇರ್ ಮಾಡಿದ್ದಾರೆ. ಹಾಗಾದ್ರೆ ಡಾ. ಸರಿನ್ ಈ ಬಗ್ಗೆ ಏನು ಹೇಳಿದ್ದಾರೆ ಎಂಬುದನ್ನು ನೋಡಿ.
ಹೆಲ್ಮೆಟ್ ಧರಿಸುವುದರಿಂದ ಕೂದಲು ಉದುರುತ್ತಾ?
ಹೆಲ್ಮೆಟ್ ಧರಿಸುವುದರಿಂದ ಕೂದಲು ಉದುರುತ್ತದೆಯೇ? ಈ ಬಗ್ಗೆ ಅನೇಕರ ಮನಸ್ಸಿನಲ್ಲಿ ಸಂಶಯಗಳಿವೆ. ಚರ್ಮರೋಗ ತಜ್ಞ ಡಾ. ಅಂಕುರ್ ಸರಿನ್ ಇದರ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಿದ್ದಾರೆ. ಡಾ. ಅಂಕುರ್ ಸರಿನ್ ಪ್ರಕಾರ, ಹೆಲ್ಮೆಟ್ ನೇರವಾಗಿ ಕೂದಲು ಉದುರುವಿಕೆಗೆ ಕಾರಣವಾಗುವುದಿಲ್ಲ. ಆದರೆ ಕೊಳಕು ಅಥವಾ ಬಿಗಿಯಾದ ಹೆಲ್ಮೆಟ್ ಕೂದಲಿನ ಮೇಲೆ ತಲೆಹೊಟ್ಟು ಸಮಸ್ಯೆ ಮತ್ತು ಒತ್ತಡವನ್ನು ಹೆಚ್ಚಿಸುವ ಮೂಲಕ ಕೂದಲಿಗೆ ಹಾನಿಯನ್ನುಂಟುಮಾಡುತ್ತದೆ. ಇದರಿಂದ ಕೂದಲು ಉದುರುವಿಕೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅಲ್ಲದೆ ಬಿಗಿಯಾದ ಹೆಲ್ಮೆಟ್ ಧರಿಸುವುದರಿಂದ ನೆತ್ತಿಯಲ್ಲಿ ಹೆಚ್ಚು ಬೆವರು ಉತ್ಪತ್ತಿಯಾಗುತ್ತದೆ. ಇದರಿಂದ ಕೂದಲಿನ ಬೇರು ದುರ್ಬಲಗೊಳ್ಳುತ್ತದೆ. ಹಾಗಿರುವಾಗ ಸರಿಯಾದ ಹೆಲ್ಮೆಟ್ ಅನ್ನು ಆಯ್ಕೆ ಮಾಡಿ ಅದನ್ನು ಸ್ವಚ್ಛಗೊಳಿಸುವ ಮೂಲಕ ಈ ಸಮಸ್ಯೆಯನ್ನು ತಪ್ಪಿಸಬಹುದು.
ವಿಡಿಯೋ ಇಲ್ಲಿದೆ ನೋಡಿ:
View this post on Instagram
ಹೆಲ್ಮೆಟ್ ಕೂದಲಿಗೆ ಹೇಗೆ ಹಾನಿ ಮಾಡುತ್ತದೆ?
ಕೊಳಕಾದ ಹೆಲ್ಮೆಟ್: ಕೊಳಕಾದ ಹೆಲ್ಮೆಟ್ ಬೆವರು ಮತ್ತು ಬ್ಯಾಕ್ಟೀರಿಯಾಗಳಿಗೆ ನೆಲೆಯಾಗಬಹುದು, ಇದು ನೆತ್ತಿಯಲ್ಲಿ ತಲೆಹೊಟ್ಟು ಬೆಳವಣಿಗೆಗೆ ಕಾರಣವಾಗುತ್ತದೆ. ತಲೆಹೊಟ್ಟು ನೆತ್ತಿಯನ್ನು ಕಿರಿಕಿರಿಗೊಳಿಸಬಹುದು ಮತ್ತು ಕೂದಲಿನ ಕಿರುಚೀಲಗಳನ್ನು ದುರ್ಬಲಗೊಳಿಸಬಹುದು. ಹಾಗಾಗಿ ಹೆಲ್ಮೆಟನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು ಮತ್ತು ಹೆಲ್ಮೆಟ್ ಧರಿಸುವ ಮೊದಲು ತಲೆಗೆ ಕರವಸ್ತ್ರವನ್ನು ಕಟ್ಟುವುದು ಕೂಡ ಒಳ್ಳೆಯದು.
ಬಿಗಿಯಾದ ಹೆಲ್ಮೆಟ್: ತುಂಬಾ ಬಿಗಿಯಾದ ಹೆಲ್ಮೆಟ್ ಧರಿಸಿದಾಗ ತಲೆಯ ಮೇಲೆ ಒತ್ತಡ ಹೇರಿದಂತಾಗುತ್ತದೆ. ಇದು ಕೂದಲಿನ ಕಿರುಚೀಲಗಳ ಮೇಲೆ ಒತ್ತಡವನ್ನುಂಟು ಮಾಡುತ್ತದೆ. ಈ ಒತ್ತಡವು ಕೂದಲಿನ ಬೇರುಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಕೂದಲು ಉದುರುವಿಕೆಗೆ ಕಾರಣವಾಗಬಹುದು. ಯಾವಾಗಲೂ ಆರಾಮದಾಯಕವಾದ ಸರಿಯಾದ ಗಾತ್ರದ ಹೆಲ್ಮೆಟ್ ಧರಿಸುವುದು ಮುಖ್ಯ.
ಇದನ್ನೂ ಓದಿ: ಈ ವಸ್ತುಗಳನ್ನು ತಪ್ಪಿಯೂ ಬಾತ್‌ರೂಮ್‌ನಲ್ಲಿ ಇಡಬಾರದು; ಯಾಕೆ ಗೊತ್ತಾ?
ಹೆಲ್ಮೆಟ್‌ನಿಂದ ಕೂದಲನ್ನು ರಕ್ಷಿಸಲು ಸುಲಭ ಸಲಹೆಗಳು ಇಲ್ಲಿವೆ:
- ಹೆಲ್ಮೆಟ್‌ನಿಂದ ಉಂಟಾಗುವ ಕೂದಲು ಉದುರುವಿಕೆಯ ಸಮಸ್ಯೆಯನ್ನು ತಡೆಗಟ್ಟಲು, ಕೂದಲು ಮತ್ತು ನೆತ್ತಿಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು, ಕೂದಲಿನಲ್ಲಿ ಬೆವರು ಮತ್ತು ಕೊಳಕು ಸಂಗ್ರಹವಾಗದಂತೆ ಸಮಯಕ್ಕೆ ಸರಿಯಾಗಿ ಕೂದಲನ್ನು ತೊಳೆಯುವುದು ಮುಖ್ಯ. ಇದಲ್ಲದೆ, ನಿಮ್ಮ ಕೂದಲಿಗೆ ಎಣ್ಣೆ ಹಚ್ಚುವುದನ್ನು ನೀವು ಮರೆಯಬಾರದು. ಪ್ರತಿ ವಾರ ಎರಡರಿಂದ ಮೂರು ಬಾರಿ ತಲೆ ಸ್ನಾನ ಮಾಡುವ ಮೊದಲು ತಲೆಗೆ ಎಣ್ಣೆ ಹಚ್ಚುವುದರಿಂದ ಕೂದಲಿಗೆ ಪೋಷಣೆ ಸಿಗುತ್ತದೆ. ಇದು ಹೆಲ್ಮೆಟ್‌ನ ಪರಿಣಾಮಗಳಿಂದ ಕೂದಲನ್ನು ರಕ್ಷಿಸಲು ಸಹಾಯ ಮಾಡುತ್ತದೆ.
- ಒದ್ದೆಯಾದ ಕೂದಲಿನ ಮೇಲೆ ಹೆಲ್ಮೆಟ್ ಧರಿಸಬಾರದು. ವಾಸ್ತವವಾಗಿ ಒದ್ದೆಯಾದ ಕೂದಲಿನ ಮೇಲೆ ಹೆಲ್ಮೆಟ್ ಧರಿಸುವುದರಿಂದ ಕೂದಲು ಒಡೆಯುತ್ತದೆ ಮತ್ತು ನೆತ್ತಿಯ ಮೇಲೆ ತಲೆಹೊಟ್ಟು ಸಮಸ್ಯೆ ಕಾಣಿಸಿಕೊಳ್ಳುತ್ತದೆ.
- ಸರಿಯಾದ ಗಾತ್ರದ ಹೆಲ್ಮೆಟ್ ಧರಿಸುವುದು ಸಹ ಮುಖ್ಯ. ನೀವು ಯಾವಾಗಲೂ ನಿಮ್ಮ ತಲೆಯ ಮೇಲೆ ಆರಾಮವಾಗಿ ಹೊಂದಿಕೊಳ್ಳುವ ಮತ್ತು ತುಂಬಾ ಬಿಗಿಯಾಗಿರದ ಹೆಲ್ಮೆಟ್ ಧರಿಸಬೇಕು.
- ನಿಮ್ಮ ಹೆಲ್ಮೆಟ್ ಅನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸಬೇಕು. ಏಕೆಂದರೆ ಹೆಲ್ಮೆಟ್ ಒಳಗೆ ಸಂಗ್ರಹವಾಗುವ ಬೆವರು, ಕೊಳಕು ಮತ್ತು ಬ್ಯಾಕ್ಟೀರಿಯಾಗಳು ಕೂದಲಿಗೆ ಹಾನಿಯನ್ನುಂಟುಮಾಡುತ್ತವೆ. ಇದೇ ಕೂದಲು ಉದುರುವಿಕೆಗೆ ಮುಖ್ಯ ಕಾರಣ.
- ಇನ್ನೊಂದು ಮುಖ್ಯವಾದ ವಿಚಾರ ಏನಂದ್ರೆ ನೀವು ಇತರರ ಹೆಲ್ಮೆಟ್‌ಗಳನ್ನು ಧರಿಸಬಾರದು ಏಕೆಂದರೆ ಇದು ನೆತ್ತಿಯ ಸೋಂಕು, ತಲೆಹೊಟ್ಟು ಅಥವಾ ಕೂದಲು ಉದುರುವಿಕೆಯ ಅಪಾಯವನ್ನು ಹೆಚ್ಚಿಸುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








