Fat Burning Drinks: ಹೊಟ್ಟೆಯ ಕೊಬ್ಬನ್ನು ಕರಗಿಸಲು ಬಯಸಿದರೆ ಪ್ರತಿದಿನ ಬೆಳಗ್ಗೆ ಈ ಕೆಲವು ಪಾನೀಯಗಳನ್ನು ಸೇವನೆ ಮಾಡಿ
ಹೆಚ್ಚುತ್ತಿರುವ ಹೊಟ್ಟೆಯ ಕೊಬ್ಬಿನಿಂದ ನೀವು ತೊಂದರೆಗೊಳಗಾಗಿದ್ದೀರಾ? ಹಾಗಾದರೆ ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಈ ಕೆಲವು ಪಾನೀಯಗಳನ್ನು ಸೇವಿಸಿದರೆ, ಅದು ನಿಮ್ಮನ್ನು ದಿನವಿಡೀ ಉಲ್ಲಾಸ ಭರಿತ ಮತ್ತು ಶಕ್ತಿಯುತವಾಗಿರಿಸುವುದಲ್ಲದೆ ಹೊಟ್ಟೆಯ ಕೊಬ್ಬನ್ನು ಕರಗಿಸಲು ಕೂಡಾ ಸಹಾಯ ಮಾಡುತ್ತದೆ.
ಪ್ರತಿಯೊಬ್ಬರೂ ಸುಂದರವಾದ ಮತ್ತು ಆಕರ್ಷಕವಾದ ದೇಹವನ್ನು ಬಯಸುತ್ತಾರೆ, ಆದರೆ ಕೆಲವೊಮ್ಮೆ ಹೆಚ್ಚುತ್ತಿರುವ ತೂಕವು ನಿಮ್ಮನ್ನು ಚಿಂತೆಗೆ ದೂಡಬಹುದು. ಅನಾರೋಗ್ಯಕರ ಆಹಾರ ಪದ್ಧತಿಯ ಪಾಲನೆ ಮತು ದೈಹಿಕ ಚಟುವಟಿಕೆಗಳನ್ನು ಮಾಡದಿರುವುದು ಇವೆಲ್ಲವೂ ದೇಹದಲ್ಲಿ ಬೊಜ್ಜು ಉಂಟಾಗಲು ಕಾರಣವಾಗಬಹುದು. ಜನರು ತೂಕ ಇಳಿಸಿಕೊಳ್ಳಲು ಮತ್ತು ಹೊಟ್ಟೆಯ ಬೊಜ್ಜನ್ನು ಕರಗಿಸಲು ಹಲವು ರೀತಿಯ ಕ್ರಮಗಳನ್ನು ಪಾಲಿಸುತ್ತಾರೆ. ಅಂತಹ ಸಂದರ್ಭದಲ್ಲಿ ನೀವು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕೆಲವು ಪಾನೀಯಗಳನ್ನು ನಿಯಮಿತವಾಗಿ ಸೇವನೆ ಮಾಡುವ ಮೂಲಕ ಹೊಟ್ಟೆಯ ಕೊಬ್ಬನ್ನು ಕರಗಿಸಬಹುದು. ಬೆಳಗ್ಗೆ ಎದ್ದ ತಕ್ಷಣ ಹೊಟ್ಟೆ ಖಾಲಿಯಾಗಿರುತ್ತದೆ. ಮತ್ತು ಈ ಸಮಯದಲ್ಲಿ ಜೀರ್ಣಕ್ರಿಯೆಯನ್ನು ಸುಧಾರಿಸುವ ಆರೋಗ್ಯಕರ ಪಾನೀಯಗಳನ್ನು ಕುಡಿಯುವುದರಿಂದ ಅದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಈ ಪಾನೀಯಗಳು ದೇಹದ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ ಇದರಿಂದ ಆಹಾರವು ಉತ್ತಮವಾಗಿ ಜೀರ್ಣವಾಗುತ್ತದೆ. ಈ ಪಾನೀಯಗಳು ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು, ಇದು ಹೊಟ್ಟೆಯ ಕೊಬ್ಬನ್ನು ಸುಡುವಲ್ಲಿ ಸಹಾಯ ಮಾಡುತ್ತದೆ.
ಹೊಟ್ಟೆಯ ಕೊಬ್ಬನ್ನು ಕರಗಿಸಲು ಸಹಕಾರಿ ಈ ಕೆಲವು ಪಾನೀಯಗಳು:
ನಿಂಬೆ ನೀರು:
ಬೆಳಗ್ಗೆ ಎದ್ದ ತಕ್ಷಣ ಅರ್ಧ ನಿಂಬೆ ಹಣ್ಣಿನ ರಸದೊಂದಿಗೆ ಸಣ್ಣ ತುಂಡು ಬೆಲ್ಲವನ್ನು ಹಾಕಿ ಒಂದು ಲೋಟ ಬಿಸಿ ನೀರಿಲ್ಲಿ ಬೆರೆಸಿ ಕುಡಿಯುವುದರಿಂದ ನೀವು ಹಲವು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಮತ್ತು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ ಬೆಲ್ಲವನ್ನು ಸೇವನೆ ಮಾಡುವುದರಿಂದ ದೇಹದ ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ.
ಅರಶಿನ ನೀರು:
ಅರಶಿನ ನೀರು ದೇಹದ ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅರ್ಧ ಚಮಚ ಅರಶಿನವನ್ನು ಬಿಸಿ ನೀರಿನಲ್ಲಿ ಬೆರೆಸಿ ಕುಡಿಯಬಹುದು. ಇದರ ಬದಲಾಗಿ ನೀವು ಅರಶಿನ ಚಹಾವನ್ನು ಸಹ ಕುಡಿಯಬಹುದು. ಅರಶಿನ ಟೀ ಮಾಡಲು ಒಂದು ಚಮಚ ಅರಶಿನ, ಒಂದು ಚಮಚ ಜೀನುತುಪ್ಪ, ದಾಲ್ಚಿನ್ನಿ ಮತ್ತು ಎರಡು ಕಪ್ ನೀರು ಸೇರಿಸಿ, ಚೆನ್ನಾಗಿ ಕುದಿಸಿ ಅದನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿ, ಇದು ಹೊಟ್ಟೆಯ ಕೊಬ್ಬನ್ನು ಕರಗಿಸಲು ಸಹಕಾರಿಯಾಗಿದೆ.
ಜೀರಿಗೆ ನೀರು:
ಜೀರಿಗೆ ನೀರು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಮತ್ತು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೀವು ರಾತ್ರಿ ಒಂದು ಲೋಟ ನೀರಿನಲ್ಲಿ ಒಂದು ಚಮಚ ಜೀರಿಗೆಯನ್ನು ನೆನೆಸಿ ಬೆಳಗ್ಗೆ ಕುಡಿಯಿರಿ. ಜೀರಿಗೆ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ನಿಧಾನವಾಗಿ ಜೀರ್ಣವಾಗುವ ಆಹಾರವನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೆ ಇದು ಕರುಳನ್ನು ಸ್ವಚ್ಛವಾಗಿಡಲು ಸಹ ಸಹಾಯ ಮಾಡುತ್ತದೆ. ಜೀರಿಗೆಯಲ್ಲಿ ಉರಿಯೂತ ನಿವಾರಕ ಗುಣವಿದ್ದು, ಇದು ದೇಹದಲ್ಲಿನ ಊತವನ್ನು ಕಡಿಮೆ ಮಾಡುತ್ತದೆ. ಮತ್ತು ಇದು ತೂಕ ನಷ್ಟದ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ.
ಇದನ್ನೂ ಓದಿ: ಜಿಮ್ಗೆ ಹೋಗದೆಯೇ ಫಿಟ್ ಆಗಿರಲು ಬಯಸುವಿರಾ? ಹಾಗಾದರೆ ಮನೆಯಲ್ಲಿ ಪ್ರತಿನಿತ್ಯ ಈ ಚಟುವಟಿಕೆ ಮಾಡಿ
ಗ್ರೀನ್ ಟೀ:
ಗ್ರೀನ್ ಟೀ ಆಂಟಿಆಕ್ಸಿಡೆಂಟ್ ಗುಣಲಕ್ಷಣಗಳನ್ನು ಹೊಂದಿದೆ. ಇದು ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗಾಗಿ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಪ್ರತಿದಿನ ಗ್ರೀನ್ ಟೀ ಸೇವನೆ ಮಾಡುವುದು ಉತ್ತಮ ಆಯ್ಕೆಯಾಗಿದೆ.
ಪುದೀನಾ ನೀರು:
ಪುದೀನಾ ನೀರು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಪುದೀನಾ ಎಲೆಗಳನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಕುಡಿಯುವುದರಿದ ತೂಕವನ್ನು ಕಡಿಮೆ ಮಾಡಲು ಸಹಾಯಕವಾಗುತ್ತದೆ.
ಮೆಂತ್ಯ ನೀರು:
ಮೆಂತ್ಯ ನೀರನ್ನು ತಯಾರಿಸಲು ನೀವು ರಾತ್ರಿಯಲ್ಲಿ ಒಂದು ಲೋಟ ನೀರಿಗೆ ಮೆಂತ್ಯ ಕಾಳುಗಳನ್ನು ಹಾಕಿ ನೆನೆಸಿಡಿ. ಮರುದಿನ ಬೆಳಗ್ಗೆ ಈ ನೀರನ್ನು ಬಿಸಿ ಮಾಡಿ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಈ ನೀರನ್ನು ನಿರಂತರವಾಗಿ ಕುಡಿಯುವುದರಿಂದ ತೂಕ ಕಡಿಮೆಯಾಗುತ್ತದೆ. ಅಲ್ಲದೆ ಇದು ಗ್ಯಾಸ್ ಮತ್ತು ಅಸಿಡಿಟಿಯಿಂದಲೂ ಪರಿಹಾರವನ್ನು ಒದಗಿಸುತ್ತದೆ. ಹಾಗೂ ರಕ್ತದೊತ್ತಡವೂ ಸಹ ನಿಯಂತ್ರಣದಲ್ಲಿರುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 10:15 am, Sun, 10 September 23