North Karnataka Recipe : ಇದು ಬೆಳ್ಳುಳ್ಳಿ ಹಸಿಖಾರ ಮಂಡಕ್ಕಿ, ಉತ್ತರ ಕರ್ನಾಟಕದ ಖಡಕ್ ರೆಸಿಪಿ
ಉತ್ತರ ಕರ್ನಾಟಕದ ಆಹಾರ ಎಂದಾಕ್ಷಣ ನಮಗೆ ಮೊದಲು ನೆನಪಿಗೆ ಬರುವುದೇ ರುಚಿಕರವಾದ ರೊಟ್ಟಿ, ಎಣ್ಣೆಗಾಯಿ, ಹಾಗೂ ಚಟ್ನಿ ಪುಡಿ. ಅದಲ್ಲದೇ ಈ ಭಾಗದ ಅತ್ಯಂತ ಜನಪ್ರಿಯ ಖಾದ್ಯಗಳಲ್ಲಿ ಮಂಡಕ್ಕಿ ಗಿರ್ಮಿಟ್ ಒಂದು. ಇದನ್ನು ವಿವಿಧ ರೀತಿಯಲ್ಲಿ ತಯಾರಿಸುತ್ತಾದರೂ ರುಚಿಯೇ ಮಾತ್ರ ಅದ್ಭುತ. ಸಂಜೆಯ ಕಾಫಿ ಟೀ ಜೊತೆಗೆ ಬೆಳ್ಳುಳ್ಳಿ ಹಸಿಖಾರ ಮಂಡಕ್ಕಿ ಸವಿದರೆ ರುಚಿಗೆ ಮನಸೋಲದವರೇ ಇಲ್ಲ. ಹಾಗಾದ್ರೆ ಈ ರೆಸಿಪಿ ಮಾಡೋದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.
ಸುರಿಯುವ ಮಳೆ ಸಂಜೆಯಾಗುತ್ತಿದ್ದಂತೆ ಖಾರವಾದ ಏನಾದರೂ ತಿಂಡಿ ತಿನ್ನುವ ಎಂದು ಮನಸ್ಸು ಬಯಸುತ್ತದೆ. ಹೊರಗಡೆ ಹೋದರೆ ಬಿಸಿಬಿಸಿಯಾದ ಖಾದ್ಯಗಳನ್ನು ತಿನ್ನಬಹುದಾದರೂ ಈ ಮಳೆಗೆ ಯಾರಪ್ಪ ಹೊರಗೆ ಹೋಗ್ತಾರೆ ಎಂದುಕೊಳ್ಳುವವರೇ ಹೆಚ್ಚು. ಖಾರವಾದದ್ದೇನಾದರೂ ತಿನ್ನಬೇಕೆನಿಸಿದರೆ ಮನೆಯಲ್ಲೇ ಉತ್ತರಕರ್ನಾಟಕದ ಶೈಲಿಯ ಬೆಳ್ಳುಳ್ಳಿ ಹಸಿಖಾರ ಮಂಡಕ್ಕಿ ಮಾಡಿ ಕಾಫಿ ಜೊತೆಗೆ ಸವಿದರೆ ಅದರ ಮಜಾನೇ ಬೇರೆ. ಮನೆಯಲ್ಲಿ ಕೆಲವೇ ಕೆಲವು ಐಟಂ ಇದ್ದರೆ ಸಾಕು, ರುಚಿಕರವಾದ ಖಡಕ್ ಬೆಳ್ಳುಳ್ಳಿ ಹಸಿಖಾರ ಮಂಡಕ್ಕಿ ಮಾಡುವುದೇನು ಕಷ್ಟವಲ್ಲ.
ಬೆಳ್ಳುಳ್ಳಿ ಹಸಿಖಾರ ಮಂಡಕ್ಕಿ ಮಾಡಲು ಬೇಕಾಗುವ ಪದಾರ್ಥಗಳು
ಒಂದೆರಡು ಕಪ್ ಮಂಡಕ್ಕಿ, ಅರ್ಧ ಕಪ್ ನಷ್ಟು ತೆಂಗಿನತುರಿ, ನಾಲ್ಕರಿಂದ ಐದು ಎಸಳು ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನಕಾಯಿ, ಒಂದೆರಡು ಚಮಚ ತೆಂಗಿನೆಣ್ಣೆ ಹಾಗೂ ರುಚಿಗೆ ತಕ್ಕಷ್ಟು ಉಪ್ಪು.
ಇದನ್ನೂ ಓದಿ: ಮಳೆಗಾಲದ ಸ್ಪೆಷಲ್ ರೆಸಿಪಿ ತಗತೆ ಸೊಪ್ಪಿನ ಪಲ್ಯ, ಮಾಡುವುದು ಹೇಗೆ?
ಬೆಳ್ಳುಳ್ಳಿ ಹಸಿಖಾರ ಮಂಡಕ್ಕಿ ಮಾಡುವ ವಿಧಾನ
* ಒಂದು ಪಾತ್ರೆಯಲ್ಲಿ ಮಂಡಕ್ಕಿ ತೆಗೆದುಕೊಂಡು, ಗರಿಗರಿ ಇಲ್ಲವಾದಲ್ಲಿ, ಸಣ್ಣ ಉರಿಯಲ್ಲಿ ಹುರಿದುಕೊಳ್ಳಿ.
* ನಂತರ ಒಂದು ಮಿಕ್ಸಿ ಜಾರಿಗೆ ತೆಂಗಿನತುರಿ, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಮತ್ತು ಉಪ್ಪನ್ನು ಹಾಕಿ ನೀರು ಹಾಕದೇನೇ ತರಿತರಿಯಾಗಿ ರುಬ್ಬಿಕೊಳ್ಳಿ.
* ಒಂದು ಪಾತ್ರೆಗೆ ಹುರಿದಿಟ್ಟ ಮಂಡಕ್ಕಿಯನ್ನು ಹಾಕಿ, ಈಗಾಗಲೇ ರುಬ್ಬಿಕೊಂಡ ಮಿಶ್ರಣವನ್ನು ಸೇರಿಸಿಕೊಳ್ಳಿ.
* ನಂತರದಲ್ಲಿ ಒಂದೆರಡು ಚಮಚ ತೆಂಗಿನೆಣ್ಣೆ ಬೆರೆಸಿ ಚೆನ್ನಾಗಿ ಕಲಸಿಕೊಂಡರೆ ರುಚಿಯಾದ ಬೆಳ್ಳುಳ್ಳಿ ಹಸಿಖಾರ ಮಂಡಕ್ಕಿ ಸವಿಯಲು ಸಿದ್ಧ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ