Tagate Leaves: ಮಳೆಗಾಲದ ಸ್ಪೆಷಲ್ ರೆಸಿಪಿ ತಗತೆ ಸೊಪ್ಪಿನ ಪಲ್ಯ, ಮಾಡುವುದು ಹೇಗೆ?
ಮಳೆಗಾಲ ಆರಂಭವಾಗುತ್ತಿದ್ದಂತೆ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಎಲ್ಲೆಂದರಲ್ಲಿ ಕಾಣಸಿಗುವ ಸೊಪ್ಪು ಈ ತಗತೆ ಸೊಪ್ಪು. ತುಳುವಿನಲ್ಲಿ ಇದನ್ನು ತೊಜಂಕ್ ಸೊಪ್ಪು ಎಂದು ಕರೆಯಲಾಗುತ್ತದೆ. ಮಳೆಗಾಲದಲ್ಲಿ ಈ ಭಾಗದ ಜನರು ಈ ಸೊಪ್ಪಿನಿಂದ ವಿವಿಧ ರೀತಿಯ ಖಾದ್ಯಗಳನ್ನು ಮಾಡಿ ಸವಿಯುತ್ತಾರೆ. ಈ ಸೊಪ್ಪಿನ ಪಲ್ಯವನ್ನು ಮಾಡಿ ತಿಂದರೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಹಾಗಾದ್ರೆ ತಗತೆ ಸೊಪ್ಪಿನ ಪಲ್ಯ ಮಾಡುವ ರೆಸಿಪಿ ಇಲ್ಲಿದೆ.
ಮಳೆಗಾಲದಲ್ಲಿ ಆರಂಭವಾಗುತ್ತಿದ್ದಂತೆ ಮಲೆನಾಡು ಹಾಗೂ ಕರಾವಳಿ ಭಾಗದ ಆಹಾರಗಳು ಬಹಳ ವಿಶೇಷವಾಗಿರುತ್ತದೆ. ತಮ್ಮ ಸುತ್ತ ಮುತ್ತಲಿನಲ್ಲಿ ಸಿಗುವುದನ್ನೇ ಆಹಾರವನ್ನು ಬಳಕೆ ಮಾಡುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಾರೆ. ಈ ಋತುವಿನಲ್ಲಿ ಎಲ್ಲೆಂದರಲ್ಲಿ ಈ ತಗತೆ ಸೊಪ್ಪು ಬೆಳೆಯುತ್ತದೆ. ಎಲೆ ಚಿಕ್ಕದಾಗಿದ್ದು ನೋಡಲು ಕರಿಬೇವಿನ ಸೊಪ್ಪಿನ ಹಾಗೆ ಇದ್ದರೂ ರುಚಿ ಮಾತ್ರ ಅದ್ಭುತ. ಈ ಸೊಪ್ಪಿನಿಂದ ವಡೆ, ದೋಸೆ, ತಂಬುಳಿ, ಸಾಂಬಾರ್ ಹೀಗೆ ನಾನಾ ಬಗೆಯ ಅಡುಗೆ ಮಾಡಿ ತಿನ್ನುತ್ತಾರೆ. ಆದರೆ ಸುರಿಯುವ ಮಳೆಗೆ ತಗತೆ ಸೊಪ್ಪಿನ ಜೊತೆಗೆ ಹಲಸಿನ ಬೀಜ ಹಾಕಿ ಪಲ್ಯ ಮಾಡಿದರೆ ಅದರ ರುಚಿಯೇ ಅದ್ಭುತ.
ತಗತೆ ಸೊಪ್ಪಿನ ಪಲ್ಯ ಮಾಡಲು ಬೇಕಾಗುವ ಸಾಮಗ್ರಿಗಳು
ತಗತೆ ಸೊಪ್ಪು, ಒಂದೆರಡು ಈರುಳ್ಳಿ, ಹಸಿ ಮೆಣಸಿನಕಾಯಿ, ಅರಿಶಿಣ ಪುಡಿ, ಕಾಲು ಕಪ್ ತೆಂಗಿನ ತುರಿ, ಸಾಸಿವೆ, ಅಡುಗೆ ಎಣ್ಣೆ ಹಾಗೂ ರುಚಿಗೆ ತಕ್ಕಷ್ಟು ಉಪ್ಪು .
ಇದನ್ನೂ ಓದಿ: ಇದು ಕರಾವಳಿ ಸ್ಟೈಲ್ನ ಪತ್ರೊಡೆ, ಇದನ್ನು ಮಾಡುವುದು ತುಂಬಾ ಸುಲಭ
ತಗತೆ ಸೊಪ್ಪಿನ ಪಲ್ಯ ಮಾಡುವ ವಿಧಾನ
* ಮೊದಲಿಗೆ ತಗತೆ ಸೊಪ್ಪಿನ ಎಲೆಯನ್ನು ಬಿಡಿಸಿಕೊಳ್ಳಬೇಕು.
* ಒಂದು ಬಾಣಲೆಯನ್ನು ಸ್ಟವ್ ಮೇಲೆ ಇಟ್ಟು ಎಣ್ಣೆ ಹಾಕಿ ಎಣ್ಣೆ ಬಿಸಿಯಾಗುತ್ತಿದ್ದಂತೆ ಸಾಸಿವೆ ಹಾಕಿ ಒಗ್ಗರಣೆ ಮಾಡಿಕೊಳ್ಳಿ.
* ಆ ಬಳಿಕ ಇದಕ್ಕೆ ಈರುಳ್ಳಿ, ಹಸಿ ಮೆಣಸಿನಕಾಯಿ ಹಾಕಿ ಚೆನ್ನಾಗಿ ಹುರಿದುಕೊಳ್ಳಿ.
* ನಂತರ ಸೊಪ್ಪನ್ನು ತೊಳೆದು ಹಾಕಿ, ರುಚಿಗೆ ತಕ್ಕ ಉಪ್ಪು, ಅರಿಶಿಣ ಸೇರಿಸಿ ಮಧ್ಯಮ ಉರಿಯಲ್ಲಿ ಹತ್ತು ನಿಮಿಷ ಕಾಲ ಬೇಯಿಸಿಕೊಳ್ಳಿ.
* ಸೊಪ್ಪು ಬೇಯುತ್ತ ಬರುತ್ತಿದ್ದಂತೆ ತೆಂಗಿನ ತುರಿದ ಹಾಕಿ ಒಂದೆರಡು ನಿಮಿಷಗಳ ಕಾಲ ಹಾಗೆ ಬಿಡಿ. ನಂತರ ಸ್ಟವ್ ಆಫ್ ಮಾಡಿದರೆ ಆರೋಗ್ಯಕರ ತಗತೆ ಸೊಪ್ಪಿನ ಪಲ್ಯ ಸವಿಯಲು ಸಿದ್ಧ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:16 am, Thu, 11 July 24