ಚರ್ಮದ ಸಮಸ್ಯೆಗೆ ಮನೆಯಲ್ಲಿ ಪರಿಹಾರ, ಈ ಮನೆ ಮದ್ದು ಟ್ರೈ ಮಾಡಿ
ಎಲ್ಲಾ ಋತುವಿನಲ್ಲಿಯು ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆಗಳಲ್ಲಿ ಚರ್ಮದ ಸಮಸ್ಯೆ ಕೂಡ ಒಂದು. ಬೇಸಿಗೆ ಕಾಲ ಬರುತ್ತಿದ್ದಂತೆ ಸುಡುಬಿಸಿಲಿಗೆ ಚರ್ಮದ ರೋಗಗಳು ಕಾಡಲು ಶುರುವಾಗುತ್ತದೆ. ಈ ಚರ್ಮದ ಸಮಸ್ಯೆಯು ವಿಪರೀತವಾದರೆ ಮುಜುಗರ ತರಿಸುತ್ತದೆ. ಹೆಚ್ಚಿನವರು ಚರ್ಮದಲ್ಲಿ ತುರಿಕೆ, ಕಜ್ಜಿಗಳು ಕಾಣಿಸಿಕೊಂಡ ತಕ್ಷಣವೇ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಾರೆ.
ಹೆಣ್ಣು ಮಕ್ಕಳು ತ್ವಚೆ ಹಾಗೂ ಚರ್ಮದ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸಿರುತ್ತಾರೆ. ಆದರೆ ಕೆಲವು ಋತುಮಾನದಲ್ಲಿ ವಿಪರೀತ ಚರ್ಮದ ಸಮಸ್ಯೆಯು ಬಾಧಿಸುತ್ತದೆದೆ. ಅಷ್ಟೇನು ಗಂಭೀರವಲ್ಲದ ಚರ್ಮದ ಸಮಸ್ಯೆಗಳು ಚಿಕಿತ್ಸೆ ಮಾಡಿದ ಕೂಡಲೇ ಗುಣಮುಖವಾಗುತ್ತದೆ. ಆದರೆ ಕೆಲವೊಮ್ಮೆ ಈ ಕಾಯಿಲೆಯು ದೇಹದ ಮೇಲು ಪರಿಣಾಮವನ್ನು ಬೀರಬಹುದು. ಚರ್ಮ ರೋಗ ಕಾಣಿಸಿಕೊಂಡ ತಕ್ಷಣವೇ ಸುತ್ತಮುತ್ತಲಿನಲ್ಲಿ ದೊರಕುವ ಗಿಡಮೂಲಿಕೆಗಳಿಂದ ಅಥವಾ ಅಡುಗೆ ಮನೆಯಲ್ಲಿರುವ ಕೆಲವು ವಸ್ತುಗಳಿಂದ ಸುಲಭವಾಗಿ ಗುಣಮುಖಪಡಿಸಿಕೊಳ್ಳಬಹುದು.
* ಹಣ್ಣು ಅಡಿಕೆಯ ಸಿಪ್ಪೆಯನ್ನು ಜಜ್ಜಿ ಅದರ ನೀರನ್ನು ತುರಿಕೆ ಕಜ್ಜಿಗೆ ಹಚ್ಚಿದರೆ ಗುಣಮುಖವಾಗುತ್ತದೆ.
* ಬೇವಿನ ಎಲೆಯನ್ನು ಹುರಿದು ಅದನ್ನು ಸ್ಪಲ್ಪ ಹೊಂಗೆ ಎಣ್ಣೆಯೊಂದಿಗೆ ಬೆರಸಿ ದೇಹಕ್ಕೆ ಹಚ್ಚಿ ಸ್ನಾನ ಮಾಡಿದರೆ ಚರ್ಮ ಸಮಸ್ಯೆಗಳು ದೂರವಾಗುತ್ತದೆ.
* ಅರಶಿನದ ಬೇರನ್ನು ಗೋಮೂತ್ರ ಅಥವಾ ಲಿಂಬೆ ರಸದೊಂದಿಗೆ ಅರೆದು ಅದನ್ನು ಹಚ್ಚಿ ಸ್ನಾನ ಮಾಡಿದರೆ ತುರಿಕೆ ಸಮಸ್ಯೆಗಳು ದೂರವಾಗುತ್ತದೆ.
* ಸೀತಾಫಲ ಮರದ ಒಣಗಿದ ಎಲೆಗಳ ಚೂರ್ಣವನ್ನು ಲೇಪಿಸುವುದರಿಂದ ಚರ್ಮರೋಗಗಳು ಕಡಿಮೆಯಾಗುತ್ತದೆ.
* ತುರಿಕೆ ಕಜ್ಜಿಗೆ ಅನನಾಸಿನ ರಸವನ್ನು ಲೇಪಿಸುವುದು ಉತ್ತಮವಾದ ಮನೆ ಮದ್ದು.
* ಕಜ್ಜಿಗೆ ರಕ್ತಚಂದನ, ಕರ್ಪೂರ, ಬೆಳ್ಳುಳ್ಳಿ, ಎಳ್ಳು, ತುಪ್ಪ ಈ ಎಲ್ಲವನ್ನು ಅರೆದು ಹಚ್ಚಿದರೆ ಚರ್ಮದ ಸಮಸ್ಯೆಯಿಂದ ಮುಕ್ತರಾಗಬಹುದು.
* ಹುಳುಕಡ್ಡಿ ಆಗಿದ್ದರೆ ತುಳಸಿ ಎಲೆಗಳು ರಸವನ್ನು ಹಚ್ಚಿದರೆ ಈ ಸಮಸ್ಯೆಯು ನಿವಾರಣೆಯಾಗುತ್ತದೆ.
* ಗರಿಕೆ ಹುಲ್ಲಿನ ರಸವನ್ನು ಚರ್ಮ ರೋಗಗಳು ಉಂಟಾದಾಗ ಚರ್ಮದ ಕಾಯಿಲೆಯು ಬೇಗ ಗುಣಮುಖ ಕಾಣುತ್ತದೆ.
* ಅಳಲೆಕಾಯಿಯನ್ನು ಎಳ್ಳೆಣ್ಣೆಯಲ್ಲಿ ಅರೆದು, ತಯಾರಿಸಿದ ಮುಲಾಮನ್ನು ಇಸುಬಿಗೆ ಹಚ್ಚುತ್ತಿದ್ದರೆ ಬೇಗನೇ ನಿವಾರಣೆಯಾಗುತ್ತದೆ.
* ಅರಿಶಿನ ಪುಡಿಯನ್ನು ಜೇನುತುಪ್ಪದಲ್ಲಿ ಬೆರೆಸಿ, ಚರ್ಮಕ್ಕೆ ಲೇಪಿಸುತ್ತಿದ್ದರೆ ನಾನಾ ರೀತಿಯ ಬಗೆಯ ಚರ್ಮವ್ಯಾಧಿಗಳಿಂದ ದೂರವಾಗುತ್ತದೆ.
ಇದನ್ನೂ ಓದಿ: ಗರ್ಭಾವಸ್ಥೆಯಲ್ಲಿ ಎಷ್ಟು ಹೊತ್ತು ನಡೆಯಬೇಕು? ತಜ್ಞರ ಸಲಹೆ ಇಲ್ಲಿದೆ
* ಮಾವಿನಕಾಯಿ ತೊಟ್ಟು ಮುರಿದಾಗ ಸೋರುವ ದ್ರವವನ್ನು ಹಚ್ಚುತ್ತಿದ್ದರೆ ಹುಳುಕಡ್ಡಿ, ಇಸುಬಿನಂತಹ ಸಮಸ್ಯೆಗಳು ಕಡಿಮೆಯಾಗುತ್ತದೆ.
* ಆಲೂಗಡ್ಡೆಯನ್ನು ನಿಂಬೆಹಣ್ಣಿನ ರಸದಲ್ಲಿ ಚೆನ್ನಾಗಿ ಅರೆದು, ಇಸುಬು, ಹುಳುಕಡ್ಡಿ ಗಜಕರ್ಣದಂತಹ ಚರ್ಮ ವ್ಯಾಧಿಗಳು ದೂರವಾಗುತ್ತದೆ.
* ಚರ್ಮದ ಸಮಸ್ಯೆಯಿದ್ದರೆ ಜೇನುತುಪ್ಪವನ್ನು ಸವರುವುದರಿಂದ ಗುಣಮುಖವಾಗುತ್ತದೆ.
* ಸೀಬೆ ಎಲೆಗಳನ್ನು ನುಣ್ಣಗೆ ಅರೆದು, ಅದರಲ್ಲಿ ಮೈ ಕೈ ತಿಕ್ಕಿಕೊಂಡು ಬಿಸಿ ನೀರಿನಲ್ಲಿ ಸ್ನಾನ ಮಾಡುವುದರಿಂದ ಚರ್ಮದ ಸಮಸ್ಯೆಗಳು ನಿವಾರಣೆ ಕಾಣುತ್ತದೆ.
* ಪರಂಗಿ ಹಣ್ಣಿನ ಸಿಪ್ಪೆಯಿಂದ ಚರ್ಮದ ಮೇಲೆ ಉಜ್ಜುತ್ತಿದ್ದರೆ ಚರ್ಮದ ಕಾಯಿಲೆಯು ಗುಣಮುಖವಾಗುತ್ತದೆ.
* ಅಡುಗೆ ಮನೆಯಲ್ಲಿರುವ ಸಾಸಿವೆಯನ್ನು ನುಣ್ಣಗೆ ಅರೆದು ಹುಳುಕಡ್ಡಿಯ ಮೇಲೆ ಲೇಪಿಸುವುದು ಉತ್ತಮ ಔಷಧಿಯಾಗಿದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:47 pm, Mon, 19 February 24