ಅಪ್ಪ ಎನ್ನುವ ಪದದಲ್ಲೇ ಒಂದು ಗಾಂಭೀರ್ಯ ಹಾಗೂ ಗೌರವ ಅಡಗಿದೆ ಎಲ್ಲಾ ಮಕ್ಕಳಿಗೂ ತಮ್ಮ ತಂದೆ ಎಂದರೆ ಮೊದಲ ಹೀರೋ ಅದರಲ್ಲೂ ಹೆಣ್ಣುಮಕ್ಕಳಿಗಂತೂ ಪ್ರೀತಿ ತುಸು ಹೆಚ್ಚೇ. ಕೆಲವು ಮಕ್ಕಳು ಅಪ್ಪನೊಂದಿಗೆ ಹರಟೆ ಹೊಡೆಯುತ್ತಾ, ಊರು ಊರು ಸುತ್ತುತ್ತಾ ಹಾಯಾಗಿರುತ್ತಾರೆ, ಇನ್ನೂ ಕೆಲವು ಮಕ್ಕಳು ತಮ್ಮ ಅಪ್ಪನ ಬಗ್ಗೆ ಇರುವ ಪ್ರೀತಿಯನ್ನು ಎಲ್ಲೂ ವ್ಯಕ್ತಪಡಿಸುವುದಿಲ್ಲ.
ತನ್ನ ಹುಟ್ಟುಹಬ್ಬಕ್ಕೆ ಅದು ಬೇಕು ಇದು ಬೇಕು ಎಂದು ಕೇಳಿ ಪಡೆಯುವ ನೀವು ಒಮ್ಮೆ ಅಪ್ಪನಿಗೆ ಏನು ಬೇಕೆಂಬುದನ್ನು ಕೂಡ ಯೋಚಿಸಿ.ಅಪ್ಪ ಹಾಗೂ ನಿಮ್ಮ ನಡುವಿನ ಬಾಂಧವ್ಯ ಉತ್ತಮವಾಗಿರಲು ಕೆಲವು ಸಲಹೆಗಳು ಹೀಗಿವೆ.
ಕಾಮನ್ ಇಂಟರೆಸ್ಟ್ಗಳ ಬಗ್ಗೆ ಮಾತನಾಡಿ: ಕ್ರೀಡೆ, ರಾಜಕೀಯ ಅಥವಾ ದಿನನಿತ್ಯದ ವಿಷಯಗಳು ಸೇರಿದಂತೆ ಇಬ್ಬರ ಕಾಮನ್ ಇಂಟರೆಸ್ಟ್ಗಳ ಬಗ್ಗೆ ದಿನಾ ಸ್ವಲ್ಪ ಹೊತ್ತು ಕುಳಿತು ಮಾತನಾಡಿ.
ಒಬ್ಬರಿಗೊಬ್ಬರು ಸಮಯ ಮೀಸಲಿಡಿ: ಸದಾ ನಿಮಗೆಂದು ಹಗಲು ರಾತ್ರಿ ದುಡಿಯುವ ಅಪ್ಪನಿಗೋಸ್ಕರ ನಿಮ್ಮ ಕೆಲ ಸಮಯವನ್ನು ಮೀಸಲಿಡಲು ಸಾಧ್ಯವಿಲ್ಲವೇ, ನಿತ್ಯ ಒಂದು ಅರ್ಧಗಂಟೆಯಾದರೂ ಅಪ್ಪನಿಗಾಗಿ ಸಮಯ ಕೊಡಿ, ಜತೆಗೆ ಕಾಫಿ ಕುಡಿಯಿರಿ ವಿವಿಧ ವಿಷಯಗಳ ವಿನಿಮಯ ಮಾಡಿಕೊಳ್ಳಿ.
ಕೆಲವೊಂದು ಚಟುವಟಿಕೆಗಳಿರಲಿ: ಮೀನು ಹಿಡಿಯುವುದು, ವಾಕಿಂಗ್, ಗಾಲ್ಫ್, ವಾಲಿಬಾಲ್, ಶೆಟಲ್ ಸೇರಿದಂತೆ ಯಾವುದೇ ಚಟುವಟಿಕೆಗಳಲ್ಲಿ ನಿಮ್ಮ ಜತೆ ಅಪ್ಪನನ್ನು ಸೇರಿಸಿಕೊಳ್ಳಿ.
ನಿಮ್ಮ ಕನಸುಗಳನ್ನು ಹಂಚಿಕೊಳ್ಳಿ: ನಿಮ್ಮ ಗುರಿಯೇನು, ಏನಾಗಬೇಕೆಂದು ಬಯಸಿದ್ದೀರಿ, ಆಸೆಗಳೇನು ಎಂಬುದೆಲ್ಲವನ್ನು ಮನಸುಬಿಚ್ಚಿ ಹಂಚಿಕೊಳ್ಳಿ, ಆಗ ಅಪ್ಪನಿಗೂ ನಿಮ್ಮನ್ನು ಅರ್ಥ ಮಾಡಿಕೊಳ್ಳಲು ಸಹಾಯವಾಗುತ್ತದೆ. ಅಪ್ಪನ ಇಷ್ಟಗಳು ಕೂಡ ತಿಳಿಯುತ್ತದೆ.
ಒಬ್ಬರಿಗೊಬ್ಬರು ಸಹಾಯ ಮಾಡಿ: ಎಂಥದ್ದೇ ಸಮಯವಿರಲಿ, ಸುಖ, ದುಃಖ ಏನೇ ಇರಲಿ ಒಬ್ಬರಿಗೊಬ್ಬರು ಹೆಗಲುಕೊಡಿ, ಅವರ ಜೊತೆ ನೀವಿದ್ದೀರ ಎನ್ನುವ ಧೈರ್ಯವನ್ನು ತುಂಬಿ.
ಧನ್ಯವಾದ ಹೇಳಿ: ಇಷ್ಟು ವರ್ಷಗಳ ಕಾಲ ನಮ್ಮ ಇಷ್ಟಗಳೆಲ್ಲಾ ನೆರವೇರಿಸಿ, ಕಷ್ಟದ ಕಗ್ಗತ್ತಲಿನ ಕಡೆ ನೋಡಲೂ ಅವಕಾಶ ಮಾಡಿಕೊಡದೆ ಸದಾ ಸುಖದ ಸುಪ್ಪತ್ತಿಗೆಯಲ್ಲೇ ಇಟ್ಟ ನಿಮ್ಮ ತಂದೆಗೆ ಧನ್ಯವಾದ ಅರ್ಪಿಸಿ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ