Fathers Day 2024 : ಇಳಿವಯಸ್ಸಿನ ಅಪ್ಪನಿಗೆ ಈ ರೀತಿ ಬೆಂಬಲ ನೀಡಿ ಖುಷಿಯಾಗಿರಿಸಿ

| Updated By: ಅಕ್ಷತಾ ವರ್ಕಾಡಿ

Updated on: Jun 16, 2024 | 10:59 AM

ಪ್ರತಿ ವರ್ಷ ಜೂನ್‌ ತಿಂಗಳ ಮೂರನೇ ಭಾನುವಾರವನ್ನು ಅಪ್ಪಂದಿರ ದಿನ ಎಂದು ಆಚರಿಸಲಾಗುತ್ತದೆ. ಈ ವರ್ಷ ಜೂನ್‌ 16 ರಂದು ಅಪ್ಪಂದಿರ ದಿನವನ್ನು ಆಚರಿಸಲಾಗುತ್ತಿದೆ. ಗದರುವ ಅಪ್ಪನು ಕೂಡ ವಯಸ್ಸು ಆಗುತ್ತಿದ್ದಂತೆ ದೈಹಿಕ ಹಾಗೂ ಮಾನಸಿಕವಾಗಿ ಕುಗ್ಗುತ್ತಾನೆ. ಈ ಸಮಯದಲ್ಲಿ ಮಕ್ಕಳಾದ ನೀವು ಕೂಡ ನಿಮ್ಮ ಕರ್ತವ್ಯವನ್ನು ಮಾಡಬೇಕು. ವಯಸ್ಸಾದ ಅಪ್ಪನಿಗೆ ಹೇಗೆಲ್ಲಾ ಕಾಳಜಿ ವಹಿಸಿ, ಬೆಂಬಲ ನೀಡಬಹುದು ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

Fathers Day 2024 : ಇಳಿವಯಸ್ಸಿನ ಅಪ್ಪನಿಗೆ ಈ ರೀತಿ ಬೆಂಬಲ ನೀಡಿ ಖುಷಿಯಾಗಿರಿಸಿ
Fathers Day 2024
Follow us on

ಅಪ್ಪ ಎಲ್ಲಾ ಮಕ್ಕಳ ಪಾಲಿಗೆ ನಿಜವಾದ ಹೀರೋ. ಈ ಗದರುವ ಅಪ್ಪನಲ್ಲಿಯೂ ನನ್ನ ಮಕ್ಕಳು ಚೆನ್ನಾಗಿರಲಿ ಎನ್ನುವ ವಿವರಿಸಲಾಗದ ಪ್ರೀತಿಯಿದೆ. ಮಕ್ಕಳ ಜೀವನ ಕಟ್ಟಿಕೊಡುವಲ್ಲಿ ಅಪ್ಪನ ಪಾತ್ರವನ್ನು ವಿವರಿಸಲು ಅಸಾಧ್ಯ. ಕೇಳಿದ್ದೆಲ್ಲವನ್ನು ಕೊಡಿಸುವ ಅಪ್ಪನಿಗೆ ಆಯಾಸ, ಸುಸ್ತು ಎನ್ನುವುದು ಆಗುತ್ತದೆ. ಮಕ್ಕಳ ಭವಿಷ್ಯಕ್ಕಾಗಿ ಅದನ್ನೆಲ್ಲವನ್ನು ತೋರಿಸಿಕೊಡದೇ ಮಕ್ಕಳ ಮೊಗದಲ್ಲಿ ನಗು ಮೂಡಿಸುವವನೇ ಈ ಅಪ್ಪ. ಆದರೆ ವಯಸ್ಸು ಆಗುತ್ತಿದ್ದಂತೆ ಅಪ್ಪನು ಕೂಡ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಅನುಭವಿಸುತ್ತಾನೆ. ಈ ಸಮಯದಲ್ಲಿ ಮಕ್ಕಳು ತನ್ನ ತಂದೆಯ ಜೊತೆಗೆ ನಿಂತು ಅವನಿಗೆ ಧೈರ್ಯ ತುಂಬಿ ಸಣ್ಣ ಪುಟ್ಟ ಆಸೆಗಳನ್ನು ಈಡೇರಿಸಬೇಕು.

  1. ಮಕ್ಕಳ ಸಂತೋಷಕ್ಕಾಗಿ ವಿಶ್ರಾಂತಿಯಿಲ್ಲದೇ ದುಡಿದ ಅಪ್ಪನ ಆರೋಗ್ಯವು ವಯಸ್ಸಾದಂತೆ ಕ್ಷೀಣಿಸುತ್ತದೆ. ಹೀಗಾಗಿ ವೃದ್ಧ ಅಪ್ಪನ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ. ಆರೋಗ್ಯ ಕೈ ಕೊಟ್ಟಿದ್ದರೆ ಎಲ್ಲಾ ಪರೀಕ್ಷೆಗಳನ್ನು ಮಾಡಿಸಿ, ಸರಿಯಾದ ಚಿಕಿತ್ಸೆಯನ್ನು ನೀಡಿ.
  2. ಮಕ್ಕಳಿರುವಾಗ ನಿಮ್ಮನ್ನು ಒಂಟಿಯಾಗಿರಲು ಅಪ್ಪ ಬಿಟ್ಟಿಲ್ಲ. ನಿಮಗೇನಾದರೂ ಬೇಸರವಾಯಿತೆಂದರೆ ನಿಮ್ಮ ಇಷ್ಟದ ತಿಂಡಿ ತಿನಿಸು, ಉಡುಗೆಗಳನ್ನು ಕೊಡಿಸಿ ಸಮಾಧಾನ ಪಡಿಸುತ್ತಿದ್ದನು. ಹೀಗಾಗಿ ವಯಸ್ಸಾದ ಅಪ್ಪನನ್ನು ಒಂಟಿಯಾಗಿ ಇರಲು ನೀವು ಬಿಡಬೇಡಿ. ಅಪ್ಪನ ಚಿಂತೆಯನ್ನು ದೂರ ಮಾಡಿ ಮಾನಸಿಕ ನೆಮ್ಮದಿ ಸಿಗುವಂತೆ ನೋಡಿಕೊಳ್ಳುವುದು ಮಕ್ಕಳಾದ ನಿಮ್ಮ ಕರ್ತವ್ಯವಾಗಿದೆ.
  3. ನೀವು ಸಣ್ಣವರಿದ್ದಾಗ ನಿಮ್ಮ ಖುಷಿಯ ಮುಂದೆ ಅಪ್ಪ ಆರ್ಥಿಕ ಸಮಸ್ಯೆ ಬಗ್ಗೆ ಯೋಚಿಸಲೇ ಇಲ್ಲ. ಏನಾದರೂ ಬೇಕೆಂದು ಹಠ ಮಾಡಿದ ತಕ್ಷಣವೇ ಹಿಂದೆ ಮುಂದೆ ಯೋಚಿಸದೇ ತಂದು ನಿಮ್ಮ ಮುಂದೆ ಇಡುತ್ತಿದ್ದ. ಹೀಗಾಗಿ ವಯಸ್ಸಾದ ಕಾಲದಲ್ಲಿ ಅಪ್ಪನ ಇಷ್ಟ ಕಷ್ಟಗಳನ್ನು ಕೇಳಿ. ಆರ್ಥಿಕವಾಗಿ ಅಪ್ಪನ ಕಷ್ಟ ಹಾಗೂ ಸುಖಕ್ಕೆ ಹೆಗಲಾಗಿ ನಿಂತು, ಅಪ್ಪನ ಆಸೆಗಳನ್ನು ಈಡೇರಿಸಿ. ಇದರಿಂದ ನಿಮ್ಮ ಅಪ್ಪನಿಗೆ ನಿಜಕ್ಕೂ ಸಂತೋಷವಾಗುತ್ತದೆ.
  4. ಹೆಗಲ ಮೇಲೆ ಹೊತ್ತು ಊರು ತುಂಬಾ ಸುತ್ತಿಸಿಕೊಂಡು ಬರುತ್ತಿದ್ದ ಅಪ್ಪನಿಗೆ ಇಂದು ಒಬ್ಬರೇ ಹೊರಗೆ ಹೋಗುವಷ್ಟು ಶಕ್ತಿಯಿಲ್ಲದೇ ಇರಬಹುದು. ಹೀಗಾಗಿ ಮಕ್ಕಳಾಗಿ ನೀವು ಅಪ್ಪನ ಇಷ್ಟದ ಸ್ಥಳಗಳಲ್ಲಿ ಕರೆದುಕೊಂಡು ಹೋಗಿ ಅವರನ್ನು ಖುಷಿ ಪಡಿಸಿ.
  5. ವಯಸ್ಸಾದ ಅಪ್ಪನ ಆರೋಗ್ಯವನ್ನು ಕಾಪಾಡಿಕೊಳ್ಳಲು ವ್ಯಾಯಾಮ, ಯೋಗ, ಧ್ಯಾನ ಮಾಡುವಂತೆ ಪ್ರೋತ್ಸಾಹಿಸಿ. ಒಂದು ವೇಳೆ ಅಪ್ಪ ನಿರಾಕರಿಸಿದರೂ ಕೂಡ, ನೀವು ಯೋಗ, ವ್ಯಾಯಾಮದಂತಹ ಚಟುವಟಿಕೆಯಲ್ಲಿ ತೊಡಗಿಕೊಂಡಾಗ ಅಪ್ಪನ ಮನವೊಲಿಸಿ ಮಾಡುವಂತೆ ಒತ್ತಾಯಿಸಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: