ತಂದೆ ಮತ್ತು ಮಕ್ಕಳ ನಡುವಿನ ಸಂಬಂಧ ತುಂಬಾ ವಿಶೇಷವಾದದ್ದು. ಈ ವಿಶೇಷ ಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ಪ್ರತಿ ವರ್ಷ ಅಪ್ಪಂದಿರ ದಿನವನ್ನು ಆಚರಿಸುತ್ತೇವೆ. ತಂದೆಯ ಪ್ರೀತಿ ಒಂದು ದಿನದ ಆಚರಣೆಯ ಮೇಲೆ ಅವಲಂಬಿತವಾಗಿಲ್ಲವಾದರೂ, ತಮ್ಮ ಮಕ್ಕಳ ಸಂತೋಷ ಎಲ್ಲಕ್ಕಿಂತ ಹೆಚ್ಚು ಎಂದು ಪರಿಗಣಿಸುವ ಎಲ್ಲಾ ಅಪ್ಪಂದಿರನ್ನು ಗೌರವಿಸಲು ಈ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಈ ದಿನವನ್ನು ಹಲವಾರು ರೀತಿಯಲ್ಲಿ ಆಚರಣೆ ಮಾಡಲಾಗುತ್ತದೆ. ಆದರೆ ಈ ಬಾರಿ ನೀವು ವಿಶೇಷ ರೀತಿಯಲ್ಲಿ ಆಚರಿಸುವ ಮೂಲಕ ನಿಮ್ಮ ತಂದೆಗೆ ಅಪರೂಪದ ಊಡುಗೊರೆ ನೀಡಿ.
ಅಪ್ಪನೊಂದಿಗೆ ಒಳ್ಳೆಯ ಸಮಯ ಕಳೆಯಲು ಉತ್ತಮ ಮಾರ್ಗವೆಂದರೆ ಹೊರಾಂಗಣ ಆಟಗಳು ಅಥವಾ ವಿಶೇಷ ಚಟುವಟಿಕೆಗಳನ್ನು ಆಯೋಜಿಸುವುದು. ನಿಮ್ಮ ತಂದೆಗೆ ಹೊರಾಂಗಣ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದರೆ, ಒಳಾಂಗಣ ಆಟಗಳಾದ ಲುಡೋ, ಚೆಸ್ ಇತರ ಮೋಜಿನ ಚಟುವಟಿಕೆಗಳಲ್ಲಿ ಭಾಗವಹಿಸಬಹುದು.
ಈ ದಿನವನ್ನು ಆನಂದಿಸಲು ಮತ್ತೊಂದು ಉತ್ತಮ ಮಾರ್ಗವೆಂದರೆ ನಿಮ್ಮ ತಂದೆಗೆ ಇಷ್ಟವಾಗುವ ಅಡುಗೆ ಮಾಡಿಕೊಡುವುದು. ಅಥವಾ ನೀವು ಮತ್ತು ನಿಮ್ಮ ತಂದೆ ಇಬ್ಬರೂ ಸೇರಿ ಅಡುಗೆ ಮಾಡಿ. ಹೊಸ ಪಾಕವಿಧಾನ ಅಥವಾ ಹಳೆಯ ಶೈಲಿಗೆ ಹೊಸ ಮೆರಗನ್ನು ನೀಡುವ ಮೂಲಕ ಪ್ರಯತ್ನಿಸಿ. ಬಳಿಕ ಒಟ್ಟಿಗೆ ಕುಳಿತು ಊಟ ಮಾಡಿ.
ಪೋಷಕರು ಹೆಚ್ಚಾಗಿ ಬಾಲಿವುಡ್ ರೆಟ್ರೋ ಚಲನಚಿತ್ರಗಳನ್ನು ಆನಂದಿಸುತ್ತಾರೆ, ಅಥವಾ ಅವರು ತಮ್ಮ ಬಾಲ್ಯದಲ್ಲಿ ಆನಂದಿಸುತ್ತಿದ್ದ ಚಲನಚಿತ್ರಗಳನ್ನು ನೋಡಲು ಇಷ್ಟಪಡುತ್ತಾರೆ. ಹಾಗಾಗಿ ಅವರ ನೆಚ್ಚಿನ ಚಲನಚಿತ್ರದ ಬಗ್ಗೆ ಕೇಳಿ ತಿಳಿದುಕೊಂಡು ಅವರೊಂದಿಗೆ ಕುಳಿತು ಒಳ್ಳೆಯ ಫಿಲಂ ನೋಡಿ.
ಹಿಂದೆ ನಿಮ್ಮ ತಂದೆಯವರ ಬಾಲ್ಯ, ಮದುವೆ ಹೀಗೆ ಹಳೆಯ ಫೋಟೋಗಳಿದ್ದರೆ ಅದನ್ನು ತೆಗೆದು ಅಪ್ಪನ ಜೊತೆ ಕುಳಿತು ಆ ಚಿತ್ರಗಳ ಹಿಂದಿರುವ ಸ್ವಾರಸ್ಯಕರ ಕಥೆಗಳನ್ನು ಮೆಲುಕು ಹಾಕಿ. ಅದು ಅವರಿಗೆ ತಮ್ಮ ಹಳೆಯ ಸಿಹಿ ನೆನೆಪುಗಳನ್ನು ಮತ್ತೆ ನೆನೆಯಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ವಿವಾಹಿತ ಹೆಣ್ಣು ತನ್ನ ಗಂಡನ ಬಳಿ ಈ ವಿಚಾರಗಳ ಬಗ್ಗೆ ಬಾಯಿ ಬಿಡುವುದೇ ಇಲ್ವಂತೆ
ನಿಮ್ಮ ತಂದೆಗೆ ಗಿಡ ನೆಡುವುದು ಅಥವಾ ತೋಟಗಾರಿಕೆಯಲ್ಲಿ ಆಸಕ್ತಿ ಇದ್ದರೆ ಈ ದಿನದ ನೆನಪಿಗಾಗಿ ಒಂದು ಗಿಡ ನೇಡಿ. ಅಥವಾ ಅವರಿಗೆ ಇಷ್ಟವಾಗುವ ಸಸ್ಯಗಳನ್ನು ಉಡುಗೊರೆಯಾಗಿ ಕೊಡಿ. ಇದು ನಿಮ್ಮ ತಂದೆಗೆ ಮತ್ತಷ್ಟು ಖುಷಿ ಕೊಡಬಹುದು.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 6:20 pm, Sat, 15 June 24