
ಮಳೆಗಾಲವಿರಲಿ, ಬೇಸಿಗೆಕಾಲವಿರಲಿ ಪ್ರತಿ ಋತುಮಾನದಲ್ಲೂ ಸೊಳ್ಳೆಗಳ (mosquitoes) ಕಾಟ ಇದ್ದಿದ್ದೆ. ಅದರಲ್ಲೂ ಸಂಜೆ ಹೊತ್ತು ಇವುಗಳ ಆರ್ಭಟ ತುಸು ಹೆಚ್ಚೇ ಇರುತ್ತದೆ. ಇವುಗಳು ರಕ್ತವನ್ನು ಹೀರುವ ಮೂಲಕ ಕಿರಿಕಿರಿಯನ್ನು ಉಂಟು ಮಾಡುವುದಲ್ಲದೆ, ಡೆಂಗ್ಯೂ, ಮಲೇರಿಯಾದಂತಹ ರೋಗಗಳನ್ನು ಹೊತ್ತು ತರುತ್ತವೆ. ಹಾಗಾಗಿ ಇವುಗಳ ಕಾಟದಿಂದ ಒಮ್ಮೆ ಮುಕ್ತಿ ಪಡೆದ್ರೆ ಸಾಕಪ್ಪಾ ಎಂದು ಹೆಚ್ಚಿನವರು ಸೊಳ್ಳೆಗಳನ್ನು ಓಡಿಸಲು ಕಾಯಿಲ್, ಸ್ಪ್ರೇ ಗಳಂತಹ ರಾಸಾಯನಿಕಯುಕ್ತ ವಸ್ತುಗಳನ್ನು ಉಪಯೋಗ ಮಾಡುತ್ತಾರೆ. ಆದರೆ ಆರೋಗ್ಯದ ದೃಷ್ಟಿಯಿಂದ ಈ ಉತ್ಪನ್ನಗಳನ್ನು ಉಪಯೋಗಿಸುವುದು ಅಷ್ಟು ಒಳ್ಳೆಯದಲ್ಲ. ಹೀಗಿರುವಾಗ ಈ ಕೆಲವು ನೈಸರ್ಗಿಕ ವಿಧಾನದ ಮೂಲಕ ಸೊಳ್ಳೆಗಳು ಮನೆ ಕಡೆ ಬಾರದಂತೆ ನೋಡಿಕೊಳ್ಳಬಹುದು.
ಬೇವಿನ ಎಲೆಯ ನೀರು: ಬೇವಿನ ಎಲೆಗಳನ್ನು ನೀರಿನಲ್ಲಿ ಕುದಿಸಿ. ನೀರು ತಣ್ಣಗಾದ ನಂತರ, ಅದನ್ನು ಸೋಸಿ ಸ್ಪ್ರೇ ಬಾಟಲಿಗೆ ಸುರಿಯಿರಿ. ಈ ಸ್ಪ್ರೆಯನ್ನು ಮನೆಯ ಮೂಲೆಗಳು, ಮನೆಯ ಹೊರ ಭಾಗ ಮತ್ತು ಸ್ನಾನಗೃಹದ ಸುತ್ತ ಸಿಂಪಡಿಸಿ, ಈ ಮನೆ ಮದ್ದು ಸೊಳ್ಳೆಗಳು ಮನೆಯ ಕಡೆ ಸುಳಿಯದಂತೆ ನೋಡಿಕೊಳ್ಳುತ್ತದೆ.
ತುಳಸಿ ಮತ್ತು ಪುದೀನ ಗಿಡ: ತುಳಸಿ ಮತ್ತು ಪುದೀನ ಗಿಡಗಳ ಬಲವಾದ ಪರಿಮಳವು ಸೊಳ್ಳೆಗಳಿಗೆ ಇಷ್ಟವಾಗುವುದಿಲ್ಲ. ಇವುಗಳ ಬಲವಾದ ವಾಸನೆಯಿಂದ ಸೊಳ್ಳೆಗಳು ದಾಷ್ಟು ದೂರವಿರುತ್ತವೆ. ಹಾಗಾಗಿ ಮನೆ ಸುತ್ತ ಕಿಟಕಿಗಳ ಪಕ್ಕ, ಮಲಗುವ ಕೋಣೆಗಳಲ್ಲಿ ಕುಂಡಗಳಲ್ಲಿ ನೆಟ್ಟ ತುಳಸಿ ಮತ್ತು ಪುದೀನಾ ಗಿಡಗಳನ್ನು ಇಡಿ. ಇದು ಸೊಳ್ಳೆಗಳು ಸುಳಿಯದಂತೆ ನೋಡಿಕೊಳ್ಳುತ್ತವೆ.
ನಿಂಬೆ ಮತ್ತು ಲವಂಗ: ನಿಂಬೆಹಣ್ಣನ್ನು ಅರ್ಥ ಭಾಗ ಮಾಡಿ ಅದರಲ್ಲಿ 5 ರಿಂದ 6 ಲವಂಗ ಹಾಕಿ. ಸೊಳ್ಳೆಗಳು ಹೆಚ್ಚು ಸುಳಿದಾಡುವ ಜಾಗದಲ್ಲಿ ಇಟ್ಟುಬಿಡಿ. ಈ ನೈಸರ್ಗಿಕ ಪರಿಹಾರ ಸೊಳ್ಳೆಗಳನ್ನು ಪರಿಣಾಮಕಾರಿಯಾಗಿ ಓಡಿಸುತ್ತವೆ.
ಬೇವಿನ ಎಣ್ಣೆ: ಶತಮಾನಗಳಿಂದ ಆಯುರ್ವೇದದಲ್ಲಿ ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬೇವನ್ನು ಬಳಸಲಾಗುತ್ತಿದೆ. ಇದು ಸೊಳ್ಳೆಗಳನ್ನು ಹಿಮ್ಮೆಟ್ಟಿಸಲು ಸಹ ಸಹಾಯ ಮಾಡುತ್ತದೆ. ಅದೇ ರೀತಿ ಬೇವಿನ ಎಣ್ಣೆಯೂ ಪ್ರಯೋಜನಕಾರಿ. ಕೆಲವು ಹನಿ ಬೇವಿನ ಎಣ್ಣೆಯನ್ನು ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ತ್ವಚೆಗೆ ಹಚ್ಚುವುದರಿಂದ ಸೊಳ್ಳೆಗಳು ನಿಮ್ಮ ಹತ್ತಿರಕ್ಕೂ ಸುಳಿಯುವುದಿಲ್ಲ.
ಇದನ್ನೂ ಓದಿ: ಈ ಒಂದು ಹಣ್ಣಿನ ಸಿಪ್ಪೆಯ ಸಹಾಯದಿಂದ ಮನೆಯಿಂದ ಸುಲಭವಾಗಿ ಇಲಿಗಳನ್ನು ಓಡಿಸಬಹುದು
ಬೆಳ್ಳುಳ್ಳಿ: ಬೆಳ್ಳುಳ್ಳಿ ಆರೋಗ್ಯಕ್ಕೆ ಪ್ರಯೋಜನಕಾರಿ ಮಾತ್ರವಲ್ಲದೆ ಸೊಳ್ಳೆಗಳನ್ನು ಹಿಮ್ಮೆಟ್ಟಿಸುವಲ್ಲಿಯೂ ಪರಿಣಾಮಕಾರಿಯಾಗಿದೆ. ಬೆಳ್ಳುಳ್ಳಿಯಲ್ಲಿರುವ ಸಲ್ಫರ್ ಅಂಶವು ಸೊಳ್ಳೆಗಳಿಗೆ ವಿಷಕಾರಿಯಾಗಿದೆ. ಇದರ ಕಟುವಾದ ವಾಸನೆಯು ಅವುಗಳನ್ನು ಹಿಮ್ಮೆಟ್ಟಿಸುವಲ್ಲಿ ಪರಿಣಾಮಕಾರಿಯಾಗಿದೆ. ಸೊಳ್ಳೆಗಳನ್ನು ತೊಡೆದುಹಾಕಲು, ಕೆಲವು ಬೆಳ್ಳುಳ್ಳಿ ಎಸಳುಗಳನ್ನು ಲವಂಗವನ್ನು ನೀರಿನಲ್ಲಿ ಕುದಿಸಿ. ಈ ನೀರನ್ನು ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ ಮನೆಯ ಸುತ್ತಲೂ ಸಿಂಪಡಿಸಿ, ಇದರಿಂದ ಸೊಳ್ಳೆಗಳು ಓಡಿಹೋಗುತ್ತವೆ.
ಕರ್ಪೂರ: ಕರ್ಪೂರದ ಬಲವಾದ ವಾಸನೆಗೆ ಸೊಳ್ಳೆಗಳು ಓಡಿ ಹೋಗುತ್ತವೆ. ಆದ್ದರಿಂದ ಸಂಜೆ ಸೊಳ್ಳೆಗಳು ಸುಳಿದಾಡುವ ಸಮಯದಲ್ಲಿ ಕರ್ಪೂರ ಹಚ್ಚಿ, ಇದರ ಹೊಗೆ ಮತ್ತು ಪರಿಮಳಕ್ಕೆ ಸೊಳ್ಳೆಗಳು ಓಡಿ ಹೋಗುತ್ತವೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ