ಮದುವೆ ಎನ್ನುವುದು ಗಂಡು ಹೆಣ್ಣಿನ ಜೀವನದಲ್ಲಿ ಮಹತ್ತರ ಘಟ್ಟ. ವಿಭಿನ್ನ ಮನಸ್ಥಿತಿಯ ವ್ಯಕ್ತಿಗಳು ಇಬ್ಬರೂ ಜೊತೆಯಾಗಿ ಬದುಕುವುದು ಅಷ್ಟು ಸುಲಭವಲ್ಲ. ಇಬ್ಬರಲ್ಲಿ ಪ್ರೀತಿ, ಕಾಳಜಿ ಹಾಗೂ ಹೊಂದಾಣಿಕೆಯಿರಲೇಬೇಕು. ಪ್ರೀತಿ ಬೆಟ್ಟದಷ್ಟು ಇದ್ದರೂ ಸಣ್ಣ ಪುಟ್ಟ ಮುನಿಸು, ಮನಸ್ತಾಪಗಳು ಆ ಪ್ರೀತಿಯನ್ನೇ ಮರೆಮಾಚಿ ಬಿಡುತ್ತದೆ. ಹೀಗಾಗಿ ಹೆಚ್ಚಿನವರ ದಾಂಪತ್ಯ ಜೀವನವು ಹಳಸಿ ಹೋಗುತ್ತದೆ..ಆದರೆ ದಾಂಪತ್ಯ ಜೀವನದಲ್ಲಿ ಸತಿ ಪತಿಯರಿಬ್ಬರ ನಡುವೆ ಪ್ರೀತಿ ಹೆಚ್ಚಾಗಬೇಕಾದರೆ ಕೆಲವು ಬದಲಾವಣೆಗಳನ್ನು ಮಾಡಿಕೊಂಡರೆ ಸಂಸಾರ ಸ್ವರ್ಗವಾಗುವುದರಲ್ಲಿ ಎರಡು ಮಾತಿಲ್ಲ.
* ಪರಸ್ಪರ ಸಮಯ ಕಳೆಯಿರಿ : ಹೊಸದಾಗಿ ಮದುವೆಯಾಗಿರುವ ದಂಪತಿಗಳು ಜೊತೆಯಾಗಿ ಕಾಲ ಕಳೆಯುವ ಮೂಲಕ ಸಂಬಂಧವನ್ನು ಬಲಪಡಿಸಿಕೊಳ್ಳಬಹುದು. ಬಿಡುವು ಸಿಕ್ಕಾಗಲೆಲ್ಲಾ ಮುಕ್ತವಾಗಿ ಮಾತನಾಡುವುದರಿಂದ ಇಬ್ಬರ ಮನಸ್ಸಿನಲ್ಲಿ ಏನಿದೆ ಎಂದು ತಿಳಿಯುತ್ತದೆ. ಹೆಚ್ಚು ಸಮಯ ಜೊತೆಗೆ ಇರುವುದರಿಂದ ಭಿನ್ನಾಭಿಪ್ರಾಯಗಳು ದೂರವಾಗಿ ಪ್ರೀತಿ ಹೆಚ್ಚಾಗುತ್ತದೆ.
* ಜಗಳಗಳಾಗುವುದನ್ನು ಆದಷ್ಟು ತಪ್ಪಿಸಿ : ಪ್ರತಿಯೊಂದು ಸಂಬಂಧದಲ್ಲಿ ಜಗಳ ಸಂಘರ್ಷಗಳು ಸರ್ವೇ ಸಾಮಾನ್ಯ. ಹಾಗಂತ ಅದನ್ನೇ ದೊಡ್ಡದು ಮಾಡುವುದು ಸರಿಯಲ್ಲ. ಜಗಳವು ಇಬ್ಬರನ್ನು ಭಾವನಾತ್ಮಕವಾಗಿ ಮತ್ತು ದೈಹಿಕವಾಗಿ ದುರ್ಬಲಗೊಳಿಸುತ್ತದೆ. ಹೀಗಾಗಿ ಸಂಬಂಧದಲ್ಲಿ ಯಾವುದೇ ಸಮಸ್ಯೆಯಿರಲಿ, ಪರಸ್ಪರ ಮಾತನಾಡುವ ಮೂಲಕ ಪರಿಹರಿಸಿಕೊಳ್ಳಬಹುದು. ಮನಸ್ತಾಪದ ನಡುವೆ ಹಳೆಯ ವಿಷಯಗಳನ್ನು ಕೆದಕುವುದನ್ನು ತಪ್ಪಿಸಿ.
* ಪರಸ್ಪರ ಗೌರವಿಸಿ : ಸಂಬಂಧದಲ್ಲಿ ಒಬ್ಬರಿಗೊಬ್ಬರು ಗೌರವ ನೀಡುವುದು ಬಹಳ ಮುಖ್ಯವಾಗಿರುತ್ತದೆ. ಗೌರವವಿದ್ದಾಗಲೇ ಸಂಬಂಧಗಳು ಸುಧಾರಿಸಲು ಸಾಧ್ಯ. ನೀವು ಸಂಗಾತಿಯನ್ನು ಹೇಗೆ ವರ್ತಿಸಬೇಕೆಂದು ನಿರೀಕ್ಷಿಸುತ್ತಾರೋ ಹಾಗೆಯೇ ಅವರ ಜೊತೆಗೆ ನಡೆದುಕೊಳ್ಳಿ. ಒಬ್ಬರನ್ನೊಬ್ಬರು ಗೌರವಿಸುವುದನ್ನು ರೂಢಿಸಿಕೊಳ್ಳಿ. ಪರಸ್ಪರರ ತಪ್ಪುಗಳನ್ನು ಚರ್ಚಿಸಬೇಡಿ. ಇದರಿಂದ ಗಂಡ ಹೆಂಡಿರ ನಡುವೆ ಬಾಂಧವ್ಯವು ಗಟ್ಟಿಯಾಗಿ ಪ್ರೀತಿ ಹೆಚ್ಚಾಗುತ್ತದೆ.
ಇದನ್ನೂ ಓದಿ: ಭಾರತದ ಈ ಸ್ಥಳಗಳಲ್ಲಿ ದೀಪಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತೆ ಆತ್ಮಗಳು, ಎಲ್ಲಿ ಗೊತ್ತಾ?
* ತಪ್ಪಿದ್ದರೆ ಕ್ಷಮಿಸಿ ಬಿಡಿ : ಈ ಜಗತ್ತಿನಲ್ಲಿ ತಪ್ಪು ಮಾಡದ ವ್ಯಕ್ತಿಗಳು ಯಾರಿದ್ದಾರೆ ಹೇಳಿ. ಒಂದು ವೇಳೆ ನಿಮ್ಮ ಸಂಗಾತಿ ಏನಾದರೂ ತಪ್ಪು ಮಾಡಿದ್ದರೆ ಕ್ಷಮಿಸಲು ಕಲಿಯಿರಿ. ಪ್ರತಿಯೊಬ್ಬರಿಗೂ ನ್ಯೂನತೆಗಳಿವೆ. ತಪ್ಪನ್ನು ಒಪ್ಪಿಕೊಳ್ಳುವ ಗುಣವು ಸಂಗಾತಿಯಲ್ಲಿದ್ದರೆ, ಕ್ಷಮಿಸುವ ಗುಣ ನಿಮ್ಮಲ್ಲಿರಲೇ ಬೇಕು. ಈ ಕೆಲವು ಅಭ್ಯಾಸವು ಸಂಬಂಧವನ್ನು ಉಳಿಸಿ ಪ್ರೀತಿಯನ್ನು ಹೆಚ್ಚಿಸುತ್ತದೆ.
* ಸಂಗಾತಿಯಲ್ಲಿ ಒಳ್ಳೆಯದನ್ನು ಕಂಡುಕೊಳ್ಳಿ : ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ಎದುರಿಗಿರುವ ವ್ಯಕ್ತಿಯ ನ್ಯೂನತೆಯನ್ನು ಹುಡುಕುವುದರಲ್ಲಿ ಸಮಯ ಕಳೆಯುವುತ್ತೇವೆ. ಸಾಧ್ಯವಾದರೆ ನಿಮ್ಮ ಸಂಗಾತಿಯಲ್ಲಿರುವ ಕೆಟ್ಟಗುಣಗಳ ಬದಲು, ಒಳ್ಳೆಯದನ್ನು ಹುಡುಕಲು ಪ್ರಯತ್ನಿಸಿ. ಸಂಗಾತಿಯ ಉತ್ತಮ ಗುಣಗಳಿಂದ ಅವರ ಮೇಲಿರುವ ನಿಮ್ಮ ಮನೋಭಾವವು ಬದಲಾಗುವ ಸಾಧ್ಯತೆಯೂ ಅಧಿಕವಾಗಿರುತ್ತದೆ. ಇದರಿಂದ ಇಬ್ಬರ ನಡುವೆ ಆತ್ಮೀಯತೆ ಹಾಗೂ ಪ್ರೀತಿಯೂ ಹೆಚ್ಚಾಗುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ