Ganesh Chaturthi 2023: ಚೌತಿಯಂದು ಮನೆಯಲ್ಲಿ ಗಣಪತಿ ಕೂರಿಸುವವರು ಅನುಸರಿಸಬೇಕಾದ ನಿಯಮಗಳೇನು? ಆಚರಣೆ ಹೇಗೆ?

| Updated By: Digi Tech Desk

Updated on: Sep 19, 2023 | 9:56 AM

ಈ ಹಬ್ಬದ ಸಂಭ್ರಮದಲ್ಲಿ ಮನೆ ಮನೆಗಳಲ್ಲಿ ಗಣಪನನ್ನು ಕೂರಿಸುವುದು ವಾಡಿಕೆ. ವಿವಿಧ ರೀತಿಯ, ಹಲವು ಭಂಗಿಯ ಗಣಪ ನಿಮಗೆ ಕಾಣಸಿಗುತ್ತಾನೆ. ಆದರೆ ಮನೆಯಲ್ಲಿ ದೇವರನ್ನು ಕೂರಿಸುವ ಕ್ರಮ ಹೇಗಿರಬೇಕು? ಯಾವ ರೀತಿಯ ನಿಯಮಗಳನ್ನು ಪಾಲನೆ ಮಾಡಬೇಕು? ಇವೆಲ್ಲವನ್ನೂ ಕೂಡ ತಿಳಿದುಕೊಳ್ಳುವುದು ಕೂಡ ಮುಖ್ಯವಾಗುತ್ತದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Ganesh Chaturthi 2023: ಚೌತಿಯಂದು ಮನೆಯಲ್ಲಿ ಗಣಪತಿ ಕೂರಿಸುವವರು ಅನುಸರಿಸಬೇಕಾದ ನಿಯಮಗಳೇನು? ಆಚರಣೆ ಹೇಗೆ?
Ganesh Chaturthi 2023
Image Credit source: Pinterest
Follow us on

ಗಣೇಶ ಚತುರ್ಥಿ ಅಥವಾ ಚೌತಿ ಹಬ್ಬವು ಹಿಂದೂ ಧರ್ಮದಲ್ಲಿ ಪವಿತ್ರವಾದ ಹಬ್ಬವಾಗಿದೆ. ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ತಿಥಿಯಿಂದ ಪ್ರಾರಂಭವಾಗಿ 10 ದಿನಗಳವರೆಗೆ ನಡೆದು ಅನಂತ ಚತುರ್ದಶಿಯಂದು ಕೊನೆಗೊಳ್ಳುತ್ತದೆ. ಅಂದರೆ ಈ ವರ್ಷ ಸೆಪ್ಟೆಂಬರ್ 19 ರಿಂದ ಪ್ರಾರಂಭವಾಗಿ 28ರಂದು ಕೊನೆಗೊಳ್ಳುತ್ತದೆ. ಈ ಹಬ್ಬದ ಸಂಭ್ರಮದಲ್ಲಿ ಮನೆ ಮನೆಗಳಲ್ಲಿ ಗಣಪನನ್ನು ಕೂರಿಸುವುದು ವಾಡಿಕೆ. ವಿವಿಧ ರೀತಿಯ, ಹಲವು ಭಂಗಿಯ ಗಣಪ ನಿಮಗೆ ಕಾಣಸಿಗುತ್ತಾನೆ. ಆದರೆ ಮನೆಯಲ್ಲಿ ದೇವರನ್ನು ಕೂರಿಸುವ ಕ್ರಮ ಹೇಗಿರಬೇಕು? ಯಾವ ರೀತಿಯ ನಿಯಮಗಳನ್ನು ಪಾಲನೆ ಮಾಡಬೇಕು? ಇವೆಲ್ಲವನ್ನೂ ಕೂಡ ತಿಳಿದುಕೊಳ್ಳುವುದು ಕೂಡ ಮುಖ್ಯವಾಗುತ್ತದೆ. ಆಗ ಮಾತ್ರ ನೀವು ಸಂಪ್ರದಾಯ ಬದ್ದವಾಗಿ ಹಬ್ಬವನ್ನು ಆಚರಿಸಲು ಸಾಧ್ಯ.

ಗಣೇಶ ಚತುರ್ಥಿಯ ಆಚರಣೆಗಳಾವುವು?

ಗಣೇಶ ಚತುರ್ಥಿಯು ನಾಲ್ಕು ಮುಖ್ಯ ಆಚರಣೆಗಳನ್ನು ಹೊಂದಿದೆ. ಅದೆನೆಂದರೆ ಪ್ರತಿಷ್ಠಾಪನೆ, ಶೋಡಶೋಪಚಾರ, ಉತ್ತರಪೂಜೆ ಮತ್ತು ವಿಸರ್ಜನೆ. ಈ ನಾಲ್ಕು ಆಚರಣೆಗಳು ಕೂಡ ತಮ್ಮದೇ ನಿಯಮಗಳಿಂದ ಕೂಡಿದೆ. ಮೊದಲನೇಯದು ಪ್ರಾಣಪ್ರತಿಷ್ಠೆ ಅಥವಾ ಪ್ರತಿಷ್ಠಾಪನೆ. ಅಂದರೆ ಗಣೇಶನನ್ನು ಮನೆಗೆ ಕರೆತಂದು, ಪುರೋಹಿತರು ಮಂತ್ರವನ್ನು ಪಠಿಸುವ ಮೂಲಕ ಕ್ರಮಬದ್ಧವಾಗಿ ಕೂರಿಸಲಾಗುತ್ತದೆ.
ಅದರ ನಂತರ, 16 ವಿಭಿನ್ನ ಆಚರಣೆಗಳನ್ನು ನಡೆಸಲಾಗುತ್ತದೆ. ಇದನ್ನು ಶೋಡಶೋಪಚಾರ ಪೂಜೆ ಎಂದು ಕರೆಯಲಾಗುತ್ತದೆ. ಗಣೇಶ ಚತುರ್ಥಿಯ ಮೂರನೇ ಮುಖ್ಯ ಆಚರಣೆ ಉತ್ತರಪೂಜೆ ಇದು ಗಣೇಶನಿಗೆ ವಿದಾಯ ಹೇಳುವ ಕ್ರಮವಾಗಿದೆ. ಇನ್ನು ಗಣೇಶ ಚತುರ್ಥಿಯ 10 ನೇ ಮತ್ತು ಕೊನೆಯ ದಿನದಂದು, ಗಣೇಶನ ವಿಗ್ರಹವನ್ನು ಹತ್ತಿರದ ನದಿಯಲ್ಲಿ ಪೂರ್ಣ ಭಕ್ತಿಯಿಂದ ಮುಳುಗಿಸಲಾಗುತ್ತದೆ ಮತ್ತು ಈ ಸಮಾರಂಭವನ್ನು ಗಣೇಶ ವಿಸರ್ಜನೆ ಎಂದು ಕರೆಯಲಾಗುತ್ತದೆ. ಈ ನಾಲ್ಕು ಘಟ್ಟವೂ ಕೂಡ ತುಂಬಾ ಮುಖ್ಯವಾಗಿದೆ.

ಇದನ್ನೂ ಓದಿ: ಗಣೇಶನಿಗೆ ಪ್ರಿಯವಾದ ಮೋದಕದಲ್ಲಿದೆ ಹಲವು ಆರೋಗ್ಯ ಪ್ರಯೋಜನ

ಗಣೇಶನ ಕೂರಿಸಲು ನಿಯಮಗಳಿವೆಯೇ? ಯಾವುದು?

ಗಣೇಶನ ಮೂರ್ತಿ ಸ್ಥಾಪನೆ ವೇಳೆ ಕೆಲವು ವಿಷಯಗಳ ಬಗ್ಗೆ ವಿಶೇಷ ಕಾಳಜಿವಹಿಸಬೇಕು. ಹೇಗೆ ಮೂರ್ತಿ ಪ್ರತಿಷ್ಟಾಪನೆ ಮಾಡಬೇಕು ಎಂಬ ಮಾಹಿತಿ ಇಲ್ಲಿದೆ.

  • ಮುಖ್ಯವಾಗಿ ಮಣ್ಣಿನ ಮೂರ್ತಿಯನ್ನು ತರುವಾಗ ಗಣಪತಿಯ ಸೊಂಡಿಲಿನ ಬಗ್ಗೆ ಗಮನವಹಿಸಬೇಕು. ಅಂದರೆ ಎಡಮುರಿ ಮತ್ತು ಬಲಮುರಿ ಗಣಪತಿ ಎಂಬ ಎರಡು ಪ್ರಕಾರದ ಗಣಪತಿ ಮೂರ್ತಿಗಳಿರುವುದರಿಂದ ಎಡಮುರಿ ಗಣಪತಿಯ ಮೂರ್ತಿಯನ್ನೇ ಮನೆಗೆ ತರಬೇಕು. ಗಣೇಶನ ಸೊಂಡಿಲು ಯಾವಾಗಲೂ ಎಡ ಭಾಗಕ್ಕೆ ಇರಬೇಕು ಎಂಬುದು ಪ್ರತೀತಿ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಅಂತಹ ಗಣೇಶನ ವಿಗ್ರಹವನ್ನು ವಕ್ರತುಂಡ ಎಂದು ಕರೆಯಲಾಗುತ್ತದೆ. ಜೊತೆಗೆ ಅಂತಹ ವಿಗ್ರಹವನ್ನು ಮನೆಗೆ ತರುವುದರಿಂದ, ನಿಮ್ಮ ಎಲ್ಲಾ ಆಸೆಗಳು ಶೀಘ್ರದಲ್ಲೇ ಈಡೇರುತ್ತವೆ ಎಂಬ ನಂಬಿಕೆ ಇದೆ.
  • ಇನ್ನು ಮೂರ್ತಿ ಕುಳಿತಿರುವ ಭಂಗಿಯಲ್ಲಿದ್ದರೇ ಇನ್ನು ಒಳ್ಳೆಯದು. ಇದು ಮನೆಗೆ ಶುಭ ತರುತ್ತದೆ ಎನ್ನಲಾಗುತ್ತದೆ. ಹಾಗೆಯೇ ಮನೆಯ ಸಂಪತ್ತು ಕೂಡ ಶಾಶ್ವತವಾಗಿ ಉಳಿಯುತ್ತದೆ ಎನ್ನಲಾಗಿದೆ. ಇದಕ್ಕಿಂತ ಮಿಗಿಲಾಗಿ ಮೂರ್ತಿ ಮಣ್ಣಿನಿಂದಲೇ ಮಾಡಿದ್ದಾಗಿರಬೇಕು. ರಾಸಾಯನಿಕ ಅಂಶವಿರುವ ವಿಗ್ರಹವನ್ನು ತರಬಾರದು. ಅಷ್ಟು ಮಿಕ್ಕಿ ಮಣ್ಣಿನ ಗಣಪತಿ ತರಲು ಸಾಧ್ಯವಿಲ್ಲ ಎಂಬ ಸಂದರ್ಭದಲ್ಲಿ ಬೇಕಾದಲ್ಲಿ ಲೋಹದಿಂದ ಮಾಡಿದ ವಿಗ್ರಹವನ್ನು ತರಬಹುದು. ಆದರೆ ಮಣ್ಣಿನ ಮೂರ್ತಿಯೇ ಶ್ರೇಷ್ಠ. ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವಾಗ ಗಣೇಶನ ಸೊಂಡಿಲು ಉತ್ತರ ದಿಕ್ಕಿನತ್ತ ಇರುವಂತೆ ನೋಡಿಕೊಳ್ಳಿ.
  • ವಿಗ್ರಹ ಸ್ಥಾಪನೆ ಮಾಡುವಾಗ ಅಥವಾ ದೇವರನ್ನು ಕೂರಿಸುವ ಜಾಗದಲ್ಲಿ ರಂಗೋಲಿ ಬಿಡಬೇಕು. ಬಳಿಕ ಅದರ ಮೇಲೆಯೇ ವಿಗ್ರಹವನ್ನಿಡಬೇಕು ಅಲ್ಲದೆ ವಿಗ್ರಹದ ಎರಡೂ ಬದಿಗಳಲ್ಲಿ ಎರಡೆರಡು ವೀಳ್ಯದೆಲೆ ಮತ್ತು ಅಡಿಕೆಯನ್ನು ಮರೆಯದೇ ಇರಿಸಬೇಕು ಇದನ್ನು ರಿದ್ಧಿ -ಸಿದ್ಧಿ ಎಂದು ಪರಿಗಣಿಸಲಾಗುತ್ತದೆ. ಗಣೇಶ ದೇವರನ್ನು ಕೂರಿಸಲು ಆರಂಭಿಸಿದ ಮೇಲೆ ಪ್ರತಿ ವರ್ಷವೂ ವಿಗ್ರಹದ ಪ್ರತಿಷ್ಠಾಪನೆ ಮಾಡಬೇಕಾಗುತ್ತದೆ ಎಂಬುದನ್ನು ಎಂದಿಗೂ ಮರೆಯಬೇಡಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 6:13 am, Fri, 15 September 23