ಒಗ್ಗರಣೆಗೆ ಬಳಸುವ ಈ ಬೆಳ್ಳುಳ್ಳಿ ಆರೋಗ್ಯಕ್ಕೂ ಬಹುಪಯೋಗಿ, ಇಲ್ಲಿದೆ ಸರಳ ಮನೆ ಮದ್ದು

| Updated By: ಅಕ್ಷಯ್​ ಪಲ್ಲಮಜಲು​​

Updated on: Feb 01, 2024 | 5:39 PM

ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ ಸಿಗುವ ಪದಾರ್ಥಗಳಲ್ಲಿ ಈ ಬೆಳ್ಳುಳ್ಳಿ ಕೂಡ ಒಂದು. ಒಗ್ಗರಣೆಗೆ ಪ್ರಮುಖವಾಗಿ ಬೇಕಾಗುವ ಈ ಬೆಳ್ಳುಳ್ಳಿ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. ಬೆಳ್ಳುಳ್ಳಿಯಲ್ಲಿ ವಿಟಮಿನ್ ಬಿ6 ಮತ್ತು ವಿಟಮಿನ್ ಸಿ ಅಂಶವು ಇದ್ದು, ಅನೇಕ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿದೆ. ಹಳ್ಳಿಗಳಲ್ಲಿ ಈ ಬೆಳ್ಳುಳ್ಳಿಯಿಂದ ನಾನಾ ರೀತಿಯ ಮನೆ ಮದ್ದುಗಳನ್ನು ತಯಾರಿಸುತ್ತಾರೆ.

ಒಗ್ಗರಣೆಗೆ ಬಳಸುವ ಈ ಬೆಳ್ಳುಳ್ಳಿ ಆರೋಗ್ಯಕ್ಕೂ ಬಹುಪಯೋಗಿ, ಇಲ್ಲಿದೆ ಸರಳ ಮನೆ ಮದ್ದು
ಸಾಂದರ್ಭಿಕ ಚಿತ್ರ
Follow us on

ಆಹಾರದ ರುಚಿಯನ್ನು ಹೆಚ್ಚಿಸುವ ಈ ಬೆಳ್ಳುಳ್ಳಿಯನ್ನು ಕೆಲವರು ಇಷ್ಟ ಪಟ್ಟರೆ, ಕೆಲವರಿಗೆ ಬೆಳ್ಳುಳ್ಳಿ ವಾಸನೆಯೇ ಆಗುವುದಿಲ್ಲ. ಕೆಲವರು ಈ ಹಸಿ ಬೆಳ್ಳುಳ್ಳಿಯನ್ನು ಸೇವಿಸುತ್ತಾರೆ. ಆದರೆ ಹಸಿ ಬೆಳ್ಳುಳ್ಳಿ ಯಾವುದೇ ರುಚಿಯನ್ನು ಹೊಂದಿರುವುದಿಲ್ಲ ಹಾಗೂ ಖಾರವಾಗಿರುವ ಕಾರಣ ಅಷ್ಟಾಗಿ ಇಷ್ಟ ಪಡದವರೇ ಹೆಚ್ಚು. ಆರೋಗ್ಯಕ್ಕೆ ಬಹುಪಯೋಗಿಯಾಗಿರುವ ಈ ಬೆಳ್ಳುಳ್ಳಿಯನ್ನು ಆಯುರ್ವೇದದಲ್ಲಿ ಔಷಧಿಯಾಗಿ ಬಳಸಲಾಗುತ್ತದೆ. ಮನೆಯಲ್ಲಿಯೂ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಇದರಿಂದ ಔಷಧಿಯನ್ನು ತಯಾರಿಸಿ ಸೇವಿಸಲಾಗುತ್ತದೆ.

ಬೆಳ್ಳುಳ್ಳಿಯ ಮನೆಮದ್ದುಗಳು ಇಲ್ಲಿವೆ:

* ಬೆಳ್ಳುಳ್ಳಿ ಎಸಳುಗಳು, ಕಾಳು ಮೆಣಸು, ದುಂಡು ಮಲ್ಲಿಗೆ ಎಲೆಗಳನ್ನು ಸೇರಿಸಿ ನುಣ್ಣಗೆ ಅರೆದು ಮಾತ್ರೆ ತಯಾರಿಸಿಟ್ಟುಕೊಂಡು ದಿನಕ್ಕೆ ಮೂರು ಬಾರಿ ಒಂದೊಂದು ಮಾತ್ರೆಯನ್ನು ಸೇವಿಸಿದರೆ ಗಂಟಲು ನೋವು ಗುಣಮುಖವಾಗುತ್ತದೆ.

* ಅರ್ಧ ಲೋಟ ಬಿಸಿ ನೀರಿಗೆ ಅರ್ಧಚಮಚೆ ಬೆಳ್ಳುಳ್ಳಿ ರಸ, ಒಂದು ಚಿಟಿಕೆ ಸೈಂಧವ ಲವಣ ಬೆರೆಸಿ ಕುಡಿದರೆ ಅಜೀರ್ಣ ದೂರವಾಗುತ್ತದೆ.

* ಬೆಳ್ಳುಳ್ಳಿ, ಮೆಣಸು, ನಾಗದಾಳಿ ಸೊಪ್ಪು ಸಮಪ್ರಮಾಣದಲ್ಲಿ ಅರೆದು ಮಾತ್ರೆ ತಯಾರಿಸಿಟ್ಟುಕೊಂಡ, ದಿನಕ್ಕೆ ಮೂರು ಬಾರಿ ಸೇವಿಸಿದರೆ ಅಸ್ತಮಾ ರೋಗ ನಿವಾರಣೆಯಾಗುತ್ತದೆ.

* ಬೆಳ್ಳುಳ್ಳಿಯ ರಸ ತೆಗೆದು ಎಳ್ಳೆಣ್ಣೆಯಲ್ಲಿ ಹಾಕಿ ಬಿಸಿ ಮಾಡಿ, ತಣ್ಣಗಾದ ನಂತರದಲ್ಲಿ ಶೋಧಿಸಿ ಮೂರಾಲ್ಕು ಹನಿ ಕಿವಿಗೆ ಹಾಕಿದರೆ ಕಿವಿನೋವು ಕಡಿಮೆಯಾಗುತ್ತದೆ.

* ಬೆಣ್ಣೆಯೊಂದಿಗೆ ಬೆಳ್ಳುಳ್ಳಿಯನ್ನು ಸೇರಿಸಿ ಅರೆದು ಹುಣ್ಣಿಗೆ ಹಚ್ಚುತ್ತಿದ್ದರೆ ಹುಣ್ಣು ಬೇಗ ವಾಸಿಯಾಗುವುದು.

* ಬೆಳ್ಳುಳ್ಳಿ ಬೇಯಿಸಿದ ನೀರಿನಿಂದ ಗಾಯವನ್ನು ತೊಳೆಯುತ್ತಿದ್ದರೆ ರೋಗಾಣುಗಳು ನಾಶವಾಗಿ, ಗಾಯವು ಬೇಗನೇ ಮಾಗುತ್ತದೆ.

* ಸ್ವಲ್ಪ ಬೆಳ್ಳುಳ್ಳಿ ಹಾಗೂ ನಾಲ್ಕೈದು ಸೈಂಧವ ಲವಣ, ಜೀರಿಗೆ, ಶುಂಠಿ, ಮೆಣಸು, ಹಿಪ್ಪಲಿ, ಹುರಿದ ಇಂಗು ಇವುಗಳನ್ನು ಚೆನ್ನಾಗಿ ಅರೆದು ಮಾತ್ರೆ ತಯಾರಿಸಿಟ್ಟುಕೊಂಡು ಬೆಳಗ್ಗೆ ರಾತ್ರಿ ಒಂದೊಂದು ಮಾತ್ರೆಯನ್ನು ಹದಿನೈದು ದಿನಗಳ ಕಾಲ ಸೇವಿಸಿದರೆ ಕೀಲು ನೋವಿಗೆ ಬಹಳ ಪರಿಣಾಮಕಾರಿಯಾದ ಔಷಧಿ.

ಇದನ್ನೂ ಓದಿ: ಜೀವ ಜಗತ್ತಿನಲ್ಲಿ ನೈಸರ್ಗಿಕ ತೇವಭರಿತ ಭೂಮಿಯ ಸಂರಕ್ಷಣೆಯೂ ಅತ್ಯಗತ್ಯ

* ಚೇಳು ಕಚ್ಚಿದ ಜಾಗಕ್ಕೆ ಬೆಳ್ಳುಳ್ಳಿ ಎಸಳನ್ನು ಅರೆದು ಹಚ್ಚಿದರೆ ನೋವು ಕೂಡಲೇ ಕಡಿಮೆಯಾಗುತ್ತದೆ.

* ಬೆಳ್ಳುಳ್ಳಿಯ ಸೇವನೆಯಿಂದ ಕ್ಷಯ ರೋಗವು ಗುಣಮುಖವಾಗುತ್ತದೆ.

* ಹಾಲಿನಲ್ಲಿ ಬೇಯಿಸಿದ ಬೆಳ್ಳುಳ್ಳಿ ಎಸಳನ್ನು ದಿನವೂ ತಿನ್ನುವುದರಿಂದ ಅಸ್ತಮಾ ರೋಗವು ಶಮನವಾಗುತ್ತದೆ.

* ಬೆಳ್ಳುಳ್ಳಿಯನ್ನು ಪ್ರತಿದಿನ ಆಹಾರದಲ್ಲಿ ಉಪಯೋಗಿಸಿದರೆ ಶರೀರದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.

* ಪ್ರತಿದಿನ ಬೆಳ್ಳುಳ್ಳಿಯನ್ನು ಆಹಾರದೊಡನೆ ಸೇವಿಸುತ್ತಿದ್ದರೆ ರಕ್ತದೊತ್ತಡವು ಕಡಿಮೆಯಾಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 4:10 pm, Thu, 1 February 24