Global Family Day 2026: ವಸುದೈವ ಕುಟುಂಬಕಂ; ಜಾಗತಿಕ ಕುಟುಂಬ ದಿನದ ಆಚರಣೆಯ ಬಗ್ಗೆ ತಿಳಿಯಿರಿ
ವಸುದೈವ ಕುಟುಂಬಕಂ ಎಂಬ ನುಡಿಯಿದೆ. ಇದರ ಅರ್ಥ ಇಡೀ ವಿಶ್ವವೇ ನಮ್ಮ ಕುಟುಂಬ ಎಂದು. ಇದೇ ಉದ್ದೇಶದೊಂದಿಗೆ ಎಲ್ಲಾ ರಾಷ್ಟ್ರಗಳು ಮತ್ತು ಧರ್ಮಗಳ ನಡುವೆ ಶಾಂತಿ, ಸ್ನೇಹವನ್ನು ಬೆಳೆಸುವ ಹಾಗೂ ಯುದ್ಧ ಮತ್ತು ಹಿಂಸಾಚಾರವನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿ ವರ್ಷ ಜನವರಿ 1 ರಂದು ಜಾಗತಿಕ ಕುಟುಂಬ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವದ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಕುಟುಂಬವಿಲ್ಲದೆ (Family) ಜೀವನ ಅಸಾಧ್ಯ ಅಂತಾನೇ ಹೇಳಬಹುದು. ಕುಟುಂಬವು ನಮಗೆ ಬೆಟ್ಟದಷ್ಟು ಪ್ರೀತಿ ನೀಡುತ್ತದೆ, ಜೀವನ ನಡೆಸಲು ಸ್ಫೂರ್ತಿಯನ್ನು ನೀಡುತ್ತದೆ. ಕುಟುಂಬವು ನಮ್ಮನ್ನು ಯಾವುದೇ ಕ್ಲಿಷ್ಟಕರ ಸಂದರ್ಭದಲ್ಲೂ ಒಗ್ಗಟ್ಟಿನಿಂದ ಇರುವಂತೆ ನೋಡಿಕೊಳ್ಳುತ್ತದೆ. ಇದೇ ರೀತಿ ವಸುದೈವ ಕುಟುಂಬಕಂ ಎಂಬ ಮಾತಿನಂತೆ ಇಡೀ ಜಗತ್ತೇ ಒಂದು ಕುಟುಂಬದಂತಿದ್ದರೆ ಯುದ್ಧ ಹಿಂಸಾಚಾರಗಳು ನಡೆಯುವುದಿಲ್ಲ, ಪ್ರತಿಯೊಬ್ಬರೂ ಸಹ ಶಾಂತಿಯಿಂದ ಬದುಕಬಹುದು. ಈ ನಿಟ್ಟಿನಲ್ಲಿ ರಾಷ್ಟ್ರಗಳು, ಧರ್ಮಗಳು, ಸಂಸ್ಕೃತಿಗಳ ನಡುವೆ ಏಕತೆ, ಸಹೋದರತ್ವ ಮತ್ತು ಸ್ನೇಹವನ್ನು ಬೆಳೆಸುವ ಸಲುವಾಗಿ, ಯುದ್ಧ ಮತ್ತು ಹಿಂಸಾಚಾರವನ್ನು ತಡೆಗಟ್ಟಿ ಜಗತ್ತಿನಲ್ಲಿ ಶಾಂತಿಯನ್ನು ಸ್ಥಾಪಿಸಲು ಜನವರಿ 1 ರಂದು ಜಾಗತಿಕ ಕುಟುಂಬ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿಯೋಣ ಬನ್ನಿ.
ಜಾಗತಿಕ ಕುಟುಂಬ ದಿನದ ಇತಿಹಾಸವೇನು?
ಜಾಗತಿಕ ಕುಟುಂಬ ದಿನವು ಎರಡು ಪುಸ್ತಕಗಳ ಆಧಾರದಲ್ಲಿ ಹುಟ್ಟಿಕೊಂಡಿತು. ಮೊದಲನೆಯದು 1996 ರಲ್ಲಿ ಅಮೇರಿಕನ್ ಲೇಖಕರಾದ ಸ್ಟೀವ್ ಡೈಮಂಡ್ ಮತ್ತು ರಾಬರ್ಟ್ ಅಲನ್ ಸಿಲ್ವರ್‌ಸ್ಟೈನ್ ಬರೆದ “ಒನ್ ಡೇ ಇನ್ ಪೀಸ್, ಜನವರಿ 1, 2000” ಎಂಬ ಮಕ್ಕಳ ಪುಸ್ತಕ. ಎರಡನೆಯದು 1998 ರಲ್ಲಿ ಅಮೇರಿಕನ್ ಶಾಂತಿ ಕಾರ್ಯಕರ್ತೆ ಮತ್ತು ಲೇಖಕಿ ಲಿಂಡಾ ಗ್ರೋವರ್ ಬರೆದ ಯುಟೋಪಿಯನ್ ಕಾದಂಬರಿ “ಟ್ರೀ ಐಲ್ಯಾಂಡ್: ಎ ನಾವೆಲ್ ಫಾರ್ ದಿ ನ್ಯೂ ಮಿಲೇನಿಯಂ”. ನಿರ್ದಿಷ್ಟವಾಗಿ ಗ್ರೋವರ್, ಜನವರಿ 1 ಅನ್ನು ಜಾಗತಿಕ ಶಾಂತಿ ದಿನವನ್ನಾಗಿ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಪುಸ್ತಕಗಳಲ್ಲಿನ ವಿಚಾರಗಳನ್ನು ಆಧರಿಸಿ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು 1997 ರಲ್ಲಿ ಜನವರಿ 1 ಅನ್ನು ಶಾಂತಿಯ ದಿನವೆಂದು ಘೋಷಿಸಿತು. ವಿಶ್ವಾದ್ಯಂತ ಅಹಿಂಸೆಯನ್ನು ಉತ್ತೇಜಿಸಲು “ಒಂದು ದಿನ, ಒಂದು ಶಾಂತಿ” ಎಂಬ ಹೆಸರಿನಲ್ಲಿ ಜಾಗತಿಕ ಕುಟುಂಬ ದಿನವನ್ನು ಪ್ರಾರಂಭಿಸಿತು. ಮೊದಲ ಅಧಿಕೃತ ಜಾಗತಿಕ ಕುಟುಂಬ ದಿನವನ್ನು ಜನವರಿ 1, 2000 ರಂದು ಆಚರಿಸಲಾಯಿತು. ಅಂದಿನಿಂದ, ಜಾಗತಿಕ ಕುಟುಂಬ ದಿನವನ್ನು ವಾರ್ಷಿಕವಾಗಿ ಹೊಸ ವರ್ಷದ ದಿನದಂದು ವಿಭಿನ್ನ ಥೀಮ್‌ನೊಂದಿಗೆ ಆಚರಿಸಲಾಗುತ್ತದೆ.
ಇದನ್ನೂ ಓದಿ: ಹೊಸ ವರ್ಷದ ಆಚರಣೆ ಪ್ರಾರಂಭವಾದದ್ದು ಹೇಗೆ? ಇಲ್ಲಿದೆ ಆಸಕ್ತಿದಾಯಕ ಸಂಗತಿ
ಜಾಗತಿಕ ಕುಟುಂಬ ದಿನದ ಉದ್ದೇಶ, ಮಹತ್ವವೇನು?
- ಈ ದಿನವನ್ನು ಆಚರಿಸುವ ಹಿಂದಿನ ಉದ್ದೇಶವೆಂದರೆ ಇಡೀ ಜಗತ್ತು ಒಂದೇ ಕುಟುಂಬ ಎಂಬುದನ್ನು ಗುರುತಿಸುವುದು.
- ಈ ದಿನವು ಪ್ರಪಂಚದಾದ್ಯಂತದ ಕುಟುಂಬಗಳು ಒಗ್ಗಟ್ಟಿನಿಂದ ಒಟ್ಟಿಗೆ ಬದುಕಲು ಮತ್ತು ಉತ್ತಮ ಸಮಾಜವನ್ನು ನಿರ್ಮಿಸಲು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ.
- ಈ ದಿನವು ಏಕತೆ, ಶಾಂತಿ ಮತ್ತು ಒಗ್ಗಟ್ಟನ್ನು ಉತ್ತೇಜಿಸುತ್ತದೆ.
- ಜಾಗತಿಕ ಕುಟುಂಬ ದಿನವು ನಮಗೆ ಶಾಂತಿ ಮತ್ತು ಪ್ರೀತಿಯಲ್ಲಿ ಒಟ್ಟಿಗೆ ಬದುಕುವ ಸಂದೇಶವನ್ನು ನೀಡುತ್ತದೆ.
- ಸಮಾಜದಲ್ಲಿ ಬೆಳೆಯುತ್ತಿರುವ ಅಶಾಂತಿ ಮತ್ತು ಹಿಂಸೆಯನ್ನು ತೊಡೆದುಹಾಕುವ ಮೂಲಕ ಶಾಂತಿಯ ಸಂದೇಶವನ್ನು ಪ್ರಚಾರ ಮಾಡುವುದು ಈ ದಿನದ ಉದ್ದೇಶವಾಗಿದೆ.
- ಈ ದಿನದಂದು, ವಿವಿಧ ಸಮುದಾಯಗಳ ಕುಟುಂಬಗಳು ವಿಶ್ವ ಶಾಂತಿಯ ಬಗ್ಗೆ ಜಾಗೃತಿ ಮೂಡಿಸಲು ಒಟ್ಟಾಗಿ ಸೇರುತ್ತವೆ.
- ಕುಟುಂಬಗಳು ಮತ್ತು ಸಮುದಾಯಗಳ ನಡುವಿನ ಬಾಂಧವ್ಯವನ್ನು ಬಲಪಡಿಸುವ ದಿನವಾಗಿಯೂ ಇದು ಕಾರ್ಯನಿರ್ವಹಿಸುತ್ತದೆ.
- ಈ ದಿನದಂದು ಜಾಗೃತಿ ಮೂಡಿಸಲು, ಶಾಲಾ-ಕಾಲೇಜುಗಳಲ್ಲಿ ಜಾಗತಿಕ ಕುಟುಂಬ ದಿನದಂದು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




