Harnaaz Sandhu: ತೃತೀಯಲಿಂಗಿ ವಿನ್ಯಾಸಗೊಳಿಸಿದ ಗೌನ್ ಧರಿಸಿ ಮಿಂಚಿದ ಭುವನ ಸುಂದರಿ ಹರ್ನಾಜ್ ಸಂಧು!

Miss Universe Harnaaz Sandhu: ಇಂದು ನಡೆದ ಗ್ರ್ಯಾಂಡ್ ಫಿನಾಲೆಗಾಗಿ ಹರ್ನಾಜ್ ಸಂಧು ತೊಟ್ಟಿದ್ದ ಮಿನುಗುವ ಗೌನ್ ಕೂಡ ಎಲ್ಲರ ಗಮನ ಸೆಳೆದಿದೆ. ಅಂದಹಾಗೆ, ಈ ಗೌನ್ ಅನ್ನು ತೃತೀಯ ಲಿಂಗಿ ಡಿಸೈನರ್ ಸೈಶಾ ಶಿಂಧೆ ವಿನ್ಯಾಸಗೊಳಿಸಿದ್ದಾರೆ ಎಂಬುದು ವಿಶೇಷ.

Harnaaz Sandhu: ತೃತೀಯಲಿಂಗಿ ವಿನ್ಯಾಸಗೊಳಿಸಿದ ಗೌನ್ ಧರಿಸಿ ಮಿಂಚಿದ ಭುವನ ಸುಂದರಿ ಹರ್ನಾಜ್ ಸಂಧು!
ಹರ್ನಾಜ್ ಸಂಧು- ಸೈಶಾ ಶಿಂಧೆ
Updated By: ಸುಷ್ಮಾ ಚಕ್ರೆ

Updated on: Dec 13, 2021 | 7:59 PM

ಬರೋಬ್ಬರಿ 21 ವರ್ಷಗಳ ನಂತರ ಭಾರತದ ಸುಂದರಿಯೊಬ್ಬರು ಮಿಸ್ ಯೂನಿವರ್ಸ್​ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಭಾರತದ ಹರ್ನಾಜ್ ಸಂಧು ಇಂದು 2021ನೇ ಸಾಲಿನ ಭುವನ ಸುಂದರಿ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ಪರಾಗ್ವೆಯ ನಾಡಿಯಾ ಫೆರೇರಾ ಮತ್ತು ದಕ್ಷಿಣ ಆಫ್ರಿಕಾದ ಲಲೆಲಾ ಮಸ್ವಾನೆ ಅವರನ್ನು ಸೋಲಿಸಿ ಅವರು ಮಿಸ್ ಯೂನಿವರ್ಸ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಇಂದು ನಡೆದ ಗ್ರ್ಯಾಂಡ್ ಫಿನಾಲೆಗಾಗಿ ಹರ್ನಾಜ್ ಸಂಧು ತೊಟ್ಟಿದ್ದ ಮಿನುಗುವ ಗೌನ್ ಕೂಡ ಎಲ್ಲರ ಗಮನ ಸೆಳೆದಿದೆ. ಅಂದಹಾಗೆ, ಈ ಗೌನ್ ಅನ್ನು ತೃತೀಯ ಲಿಂಗಿ ಡಿಸೈನರ್ ಸೈಶಾ ಶಿಂಧೆ ವಿನ್ಯಾಸಗೊಳಿಸಿದ್ದಾರೆ ಎಂಬುದು ವಿಶೇಷ. ಟ್ರಾನ್ಸ್​ಜೆಂಡರ್ ಆಗಿರುವ ಸೈಶಾ ವಿನ್ಯಾಸಗೊಳಿಸಿರುವ ಉಡುಗೆಯಲ್ಲಿ 21 ವರ್ಷದ ಹರ್ನಾಜ್ ಇನ್ನಷ್ಟು ಸುಂದರವಾಗಿ ಕಾಣುತ್ತಿದ್ದರು.

ಭಾರತದ ಸುಂದರಿ ಹರ್ನಾಜ್ ಭುವನ ಸುಂದರಿಯಾಗಿ ಕಿರೀಟ ತೊಟ್ಟ ಕ್ಷಣದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಹುಚ್ಚು ವೈರಲ್ ಆಗಿವೆ. ಇಂದು ಆಕೆ ಧರಿಸಿದ್ದ ಗೌನ್ ಅನ್ನು ಎಲ್ಲರೂ ಇಷ್ಟಪಟ್ಟಿದ್ದಾರೆ. ಕಾರ್ಯಕ್ರಮಕ್ಕಾಗಿ ಹರ್ನಾಜ್ ಅವರು ಬೀಜ್ ಮತ್ತು ಸಿಲ್ವರ್​​ ಬಣ್ಣದ ಅಲಂಕೃತ ಗೌನ್‌ ಅನ್ನು ಧರಿಸಿದ್ದರು. ಅವರ ದೇಹಕ್ಕೆ ಅಂಟಿ ಕೂತಿದ್ದ ಆ ಗೌನ್ V-ನೆಕ್‌ಲೈನ್ ಅನ್ನು ಒಳಗೊಂಡಿತ್ತು.

ಸ್ಟೋನ್​ಗಳ ಹ್ಯಾಂಗಿಂಗ್ ಕಿವಿಯೋಲೆಗಳನ್ನು ಧರಿಸಿದ್ದ ಹರ್ನಾಜ್ ಅವರ ಮೇಕಪ್, ಡ್ರೆಸ್​, ನಗು, ಮಾತು ಎಲ್ಲವೂ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಹರ್ನಾಜ್ ಅವರ ಗೌನ್ ವಿನ್ಯಾಸಗೊಳಿಸಿದ ಸೈಶಾ ಶಿಂಧೆ ತೃತೀಯಲಿಂಗಿಯಾಗಿದ್ದು, ಈ ಮೊದಲು ಅವರಿಗೆ ಸ್ವಪ್ನಿಲ್ ಶಿಂಧೆ ಎಂಬ ಹೆಸರಿತ್ತು. ಇದೀಗ ಅವರು ಲಿಂಗಪರಿವರ್ತನೆ ಮಾಡಿಕೊಂಡ ನಂತರ ತಮ್ಮ ಹೆಸರನ್ನು ಸೈಶಾ ಶಿಂಧೆ ಎಂದು ಇನ್​ಸ್ಟಾಗ್ರಾಂನಲ್ಲಿ ಬದಲಾಯಿಸಿಕೊಂಡಿದ್ದಾರೆ.

ಬಾಲಿವುಡ್ ತಾರೆಗಳಾದ ಕರೀನಾ ಕಪೂರ್, ಶ್ರದ್ಧಾ ಕಪೂರ್ ಮತ್ತು ಅನುಷ್ಕಾ ಶರ್ಮಾ ಅವರಂತಹ ಅನೇಕ ನಟಿಯರ ಸ್ಟೈಲಿಂಗ್ ಮಾಡುವಲ್ಲಿ ಸೈಶಾ ಶಿಂಧೆ ಹೆಸರುವಾಸಿಯಾಗಿದ್ದಾರೆ. ಫ್ಯಾಷನ್‌ನಂತಹ ಚಿತ್ರಗಳಲ್ಲಿ ಇವರು ವಸ್ತ್ರ ವಿನ್ಯಾಸವನ್ನೂ ಮಾಡಿದ್ದರು.

1994ರಲ್ಲಿ ಸುಶ್ಮಿತಾ ಸೇನ್ ಮತ್ತು 2000ರಲ್ಲಿ ಲಾರಾ ದತ್ತಾ ಅವರು ಮಿಸ್ ಯೂನಿವರ್ಸ್​ ಕಿರೀಟವನ್ನು ತೊಟ್ಟಿದ್ದರು. ಹರ್ನಾಜ್‌ ಸಂಧು ಭುವನ ಸುಂದರಿ ಕಿರೀಟವನ್ನು ಮುಗಿಗೇರಿಸಿಕೊಂಡಿರುವ ಮೂರನೇ ಭಾರತೀಯ ಮಹಿಳೆಯಾಗಿದ್ದಾರೆ.

ಚಂಡೀಗಢ ಮೂಲದ ಮಾಡೆಲ್ ಹರ್ನಾಜ್ ಸಂಧು ಈ ಹಿಂದೆ ಹಲವಾರು ಸೌಂದರ್ಯ ಸ್ಪರ್ಧೆಗಳನ್ನು ಗೆದ್ದಿದ್ದಾರೆ. ಅವರು ಮಿಸ್ ದಿವಾ 2021 ಮತ್ತು ಫೆಮಿನಾ ಮಿಸ್ ಇಂಡಿಯಾ ಪಂಜಾಬ್ 2019 ಕಿರೀಟವನ್ನು ಪಡೆದಿದ್ದರು. ಫೆಮಿನಾ ಮಿಸ್ ಇಂಡಿಯಾ 2019ರಲ್ಲಿ ಟಾಪ್ 12ರಲ್ಲಿ ಸ್ಥಾನ ಪಡೆದಿದ್ದರು. ಇದೀಗ ಭುವನ ಸುಂದರಿ 2021 ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇದನ್ನೂ ಓದಿ: ಶಾಲೆಯಲ್ಲಿ ಓದುವಾಗ ಸಪೂರಳಾಗಿದ್ದ, ಸ್ನೇಹಿತೆಯರಿಂದ ಗೇಲಿಗೊಳಗಾಗುತ್ತಿದ್ದ ಹರ್ನಾಜ್ ಸಂಧು ಈಗ ಭುವನ ಸುಂದರಿ!

Harnaaz Sandhu: ಮಿಸ್​ ಯುನಿವರ್ಸ್ 2021ರ ವಿಜೇತೆ ಹರ್ನಾಜ್ ಸಂಧು ಬ್ಯೂಟಿಫುಲ್​ ಗ್ಯಾಲರಿ