ದೇಹದಾರೋಗ್ಯವನ್ನು ಕಾಪಾಡಿಕೊಳ್ಳಲು ನಿಯಮಿತವಾಗಿ ತರಕಾರಿ, ಹಣ್ಣುಗಳನ್ನು ತಿನ್ನಲು ತಜ್ಞರು ಸಲಹೆ ನೀಡುತ್ತಾರೆ. ಈ ಕಾರಣಕ್ಕಾಗಿ ಹೆಚ್ಚಿನವರು ಪ್ರತಿನಿತ್ಯ ತರಕಾರಿ ಸಲಾಡ್ ಗಳನ್ನು ಸೇವನೆ ಮಾಡುತ್ತಾರೆ. ಸಾಮಾನ್ಯವಾಗಿ ಸಲಾಡ್, ಪಲ್ಯ ಇತ್ಯಾದಿ ಅಡುಗೆಗಳಲ್ಲಿ ನಾವು ಹೆಚ್ಚಾಗಿ ಹಸಿರು ಬಣ್ಣದ ಕ್ಯಾಬೆಬ್ ಬಳಕೆ ಮಾಡುತ್ತೇವೆ. ಆದರೆ ಹಸಿರು ಎಲೆಕೋಸಿಗಿಂತ ನೇರಳೆ ಬಣ್ಣದ ಎಲೆಕೋಸು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಹೌದು ಇದರಲ್ಲಿ ಉತ್ಕರ್ಷಣ ನಿರೋಧಕಗಳು, ಉರಿಯೂತ ವಿರೋಧಿ ಗುಣಲಕ್ಷಣಗಳು, ವಿಟಮಿನ್ ಸಿ, ಕಬ್ಬಿಣಾಂಶ, ಪೊಟ್ಯಾಸಿಯಂ, ವಿಟಮಿನ್ ಎ ಇತ್ಯಾದಿ ಅನೇಕ ಪೋಷಕಾಂಶಗಳು ಮತ್ತು ಜೀವಸತ್ವಗಳಿದ್ದು, ಇವೆಲ್ಲವೂ ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿಯಾಗಿದೆ. ಹಾಗಾದರೆ ಈ ನೇರಳೆ ಬಣ್ಣದ ಎಲೆಕೋಸಿನ ಸೇವನೆಯಿಂದ ಲಭಿಸುವ ಪ್ರಯೋಜನಗಳ ಬಗ್ಗೆ ತಿಳಿಯೋಣ.
ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯ ಕಾರಣದಿಂದಾಗಿ ಜನರಲ್ಲಿ ಅಧಿಕ ರಕ್ತದೊತ್ತಡದ ಸಮಸ್ಯೆ ಹೆಚ್ಚುತ್ತಿದೆ. ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಆಹಾರ ಕ್ರಮದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಹಾಗಿರುವಾಗ ನೀವು ನಿಮ್ಮ ಆಹಾರದಲ್ಲಿ ನೇರಳೆ ಎಲೆಕೋಸನ್ನು ಸೇರಿಸಬಹುದು. ಇದರಲ್ಲಿರುವ ಪೊಟ್ಯಾಸಿಯಂ ಅಂಶವು ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಹಾಯ ಮಾಡುತ್ತದೆ.
ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ವಿಟಮಿನ್ ಸಿ ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ವಿಟಮಿನ್ ಸಿ ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸಲು ಸೂಚಿಸಲಾಗುತ್ತದೆ. ಕಿತ್ತಳೆಯಂತೆ ನೇರಳೆ ಎಲೆಕೋಸಿನಲ್ಲೂ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಜೀವಸತ್ವವಿದ್ದು, ಇದರ ಸೇವನೆಯಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು.
ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ನೇರಳೆ ಎಲೆಕೋಸು ಮೂಳೆಗಳಿಗೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದನ್ನು ಸೇವನೆ ಮಾಡುವುದರಿಂದ ಮೂಳೆಗಳಲ್ಲಿ ಕಾಣಿಸಿಕೊಳ್ಳುವ ನೋವು ಮತ್ತು ಊತದ ಸಮಸ್ಯೆಯನ್ನು ಹೋಗಲಡಿಸಬಹುದು. ಅಲ್ಲದೆ ಇದರಲ್ಲಿ ಮಿಟಮಿನ್ ಕೆ, ಪೊಟ್ಯಾಸಿಯಂ ಮತ್ತು ಅನೇಕ ಪೋಷಕಾಂಶಗಳಿದ್ದು, ಇದು ಸ್ನಾಯುಗಳ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.
ನೇರಳೆ ಎಲೆಕೋಸಿನಲ್ಲಿ ಫೈಬರ್ ಅಂಶವು ದೊಡ್ಡ ಪ್ರಮಾಣದಲ್ಲಿ ಕಂಡುಬರುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ. ಮಲಬದ್ಧತೆಯ ಸಮಸ್ಯೆಯಿಂದ ನೀವು ತೊಂದರೆಗೊಳಗಾಗಿದ್ದರೆ, ನೇರಳೆ ಬಣ್ಣದ ಎಲೆಕೋಸು ತಿನ್ನುವ ಮೂಲಕ ಈ ಸಮಸ್ಯೆಯಿಂದ ಪರಿಹಾರವನ್ನು ಪಡೆದುಕೊಳ್ಳಬಹುದು.
ಇದನ್ನೂ ಓದಿ: ಎಲೆಕೋಸಿನ ನೀರನ್ನು ಕುಡಿದರೆ ಏನೆಲ್ಲಾ ಅರೋಗ್ಯ ಪ್ರಯೋಜನಗಳಿವೆ ಗೊತ್ತಾ? ವಿವರವಾಗಿ ತಿಳ್ಕೊಳ್ಳಿ
ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ ನೇರಳೆ ಎಲೆಕೋಸು ಚರ್ಮಕ್ಕೆ ತುಂಬಾ ಪ್ರಯೋಜನಕಾರಿಯಾದ ತರಕಾರಿಗಳಲ್ಲಿ ಒಂದು. ಈ ತರಕಾರಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಚರ್ಮ ಸಂಬಂಧಿ ಸಮಸ್ಯೆಗಳು ಬಾರದಂತೆ ತಡೆಯಬಹುದು. ಇದರಲ್ಲಿ ವಿಟಮಿನ್ ಸಿ ಸಮಸೃದ್ಧವಾಗಿದ್ದು, ಇದು ತ್ವಚೆಯ ಮೇಲೆ ಕಾಣಿಸಿಕೊಳ್ಳುವ ಸುಕ್ಕುಗಳ ಸಮಸ್ಯೆಯನ್ನು ತೊಡೆದುಹಾಕಲು ಸಹಕಾರಿಯಾಗಿದೆ.
ನೇರಳೆ ಎಲೆಕೋಸಿನ ಬಗ್ಗೆ ಸಂಶೋಧನೆಯೂ ನಡೆದಿದ್ದು, ಇದರಲ್ಲಿರುವ ಅಂಥೋಸಯಾನಿನ ಪಾಲಿಫಿನಾಲ್ ಎಂಬ ಅಂಶವು ಕ್ಯಾನ್ಸರ್, ಹೃದ್ರೋಗ ಮತ್ತು ಮಧುಮೇಹದಂತಹ ಅನೇಕ ಕಾಯಿಲೆಗಳು ಬಾರದಂತೆ ತಡೆಯುವ ಅದ್ಭುತ ಸಾಮರ್ಥ್ಯವನ್ನು ಹೊಂದಿದೆ ಎಂದು ಅಧ್ಯಯನದಲ್ಲಿ ಕಂಡುಹಿಡಿಯಲಾಗಿದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: