Drinking Water Rules: ಆಯುರ್ವೇದದ ಪ್ರಕಾರ ನೀರನ್ನು ಕುಡಿಯುವ ಸರಿಯಾದ ನಿಯಮವನ್ನು ತಿಳಿಯಿರಿ
ಸಾಮಾನ್ಯವಾಗಿ ಎಲ್ಲರೂ ಪ್ರತಿನಿತ್ಯ ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯುತ್ತಾರೆ. ಆದರೆ ನೀರನ್ನು ಯಾವಾಗ ಮತ್ತು ಹೇಗೆ ಕುಡಿಯಬೇಕು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಏಕೆಂದರೆ ಅದು ಜೀರ್ಣಾಂಗ ವ್ಯವಸ್ಥೆ ಸೇರಿದಂತೆ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ನೀರನ್ನು ಕುಡಿಯುವ ಸರಿಯಾದ ನಿಯಮವನ್ನು ಆಯುರ್ವೇದದಲ್ಲಿ ವಿವರಿಸಲಾಗಿದೆ. ಈ ನಿಯಮಗಳಾವುವು ಎಂಬುದನ್ನು ತಿಳಿಯೋಣ.
ದಿನವಿಡೀ ಸಕ್ರಿಯರಾಗಿರಲು ಮತ್ತು ದೇಹದಾರೋಗ್ಯವನ್ನು ಕಾಪಾಡಿಕೊಳ್ಳಲು ಪೌಷ್ಟಿಕಾಂಶಯುಕ್ತ ಆಹಾರ ಎಷ್ಟು ಮುಖ್ಯವೋ, ದೇಹಕ್ಕೆ ಸಾಕಷ್ಟು ಪ್ರಮಾಣದ ನೀರು ಕೂಡ ಅಷ್ಟೇ ಮುಖ್ಯ. ದೇಹವನ್ನು ಆರೋಗ್ಯಕರವಾಗಿಡಲು ದಿನಕ್ಕೆ 3 ರಿಂದ 4 ಲೀಟರ್ ನೀರು ಕುಡಿಯಬೇಕು ಎಂದು ಹೇಳಲಾಗುತ್ತದೆ. ಹಾಗಾಗಿ ಹೆಚ್ಚಿನವರು ಪ್ರತಿನಿತ್ಯ ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯತ್ತಾರೆ. ಆದರೆ ಯಾವಾಗ, ಹೇಗೆ, ಎಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯಬೇಕು ಎಂದು ಅನೇಕರಿಗೆ ತಿಳಿದಿಲ್ಲ. ಆಯುರ್ವೇದದ ಪ್ರಕಾರ ನೀರು ಕುಡಿಯಲು ಸರಿಯಾದ ನಿಯಮ ಮತ್ತು ಸಮಯವಿದೆ. ಈ ನಿಯಮದ ಪ್ರಕಾರ ನೀರನ್ನು ಕುಡಿದರೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಹಾಗಾದರೆ ನೀರು ಕುಡಿಯಲು ಇರುವ ಸರಿಯಾದ ಮಾರ್ಗ ಯಾವುದು ಎಂಬುದನ್ನು ತಿಳಿಯೋಣ.
ನೀರು ಕುಡಿಯುವುದು ಏಕೆ ಮುಖ್ಯ?
ನೀರು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ ಮತ್ತು ದೇಹದಿಂದ ವಿಷವನ್ನು ಹೊರಹಾಕುವ ಮೂಲಕ ದೇಹವನ್ನು ಸ್ವಚ್ಛವಾಗಿರಿಸಲು ಮತ್ತು ಆರೋಗ್ಯಕರವಾಗಿರಿಸಲು ಸಹಾಯ ಮಾಡುತ್ತದೆ. ಪ್ರತಿದಿನ ಸರಿಯಾದ ಪ್ರಮಾಣದಲ್ಲಿ ನೀರನ್ನು ಕುಡಿದರೆ, ಅನೇಕ ಆರೋಗ್ಯ ಸಂಬಂಧಿ ಸಮಸ್ಯೆಗಳು ಬಾರದಂತೆ ತಡೆಯಬಹುದು. ಮಾತ್ರವಲ್ಲದೆ ಸರಿಯಾದ ಪ್ರಮಾಣದಲ್ಲಿ ನೀರನ್ನು ಕುಡಿಯುವುದರಿಂದ ತ್ವಚೆಯ ಆರೋಗ್ಯವನ್ನು ವೃದ್ಧಿಸಬಹುದು.
ಆಯುರ್ವೇದದ ಪ್ರಕಾರ ನೀರನ್ನು ಕುಡಿಯುವ ಸರಿಯಾದ ನಿಯಮ ಯಾವುದು?
- ಆಯುರ್ವೇದದ ಪ್ರಕಾರ ನಿಂತಲ್ಲೇ ನೀರು ಕುಡಿಯಬಾರದು. ನಿಂತು ನೀರು ಕುಡಿಯುವುದು ಆರೋಗ್ಯಕ್ಕೆ ಹಾನಿಕಾರಕ. ಆದ್ದರಿಂದ ಯಾವಾಗಲೂ ಕುಳಿತುಕೊಂಡೇ ನೀರನ್ನು ಕುಡಿಯಬೇಕು. ಹೀಗೆ ನೀರು ಕುಡಿಯುವುದರಿಂದ ನೀರು ದೇಹದಲ್ಲಿ ಚೆನ್ನಾಗಿ ಹೀರಲ್ಪಡತ್ತದೆ.
- ಯಾವಾಗಲೂ ಉಗುರು ಬೆಚ್ಚಗಿನ ಅಥವಾ ಕೋಣೆಯ ಉಷ್ಣಾಂಶದ ನೀರನ್ನು ಕುಡಿಯಬೇಕು. ರೆಫ್ರಿಜರೇಟರ್ನಲ್ಲಿರಿಸಿದ ತಣ್ಣೀರನ್ನು ಕುಡಿಯಬಾರದು. ಆಯುರ್ವೇದದ ಪ್ರಕಾರ ಕೋಲ್ಡ್ ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.
- ಆರೋಗ್ಯವಂತರಾಗಿರಲು ಪ್ರತಿನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ 1 ಲೋಟ ಉಗುರು ಬೆಚ್ಚಗಿನ ನೀರನ್ನು ಕುಡಿಯಬೇಕು. ಬೆಳಗ್ಗೆ ಖಾಲಿ ಹೊಟ್ಟೆಯನ್ನು ನೀರು ಕುಡಿಯುವುದರಿಂದ ಚಯಾಪಚಯಕ್ರಿಯೆಯ ದರವು ಹೆಚ್ಚಾಗುತ್ತದೆ, ಇದಲ್ಲದೆ ಇದು ಚರ್ಮಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ.
- ಆಯುರ್ವೇದದ ಪ್ರಕಾರ ಪ್ಲಾಸ್ಟಿಕ್ ಬಾಟಲಿಗಳ ಬದಲಿಗೆ ತಾಮ್ರದ ಪಾತ್ರೆಯಲ್ಲಿ ನೀರನ್ನು ಕುಡಿಯಬೇಕು. ತಾಮ್ರವು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದ್ದು, ಇದು ನೀರಿನಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾ ಮತ್ತು ವೈರಸ್ಗಳನ್ನು ಕೊಲ್ಲಲು ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ ತಾಮ್ರದ ಅಯಾನುಗಳು ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತವೆ.
- ಒಮ್ಮೆಲೆ ಹೆಚ್ಚಿನ ಪ್ರಮಾಣದ ನೀರನ್ನು ಕುಡಿಯಬಾರದು. ಒಂದೊಂದೆ ಗುಟಕು ನಿಧಾನಕ್ಕೆ ಕುಡಿಯಬೇಕು. ಸಿಪ್ ಬೈ ಸಿಪ್ ನೀರನ್ನು ಕುಡಿದಾಗ ದೇಹದಲ್ಲಿ ನೀರು ಉತ್ತಮವಾಗಿ ಹೀರಲ್ಪಡುತ್ತದೆ. ಮತ್ತು ಇದು ನಿರ್ಜಲೀಕರಣವನ್ನು ತಡೆಯಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಗರ್ಭಾವಸ್ಥೆಯಲ್ಲಿ ಗ್ಯಾಸ್ಟ್ರಿಕ್ ಆಗದಂತೆ ತಡೆಯಲು ಇಲ್ಲಿವೆ ಸರಳ ಮಾರ್ಗ
ಆಯುರ್ವೇದದ ಪ್ರಕಾರ ನೀರನ್ನು ಯಾವಾಗ, ಹೇಗೆ ಮತ್ತು ಎಷ್ಟು ಪ್ರಮಾಣದಲ್ಲಿ ಕುಡಿಯಬೇಕು?
- ಬೆಳಗ್ಗೆ ಎದ್ದ ಬಳಿಕ ಖಾಲಿ ಹೊಟ್ಟೆಯಲ್ಲಿ 1 ಲೋಟ ಉಗುರು ಬೆಚ್ಚಗಿನ ನೀರು ಕುಡಿಯಬೇಕು.
- ಊಟದ ಒಂದು ಗಂಟೆಯ ಮೊದಲು ಅಥವಾ ಊಟದ ಒಂದು ಗಂಟೆಯ ಬಳಿಕ ನೀರು ಕುಡಿಯಬೇಕು.
- ರಾತ್ರಿ ಊಟ ಮಾಡಿದ ಒಂದು ಗಂಟೆಗಳ ಬಳಿಕ ನೀರನ್ನು ಕುಡಿಯಬೇಕು.
- ಆಯುರ್ವೇದದ ಪ್ರಕಾರ ಯಾವುದೇ ಆಹಾರ ಸೇವನೆ ಮಾಡುವಾಗ ನೀರು ಕುಡಿಯಬಾರದು. ಅಲ್ಲದೆ ದಿನದಲ್ಲಿ ಕಡ್ಡಾಯವಾಗಿ 8 ರಿಂದ 9 ಲೋಟ ನೀರನ್ನು ಕುಡಿಯಲೇಬೇಕು. ಏಕ ಕಾಲಕ್ಕೆ ಹೆಚ್ಚು ಪ್ರಮಾಣದ ನೀರನ್ನು ಕುಡಿಯಬಾರದು. 1 ರಿಂದ 1 ½ ಗಂಟೆಗಳ ಮಧ್ಯಂತರದಲ್ಲಿ ನಿಗದಿತ ಸಮಯದ ಪ್ರಕಾರ ನೀರನ್ನು ಕುಡಿಯಬೇಕು.
ಆಯುರ್ವೇದದ ಪ್ರಕಾರ ಯಾವಾಗ ನೀರು ಕುಡಿಯಬಾರದು?
ಆಯುರ್ವೇದ ತಜ್ಞರ ಪ್ರಕಾರ ಬಿಸಿ ಬಿಸಿಯಾದ ಆಹಾರ ತಿಂದ ತಕ್ಷಣ ನೀರು ಕುಡಿಯಬಾರದು. ಹೀಗೆ ಮಾಡುವುದರಿಂದ ಜೀರ್ಣಕ್ರಿಯೆ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಇದರೊಂದಿಗೆ ಸೌತೆಕಾಯಿ, ಕಲ್ಲಂಗಡಿ ಇತ್ಯಾದಿ ಹಣ್ಣುಗಳು ಮತ್ತು ತರಕಾರಿಗಳ್ನು ಸೇವಿಸಿದ ನಂತರ ನೀರನ್ನು ಕುಡಿಯಬಾರದು.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: