ರಾಮಫಲವನ್ನು ಬುಲಕ್ ಹಾರ್ಟ್ ಎಂದೂ ಕರೆಯುತ್ತಾರೆ. ಇದು ಅನೋನೇಸಿ ಕುಟುಂಬಕ್ಕೆ ಸೇರಿದ ಉಷ್ಣವಲಯದ ಹಣ್ಣು. ಮಧ್ಯ ಅಮೆರಿಕಾ, ಕೆರಿಬಿಯನ್ ಮತ್ತು ದಕ್ಷಿಣ ಅಮೆರಿಕಾದ ಭಾಗಗಳಲ್ಲಿ ಈ ರಾಮಫಲವನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಸಿಹಿ ಮತ್ತು ರುಚಿಕರವಾಗಿರುವ ರಾಮಫಲ ಅನೇಕ ಆರೋಗ್ಯಕರ ಪ್ರಯೋಜನಗಳನ್ನು ಕೂಡ ಹೊಂದಿದೆ. ಈಗ ಇದು ಭಾರತದ ಸ್ಥಳೀಯ ಹಣ್ಣಿನ ಮಾರುಕಟ್ಟೆಗಳಲ್ಲಿಯೂ ಸಿಗುತ್ತದೆ. ವಿಶೇಷವೆಂದರೆ ಈ ಹಣ್ಣಿಗೂ ರಾಮಾಯಣಕ್ಕೂ ಸಂಬಂಧವಿದೆ. ರಾಮಫಲ ಆರೋಗ್ಯ ಪ್ರಯೋಜನಗಳು ಮಾತ್ರವಲ್ಲದೆ ಸಾಂಸ್ಕೃತಿಕ ಮತ್ತು ಐತಿಹಾಸಿಕ ಮಹತ್ವವನ್ನು ಕೂಡ ಹೊಂದಿದೆ.
ರಾಮಫಲ ಮತ್ತು ಪ್ರಾಚೀನ ಭಾರತೀಯ ಮಹಾಕಾವ್ಯವಾದ ರಾಮಾಯಣಕ್ಕೂ ಸಂಬಂಧವಿದೆ. ಹಿಂದೂ ಪುರಾಣಗಳ ಪ್ರಕಾರ, ರಾಮನ ವನವಾಸದ ಸಮಯದಲ್ಲಿ ಶ್ರೀರಾಮ ತನ್ನ ಪತ್ನಿ ಸೀತೆ ಮತ್ತು ಸಹೋದರ ಲಕ್ಷ್ಮಣ ದಂಡಕ ಅರಣ್ಯದಲ್ಲಿ ಸಾಕಷ್ಟು ಸಮಯವನ್ನು ಕಳೆದರು. ಈ ಅವಧಿಯಲ್ಲಿ ಸೀತೆ ಒಂದು ವಿಶೇಷವಾದ ಹಣ್ಣನ್ನು ತಿನ್ನಲು ಹಂಬಲಿಸುತ್ತಿದ್ದಳು. ಅತ್ತಿಗೆಯ ಆಸೆಯನ್ನು ಈಡೇರಿಸಲು ಲಕ್ಷ್ಮಣ ಆ ಹಣ್ಣನ್ನು ಹುಡುಕಲು ಕಾಡಿಗೆ ಹೋದನು ಎಂದು ನಂಬಲಾಗಿದೆ.
ಇದನ್ನೂ ಓದಿ: ಪ್ರಭು ಶ್ರೀ ರಾಮಚಂದ್ರ ಭೇಟಿ ನೀಡಿದ ಕರ್ನಾಟಕದ ಪ್ರಸಿದ್ಧ ಸ್ಥಳಗಳು
ದಂತಕಥೆಯ ಪ್ರಕಾರ, ಲಕ್ಷ್ಮಣನು ಆ ಹಣ್ಣಿಗಾಗಿ ಹುಡುಕಾಡುತ್ತಿರುವ ಸಮಯದಲ್ಲಿ ಶೂರ್ಪನಖಿ ಎಂಬ ರಾಕ್ಷಸಿಯನ್ನು ಭೇಟಿಯಾಗಬೇಕಾಯಿತು. ಈ ಘಟನೆ ರಾಮಾಯಣದಲ್ಲಿ ಬಹಳ ಮಹತ್ವದ ಪಾತ್ರವನ್ನು ವಹಿಸಿದೆ. ಈ ಲಕ್ಷ್ಮಣ ಮತ್ತು ಶೂರ್ಪನಖಿಯ ಭೇಟಿಯಿಂದಾಗಿ ಮುಂದೆ ಅನೇಕ ಘಟನೆಗಳು ನಡೆದಿರುವುದನ್ನು ಪ್ರಸ್ತಾಪಿಸಲಾಗಿದೆ. ಘಟನೆಗಳ ಸರಣಿಗೆ ಕಾರಣವಾಯಿತು. ಸೀತೆ ಬಯಸಿದ ಹಣ್ಣು ಹಾಗೂ ಲಕ್ಷ್ಮಣನು ಹುಡುಕಿ ಹೊರಟ ಆ ಹಣ್ಣು ರಾಮಫಲವೆಂದು ಹೇಳಲಾಗುತ್ತದೆ.
ಇನ್ನು ಕೆಲವು ವ್ಯಾಖ್ಯಾನಗಳಲ್ಲಿ, ಹೃದಯದ ಆಕಾರದ ರಾಮಫಲವನ್ನು ಪ್ರೀತಿ ಮತ್ತು ಭಕ್ತಿಯ ರೂಪವಾಗಿ ಪರಿಗಣಿಸಲಾಗುತ್ತದೆ. ಇದು ಭಗವಾನ್ ರಾಮ ಮತ್ತು ಅವನ ಪತ್ನಿ ಸೀತೆಯ ನಡುವಿನ ಗಾಢವಾದ ಪ್ರೀತಿಯ ಸಂಬಂಧವನ್ನು ಹೊಂದಿದೆ ಎನ್ನಲಾಗುತ್ತದೆ. ಈ ಹಣ್ಣು, ಅದರ ವಿಶಿಷ್ಟ ಇತಿಹಾಸದಿಂದ ಮತ್ತಷ್ಟು ಪ್ರಾಮುಖ್ಯತೆ ಪಡೆದಿದೆ. ಹೀಗಾಗಿ, ಈ ರಾಮಫಲ ಪೌರಾಣಿಕವಾಗಿಯೂ ಗಮನ ಸೆಳೆಯುತ್ತದೆ.
ನೋಡಲು ಸ್ವಲ್ಪ ಟೊಮ್ಯಾಟೋ ಹಣ್ಣಿನಂತೆ ಕಾಣುವ ರಾಮಫಲದ ತಿರುಳು ಕೆನೆ ಮತ್ತು ಬಿಳಿಯಾಗಿರುತ್ತದೆ. ರಾಮಫಲ ಸಿಹಿ, ಮತ್ತು ಸುಗಂಧಭರಿತವಾದ ಹಣ್ಣು. ರಾಮಫಲ ದೇಹಕ್ಕೆ ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತದೆ. ಇದು ವಿಟಮಿನ್ ಸಿ, ಪೊಟ್ಯಾಸಿಯಮ್, ಆಹಾರದ ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದೆ. ಈ ಪೋಷಕಾಂಶಗಳು ನಮ್ಮ ಆರೋಗ್ಯಕ್ಕೆ ಕೊಡುಗೆ ನೀಡುತ್ತವೆ ಎಂದು ಒನ್ ಇಂಡಿಯಾ ವರದಿ ಮಾಡಿದೆ.
ರಾಮಫಲದಲ್ಲಿರುವ ಫೈಬರ್ ಅಂಶವು ಮಲಬದ್ಧತೆಯನ್ನು ತಡೆಯುವ ಮೂಲಕ ಮತ್ತು ಆರೋಗ್ಯಕರ ಜೀರ್ಣಾಂಗವನ್ನು ಬೆಂಬಲಿಸುವ ಮೂಲಕ ಜೀರ್ಣಕಾರಿ ಆರೋಗ್ಯವನ್ನು ಉತ್ತೇಜಿಸುತ್ತದೆ. ಇದರಲ್ಲಿರುವ ಹೆಚ್ಚಿನ ವಿಟಮಿನ್ ಸಿ ಅಂಶವು ಅದರ ರೋಗನಿರೋಧಕ-ಉತ್ತೇಜಿಸುವ ಗುಣಲಕ್ಷಣಗಳಿಗೆ ಪ್ರಸಿದ್ಧವಾಗಿದೆ. ಸಾಕಷ್ಟು ವಿಟಮಿನ್ ಸಿ ಸೇವನೆಯು ದೃಢವಾದ ಪ್ರತಿರಕ್ಷಣಾ ವ್ಯವಸ್ಥೆಗೆ ಬಹಳ ಮುಖ್ಯ. ರಾಮಫಲ ಹೃದಯದ ಆರೋಗ್ಯಕ್ಕೆ ಸಹಕಾರಿಯಾಗಿದೆ.
ರಾಮಫಲದಲ್ಲಿರುವ ಆಕ್ಸಿಡೇಟಿವ್ ಅಂಶ ಒತ್ತಡವನ್ನು ಎದುರಿಸಲು ಮತ್ತು ದೇಹದಲ್ಲಿ ಸ್ವತಂತ್ರ ರಾಡಿಕಲ್ಗಳನ್ನು ನಿಯಂತ್ರಿಸಲು ಸಹಾಯ ಮಾಡುವ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಇನ್ನೂ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ರಾಮಫಲವನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:30 pm, Thu, 18 January 24