
ನಗುವಿನಂತೆ ಅಳು (crying) ಕೂಡ ಭಾವನೆಗಳನ್ನು ವ್ಯಕ್ತಪಡಿಸುವ ಒಂದು ಸಹಜ ಪ್ರಕ್ರಿಯೆಯಾಗಿದ್ದು, ನಾವೆಲ್ಲರೂ ದುಃಖಿತರಾದಾಗ, ಒತ್ತಡಕ್ಕೊಳಗಾದಾಗ ಅಥವಾ ತುಂಬಾ ಖುಷಿಯಾದಾಗ ಕಣ್ಣೀರು ಹಾಕ್ತೇವೆ. ಹೆಚ್ಚಾಗಿ ಮನಸ್ಸಿಗೆ ನೋವಾದಾಗ ಅಳು ಬರುತ್ತದೆ. ಆದರೆ ಅನೇಕರು ಅಳುವುದು ದೌರ್ಜಲ್ಯದ ಸಂಕೇತವೆಂದು ಭಾವಿಸಿ, ಅಳು ಬಂದರೂ ಸಹ ಅಳದೆ ಕಣ್ಣೀರನ್ನು ತಡೆಹಿಡಿದು ಮನದಲ್ಲಿಯೇ ನೋವು ಅನುಭವಿಸುತ್ತಾರೆ. ಆದರೆ ಏನು ಗೊತ್ತಾ, ಅಳೋದು ದೌರ್ಬಲ್ಯವಲ್ಲ, ಇದು ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿ. ಹೌದು ನಗುವಿನಂತೆಯೇ ಅಳುವುದು ಕೂಡ ತುಂಬಾನೇ ಪ್ರಯೋಜನಕಾರಿ. ಅಳುವುದು ನಮ್ಮ ಆರೋಗ್ಯಕ್ಕೆ ಹೇಗೆ ಪ್ರಯೋಜನವನ್ನು ನೀಡುತ್ತದೆ ಎಂಬುದರ ಪೂರ್ಣ ವಿವರ ಇಲ್ಲಿದೆ.
ಅಳುವುದರಿಂದ ಆಕ್ಸಿಟೋಸಿನ್ ಮತ್ತು ಎಂಡಾರ್ಫಿನ್‌ಗಳಂತಹ ಹಾರ್ಮೋನುಗಳು ಬಿಡುಗಡೆಯಾಗುತ್ತವೆ, ಇದು ಮನಸ್ಸು ಮತ್ತು ದೇಹವನ್ನು ಶಾಂತಗೊಳಿಸುತ್ತದೆ. ಇದು ಕೋಪ, ಕಿರಿಕಿರಿ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ ಮತ್ತು ಮನಸ್ಥಿತಿಯನ್ನು ಸುಧಾರಿಸುತ್ತದೆ.
ನಿಮ್ಮ ಕಣ್ಣೀರಿನಲ್ಲಿ ಒತ್ತಡದ ಹಾರ್ಮೋನುಗಳು ಮತ್ತು ಇತರ ರಾಸಾಯನಿಕಗಳು ಅತ್ಯಧಿಕ ಪ್ರಮಾಣದಲ್ಲಿರುತ್ತವೆ. ಅಳುವುದು ನಿಮ್ಮ ದೇಹದಲ್ಲಿನ ಈ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಅವುಗಳನ್ನು ಕಣ್ಣೀರಿನ ಮೂಲಕ ನಿಮ್ಮ ಕಣ್ಣುಗಳಿಂದ ಹೊರಹಾಕುತ್ತದೆ, ಇದರಿಂದಾಗಿ ನಿಮ್ಮ ಒತ್ತಡ ಕಡಿಮೆಯಾಗುತ್ತದೆ.
ನಾವು ಯಾರೊಬ್ಬರ ಮುಂದೆ ಬಹಿರಂಗವಾಗಿ ಅಳುವಾಗ, ಅದು ನಮ್ಮ ನಿಜವಾದ ಭಾವನೆಗಳನ್ನು ಬಹಿರಂಗಪಡಿಸುತ್ತದೆ. ಇದು ಇತರ ವ್ಯಕ್ತಿಗೆ ನಮ್ಮನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಸಂಬಂಧಗಳಲ್ಲಿ ನಂಬಿಕೆಯನ್ನು ಹೆಚ್ಚಿಸುತ್ತದೆ. ಹೌದು ಅಳುವುದರಿಂದ ನಿಮ್ಮ ಸುತ್ತಮುತ್ತಲಿನವರಿಂದ ಬೆಂಬಲ ಸಿಗುತ್ತದೆ, ಅದು ನಿಮ್ಮಿಬ್ಬರ ಸಂಬಂಧವನ್ನು ಇನ್ನಷ್ಟು ಬಲಪಡಿಸುತ್ತದೆ.
ನೀವು ಅಳುವಾಗ, ನಿಮ್ಮ ದೇಹವು ಎಂಡಾರ್ಫಿನ್ ಎಂಬ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ. ಇದು ಮಾನಸಿಕ ಮಾತ್ರವಲ್ಲದೆ ದೈಹಿಕ ನೋವನ್ನೂ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅದಕ್ಕಾಗಿಯೇ ಅತ್ತ ನಂತರ ನಮಗೆ ಹಗುರ ಮತ್ತು ನಿರಾಳತೆಯ ಅನುಭವವಾಗುವುದು.
ಅಳುವುದು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಹಿತವಾದ ಭಾವನೆಯ ಹಾರ್ಮೋನ್ ಆದ ಆಕ್ಸಿಟೋಸಿನ್ ಬಿಡುಗಡೆಯಾಗುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಅನಾರೋಗ್ಯದಿಂದ ರಕ್ಷಿಸಲು ಸಹಾಯ ಮಾಡುತ್ತದೆ.
ಅಳುವುದರಿಂದ ನಮ್ಮ ರಕ್ತನಾಳಗಳಲ್ಲಿ ರಕ್ತ ಪರಿಚಲನೆ ಹೆಚ್ಚಾಗುತ್ತದೆ ಮತ್ತು ನಮ್ಮ ಹೃದಯವು ಆರೋಗ್ಯವಾಗಿರುತ್ತದೆ. ಹೆಚ್ಚುವರಿಯಾಗಿ, ಅಳುವುದರಿಂದ ನಮ್ಮ ಹೃದಯ ಬಡಿತ ಸ್ಥಿರಗೊಳ್ಳುತ್ತದೆ ಮತ್ತು ರಕ್ತದೊತ್ತಡ ಕಡಿಮೆಯಾಗುತ್ತದೆ.
ಇದನ್ನೂ ಓದಿ: ರಾತ್ರಿ ಮಲಗುವ ಮುನ್ನ ಲವಂಗದ ನೀರನ್ನು ಕುಡಿಯೋದ್ರಿಂದ ಲಭಿಸುವ ಪ್ರಯೋಜನಗಳೇನು ಗೊತ್ತೇ?
ಮಕ್ಕಳು ಮತ್ತು ವಯಸ್ಕರು ಅತ್ತ ನಂತರ ಬೇಗ ನಿದ್ರಿಸುತ್ತಾರೆ. ಇದಕ್ಕೆ ಕಾರಣವೇನೆಂದರೆ, ಅಳುವಾಗ ಬಿಡುಗಡೆಯಾಗುವ ಎಂಡಾರ್ಫಿನ್ ಹಾರ್ಮೋನ್. ಇದು ನಿಮ್ಮ ಮನಸ್ಸನ್ನು ಶಾಂತಗೊಳಿಸುತ್ತವೆ ಮತ್ತು ಇದು ಉತ್ತಮ ನಿದ್ರೆಯನ್ನು ಉತ್ತೇಜಿಸುತ್ತದೆ.
ಅಳುವುದು ಸ್ವಾಭಾವಿಕವಾಗಿ ನಿಮ್ಮ ಕಣ್ಣುಗಳನ್ನು ನಯಗೊಳಿಸುತ್ತದೆ, ಶುಷ್ಕತೆಯನ್ನು ನಿವಾರಿಸುತ್ತದೆ. ಇದು ಕಾರ್ನಿಯಾವನ್ನು ತೇವ ಮತ್ತು ಸ್ವಚ್ಛವಾಗಿರಿಸುತ್ತದೆ. ಕಣ್ಣೀರು ಕಣ್ಣುಗಳಿಂದ ಧೂಳು ಮತ್ತು ಕಸವನ್ನು ತೊಳೆಯಲು ಸಹಾಯ ಮಾಡುತ್ತದೆ. ಕಣ್ಣೀರು ಸುರಿಸುವುದರಿಂದ ಕಣ್ಣುಗಳೊಳಗೆ ಅಡಗಿರುವ ಅನೇಕ ಬ್ಯಾಕ್ಟೀರಿಯಾಗಳನ್ನು ಹೊರಹಾಕುತ್ತದೆ, ಇದು ಕಣ್ಣುಗಳನ್ನು ಅನೇಕ ರೋಗಗಳಿಂದ ರಕ್ಷಿಸುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ