ಒಂದೊಮ್ಮೆ ನಿಮ್ಮ ಬಾಯಿಯಿಂದ ದುರ್ವಾಸನೆ ಬರುತ್ತಿದ್ದರೆ ನೀವು ಬೇರೆಯವರೊಂದಿಗೆ ಹತ್ತಿರ ನಿಂತು ಮಾತನಾಡಲು ಹಿಂಜರಿಯುತ್ತೀರಿ ಅಥವಾ ಈ ಕಾರಣದಿಂದಾಗಿಯೇ ಜನರು ನಿಮ್ಮೊಂದಿಗೆ ಬೆರೆಯಲು ಹಿಂದೇಟು ಹಾಕಬಹುದು. ನಿಮ್ಮ ಬಾಯಿಯಿಂದ ದುರ್ವಾಸನೆ ಬರುತ್ತಿದೆ ಎಂದಾದರೆ ಒಂದು ನಿಮ್ಮ ಹಲ್ಲು ಹುಳುಕಾಗಿರಬೇಕು, ಅಸಿಡಿಟಿ ಸಮಸ್ಯೆಯೂ ಇರಬಹುದು, ಮಧುಮೇಹ, ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳೂ ನಿಮಗಿರಬಹುದು.
ನಿಮ್ಮ ಬಾಯಿಯಿಂದ ಬರುತ್ತಿರುವ ದುರ್ವಾಸನೆ ಹೋಗಲಾಡಿಸಲು ನೀವು ಚಾಕೊಲೇಟ್ ತಿನ್ನಬಹುದು, ಚ್ಯೂಯಿಂಗಮ್ ಬಾಯಲ್ಲಿಟ್ಟುಕೊಳ್ಳಬಹುದು ಆದರೆ ಅದ್ಯಾವುದೂ ಶಾಶ್ವತ ಪರಿಹಾರವಲ್ಲ. ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸಲು ಪರಿಹಾರ ಇಲ್ಲಿದೆ.
ಹೆಚ್ಚೆಚ್ಚು ನೀರು ಕುಡಿಯಿರಿ: ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸಲು ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಿರಿ, ತರಕಾರಿ ಹಾಗೂ ಹಣ್ಣುಗಳನ್ನು ತಿನ್ನಿ. ಸಕ್ಕರೆಯಿರುವ ಪದಾರ್ಥಗಳನ್ನು ಕಡಿಮೆ ಮಾಡಿ ಎಂದು ಆಯುರ್ವೇದವು ಸಲಹೆ ನೀಡುತ್ತದೆ.
ನಿತ್ಯ ಎರಡು ಬಾರಿ ಹಲ್ಲುಜ್ಜಿ: ನಿತ್ಯ ಎರಡು ಬಾರಿ ಹಲ್ಲುಗಳನ್ನು ಉಜ್ಜಿ, ಬೆಳಗ್ಗೆ ಹಲ್ಲುಜ್ಜುವುದರಿಂದ ರಾತ್ರಿಯಿಂದ ಬಾಯಿಯಲ್ಲಿ ಸಂಗ್ರಹವಾದ ಟಾಕ್ಸಿನ್ಸ್ ಹೊರ ಹೋಗುತ್ತದೆ.
ರಾತ್ರಿಯೂ ಕೂಡ ಹಲ್ಲುಗಳ ಜತೆ ನಿಮ್ಮ ನಾಲಿಕೆಯನ್ನು ಕೂಡ ಉಜ್ಜಬೇಕು. ಹಾಗೆಯೇ ಮಲಗುವ ಸಂದರ್ಭದಲ್ಲಿ ಬಾಯಿಯನ್ನು ನೀರಿನಿಂದ ಅಥವಾ ಮೌತ್ವಾಶ ಮೂಲಕ ತೊಳೆಯುವುದರಿಂದ ನಿಮ್ಮ ಕರುಳಿನ ಆರೋಗ್ಯವೂ ಚೆನ್ನಾಗಿರುತ್ತದೆ.
ಪ್ರತಿ ಬಾರಿ ತಿಂದಾಗಲೂ ಬಾಯಿ ಮುಕ್ಕಳಿಸಿ: ಪ್ರತಿ ಬಾರಿ ಆಹಾರವನ್ನು ಸೇವಿಸಿದಾಗಲೂ ಬಾಯಿ ಮುಕ್ಕಳಿಸುವುದನ್ನು ಮರೆಯಬೇಡಿ. ಆಯುರ್ವೇದವು ಊಟವಾದ ಬಳಿಕ ನೀರು ಕುಡಿಯಿರಿ ಎಂದು ಹೇಳುವುದಿಲ್ಲ, ಊಟದ ಬಳಿಕ ಬಾಯಿ ಮುಕ್ಕಳಿಸುವುದರಿಂದ ಹಲ್ಲಿನಲ್ಲಿ ಸಿಲುಕಿರುವ ಆಹಾರ ಪದಾರ್ಥಗಳು ನೀರಿನೊಂದಿಗೆ ಹೊರಹೋಗುತ್ತದೆ, ಬಾಯಿ ಶುದ್ಧವಾಗುತ್ತದೆ.
ತಿನ್ನುತ್ತಲೇ ಇರಬೇಡಿ: ಒಂದೇ ಸಮನೆ ತಿನ್ನುವುದು ಒಳ್ಳೆಯದಲ್ಲ, ಅಂತರವಿರಲಿ, ಒಮ್ಮೆ ತಿಂದಮೇಲೆ ಕನಿಷ್ಠ 4 ಗಂಟೆಯಾದರೂ ಅಂತರವಿರುವಂತೆ ನೋಡಿಕೊಳ್ಳಿ.
ದಿನಕ್ಕೆ ಎಷ್ಟು ನೀರು ಕುಡಿಯಬೇಕು: ಮೂತ್ರವು ಬಿಳಿ ಬಣ್ಣದಲ್ಲಿರುವಂತೆ ನೋಡಿಕೊಳ್ಳಿ, ಅದು ಹಳದಿ ಬಣ್ಣಕ್ಕೆ ತಿರುಗಿದರೆ ನಿಮ್ಮ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ ಎಂದರ್ಥ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ