ನೀವು ಬಟ್ಟೆಯನ್ನು ಎಷ್ಟು ಸಲ ಧರಿಸಿದ ಬಳಿಕ ಒಗೆಯಲು ಹಾಕಬೇಕು? ಇಲ್ಲಿದೆ ಮಾಹಿತಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 31, 2025 | 5:41 PM

ಕೆಲವರಿಗೆ ಬಟ್ಟೆ ತೊಳೆಯುವುದೆಂದರೆ ಅಲರ್ಜಿ. ಹೀಗಾಗಿ ಕೆಲವರು ಒಮ್ಮೆ ಹಾಕಿದ ಬಟ್ಟೆಯನ್ನು ತೊಳೆಯದೇ ಧರಿಸುತ್ತಾರೆ. ಇನ್ನು ಕೆಲವರು ಎರಡು ಬಾರಿ ಧರಿಸಿದ ಬಳಿಕ ಬಟ್ಟೆ ತೊಳೆದು ಹಾಕುತ್ತಾರೆ. ಆದರೆ ಯಾವ ಬಟ್ಟೆಯನ್ನು ಎಷ್ಟು ಸಲ ಧರಿಸಿದ ಬಳಿಕ ತೊಳೆಯಬೇಕು ಎನ್ನುವುದನ್ನು ಒಮ್ಮೆಯಾದ್ರೂ ಯೋಚಿಸಿದ್ದೀರಾ. ಹೀಗಾಗಿ ದುಬಾರಿ ಬೆಲೆಯ ಬಟ್ಟೆಯನ್ನು ಪದೇ ಪದೇ ತೊಳೆಯುವ ಮುನ್ನ ಈ ವಿಷಯಗಳನ್ನು ತಿಳಿದುಕೊಳ್ಳುವುದು ಸೂಕ್ತ.

ನೀವು ಬಟ್ಟೆಯನ್ನು ಎಷ್ಟು ಸಲ ಧರಿಸಿದ ಬಳಿಕ ಒಗೆಯಲು ಹಾಕಬೇಕು? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us on

ಈಗಿನ ಕಾಲದಲ್ಲಿ ಯಾರಿಗೆ ಸಮಯವಿದೆ ಹೇಳಿ, ಉದ್ಯೋಗ (job) ಕ್ಕೆ ತೆರಳುವ ಬಹುತೇಕರು ಧರಿಸಿದ ಬಟ್ಟೆ (dress) ಗಳನ್ನು ರಾಶಿಯಿಟ್ಟು ಒಂದೇ ಸಲ ತೊಳೆಯುವುದನ್ನು ನೋಡಿರಬಹುದು. ಇನ್ನು ಕೆಲವರು ಒಗೆಯದೆ ಎರಡು ಮೂರು ಬಾರಿ ಧರಿಸಿ ಆ ಬಳಿಕ ತೊಳೆಯುತ್ತಾರೆ. ಆದರೆ ಮೈಗೆ ಹಾಕಿದ ಬಟ್ಟೆಗಳನ್ನು ಒಗೆದು ಶುಭ್ರವಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ತುಂಬಾ ಸಲ ಧರಿಸಿದ ಬಳಿಕವೂ ತೊಳೆಯದೇ (wash) ಹಾಗೆ ಇಡುವುದು ಒಳ್ಳೆಯದಲ್ಲ. ಒಂದು ಘಳಿಗೆ ಧರಿಸಿದ ಉಡುಗೆಯನ್ನು ಅತಿಯಾಗಿ ತೊಳೆಯುವುದು ಸರಿಯಲ್ಲ. ಒಳ್ಳೆಯ ಉಡುಪನ್ನು ಪದೇ ಪದೇ ಒಗೆಯುವುದರಿಂದ ಹಾಳಾಗುತ್ತದೆ. ಬಟ್ಟೆಯು ಬೇಗನೇ ದುರ್ಬಲವಾಗುವುದಲ್ಲದೆ ಹಳೆಯದಾದಂತೆ ಕಾಣುತ್ತದೆ. ಹೀಗಾಗಿ ಯಾವ ಬಟ್ಟೆಗಳನ್ನು ಎಷ್ಟು ಸಲ ಧರಿಸಿದ ಬಳಿಕ ಒಗೆಯಬೇಕು ಎನ್ನುವುದಕ್ಕೆ ಉತ್ತರ ಇಲ್ಲಿದೆ.

  • ಒಳಉಡುಪುಗಳು : ಕೆಲವರು ಎರಡು ದಿನಕ್ಕೊಮ್ಮೆ ಒಳಉಡುಪುಗಳನ್ನು ತೊಳೆದುಕೊಳ್ಳುತ್ತಾರೆ. ಆದರೆ ವೈಯುಕ್ತಿಕ ನೈರ್ಮಲ್ಯದ ದೃಷ್ಟಿಯಿಂದ ಪ್ರತಿದಿನ ಒಳ ಉಡುಪುಗಳನ್ನು ತೊಳೆಯಲೇಬೇಕು. ಹತ್ತರಿಂದ ಹನ್ನೆರಡು ಗಂಟೆಗಳ ಕಾಲ ಚರ್ಮ ಮತ್ತು ಡಿಯೋಡರೆಂಟ್‌ನಿಂದ ತೈಲಗಳನ್ನು ಸಂಗ್ರಹಿಸುತ್ತವೆ. ಹೀಗಾಗಿ ಧರಿಸಿದ ಒಳಉಡುಪುಗಳನ್ನು ತೊಳೆಯದೆ ಅದನ್ನೇ ಧರಿಸುವುದರಿಂದ ಸೋಂಕುಗಳು ಸೇರಿದಂತೆ ಆರೋಗ್ಯ ಸಮಸ್ಯೆ ಬರುವ ಸಾಧ್ಯತೆಯಿರುತ್ತದೆ. ದೇಹದ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಒಳಉಡುಪುಗಳನ್ನು ಪ್ರತಿದಿನ ತೊಳೆಯುವುದು ಒಳ್ಳೆಯದು.
  • ಸೈಟರ್‌ : ಕೆಲವರು ಸೈಟರ್‌ ತೊಳೆಯುವುದೇ ಇಲ್ಲ. ನೀವು ಧರಿಸುವ ಸೈಟರ್‌ನಲ್ಲಿ ಲೇಯರ್ ಗಳಿದ್ದು ಬೆವರು ಹೀರಿಕೊಳ್ಳುವುದಿಲ್ಲ ಎಂದಾದರೆ ಏಳು ಬಾರಿ ಧರಿಸಿದ ಬಳಿಕ ಒಗೆಯಲು ಹಾಕಬಹುದು. ಇಲ್ಲದಿದ್ದರೆ ಎರಡರಿಂದ ನಾಲ್ಕು ಬಾರಿ ಹಾಕಿದ ಬಳಿಕ ತೊಳೆಯಬೇಕು.
  • ಜೀನ್ಸ್ : ಹೆಚ್ಚಿನವರಿಗೆ ಜೀನ್ಸ್ ಪ್ಯಾಂಟ್ ಯನ್ನು ತೊಳೆಯುವುದೆಂದರೆ ತಲೆ ನೋವಿನ ಕೆಲಸ. ಹೀಗಾಗಿ ಒಮ್ಮೆ ಹಾಕಿದ ಜೀನ್ಸ್ ಪ್ಯಾಂಟನ್ನು ಎರಡು ಮೂರು ಸಲ ಹಾಕುತ್ತಾರೆ. ಇದನ್ನು ನೀರಿಗೆ ಹಾಕಿದರೆ ಜೀನ್ಸ್ ಲೂಸ್ ಆಗುವುದಲ್ಲದೇ ಬಣ್ಣ ಬಿಡುತ್ತದೆ. ನಾಲ್ಕರಿಂದ ಐದು ಬಾರಿ ಧರಿಸಿದ ನಂತರ ಜೀನ್ಸ್ ತೊಳೆಯುವುದು ಒಳ್ಳೆಯದು.
  • ಟಿ-ಶರ್ಟ್ ಹಾಗೂ ಟಾಪ್ ಗಳು : ಟೀ ಶರ್ಟ್ ಹಾಗೂ ಟಾಪ್ ಗಳ ಕುತ್ತಿಗೆ ಭಾಗದಲ್ಲಿ, ಕೈಯಲ್ಲಿ ಹೆಚ್ಚು ಕೊಳೆಯಿರುತ್ತದೆ. ಸಾಕಷ್ಟು ಬೆವರು, ಕೊಳಕು ಮತ್ತು ಸತ್ತ ಚರ್ಮದ ಕೋಶಗಳನ್ನು ಹೊಂದಿರುತ್ತವೆ. ಹೆಚ್ಚು ಬೆವರುವವರಾಗಿದ್ದರೆ ಒಮ್ಮೆ ಧರಿಸಿದ ಕೂಡಲೇ ತೊಳೆಯುವುದು ಸೂಕ್ತ. ಇಲ್ಲದಿದ್ದರೆ ಎರಡರಿಂದ ಮೂರು ಬಾರಿ ಧರಿಸಿದ ಬಳಿಕ ಟೀ ಶರ್ಟ್ ಗಳನ್ನು ಒಗೆಯಲು ಹಾಕಬಹುದು.
  • ಜಿಮ್ ಉಡುಗೆಗಳು : ಜಿಮ್ ಔಟ್ ಫಿಟ್ ಗಳನ್ನು ಪ್ರತಿದಿನ ತೊಳೆಯುವುದು ಸೂಕ್ತ. ಹೆಚ್ಚು ಸಮಯ ಜಿಮ್ ನಲ್ಲಿ ದೇಹ ದಂಡಿಸುವ ಕಾರಣ ಈ ಬಟ್ಟೆಗಳು ಬೆವರನ್ನು ಹೀರಿಕೊಳ್ಳುತ್ತದೆ. ಕೆಟ್ಟ ಬೆವರಿನ ವಾಸನೆಯಿಂದ ಒಮ್ಮೆ ಧರಿಸಿದ ಬಟ್ಟೆಯನ್ನು ಮತ್ತೆ ಧರಿಸಲು ಆಗದೇ ಇರಬಹುದು. ಹೀಗಾಗಿ ಈ ಜಿಮ್ ಉಡುಗೆಯನ್ನು ಒಂದೇ ಬಾರಿ ಧರಿಸಿದ ಬಳಿಕ ಒಗೆಯಲು ಹಾಕುವುದು ಸೂಕ್ತ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ