ತುಟಿಗಳ ಅಂದ ಹೆಚ್ಚಿಸಲು ಹೆಂಗಳೆಯರ ನೆಚ್ಚಿನ ಕೆಲಸವೆಂದರೆ ಅದು ಲಿಪ್ಸ್ಟಿಕ್ ಹಚ್ಚಿಕೊಳ್ಳುವುದು. ಮಾರುಕಟ್ಟೆಯಲ್ಲಿ ಸಿಗುವ ಹತ್ತಾರು ಬಣ್ಣಗಳ ಲಿಪ್ಸ್ಟಿಕ್ಗಳು ಹೆಣ್ಣುಮಕ್ಕಳ ತುಟಿಯ ಮೇಲೇರಿ ಕಣ್ಣು ಕುಕ್ಕುವಂತೆ ಮಾಡುತ್ತದೆ. ಡ್ರೆಸ್ಗಳಿಗೆ ಸೂಟ್ ಆಗುವ ಹಲವು ಬಣ್ಣಗಳ ಲಿಪ್ಸ್ಟಿಕ್. ಅಬ್ಬಬ್ಬಾ ಅದೆಷ್ಟು ಬಣ್ಣಗಳು ಅಂತೀರಾ. ಶಾಪಿಂಗ್ ಗೆ ಹೋದರೆ ಯಾವ ಡ್ರೆಸ್ ತೆಗೆದುಕೊಳ್ಳುವುದು ಎನ್ನುವ ಗೊಂದಲ ಉಂಟಾದ ಹಾಗೇ ಯಾವ ಬಣ್ಣದ ಲಿಪ್ಸ್ಟಿಕ್ ತೆಗೆದುಕೊಳ್ಳಬಹುದು ಎನ್ನುವುದು ಹೆಣ್ಣು ಮಕ್ಕಳಿಗೆ ಕಾಡುವ ದೊಡ್ಡ ಪ್ರಶ್ನೆಯಾಗಿರುತ್ತದೆ. ಆದರೆ ಕೊರೋನಾ ಬಂದ ಮೇಲೆ ಲಿಪ್ಸ್ಟಿಕ್ ಕತೆ ಅಯೋಮಯವಾಗಿದೆ ಯಾಕೇ ಅಂತೀರಾ ಮಾಸ್ಕ್ ಹಾಕಿದ ಮೇಲೆ ಲಿಪ್ಸ್ಟಿಕ್ ಕಾಣುವುದೇ ಇಲ್ಲ. ಅದೂ ಅಲ್ಲದೆ ಅರ್ಧ ಲಿಪ್ಸ್ಟಿಕ್ ಮಾಸ್ಕ್ಗೇ ಅಂಟಿಕೊಳ್ಳುತ್ತದೆ. ಹೀಗಾಗಿ ಮಾಸ್ಕ್ ಹೆಣ್ಣುಮಕ್ಕಳ ಲಿಪ್ಸ್ಟಿಕ್ ಪ್ರೀತಿಗೆ ಅಡ್ಡವಾಗಿದೆ. ಆದರೆ ಕೆಲವೊಂದು ಹಂತಗಳನ್ನು ಅನುಸರಿಸಿದರೆ ನಿಮ್ಮ ಲಿಪ್ಸ್ಟಿಕ್ ಮಾಸ್ಕ್ಗೆ ಅಂಟಿಕೊಳ್ಳುವುದನ್ನು ತಡೆಯಬಹುದು.
ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್
ಲಿಪ್ ಬಾಮ್ ಹಚ್ಚಿಕೊಳ್ಳಿ
ನೀವು ನಿಮ್ಮ ತುಟಿಗೆ ಲಿಪ್ಸ್ಟಿಕ್ ಹಚ್ಚುವ ಮೊದಲು ಲಿಪ್ ಬಾಮ್ ಹಚ್ಚಿಕೊಳ್ಳಿ. ನಿಮ್ಮ ತುಟಿ ಡ್ರೈ ಆಗಿದ್ದರೆ ಹೆಚ್ಚು ಕಾಲ ಲಿಪ್ಸ್ಟಿಕ್ ಉಳಿಯುವುದಿಲ್ಲ. ಹೀಗಾಗಿ ಲಿಪ್ ಬಾಮ್ಹಚ್ಚಿದರೆ ನಿಮ್ಮ ತುಟಿ ಮೃದುವಾಗಿ ಹೆಚ್ಚು ಸಮಯ ತುಟಿಯ ಮೇಲೆ ಲಿಪ್ಸ್ಟಿಕ್ ಹಾಗೆಯೇ ಇರುತ್ತದೆ. ಮಾಸ್ಕ್ ಧರಿಸಿದಾಗಲೂ ನೀವು ಹಚ್ಚಿದ ಲಿಪ್ಸ್ಟಿಕ್ ಸೇಫ್ ಆಗಿಯೇ ಇರುತ್ತದೆ.
ಲಿಪ್ ಲೈನರ್ ಬಳಸಿ
ನಿಮ್ಮ ತುಟಿಗಳಿಗೆ ಆಕಾರ ನೀಡಲು ಈ ಲಿಪ್ ಲೈನರ್ ಬಳಸಬಹುದು. ಇದು ನಿಮ್ಮ ಲಿಪ್ಸ್ಟಿಕ್ ಅನ್ನು ಹೆಚ್ಚು ಕಾಲ ಇರುವಂತೆ ಮಾಡುತ್ತದೆ. ಅಲ್ಲದೆ ಮಾಸ್ಕ್ ಧರಿಸಿದಾಗ ಲಿಪ್ಸ್ಟಿಕ್ ಹರಡದಂತೆ ತಡೆಯುತ್ತದೆ. ಹೀಗಾಗಿ ಲಿಪ್ಸ್ಟಿಕ್ ಹಚ್ಚುವ ಮೊದಲು ಮರೆಯದೇ ಲಿಪ್ ಲೈನರ್ ಬಳಸಿ.
ಲಿಪ್ ಸ್ಟಿಕ್ ಹಚ್ಚಿ
ಲಿಪ್ ಲೈನರ್ ಹಚ್ಚಿದ ಬಳಿಕ ನಿಮ್ಮ ತುಟಿಗೆ ಲಿಪ್ ಸ್ಟಿಕ್ ಹಚ್ಚಿರಿ. ಮ್ಯಾಟ್ ಅಥವಾ ಹೊಳಪುಳ್ಳ ಲಿಪ್ಸ್ಟಿಕ್ ಯಾವುದನ್ನಾದರೂ ಬಳಸಿ. ಆದರೆ ಮ್ಯಾಟ್ ಲಿಪ್ಸ್ಸ್ಟಿಕ್ ಹೆಚ್ಚು ಸೂಕ್ತ. ಇದು ದೀರ್ಘಕಾಲ ನಿಮ್ಮ ತುಟಿಯ ಮೇಲೆ ಇರುತ್ತದೆ.
ಲೂಸ್ ಪೌಡರ್ ಬಳಸಿ
ಲಿಪ್ ಸ್ಟಿಕ್ ಮೇಲೆ ಲೈಟ್ ಆಗಿ ಲೂಸ್ ಪೌಡರ್ ಹಾಕಿರಿ. ಇದು ನಿಮ್ಮ ಲಿಪ್ಸ್ಟಿಕ್ ಅನ್ನು ದೀರ್ಘಕಾಲ ಉಳಿಯುವಂತೆ ಮಾಡುತ್ತದೆ. ಬ್ರಷ್ನಲ್ಲಿ ನಿಧಾನವಾಗಿ ಲೂಸ್ ಪೌಡರ್ ಪುಡಿಯನ್ನು ತೆಗೆದುಕೊಂಡು ತುಟಿಯ ಮೇಲೆ ಚಿಮುಕಿಸಿ. ಆಗ ನಿಮ್ಮ ಲಿಪ್ಸ್ಟಿಕ್ ಲಾಕ್ ಆಗಿ ಹೆಚ್ಚು ಕಾಲ ಹಾಗೆಯೇ ಉಳಿಯುತ್ತದೆ.
ಈ ಎಲ್ಲಾ ಹಂತಗಳ ಬಳಿಕ ನಿಮ್ಮ ಫೇಸ್ ಮಾಸ್ಕ್ ಹಾಕಿಕೊಳ್ಳಿ. ಆಗ ಲಿಪ್ ಸ್ಟಿಕ್ ಮಾಸ್ಕ್ಗೂ ತಾಗದೆ ಹೆಚ್ಚು ಕಾಲ ಅಂದವಾಗಿ ಕಾಣುತ್ತದೆ.