ಮನೆಯಲ್ಲಿಯೇ ಸುಲಭವಾಗಿ ಶುಂಠಿ ಬೆಳ್ಳುಳ್ಳಿ ಪೇಸ್ಟ್ ತಯಾರಿಸುವುದು ಹೇಗೆ? ಇಲ್ಲಿದೆ ಸುಲಭ ತಂತ್ರ

ಅಡುಗೆ ಮನೆಯಲ್ಲಿ ತ್ವರಿತ ಕೆಲಸಕ್ಕಾಗಿ ಮತ್ತು ಸಮಯವನ್ನು ಉಳಿಸಲು ಮಹಿಳೆಯರು ಸಾಮಾನ್ಯವಾಗಿ ಅಡುಗೆಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಶುಂಠಿ ಬೆಳ್ಳುಳ್ಳಿ ಪೇಸ್ಟ್​ನ್ನು  ಬಳಕೆ ಮಾಡುತ್ತಾರೆ. ಆದರೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಈ ಉತ್ಪನ್ನಗಳು ಅಷ್ಟೇನೂ ಆರೋಗ್ಯಕರವಾದುದಲ್ಲ. ಏಕೆಂದರೆ ಕೃತಕ ಬಣ್ಣ ಹಾಗೂ ಪೇಸ್ಟ್ ಕೆಡದಂತೆ ಅದಕ್ಕೆ ಕೃತಕ ಸಂರಕ್ಷಕಗಳನ್ನು ಬೆರೆಸಿರುತ್ತಾರೆ. ಇದರ ಬದಲು ನೀವು ಮನೆಯಲ್ಲಿಯೇ ಸುಲಭವಾಗಿ ಆರೋಗ್ಯರಕ ಶುಂಠಿ ಬೆಳ್ಳುಳ್ಳಿ ಪೇಸ್ಟ್ ತಯಾರಿಸಬಹುದು.

ಮನೆಯಲ್ಲಿಯೇ ಸುಲಭವಾಗಿ ಶುಂಠಿ ಬೆಳ್ಳುಳ್ಳಿ ಪೇಸ್ಟ್ ತಯಾರಿಸುವುದು ಹೇಗೆ? ಇಲ್ಲಿದೆ ಸುಲಭ ತಂತ್ರ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Aug 03, 2023 | 6:33 PM

ಹೆಚ್ಚಿನ ಜನರು ತಾವು ಮಾಡುವ ಪ್ರತಿಯೊಂದು ಅಡುಗೆಯಲ್ಲೂ ಶುಂಠಿ-ಬೆಳ್ಳುಳ್ಳಿ ಪೇಸ್ಟ್​​​ನ (Ginger-Garlic Paste) ಬಳಕೆ ಮಾಡುತ್ತಾರೆ. ಈ ಮಿಶ್ರಣ ಅಡುಗೆಯ ರುಚಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇಂದಿನ ಬಿಡುವಿಲ್ಲದ ಜೀವನಶೈಲಿಯ ಕಾರಣದಿಂದಾಗಿ ಅನೇಕರು ತಮ್ಮ ಅಡುಗೆ ಕೆಲಸವನ್ನು ಸುಲಭ ಮಾಡಿಕೊಳ್ಳಲು ಮಾರುಕಟ್ಟೆಯಲ್ಲಿ ಲಭ್ಯವಿರುವ ರೆಡಿಮೆಡ್ ಉತ್ಪನ್ನಗಳನ್ನು ಬಳಸುತ್ತಾರೆ. ಅದರಲ್ಲೂ ಬೆಳ್ಳುಳ್ಳಿಯ ಸಿಪ್ಪೆ ಸುಳಿಯಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂಬ ಕಾರಣದಿಂದ ಮಾರುಕಟ್ಟೆಯಲ್ಲಿ ಸಿಗುವ ರೆಡಿಮೆಡ್ ಶುಂಠಿ-ಬೆಳ್ಳುಳ್ಳಿ ಪೇಸ್ಟ್​​ನ್ನು ಅಡುಗೆಯಲ್ಲಿ ಬಳಕೆ ಮಾಡುತ್ತಾರೆ. ಆದರೆ ಮಾರುಕಟ್ಟೆಗಳಲ್ಲಿ ಲಭ್ಯವಿರುವ ಈ ಉತ್ಪನ್ನಕ್ಕೆ ಕೃತಕ ಬಣ್ಣ ಮತ್ತು ಅದು ಅನೇಕ ದಿನಗಳವರೆಗೆ ಕೆಡದಂತೆ ಇರಲು ಅದಕ್ಕೆ ಕೃತಕ ಸಂರಕ್ಷಕಗಳನ್ನು ಬೆರೆಸಿರುತ್ತಾರೆ. ಇದು ಖಂಡಿತವಾಗಿಯೂ ನಮ್ಮ ಆರೋಗ್ಯಕ್ಕೆ ಅಷ್ಟೇನು ಒಳ್ಳೆಯದಲ್ಲ. ಇದರ ಬದಲಿಗೆ ನೀವು ಮನೆಯಲ್ಲಿಯೇ ತಾಜಾ ಶುಂಠಿ ಬೆಳ್ಳುಳ್ಳಿ ಪೇಸ್ಟ್ ತಯಾರಿಸಿ ಅಡುಗೆಗೆ ಬಳಸಬಹುದು. ಇದು ಆರೋಗ್ಯಕರವಾಗಿರುವುದರ ಜೊತೆಗೆ ಅಡುಗೆಯ ರುಚಿಯನ್ನೂ ದ್ವಿಗುಣಗೊಳಿಸುತ್ತದೆ. ಅಲ್ಲದೆ ಇದನ್ನು ಒಂದು ತಿಂಗಳುಗಳ ಕಾಲ ಕೆಡದಂತೆ ಸಂರಕ್ಷಿಸಿಡಬಹುದು. ಹಾಗಿದ್ದರೆ ಮನೆಯಲ್ಲಿಯೇ ಸುಲಭವಾಗಿ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹೇಗೆ ತಯಾರಿಸುವುದು ಎಂಬುದನ್ನು ನೋಡೋಣ.

ಶುಂಠಿ ಬೆಳ್ಳುಳ್ಳಿ ಪೇಸ್ಟ್ ತಯಾರಿಸಲು ಬೇಕಾಗಿರುವ ಸಾಮಾಗ್ರಿಗಳು:

100 ಗ್ರಾಂ ಬೆಳ್ಳುಳ್ಳಿ

75 ಗ್ರಾಂ ಶುಂಠಿ

1 ಚಮಚ ಉಪ್ಪು

2 ಚಮಚ ಎಣ್ಣೆ

1 ಚಮಚ ಬಿಳಿ ವಿನೆಗರ್

ಇದನ್ನೂ ಓದಿ: ಬೇಸಿಗೆಯಲ್ಲಿ ಶುಂಠಿ-ಬೆಳ್ಳುಳ್ಳಿ ಹೆಚ್ಚು ದಿನಗಳವರೆಗೆ ಸಂಗ್ರಹಿಸಿಡಲು ಈ ಸಲಹೆಗಳನ್ನು ಅನುಸರಿಸಿ ಸಾಕು!

ಶುಂಠಿ ಬೆಳ್ಳುಳ್ಳಿ ಪೇಸ್ಟ್ ತಯಾರಿಸುವ ವಿಧಾನ:

ಮೊದಲನೆಯದಾಗಿ ಬೆಳ್ಳುಳ್ಳಿ ಸಿಪ್ಪೆ ಸುಳಿದು ಬಿಸಿಲಿನಲ್ಲಿಡಿ. ಇದರಿಂದ ಬೆಳ್ಳುಳ್ಳಿಯ ನೀರಿನಾಂಶ ಕರಗಿ ಸ್ವಲ್ಪ ಒಣಗುತ್ತದೆ. ಬಳಿಕ ಶುಂಠಿಯನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆಯಿರಿ, ಅದರ ಸಿಪ್ಪೆ ಸುಳಿದು ಇನ್ನೊಂದು ಬಾರಿ ನೀರಿನಲ್ಲಿ ತೊಳೆದು, ಇದನ್ನು ಕೂಡ ಬಿಸಿಲಿನಲ್ಲಿ ಒಣಗಿಸಿ. ಬೆಳ್ಳುಳ್ಳಿ ಮತ್ತು ಶುಂಠಿ ಇವೆರಡೂ ಒಂದು ದಿನದ ಕಾಲ ಬಿಸಿಲಿನಲ್ಲಿ ಒಣಗಿಸಿದರೆ ಸಾಕು. ಒಣಗಿದ ಬಳಿಕ ಮೊದಲಿಗೆ ಬೆಳ್ಳುಳ್ಳಿಯನ್ನು ಮಿಕ್ಸಿ ಜಾರ್​​​ನಲ್ಲಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಬಳಿಕ ಶುಂಠಿಯನ್ನು ಕೂಡ ಇದೇ ರೀತಿ ನುಣ್ಣಗೆ ರುಬ್ಬಿಕೊಂಡು ಪೇಸ್ಟ್ ತಯಾರಿಸಿ. ಇದಕ್ಕೆ ನೀವು ಯಾವುದೇ ಕಾರಣಕ್ಕೂ ನೀರನ್ನು ಸೇರಿಸುವಂತಿಲ್ಲ. ನುಣ್ಣಗೆ ರುಬ್ಬಿಕೊಂಡ ಈ ಎರಡೂ ಮಿಶ್ರಣವನ್ನು ಒಂದು ಗಾಜಿನ ಜಾರ್ ಅಥವಾ ಕಂಟೇನರ್​​​ನಲ್ಲಿ ಹಾಕಿ ಅದಕ್ಕೆ ಉಪ್ಪು ಮತ್ತು ಎಣ್ಣೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ಕೊನೆಯದಾಗಿ ಎರಡು ಚಮಚ ಬಿಳಿ ವಿನೆಗರ್ ಸೇರಿಸಿ ಇನ್ನೊಂದು ಬಾರಿ ಚೆನ್ನಾಗಿ ಮಿಶ್ರಣ ಮಾಡಿ, ಮುಚ್ಚಳವನ್ನು ಮುಚ್ಚಿ ಆ ಪೇಸ್ಟ್ ನ್ನು ಫ್ರಿಜ್ ನಲ್ಲಿಡಿ. ಈ ಪೇಸ್ಟ್​​ನ್ನು ಫ್ರಿಜ್​​​ನಲ್ಲಿ ಇರಿಸುವುದರಿಂದ ಇದು 15 ರಿಂದ 20 ದಿನಗಳವರೆಗೂ ಕೆಡುವುದಿಲ್ಲ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ