ಮ್ಯಾಗಿ ಭಾರತದ ಅತ್ಯಂತ ಜನಪ್ರಿಯ ನೂಡಲ್ಸ್ಗಳಲ್ಲಿ ಒಂದಾಗದೆ. ಸಾಮಾನ್ಯವಾಗಿ ಮ್ಯಾಗಿಯನ್ನು ಎಲ್ಲಾ ವಯಸ್ಸಿನ ಜನರು ತಿನ್ನಲು ಇಷ್ಟಪಡುತ್ತಾರೆ. ಅಷ್ಟೇ ಮಾತ್ರವಲ್ಲದೆ ನೂಡಲ್ಸ್ನ ರುಚಿ ಹೆಚ್ಚಿಸುವ ಮ್ಯಾಗಿ ಮ್ಯಾಜಿಕ್ ಮಸಾಲಾವನ್ನು ಅನೇಕರು ವಿವಿಧ ಬಗೆಯ ಅಡುಗೆಗಳಲ್ಲೂ ಬಳಸುತ್ತಾರೆ. ಇದು ಅಡುಗೆಯ ರುಚಿಯನ್ನು ಹೆಚ್ಚಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಈ ಪ್ಯಾಕೇಜ್ಡ್ ಉತ್ಪನ್ನದ ಗುಣಮಟ್ಟದ ಬಗ್ಗೆ ಹೆಚ್ಚಿನವರು ತಲೆಕೆಡಿಸಿಕೊಳ್ಳುತ್ತಾರೆ. ಆರೋಗ್ಯದ ದೃಷ್ಟಿಯಿಂದ ಪ್ರತಿಯೊಂದು ಅಡುಗೆಗೂ ಈ ಪ್ಯಾಕೇಜ್ಡ್ ಮ್ಯಾಗಿ ಮ್ಯಾಜಿಕ್ ಮಸಾಲೆಯನ್ನು ಬಳಸುವುದು ಸೂಕ್ತವೇ ಎಂದು ಯೋಚಿಸುತ್ತಾರೆ. ಹೀಗಿರುವಾಗ ನೀವು ಈ ಮಸಾಲೆಯನ್ನು ಏಕೆ ಮನೆಯಲ್ಲಿಯೇ ತಯಾರಿಸಬಾರದು? ಮ್ಯಾಗಿ ಮ್ಯಾಜಿಕ್ ಮಸಾಲಾವನ್ನು ತಯಾರಿಸುವುದು ಸುಲಭ ಮಾತ್ರವಲ್ಲದೆ, ಈ ಮಸಾಲೆ ಆರೋಗ್ಯಕರ ಹಾಗೂ ಪ್ಯಾಕೇಜ್ಡ್ ಮ್ಯಾಗಿ ಮಸಾಲಾಕ್ಕಿಂತ ಹೆಚ್ಚು ಸುವಾಸನೆ ಮತ್ತು ರುಚಿಯನ್ನು ಹೊಂದಿರುತ್ತದೆ. ಈ ಸರಳ ಪಾಕವಿಧಾನದ ಮಾಹಿತಿಯನ್ನು ಪೌಷ್ಟಿಕ ತಜ್ಞೆ ಕಿರಣ ಕುಕ್ರೇಜಾ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
• ಜೀರಿಗೆ – 2 ಚಮಚ
• ಕೊತ್ತಂಬರಿ ಬೀಜ – ¼ ಕಪ್
• ಸೋಂಪು ಕಾಳು – 1 ಟೀಸ್ಪೂನ್
• ಮೆಂತ್ಯ ಕಾಳು – ¼ ಟೀಸ್ಪೂನ್
• ಕರಿ ಮೆಣಸು – ½ ಟೀಸೂನ್
• ಅಚ್ಚಖಾರದ ಪುಡಿ – 1 ಟೀಸ್ಪೂನ್
• ಅರಶಿನ ಪುಡಿ – 1 ಟೀಸ್ಪೂನ್
• ಕಲ್ಲುಪ್ಪು – 1 ಟೀಸ್ಪೂನ್
• ಶುಂಠಿ ಪುಡಿ – 1 ಟೀಸ್ಪೂನ್
• ಆಮ್ಚೂರ್ ಪುಡಿ – 1 ಟೀಸ್ಪೂನ್
• ಕಲ್ಲು ಸಕ್ಕರೆ – 1 ಟೀಸ್ಪೂನ್
• ಈರುಳ್ಳಿ ಪುಡಿ – 2 ಟೀಸ್ಪೂನ್
• ಬೆಳ್ಳುಳ್ಳಿ ಪುಡಿ – 2 ಟೀಸ್ಪೂನ್
• ಜೋಳದ ಹಿಟ್ಟು (ಕಾರ್ನ್ ಫ್ಲೋರ್) – 1 ಟೀಸ್ಪೂನ್
• ಒಣ ಮೆಣಸಿನಕಾಯಿ – 4
• ದಾಲ್ಚಿನ್ನಿ – 1 ಇಂಚು
• ಹಸಿರು ಏಲಕ್ಕಿ – 4
• ಲವಂಗ – 4
• ಪಲಾವ್ ಎಲೆ – 2
ಇದನ್ನೂ ಓದಿ:ದೀಪಾವಳಿಯಂದು ಕಾಜು ಬರ್ಫಿ, ಕೇಸರಿ ಪೇಡಾ ಮನೆಯಲ್ಲಿಯೇ ತಯಾರಿಸಿ, ಇಲ್ಲಿದೆ ಸುಲಭ ವಿಧಾನ
• ಮ್ಯಾಗಿ ಮ್ಯಾಜಿಕ್ ಮಸಾಲಾ ಮಾಡಲು ಮೊದಲಿಗೆ ಗ್ಯಾಸ್ ಒಲೆಯ ಮೇಲೆ ಒಂದು ಪ್ಯಾನ್ ಇಟ್ಟು, ಅದು ಬಿಸಿಯಾದ ಬಳಿಕ ಅದಕ್ಕೆ ಕೊತ್ತಂಬರಿ ಬೀಜ, ಜೀರಿಗೆ, ಸೋಂಪು ಕಾಳು, ಮೆಂತ್ಯ ಕಾಳುಗಳನ್ನು ಹಾಕಿ (ಡ್ರೈ ರೋಸ್ಟ್) ಹುರಿಯಿರಿ.
• ನಂತರ ಅದೇ ಪ್ಯಾನ್ಗೆ ದಾಲ್ಚಿನ್ನಿ, ಏಲಕ್ಕಿ, ಪಲಾವ್ ಎಲೆ, ಲವಂಗ, ಒಣಮೆಣಸಿನಕಾಯಿ, ಕರಿಮೆಣಸನ್ನು ಸೇರಿಸಿ 10 ನಿಮಿಷಗಳ ಕಾಲ ಅಥವಾ ಮಸಾಲೆ ಪದಾರ್ಥಗಳು ಸ್ವಲ್ಪ ಕಂದು ಬಣ್ಣಕ್ಕೆ ತಿರುಗುವವರೆಗೂ ಹುರಿದುಕೊಳ್ಳಿ.
ವಿಡಿಯೋ ಇಲ್ಲಿದೆ:
• ಮಸಾಲೆ ಪದಾರ್ಥಗಳನ್ನು ಚೆನ್ನಾಗಿ ಹುರಿದ ಬಳಿಕ ಅದನ್ನು ಸ್ವಲ್ಪ ತಣ್ಣಗಾಗಿಸಿ, ಆ ಮಿಶ್ರಣವನ್ನು ಒಂದು ಮಿಕ್ಸಿಜಾರ್ನಲ್ಲಿ ಹಾಕಿ ನುಣ್ಣಗೆ ಪುಡಿಮಾಡಿಕೊಳ್ಳಿ. ಮಸಾಲೆ ನುಣ್ಣಗೆ ಪುಡಿಯಾದ ಬಳಿಕ ಅದಕ್ಕೆ ಅರಶಿನ ಪುಡಿ, ಅಚ್ಚಖಾರದ ಪುಡಿ, ಆಮ್ಚೂರ್ ಪುಡಿ, ಶುಂಠಿ ಪುಡಿ, ಈರುಳ್ಳಿ ಮತ್ತು ಬೆಳ್ಳುಳ್ಳಿ ಪುಡಿ, ಕಾರ್ನ್ ಫ್ಲೋರ್, ಕಲ್ಲುಪ್ಪು, ಕಲ್ಲು ಸಕ್ಕರೆಯನ್ನು ಸೇರಿಸಿ ಇನ್ನೊಂದು ಬಾರಿ ಪುಡಿ ಮಾಡಿಕೊಂಡರೆ ಮ್ಯಾಗಿ ಮ್ಯಾಜಿಕ್ ಮಸಾಲಾ ಸಿದ್ಧ. ಈ ಮಸಾಲೆಯನ್ನು ನೀವು ಗಾಳಿಯಾಡದ ಡಬ್ಬದಲ್ಲಿ ಇಟ್ಟು ಅದು ಕೆಡದಂತೆ ಸಂಗ್ರಹಿಸಿಡಬಹುದು.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:09 pm, Tue, 14 November 23