Lady’s Finger For Diabetes: ಬೆಂಡೆಕಾಯಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಕಾರಿಯೇ? ಇದರಿಂದ ಆರೋಗ್ಯ ಪ್ರಯೋಜನ ಏನು?
ಸಾಮಾನ್ಯವಾಗಿ ಎಲ್ಲಾ ಬಗೆಯ ತರಕಾರಿಗಳು ನಮ್ಮ ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿ. ಅದರಲ್ಲೂ ವಿಶೇಷವಾಗಿ ಬೆಂಡೆಕಾಯಿ ಮಧುಮೇಹ ರೋಗಿಗಳಿಗೆ ಔಷಧಿ ಇದ್ದಂತೆ ಎಂದು ಹೇಳಲಾಗುತ್ತದೆ. ನಿಜವಾಗಿಯೂ ಬೆಂಡೆಕಾಯಿ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಮಟ್ವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದೇ ಎಂಬುದನ್ನು ನೋಡೋಣ.
ಇತ್ತೀಚಿನ ದಿನಗಳಲ್ಲಿ ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ಜಡ ಜೀವನಶೈಲಿಯ ಕಾರಣ ಲಕ್ಷಾಂತರ ಜನರು ಮಧುಮೇಹ ಕಾಯಿಲೆಗೆ ಬಲಿಯಾಗಿದ್ದಾರೆ. ಇದೊಂದು ದೀರ್ಘಾವಧಿಯ ಕಾಯಿಲೆಯಾಗಿದ್ದು, ಆಹಾರದ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸುವ ಮೂಲಕ ಈ ಕಾಯಿಲೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಮಧುಮೇಹ ಕಾಯಿಲೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಆಹಾರದಲ್ಲಿ ಧಾನ್ಯಗಳು, ಹಣ್ಣುಗಳು, ಸೊಪ್ಪು, ತರಕಾರಿಗಳು ಸೇರಿದಂತೆ ಫೈಬರ್ ಭರಿತ ಆಹಾರಗಳನ್ನು ಸೇವನೆ ಮಾಡಬೇಕು. ಅದರಲ್ಲೂ ಬೆಂಡೆಕಾಯಿ ಮಧುಮೇಹ ರೋಗಿಗಳಿಗೆ ಔಷಧಿ ಇದ್ದಂತೆ ಎಂದು ಹೇಳಲಾಗುತ್ತದೆ. ಬೆಂಡೆಕಾಯಿ ಮಧುಮೇಹವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಹೇಗೆ ಸಹಕಾರಿಯಾಗಿದೆ ಎಂಬುದನ್ನು ನೋಡೋಣ.
ಬೆಂಡೆಕಾಯಿ ಮಧುಮೇಹಿಗಳಿಗೆ ಹೇಗೆ ಪ್ರಯೋಜನಕಾರಿಯಾಗಿದೆ?
ವಿಶೇಷವಾಗಿ ಬೆಂಡೆಕಾಯಿ ಕರಗಬಲ್ಲ ಮತ್ತು ಕರಗದ ನಾರಿನಂಶದಿಂದ ಸಮೃದ್ಧವಾಗಿದೆ. ಇದು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳತ್ತದೆ. ಈ ಪ್ರಕ್ರಿಯೆಯಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗುತ್ತದೆ. ಆದ್ದರಿಂದ ಮಧುಮೇಹ ರೋಗಿಗಳಿಗೆ ಬೆಂಡೆಕಾಯಿಯನ್ನು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಬೆಂಡೆಕಾಯಿ ಕಡಿಮೆ ಕ್ಯಾಲೋರಿ , ಉತ್ತಮ ಪ್ರಮಾಣದ ಫೈಬರ್, ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಈ ಎಲ್ಲಾ ಪೋಷಕಾಂಶಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಕಾರಿ ಎಂದು ಹೇಳಲಾಗುತ್ತದೆ.
ಬೆಂಡೆಕಾಯಿಯಲ್ಲಿ ಗ್ಲೈಸೆಮಿಕ್ ಸೂಚ್ಯಾಂಕವೂ ಕಡಿಮೆಯಿದೆ. ಇದರಿಂದಾಗಿ ಈ ತರಕಾರಿಯನ್ನು ತಿನ್ನುವುದರಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ದೊರೆಯುತ್ತದೆ. ಮತ್ತು ರಕ್ತದಲ್ಲಿನ ಸಕ್ಕರೆಯ ಮಟ್ಟವೂ ಹೆಚ್ಚಾಗುವುದಿಲ್ಲ. ಇದಲ್ಲದೆ ಬೆಂಡೆಕಾಯಿ ಪೊಟ್ಯಾಸಿಯಂ, ವಿಟಮಿ ಸಿ, ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಫೋಲೇಟ್ನ ಅತ್ಯುತ್ತಮ ಮೂಲವಾಗಿದೆ. ಇದು ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ತುಂಬಾ ಸಹಕಾರಿಯಾಗಿದೆ.
ಮಧುಮೇಹಿಗಳು ಬೆಂಡೆಕಾಯಿಯನ್ನು ಏಕೆ ತಿನ್ನಬೇಕುಬೇಕು?
ಫೈಬರ್ ಜೊತೆಗೆ ಬೆಂಡೆಕಾಯಿ ಹೆಚ್ಚಿನ ಪ್ರಮಾಣದ ಉತ್ಕರ್ಷಣ ನಿರೋಧಕಗಳು, ವಿಟಮಿನ್ ಬಿ 6 ಮತ್ತು ಪೋಲೇಟ್ ಅಂಶವನ್ನು ಹೊಂದಿದೆ. ಈ ಎಲ್ಲಾ ಪೋಷಕಾಂಶಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮತ್ತು ಮಧುಮೇಹದಿಂದ ಉಂಟಾಗುವ ನರರೋಗದ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದ್ದರಿಂದ ಮಧುಮೇಹ ಕಾಯಿಲೆ ಇರುವವರು ಬೆಂಡೆಕಾಯಿಯಿಂದ ವಿವಿಧ ಖಾದ್ಯಗಳನ್ನು ಮಾಡುವ ಮೂಲಕ, ಬೆಂಡೆಕಾಯಿ ನೀರನ್ನು ಸೇವನೆ ಮಾಡುವ ಮೂಲಕ ಹೀಗೆ ವಿವಿಧ ರೂಪದಲ್ಲಿ ಬೆಂಡೆಕಾಯಿಯನ್ನು ಸೇವಿಸಬಹುದು.
ಇದನ್ನೂ ಓದಿ: ಮಧುಮೇಹಿಗಳಿಗೆ ಬೆಂಡೆಕಾಯಿ ಸೇವನೆ ಯಾವ ರೀತಿ ಸಹಾಯ ಮಾಡುತ್ತೆ, ಇಲ್ಲಿದೆ ಮಾಹಿತಿ
ಬೆಂಡೆಕಾಯಿಯ ಇತರ ಆರೋಗ್ಯ ಪ್ರಯೋಜನಗಳು:
• ಬೆಂಡೆಕಾಯಿ ಅಧಿಕ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುವ ಮೂಲಕ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.
• ಇದರಲ್ಲಿ ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿದ್ದು, ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.
• ಬೆಂಡೆಕಾಯಿಯಲ್ಲಿ ವಿಟಮಿನ್ ಕೆ ಜೀವಸತ್ವ ಹೇರಳವಾಗಿದ್ದು, ಇದು ಮೂಳೆಗಳ ಬೆಳವಣಿಗೆಗೆ ಸಹಕಾರಿಯಾಗಿದೆ.
• ಬೆಂಡೆಕಾಯಿಯಲ್ಲಿ ಕಡಿಮೆ ಕ್ಯಾಲೋರಿ ಅಂಶಗಳಿದ್ದು, ಇದರ ನಿಯಮಿತ ಸೇವನೆಯಿಂದ ದೇಹ ತೂಕವನ್ನು ಕಡಿಮೆ ಮಾಡಬಹುದು.
• ಬೆಂಡೆಕಾಯಿ ಫೈಬರ್ನ ಉತ್ತಮ ಮೂಲವಾಗಿದ್ದು, ಇದು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಆರೋಗ್ಯಕರವಾಗಿರಿಸಲು ಸಹಕಾರಿಯಾಗಿದೆ.
• ಸಂಶೋಧನೆಗಳ ಪ್ರಕಾರ ಬೆಂಡೆಕಾಯಿಯಲ್ಲಿ ಲೆಕ್ಟಿನ್ ಎಂಬ ಪ್ರೋಟೀನ್ ಕಂಡುಬರುತ್ತದೆ. ಇದು ಕ್ಯಾನ್ಸರ್ ರೋಗವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಈ ಅಂಶವು ಕ್ಯಾನ್ಸರ್ ಕೋಶಗಳು ಅಥವಾ ಗಡ್ಡೆಗಳನ್ನು ಬೆಳೆಯದಂತೆ ತಡೆಯುತ್ತದೆ.
• ವಿಟಮಿನ್ ಸಿ ಮತ್ತು ಆಂಟಿ ಆಕ್ಸಿಡೆಂಟ್ಗಳಂತಹ ಗುಣಲ್ಷಣಗಳು ಬೆಂಡೆಕಾಯಿಯಲ್ಲಿ ಕಂಡುಬರುತ್ತದೆ. ಇದು ಚರ್ಮವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ