ಮನೆಯಲ್ಲಿಯೇ ತಯಾರಿಸಬಹುದು ಶುದ್ಧ ಕೊಬ್ಬರಿ ಎಣ್ಣೆ; ಅದು ಹೇಗೆ ಅಂತೀರಾ?

ತೆಂಗಿನ ಎಣ್ಣೆ ಅಡುಗೆಗೆ ಮಾತ್ರವಲ್ಲದೆ ಚರ್ಮ ಮತ್ತು ಕೂದಲಿನ ಆರೈಕೆಗೂ ಉತ್ತಮ ಆಯ್ಕೆಯಾಗಿದೆ. ಬಹುತೇಕರು ಈ ತೆಂಗಿನ ಎಣ್ಣೆಯನ್ನು ಮಾರುಕಟ್ಟೆಯಿಂದಲೇ ಖರೀದಿ ಮಾಡುತ್ತಾರೆ. ಆದರೆ ಈ ಎಣ್ಣೆ ಪರಿಶುದ್ಧವಾಗಿರುತ್ತದೆ ಎಂದು ಹೇಳುವುದು ಕಷ್ಟಸಾಧ್ಯ. ಹೀಗಿರುವಾಗ ಸ್ವಲ್ಪ ಟೈಂ ಮಾಡಿಕೊಂಡು ಮನೆಯಲ್ಲಿಯೇ ಯಾವುದೇ ಕಲಬೆರಕೆ ಇಲ್ಲದ ಶುದ್ಧ ಕೊಬ್ಬರಿ ಎಣ್ಣೆಯನ್ನು ತಯಾರಿಸಬಹುದು. ಮನೆಯಲ್ಲಿಯೇ ಕೊಬ್ಬರಿ ಎಣ್ಣೆ ತಯಾರಿಸುವುದು ಹೇಗೆ ಎಂಬ ಸಂಪೂರ್ಣ ವಿವರ ಇಲ್ಲಿದೆ.

ಮನೆಯಲ್ಲಿಯೇ ತಯಾರಿಸಬಹುದು ಶುದ್ಧ ಕೊಬ್ಬರಿ ಎಣ್ಣೆ; ಅದು ಹೇಗೆ ಅಂತೀರಾ?
ಕೊಬ್ಬರಿ ಎಣ್ಣೆ
Image Credit source: Getty Images

Updated on: Jun 25, 2026 | 7:29 PM

ದಕ್ಷಿಣ ಭಾರತದ ಹೆಚ್ಚಿನ ಕಡೆ ಅಡುಗೆಗಳಿಗೆ ತೆಂಗಿನ ಎಣ್ಣೆಯನ್ನೇ (coconut oil) ಬಳಸಲಾಗುತ್ತದೆ. ಈ ಎಣ್ಣೆ ಅಡುಗೆಗೆ ಉತ್ತಮ ಘಮ ನೀಡುವುದು ಮಾತ್ರವಲ್ಲದೆ  ತ್ವಚೆ ಮತ್ತು ಕೂದಲಿನ ಆರೋಗ್ಯಕ್ಕೂ ಸಖತ್‌ ಪ್ರಯೋಜನಕಾರಿ. ತೆಂಗಿನ ಎಣ್ಣೆ ನೈಸರ್ಗಿಕವಾಗಿರುವುದಲ್ಲದೆ, ಪೋಷಕಾಂಶಗಳಿಂದ ಕೂಡ ಸಮೃದ್ಧವಾಗಿದೆ. ಅಲ್ಲದೆ ಇದು ಲಾರಿಕ್ ಆಮ್ಲದ ಅತ್ಯಂತ ಶ್ರೀಮಂತ ನೈಸರ್ಗಿಕ ಮೂಲವಾಗಿದ್ದು, ಇದು ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿ. ಇತ್ತೀಚಿನ ದಿನಗಳಲ್ಲಂತೂ ಮಾರುಕಟ್ಟೆಯಲ್ಲಿ ತೆಂಗಿನ ಎಣ್ಣೆ ಸುಲಭವಾಗಿ ಲಭ್ಯವಿದ್ದರೂ, ಈ ಎಣ್ಣೆಗಳಲ್ಲಿ ಕಲಬೆರಕೆ ಅಂಶಗಳು ಇರುವ ಸಾಧ್ಯತೆ ಇರುತ್ತದೆ. ಆದ್ದರಿಂದ, ನೀವು ತೆಂಗಿನ ಎಣ್ಣೆಯ ನಿಜವಾದ ಪ್ರಯೋಜನಗಳನ್ನು ಪಡೆಯಲು ಬಯಸಿದರೆ, ನೀವು ಮನೆಯಲ್ಲಿಯೇ ಶುದ್ಧ ಕೊಬ್ಬರಿ ಎಣ್ಣೆಯನ್ನು ತಯಾರಿಸಬಹುದು. ಮನೆಯಲ್ಲಿಯೇ ಪರಿಶುದ್ಧ ತೆಂಗಿನ ಎಣ್ಣೆಯನ್ನು ತಯಾರಿಸುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.

ಮನೆಯಲ್ಲಿಯೇ ಶುದ್ಧ ತೆಂಗಿನ ಎಣ್ಣೆಯನ್ನು ತಯಾರಿಸುವುದು ಹೇಗೆ?

ತೆಂಗಿನಕಾಯಿಗಳು ಸುಲಭವಾಗಿ ಲಭ್ಯವಿದ್ದು, ಸ್ವಲ್ಪ ಬಿಡುವು ಮಾಡಿಕೊಂಡು ಇದರಿಂದ ನೀವು ಶುದ್ಧ ಕೊಬ್ಬರಿ ಎಣ್ಣೆಯನ್ನು ಮನೆಯಲ್ಲಿಯೇ ತಯಾರಿಸಬಹುದು. ತೆಂಗಿನ ಎಣ್ಣೆ ತಯಾರಿಸುವ ಈ ಸುಲಭ ವಿಧಾನವನ್ನು ಭಾಗ್ಯಶ್ರೀ ಪಟವರ್ಧನ್‌ (Bhagyashri Patwardhan) ಎಂಬವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ತೆಂಗಿನ ಎಣ್ಣೆ ತಯಾರಿಸಲು ಸುಲಭವಾದ ತಯಾರಿ ಹೀಗಿರಲಿ:

ಒಣ ಕೊಬ್ಬರಿ ಅಥವಾ ತೆಂಗಿನಕಾಯಿ ಈ ಎರಡರಿಂದಲೂ ತೆಂಗಿನೆಣ್ಣೆಯನ್ನು ತಯಾರಿಸಬಹುದು. ಅದಕ್ಕಾಗಿ 3 ರಿಂದ 5 ತೆಂಗಿನಕಾಯಿಯನ್ನು ತೆಗೆದುಕೊಂಡು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ. ಇದರಿಂದ ಅವುಗಳನ್ನು ಪುಡಿ ಮಾಡಲು ಸುಲಭವಾಗುತ್ತದೆ. ಈಗ, ಈ ತುಂಡುಗಳನ್ನು ಸುಮಾರು 2 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ಇದು ತೆಂಗಿನಕಾಯಿಯನ್ನು ಸ್ವಲ್ಪ ಮೃದುಗೊಳಿಸುತ್ತದೆ ಮತ್ತು ಮಿಕ್ಸರ್‌ನಲ್ಲಿ ನುಣ್ಣಗೆ ಪುಡಿ ಮಾಡಲು ಅನುವು ಮಾಡಿಕೊಡುತ್ತದೆ.

ವಿಡಿಯೋ ಇಲ್ಲಿದೆ ನೋಡಿ:‌

ಮಿಕ್ಸಿಯಲ್ಲಿ ತೆಂಗಿನಕಾಯಿ ರುಬ್ಬುವ ಸರಿಯಾದ ವಿಧಾನ:

ತುಂಡರಿಸಿದ  ತೆಂಗಿನಕಾಯಿಯನ್ನು ತೆಗೆದುಕೊಂಡು ಸರಿಸುಮಾರು ಅದೇ ಪ್ರಮಾಣದ ಬೆಚ್ಚಗಿನ ನೀರನ್ನು ಸೇರಿಸಿ. ಈ ಮಿಶ್ರಣವನ್ನು ನುಣ್ಣಗೆ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ ಮತ್ತು ತುಂಬಾ ತೆಳುವಾದ ಪೇಸ್ಟ್/ಪ್ಯೂರಿ ತಯಾರಿಸಿ. ಈಗ ಒಂದು ಸ್ವಚ್ಛವಾದ ಹತ್ತಿ ಅಥವಾ ಮಸ್ಲಿನ್ ಬಟ್ಟೆಯನ್ನು ತೆಗೆದುಕೊಳ್ಳಿ. ಅದರಲ್ಲಿ ತುರಿದ ತೆಂಗಿನಕಾಯಿಯನ್ನು ಹಾಕಿ ಬಿಗಿಯಾಗಿ ಹಿಂಡಿ. ಇದರಿಂದ ದಪ್ಪ ತೆಂಗಿನ ಹಾಲು ಹೊರಬರುತ್ತದೆ. ತೆಂಗಿನಕಾಯಿ ಸಂಪೂರ್ಣವಾಗಿ ಮುಗಿಯುವವರೆಗೆ ಈ ಪ್ರಕ್ರಿಯೆಯನ್ನು ಪುನರಾವರ್ತಿಸಿ.

ರೆಡಿಯಾದ ತೆಂಗಿನ ಹಾಲನ್ನು ಮುಚ್ಚಿ ಸ್ವಲ್ಪ ಹೊತ್ತು ಕೋಣೆಯ ಉಷ್ಣಾಂಶದಲ್ಲಿಟ್ಟು ನಂತರ 12-24 ಗಂಟೆಗಳ ಕಾಲ ಫ್ರಿಡ್ಜ್‌ನಲ್ಲಿ ಇಟ್ಟುಬಿಡಿ. ಈ ರೀತಿ ಮಾಡುವುದರಿಂದ ಕೆನೆ ಪದರ ರೂಪುಗೊಳ್ಳುತ್ತದೆ.

ಇದನ್ನೂ ಓದಿ: ಯಾವ ಸಮಯದಲ್ಲಿ ಕಾಫಿ ಕುಡಿಯುವುದು ಉತ್ತಮ? ಅದರ ಪ್ರಯೋಜನಗಳೇನು?

ತೆಂಗಿನ ಹಾಲಿನಿಂದ ಎಣ್ಣೆ ತೆಗೆಯುವ ಪ್ರಕ್ರಿಯೆ: 

ತೆಂಗಿನ ಹಾಲಿನಿಂದ ರೂಪುಗೊಂಡಂತಹ ತೆಂಗಿನ ಕೆನೆಯನ್ನು ಮೆಲ್ಲಗೆ ತೆಗೆದು ಇನ್ನೊಂದು ಪ್ಯಾನ್‌ಗೆ ಹಾಕಿ, ಅದನ್ನು ಮಧ್ಯಮ ಉರಿಯಲ್ಲಿ ನಿಧಾನವಾಗಿ ಬಿಸಿ ಮಾಡಿ, ನಿರಂತರವಾಗಿ ಬೆರೆಸಿ ಮತ್ತು ಈ ಸಮಯದಲ್ಲಿ ಎಣ್ಣೆ ಕೆನೆಯಿಂದ ಬೇರ್ಪಡಲು ಪ್ರಾರಂಭಿಸುತ್ತದೆ. ಎಣ್ಣೆ ಸಂಪೂರ್ಣವಾಗಿ ಬೇರ್ಪಟ್ಟಾಗ, ಸ್ಟೌವ್‌ ಆಫ್‌ ಮಾಡಿ.

ತಯಾರಿಸಿದ ಎಣ್ಣೆ ತಣ್ಣಗಾದ ಬಳಿಕ ಅದನ್ನು ಫಿಲ್ಟರ್‌ ಮಾಡಿ ಒಂದು ಗಾಜಿನ ಜಾರ್‌ನಲ್ಲಿ ಸಂಗ್ರಹಿಸಿ. ಈ ಶುದ್ಧ ತೆಂಗಿನ ಎಣ್ಣೆಯನ್ನು ನೀವು6-12 ತಿಂಗಳುಗಳವರೆಗೆ ಬಳಸಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:25 pm, Thu, 25 June 26

Follow Us