ಇನ್ನೇನು ಜನ್ಮಾಷ್ಟಮಿ ಹಬ್ಬ ಬಂದೇ ಬಿಟ್ಟಿತ್ತು. ಭಾದ್ರಪದ ಮಾಸದ ಅಷ್ಟಮಿಯ ದಿನದಂದು ಜನ್ಮಾಷ್ಟಮಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ದಿನ ಭಕ್ತರು ತಮ್ಮ ಮನೆಯಲ್ಲಿ ಕೃಷ್ಣನಿಗೆ ಪ್ರಿಯವಾದ ಖಾದ್ಯಗಳನ್ನು ತಯಾರಿಸಿ ಅದನ್ನು ನೈವೇದ್ಯ ರೂಪದಲ್ಲಿ ಅರ್ಪಿಸುತ್ತಾರೆ. ಶ್ರೀ ಕೃಷ್ಣನಿಗೆ ಪ್ರಿಯವಾದ ವಸ್ತುಗಳು ಎಂದಾಕ್ಷಣ ನೆನಪಿಗೆ ಬರುವಂತಹದ್ದೇ ಬೆಣ್ಣೆ. ಆದರೆ ಅನೇಕರಿಗೆ ಬಿಳಿ ಬೆಣ್ಣೆಯನ್ನು ಹೇಗೆ ತಯಾರಿಸಬೇಕೆಂದು ತಿಳಿದಿಲ್ಲ. ಅದಕ್ಕಾಗಿಯೇ ಈ ದಿನ ಬೆಣ್ಣೆಯನ್ನು ಮಾರುಕಟ್ಟೆಯಿಂದ ಖರೀದಿ ಮಾಡುತ್ತಾರೆ. ಆದರೆ ಬೆಣ್ಣೆಯನ್ನು ಸುಲಭವಾಗಿ ತಯಾರಿಸಬಹುದು. ನೀವು ಕೂಡಾ ಮನೆಯಲ್ಲಿ ಶುದ್ಧ ಬೆಣ್ಣೆ ತಯಾರಿಸಿ ದೇವರಿಗೆ ನೈವೇದ್ಯ ರೂಪದಲ್ಲಿ ಅರ್ಪಿಸಲು ಬಯಸುತ್ತೀರಾ, ಇಲ್ಲಿದೆ ಬೆಣ್ಣೆ ತೆಗೆಯುವ ಸುಲಭ ವಿಧಾನ.
ನೀವು ಐದಾರು ದಿನಗಳ ಮುಂಚೆಯೇ ಪ್ರತಿದಿನ ಹಾಲು ಕುದಿಸಿ ನಂತರ ಅದರ ಮೇಲೆ ಹೊಂದಿಕೊಳ್ಳುವ ಕೆನೆಗಳನ್ನು ಒಂದು ಪಾತ್ರೆಯಲ್ಲಿ ಸಂಗ್ರಹಿಸಿಟ್ಟು ಅದನ್ನು ರೆಫ್ರಿಜರೇಟರ್ನಲ್ಲಿಡಿ. ನೀವು ಬೆಣ್ಣೆ ಮಾಡಲು ಬಯಸುವ ದಿನ ರೆಫ್ರಿಜರೇಟರ್ ನಲ್ಲಿ ಇರಿಸಲಾದ ಕೆನೆಯನ್ನು ಹೊರತೆಗೆದು, ಕೋಣೆಯ ಉಷ್ಣಾಂಶಕ್ಕೆ ಬರುವವರೆಗೆ ಅದನ್ನು ಹಾಗೇನೆ ಇಡಿ. ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಸಂಗ್ರಹಿಸಿಟ್ಟ ಹಾಲಿನ ಕೆನೆ ಮತ್ತು ಸ್ಪಲ್ಪ ನೀರನ್ನು ಸೇರಿಸಿ ಚೆನ್ನಾಗಿ ಬ್ಲೆಂಡ್ ಮಾಡಿ. (ನೀವು ಕಡುಗೋಲು ಬಳಸಿ ಕೈಯಲ್ಲಿಯೇ ಬೆಣ್ಣೆಯನ್ನು ಕಡೆಯಬಹುದು) ಈಗ ಮತ್ತೊಮ್ಮೆ ಸ್ವಲ್ಪ ನೀರು ಸೇರಿಸಿ ಇನ್ನೊಂದು ಬಾರಿ ಬ್ಲೆಂಡ್ ಮಾಡಿ. ಆಗ ಬೆಣ್ಣೆಯು ಮೇಲ್ಭಾಗದಲ್ಲಿ ಹೊಂದಿಕೊಳ್ಳಲು ಪ್ರಾರಂಭವಾಗುತ್ತದೆ. ಈಗ ಸಂಪೂರ್ಣವಾಗಿ ಬೆಣ್ಣೆ ತಯಾರಾಗಿದೆ. ಹೀಗೆ ತಯಾರಾದ ಬೆಣ್ಣೆಯನ್ನು ಪುಟಾಣಿ ಮಣ್ಣಿನ ಮಡಕೆಯಲ್ಲಿಟ್ಟು ಗೋಕುಲಾಷ್ಟಮಿಯ ದಿನ ಶ್ರೀ ಕೃಷ್ಣನಿಗೆ ನೈವೇದ್ಯ ರೂಪದಲ್ಲಿ ಅರ್ಪಿಸಿ.
ಇದನ್ನೂ ಓದಿ: ಶ್ರೀ ಕೃಷ್ಣ ಜನ್ಮಾಷ್ಟಮಿಯ ಪೂಜಾ ವಿಧಿ ವಿಧಾನಗಳ ಬಗ್ಗೆ ತಿಳಿದಿದೆಯಾ? ಸಂಪೂರ್ಣ ಮಾಹಿತಿ ಇಲ್ಲಿದೆ
ಕೃಷ್ಣನಿಗೆ ಪ್ರಿಯವಾದ ಬಿಳಿ ಬೆಣ್ಣೆಯು ಹಲವಾರು ಆರೋಗ್ಯ ಪ್ರಯೋಜನಗಳನ್ನು ಕೂಡಾ ಹೊಂದಿದೆ. ಈ ಬೆಣ್ಣೆಯು ಮಾರುಕಟ್ಟೆಯಲ್ಲಿ ಲಭ್ಯವಿರುವ ಹಳದಿ ಬೆಣ್ಣೆಗಿಂತ ಆರೋಗ್ಯಕರವಾಗಿದೆ. ಹಳದಿ ಬೆಣ್ಣೆಯಲ್ಲಿ ಕೊಬ್ಬಿನಾಂಶ ಹೆಚ್ಚಿರುತ್ತದೆ. ಬಿಳಿ ಬೆಣ್ಣೆಯನ್ನು ತಾಜಾ ಹಾಲಿ ಕೆನೆ ಮಂಥನದಿಂದ ತಯಾರಿಸಲಾಗುತ್ತದೆ ಮತ್ತು ಇದು ನೈಸರ್ಗಿಕ ಹಾಗೂ ಸಂಸ್ಕರಿಸದ ಕಾರಣ ಹಳದಿ ಬೆಣ್ಣೆಗಿಂತ ಹೆಚ್ಚು ಪೌಷ್ಟಿಕವಾಗಿದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: