
ಇತ್ತೀಚಿನ ದಿನಗಳಲ್ಲಿ ವಿವಾಹೇತರ ಸಂಬಂಧಗಳ ಪ್ರಕರಣಗಳು ತೀರಾ ಹೆಚ್ಚಿವೆ. ವಿವಾಹಿತ ಪುರುಷ ಬೇರೊಬ್ಬ ಮಹಿಳೆಯೊಂದಿಗೆ ಸಂಬಂಧ ಹೊಂದಿದ, ಗಂಡ ಮಕ್ಕಳಿದ್ದರೂ ಮಹಿಳೆ ಪರಪುರುಷನೊಂದಿಗೆ ಪ್ರೀತಿಯಲ್ಲಿ ಬಿದ್ದಂತಹ ಸುದ್ದಿಗಳು ಕೇಳಿ ಬರುತ್ತಲೇ ಇವೆ. ಇನ್ನೂ ಒಂದು ಹೆಜ್ಜೆ ಮುಂದೆ ಎಂಬಂತೆ ಕೆಲವು ಮಹಿಳೆಯರು ಗಂಡ ಮಕ್ಕಳನ್ನು ಬಿಟ್ಟು ಮನೆಯಲ್ಲಿದ್ದ ಹಣ, ಆಭರಣಗಳನ್ನು ದೋಚಿ ಪ್ರಿಯಕರನೊಂದಿಗೆ ಎಸ್ಕೇಪ್ ಆದಂತಹ, ಮನಸ್ತಾಪದ ಕಾರಣದಿಂದ ಮನೆ ಬಿಟ್ಟು ಹೋದಂತಹ ಸಾಕಷ್ಟು ಘಟನೆಗಳೂ ನಡೆದಿವೆ. ಹೀಗೆ ಹಣ, ಆಭರಣ ದೋಚಿ ಹೆಂಡತಿ ಮನೆ ಬಿಟ್ಟು ಹೋದರೆ ಗಂಡನಾದವನಿಗೆ (husband) ಆಕೆಯ ವಿರುದ್ಧ ಕಾನೂನು ಸಮರ ಸಾರುವ ಹಕ್ಕಿದ್ಯಾ, ಕಾನೂನಿನ ಪ್ರಕಾರ ಆತ ಮಾಡಬೇಕಾದದ್ದೇನು? ಈ ಕುರಿತ ಸಂಕ್ಷಿಪ್ತ ಮಾಹಿತಿಯನ್ನು ತಿಳಿಯಿರಿ.
ಭಾರತೀಯ ಕಾನೂನಿನ ಪ್ರಕಾರ, ಮದುವೆಯ ಸಮಯದಲ್ಲಿ ಹೆಂಡತಿ ಉಡುಗೊರೆಯಾಗಿ ಪಡೆಯುವ ಆಭರಣಗಳು, ನಗದು ಸೇರಿದಂತೆ ಯಾವುದೇ ರೀತಿಯ ಉಡುಗೊರೆ ಸಹ ಅದು ಆಕೆ ಸ್ವಂತದ್ದಾಗಿರುತ್ತದೆ. ಅದರ ಮೇಲೆ ಪತಿ ಅಥವಾ ಅತ್ತೆ-ಮಾವಂದಿರಿಗೆ ಯಾವುದೇ ಮಾಲೀಕತ್ವದ ಹಕ್ಕಿಲ್ಲ. ಹಾಗಾಗಿ ಆಕೆಯ ಸ್ವಂತ ವಸ್ತುಗಳನ್ನು ಕೊಂಡು ಹೋದರೆ ಗಂಡ ಪ್ರಶ್ನೆ ಮಾಡುವಂತಿಲ್ಲ. ಆದರೆ ಒಂದು ವೇಳೆ ಹೆಂಡತಿ ಮನೆಯ ಇತರ ಸದಸ್ಯರಿಗೆ ಸಂಬಂಧಿಸಿದ ಹಣ, ಆಭರಣಗಳನ್ನು ದೋಚಿ ಮನೆ ಬಿಟ್ಟು ಹೋದರೆ ಇದರ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬಹುದು.
ಪೊಲೀಸ್ ದೂರು: ಹೆಂಡತಿ ಗಂಡನ ಅಥವಾ ಆತನ ಕುಟುಂಬದ ಆಸ್ತಿ, ನಗದು, ಆಭರಣ ಅಥವಾ ದಾಖಲೆಗಳನ್ನು ತೆಗೆದುಕೊಂಡು ಹೋಗಿ ಅವುಗಳನ್ನು ಹಿಂತಿರುಗಿಸದಿದ್ದರೆ, ಗಂಡನು ಐಪಿಸಿ ಸೆಕ್ಷನ್ 406 – ಕ್ರಿಮಿನಲ್ ವಿಶ್ವಾಸ ದ್ರೋಹ ಪ್ರಕರಣದಡಿಯಲ್ಲಿ ದೂರು ದಾಖಲಿಸಬಹುದು.
ಸಿವಿಲ್ ಮೊಕದ್ದಮೆ: ತನ್ನ ಹೆಂಡತಿ ದೋಚಿರುವ ಹಣ, ಆಭರಣಗಳನ್ನು ವಸೂಲಿ ಮಾಡಲು ಗಂಡ ಸಿವಿಲ್ ನ್ಯಾಯಾಲಯದಲ್ಲಿ ಸಿವಿಲ್ ಮೊಕದ್ದಮೆ ಹೂಡಬಹುದು.
ಮಧ್ಯಸ್ಥಿಕೆ/ಸಮಾಲೋಚನೆ: ಈ ಪ್ರಕರಣ ಉದ್ವಿಗ್ನತೆಯ ಮಟ್ಟ ತಲುಪದಿದ್ದರೆ, ಪೊಲೀಸ್ ಅಥವಾ ಕುಟುಂಬ ನ್ಯಾಯಾಲಯದ ಮೂಲಕ ವಿಷಯವನ್ನು ಪರಿಹರಿಸಲು ಒಂದು ಮಾರ್ಗವನ್ನು ಕಂಡುಕೊಳ್ಳಬಹುದು.
ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ: ಡಿವೋರ್ಸ್ ಆದರೆ ಪತಿಯು ತನ್ನ ಹೆಂಡತಿ ತೆಗೆದುಕೊಂಡು ಹೋದಂತ ಹಣ, ಆಭರಣಗಳನ್ನು ಹಿಂತಿರುಗಿಸಲು ಕೌಟುಂಬಿಕ ನ್ಯಾಯಾಲಯದಲ್ಲಿ ದಾಂಪತ್ಯ ಹಕ್ಕುಗಳ ಮರುಪಾವತಿ (ವಿಭಾಗ 9, ಹಿಂದೂ ವಿವಾಹ ಕಾಯ್ದೆ) ಅಡಿಯಲ್ಲಿ ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ: ಸಾರ್ವಜನಿಕ ಸ್ಥಳಗಳಲ್ಲಿ ರೀಲ್ಸ್, ವಿಡಿಯೋ ಮಾಡಿ ಹುಚ್ಚಾಟ ಮೆರೆಯುವವರಿಗೆ ಕಾನೂನಿನ ಅಡಿಯಲ್ಲಿ ಶಿಕ್ಷೆ ಇದ್ಯಾ?
ನಿಮ್ಮ ಹೆಂಡತಿಯ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಬೇಡಿ. ನಿಮ್ಮ ಪ್ರತಿ ಹಣ, ಆಭರಣಗಳ ವಹಿವಾಟಿನ ಪುರಾವೆಗಳನ್ನು (ಬಿಲ್‌ಗಳು, ಬ್ಯಾಂಕ್ ವಹಿವಾಟುಗಳು, ಸಂದೇಶಗಳು, ವೀಡಿಯೊಗಳು, ಇತ್ಯಾದಿ) ಇಟ್ಟುಕೊಳ್ಳಿ. ಹೀಗೆ ಹೆಂಡತಿ ಆಕೆಯ ಸ್ವಂತ ಆಭರಣಗಳನ್ನು ಕೊಂಡು ಹೋದರೆ ಪ್ರಶ್ನೆ ಮಾಡುವಂತಿಲ್ಲ. ಆದರೆ ಆಕೆ ಮನೆ ಬಿಟ್ಟು ಹೋಗುವಾಗ ಗಂಡನ ಮನೆಗೆ ಸೇರಿದ ಹಣ ಆಸ್ತಿಯನ್ನು ದೋಚಿದ್ದರೆ, ಗಂಡ ಕಾನೂನು ಕ್ರಮ ಕೈಗೊಳ್ಳಬಹುದು. ಯಾವುದೇ ದೂರು ದಾಖಲಿಸುವ ಮೊದಲು ವಕೀಲರ ಮಾರ್ಗದರ್ಶನ ಪಡೆಯುವುದು ಮುಖ್ಯ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ