ಆಧ್ಯಾತ್ಮಿಕ ಸ್ಥಳಗಳಿಗೆ ಪ್ರವಾಸ ಹೋಗುವವರಲ್ಲಿ ಜೆನ್ ಝೀ ಯುವಕರೇ ಹೆಚ್ಚು; ವರದಿ
ಹಿಂದೆಲ್ಲಾ ಹೆಚ್ಚಾಗಿ ಹಿರಿಯರೇ ಆಧ್ಯಾತ್ಮಿಕ ತಾಣಗಳಿಗೆ ಭೇಟಿ ನೀಡುತ್ತಿದ್ದರು, ತೀರ್ಥಯಾತ್ರೆಗಳನ್ನು ಕೈಗೊಳ್ಳುತ್ತಿದ್ದರು. ಆದರೆ ಇಂದು ಯುವ ಜನರು ಹೆಚ್ಚು ಹೆಚ್ಚು ಆಧ್ಯಾತ್ಮಿಕ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ. ವರದಿಯೊಂದರ ಪ್ರಕಾರ ಇತ್ತೀಚಿಗೆ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವವರಲ್ಲಿ ಶೇಕಡಾ 100 ರಲ್ಲಿ 53% ಕ್ಕಿಂತ ಹೆಚ್ಚು ಜೆನ್ ಝೀ ಯುವಕರು. ಇತ್ತೀಚಿಗೆ ಮೋಜು ಮಸ್ತಿಯ ತಾಣವನ್ನು ಬಿಟ್ಟು ತಿರುಪತಿ, ಋಷಿಕೇಶ ಮತ್ತು ವಾರಣಾಸಿಯಂತಹ ಯಾತ್ರಾ ಸ್ಥಳಗಳಿಗೆ ಭೇಟಿ ನೀಡಲು ಯುವಜನರು ಹೆಚ್ಚು ಆಸಕ್ತಿಯನ್ನು ತೋರುತ್ತಿದ್ದಾರೆ.

ಪ್ರವಾಸ ಎಂದ ತಕ್ಷಣ ನೆನಪಿಗೆ ಬರೋದೇ ಗೋವಾ, ಯುರೋಪ್ ಇತ್ಯಾದಿ ಮೋಜು ಮಸ್ತಿಯ ತಾಣ. ಯುವಕರೆಲ್ಲಾ ಇಂತಹ ತಾಣಗಳನ್ನೇ ಇಷ್ಟಪಡುತ್ತಾರೆ, ಆಧ್ಯಾತ್ಮಿಕ ತಾಣಗಳಿಗೆ ಪ್ರವಾಸ (spiritual travel) ಕೈಗೊಳ್ಳೋದು ಹಿರಿ ಜೀವಗಳು ಮಾತ್ರ ಎಂದು ಹಲವರು ಅಂದುಕೊಳ್ಳುತ್ತಾರೆ. ಆದರೆ ಈಗಂತೂ ಹಿರಿಯರಿಗಿಂತ ಯುವಕರೇ ಅತಿ ಹೆಚ್ಚಾಗಿ ಆಧ್ಯಾತ್ಮಿಕ ತಾಣಗಳಿಗೆ ಭೇಟಿ ನೀಡುತ್ತಿದ್ದಾರಂತೆ. ಕಡಲ ತೀರ, ಇತ್ಯಾದಿ ಮೋಜು ಮಸ್ತಿಯ ತಾಣಗಳಿಗೆ ಹೋಗುವ ಬದಲಾಗಿ ಶಾಂತಿ, ನೆಮ್ಮದಿ ಮತ್ತು ಸಕಾರಾತ್ಮಕ ಶಕ್ತಿಯನ್ನು ಕಂಡುಕೊಳ್ಳಲು ಭಾರತದ ಜೆನ್ ಝೀ ಯುವಕರು ಇತ್ತೀಚಿಗೆ ತಿರುಪತಿ, ಋಷಿಕೇಶ ಮತ್ತು ವಾರಣಾಸಿಯಂತಹ ಧಾರ್ಮಿಕ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ. 2026 ರ ಆರ್ಥಿಕ ವರ್ಷದಲ್ಲಿ ಆಧ್ಯಾತ್ಮಿಕ ತಾಣಗಳಿಗೆ ಪ್ರಯಾಣಿಸುವ ಪ್ರಯಾಣಿಕರಲ್ಲಿ ಜನರೇಷನ್ Z ಈಗ 53% ಕ್ಕಿಂತ ಹೆಚ್ಚು ಪಾಲನ್ನು ಹೊಂದಿದೆ ಎಂದು ರೆಡ್‌ಬಸ್ ವರದಿ ಮಾಡಿದೆ.
ಧಾರ್ಮಿಕ ತಾಣಗಳಿಗೆ ಹೆಚ್ಚು ಭೇಟಿ ನೀಡುತ್ತಿದ್ದಾರೆ ಭಾರತದ ಜೆನ್ ಝೀ ಯುವಕರು:
ವಿಶ್ವದ ಅತಿದೊಡ್ಡ ಆನ್‌ಲೈನ್ ಬಸ್ ಟಿಕೆಟ್ ವೇದಿಕೆಯಾದ ರೆಡ್‌ಬಸ್‌ನ ದತ್ತಾಂಶದ ಪ್ರಕಾರ, ಜೆನ್ ಝೀ ಯುವಕರು ಈಗ ಭಾರತದ ಆಧ್ಯಾತ್ಮಿಕ ಪ್ರವಾಸೋದ್ಯಮದಲ್ಲಿ ಮುಂಚೂಣಿಯಲ್ಲಿದ್ದಾರೆ. 2026 ರ ಆರ್ಥಿಕ ವರ್ಷದಲ್ಲಿ, ಆಧ್ಯಾತ್ಮಿಕ ತಾಣಗಳಿಗೆ ಪ್ರಯಾಣಿಸುವ ಪ್ರಯಾಣಿಕರಲ್ಲಿ ಯುವ ಪ್ರಯಾಣಿಕರು, ವಿಶೇಷವಾಗಿ ಜೆನ್ ಝೀ ಗಳು 53% ಕ್ಕಿಂತ ಹೆಚ್ಚು ಪಾಲನ್ನು ಹೊಂದ್ದಾರೆ. ಇದರಲ್ಲಿ ಸುಮಾರು ಶೇ. 69 ರಷ್ಟು ಯುವಕರಾದರೆ, ಶೇ. 31 ರಷ್ಟು ಯುವತಿಯರು. 2025 ಕ್ಕೆ ಹೋಲಿಸಿದರೆ ಈ ಸಂಖ್ಯೆ ಗಮನಾರ್ಹ ಹೆಚ್ಚಳವಾಗಿದೆ. ಈ ಬದಲಾವಣೆಯು ಯುವಕರಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಜಾಗೃತಿಯ ಸಂಕೇತವಾಗಿದೆ. ಕಡಲತೀರಗಳು, ಪಾರ್ಟಿ, ಮೋಜು ಮಸ್ತಿ ಮತ್ತು ನೈಟ್ ಲೈಫ್ ತಾಣಗಳ ಬದಲಾಗಿ ದೇವಾಲಯಗಳು, ಧಾರ್ಮಿಕ ಸ್ಥಳಗಳು, ಯೋಗ ಕೇಂದ್ರಗಳು ಮತ್ತು ಧ್ಯಾನ ಕೇಂದ್ರಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ತಿರುಪತಿ, ವಾರಣಾಸಿ, ಉಜ್ಜಯಿನಿ, ಋಷಿಕೇಶ ಮತ್ತು ನಾಂದೇಡ್‌ನಂತಹ ಸ್ಥಳಗಳು ನಂಬಿಕೆ, ಸಂಸ್ಕೃತಿ ಮತ್ತು ಅರ್ಥಪೂರ್ಣ ಅನುಭವಗಳನ್ನು ಬಯಸುವ ಜೆನ್ ಝೀಗಳನ್ನು ಹೆಚ್ಚು ಆಕರ್ಷಿಸುತ್ತಿವೆ. ಇವರು ಈ ಪ್ರವಾಸಗಳನ್ನು ಕೇವಲ ದೃಶ್ಯವೀಕ್ಷಣೆಗೆ ಮಾತ್ರವಲ್ಲ, ಸ್ಥಳೀಯ ಸಂಸ್ಕೃತಿಯನ್ನು ಅನುಭವಿಸಲು, ಆಧ್ಯಾತ್ಮಿಕ ಶಾಂತಿಯನ್ನು ಪಡೆಯಲು ಮತ್ತು ತಮ್ಮ ಜೀವನಕ್ಕೆ ಅರ್ಥಪೂರ್ಣ ಅನುಭವಗಳನ್ನು ಸೇರಿಸಲು ಆಯ್ಕೆ ಮಾಡುತ್ತಿದ್ದಾರೆ.
ಜೆನ್ ಝೀ ಯುವಕರ ಮೊದಲ ಆಯ್ಕೆ ತಿರುಪತಿ:
ರೆಡ್ ಬಸ್ ವರದಿಯ ಪ್ರಕಾರ ತಿರುಪತಿ ಅತ್ಯಂತ ಜನಪ್ರಿಯ ಆಧ್ಯಾತ್ಮಿಕ ತಾಣವಾಗಿ ಹೊರಹೊಮ್ಮಿದೆ. ವಿಶೇಷವಾಗಿ ಬೆಂಗಳೂರು-ತಿರುಪತಿ, ಹೈದರಾಬಾದ್–ತಿರುಪತಿ ಆಧ್ಯಾತ್ಮಿಕ ಮಾರ್ಗಗಳಲ್ಲಿ ಜನರೇಷನ್ ಝಡ್ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಲಕ್ಷಾಂತರ ಯುವಕರು ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಲು ಈ ಮಾರ್ಗವನ್ನು ಆರಿಸಿಕೊಂಡಿದ್ದಾರೆ. ಇದು ದಕ್ಷಿಣ ಭಾರತದ ಯುವಕರಲ್ಲಿ ತಿರುಪತಿಯನ್ನು ಅತ್ಯಂತ ಆದ್ಯತೆಯ ಯಾತ್ರಾ ಸ್ಥಳವನ್ನಾಗಿ ಮಾಡಿದೆ.
ಇದನ್ನೂ ಓದಿ: ಮೊಬೈಲ್ ಇಂಟರ್ನೆಟ್ ವ್ಯವಸ್ಥೆಯೇ ಇಲ್ಲದ ಜಗತ್ತಿನ ಏಕೈಕ ದೇಶವಿದು
ಯುವ ಜನತೆಯನ್ನು ಆಕರ್ಷಿಸುವ ಇತರ ಆಧ್ಯಾತ್ಮಿಕ ತಾಣಗಳು:
ತಿರುಪತಿಯ ನಂತರ, ಋಷಿಕೇಶ, ತಂಜಾವೂರು, ವಾರಣಾಸಿ (ಕಾಶಿ), ಉಜ್ಜಯಿನಿ ಮತ್ತು ನಾಂದೇಡ್‌ನಂತಹ ಧಾರ್ಮಿಕ ಸ್ಥಳಗಳಿಗೆ ಈಗಿನ ಯುವಕರು ಹೆಚ್ಚಾಗಿ ಭೇಟಿ ನೀಡುತ್ತಿದ್ದಾರೆ. ಯುವ ಯಾತ್ರಿಕರಲ್ಲಿ ಜನಪ್ರಿಯತೆಯನ್ನು ಗಳಿಸುತ್ತಿವೆ. ಯೋಗ ಮತ್ತು ಧ್ಯಾನಕ್ಕೆ ವಿಶ್ವಾದ್ಯಂತ ಪ್ರಸಿದ್ಧವಾಗಿರುವ ಋಷಿಕೇಶಕ್ಕೆ ಹೋಗುವವರಲ್ಲಿ ಶೇಕಡಾ 59 ರಷ್ಟು ಪ್ರವಾಸಿಗರು Gen Z ಯುವಕರಾಗಿದ್ದಾರೆ. ಡಿಸೆಂಬರ್ 2025 ರ ಕೊನೆಯ ವಾರದಿಂದ ಜನವರಿ 2026 ರ ಆರಂಭದವರೆಗೆ 12 ಲಕ್ಷಕ್ಕೂ ಹೆಚ್ಚು ಭಕ್ತರು ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ವಾರಣಾಸಿ, ಪುರಿ, ಅಮೃತಸರ ಮತ್ತು ಹರಿದ್ವಾರದಂತಹ ಸಾಂಪ್ರದಾಯಿಕ ಆಧ್ಯಾತ್ಮಿಕ ಕೇಂದ್ರಗಳು ಸಹ ಯುವ ಪ್ರವಾಸಿಗರಿಂದ ತುಂಬಿವೆ. 2026 ರ ಹೊಸ ವರ್ಷದ ದಿನದಂದು ಐದು ಲಕ್ಷಕ್ಕೂ ಹೆಚ್ಚು ಭಕ್ತರು ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯಕ್ಕೆ ಭೇಟಿ ನೀಡಿದ್ದರು. ಮತ್ತೊಂದೆಡೆ, ಅಯೋಧ್ಯೆಯಲ್ಲಿ ಸಂದರ್ಶಕರ ಸಂಖ್ಯೆ ತೀವ್ರವಾಗಿ ಹೆಚ್ಚಾಗಿದೆ. ಪುರಿಯ ಜಗನ್ನಾಥ ಧಾಮದಲ್ಲಿಯೂ ಯಾತ್ರಾರ್ಥಿಗಳ ದಟ್ಟಣೆ ದಾಖಲೆಯ ಮಟ್ಟವನ್ನು ತಲುಪಿದೆ.
ಆಧ್ಯಾತ್ಮಿಕ ಪ್ರವಾಸೋದ್ಯಮಕ್ಕೆ ದೊರೆಯುತ್ತಿದೆ ಉಜ್ವಲ ಭವಿಷ್ಯ:
ಭಾರತದ ಆಧ್ಯಾತ್ಮಿಕ ಪ್ರವಾಸೋದ್ಯಮ ಕ್ಷೇತ್ರವು 2033 ರ ವೇಳೆಗೆ $4.6 ಶತಕೋಟಿ ಮಾರುಕಟ್ಟೆಗೆ ಬೆಳೆಯುತ್ತದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಭಾರತದ ಯುವಕರಲ್ಲಿ ಆಧ್ಯಾತ್ಮಿಕ ಪ್ರಯಾಣದ ಬಗ್ಗೆ ಹೆಚ್ಚುತ್ತಿರುವ ಆಸಕ್ತಿ ಹೊಸ ಸಾಂಸ್ಕೃತಿಕ ಪುನರುಜ್ಜೀವನದ ಸಂಕೇತವಾಗಿದೆ. ಯುವಕರು ಕೇವಲ ಮನರಂಜನೆ, ಮೋಜು ಮಸ್ತಿ ಮಾತ್ರವಲ್ಲ ನಂಬಿಕೆ, ಸಂಪ್ರದಾಯ, ಆತ್ಮಾವಲೋಕನ ಮತ್ತು ಅರ್ಥಪೂರ್ಣ ಅನುಭವಗಳನ್ನು ಪಡೆಯಲು ಆಸಕ್ತಿಯನ್ನು ತೋರುತ್ತಿದ್ದಾರೆ. ಈ ಪ್ರವೃತ್ತಿ ಮುಂಬರುವ ವರ್ಷಗಳಲ್ಲಿ ಭಾರತದ ಆಧ್ಯಾತ್ಮಿಕ ಪ್ರವಾಸೋದ್ಯಮ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸುವ ಸಾಧ್ಯತೆಯಿದೆ. ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು, ಸಾಮಾಜಿಕ ಮಾಧ್ಯಮ ಮತ್ತು ಆನ್‌ಲೈನ್ ಬುಕಿಂಗ್ ಸೌಲಭ್ಯಗಳು ಈ ಬದಲಾವಣೆಯನ್ನು ಮತ್ತಷ್ಟು ವೇಗಗೊಳಿಸುತ್ತಿವೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




