ಬಾಳೆಹಣ್ಣಿನ ಸಿಪ್ಪೆಯನ್ನು ಎಸೆಯುವ ಬದಲು ಈ ರೀತಿ ಉಪಯೋಗಿಸಿದರೆ ಚೆನ್ನ
ಬಾಳೆಹಣ್ಣು ಎಂದ್ರೆ ಬಹುತೇಕ ಎಲ್ಲರಿಗೂ ಇಷ್ಟ. ಅದರಲ್ಲೂ ಈ ಹಣ್ಣು ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದು, ಈ ಕಾರಣದಿಂದ ಹಲವುರು ಪ್ರತಿನಿತ್ಯ ಬಾಳೆಹಣ್ಣನ್ನು ತಿನ್ನುತ್ತಾರೆ. ಆದರೆ ಅದರ ಸಿಪ್ಪೆಯನ್ನು ಮಾತ್ರ ಕಸದ ಬುಟ್ಟಿಗೆ ಎಸೆದು ಬಿಡುತ್ತಾರೆ. ನೀವು ಸಹ ಇದೇ ತಪ್ಪನ್ನು ಮಾಡುತ್ತಿದ್ದೀರಾ? ನಿಮ್ಗೊತ್ತಾ ಬಾಳೆ ಹಣ್ಣಿನ ಸಿಪ್ಪೆಗಳಿಂದಲೂ ಹಲವು ಉಪಯೋಗಗಳಿದ್ದು, ಇವುಗಳ ಬಹುಪಯೋಗಳ ಬಗ್ಗೆ ಕೇಳಿದ್ರೆ ನೀವೆಂದು ಸಿಪ್ಪೆಯನ್ನು ಎಸೆಯುವ ತಪ್ಪನ್ನು ಮಾಡುವುದಿಲ್ಲ ನೋಡಿ.

ಎಲ್ಲಾ ಸೀಸನ್‌ಗಳಲ್ಲೂ ಲಭ್ಯವಿರುವ ಬಾಳೆಹಣ್ಣನ್ನು ಮಕ್ಕಳಿಂದ ವೃದ್ಧರವರೆಗೂ ಬಹುತೇಕ ಮಂದಿ ಇಷ್ಟಪಡುತ್ತಾರೆ. ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಎಂಬ ಕಾರಣಕ್ಕೆ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಈ ಹಣ್ಣನ್ನು ಹೆಚ್ಚಿನವರು ಪ್ರತಿದಿನ ಸೇವನೆ ಮಾಡುತ್ತಾರೆ. ಆದರೆ ಇದರ ಸಿಪ್ಪೆಯನ್ನು(banana peels) ಮಾತ್ರ ಕಸದ ಬುಟ್ಟಿಗೆ ಎಸೆಯುವಂತಹ ತಪ್ಪನ್ನು ಮಾಡುತ್ತಾರೆ. ನೀವು ಸಹ ಇದೇ ತಪ್ಪನ್ನು ಮಾಡುತ್ತಿದ್ದೀರಾ? ಇಲ್ಕೇಳಿ ಬಾಳೆಹಣ್ಣು ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿಯೋ, ಈ ಹಣ್ಣಿನ ಸಿಪ್ಪೆಯೂ ಬಹುಪಯೋಗಿ, ಈ ಉಪಯೋಗಗಳ ಬಗ್ಗೆ ಕೇಳಿದ್ರೆ ಖಂಡಿತವಾಗಿಯೂ ನೀವು ಬಾಳೆಹಣ್ಣಿನ ಸಿಪ್ಪೆಯನ್ನು ಎಸೆಯುವ ತಪ್ಪನ್ನು ಮಾಡುವುದಿಲ್ಲ. ಹಾಗಿದ್ರೆ ಬಾಳೆಹಣ್ಣಿನ ಬಹುಪಯೋಗಗಳ ಬಗ್ಗೆ ತಿಳಿಯೋಣ ಬನ್ನಿ.
ಬಾಳೆಹಣ್ಣಿನ ಸಿಪ್ಪೆಯ ಉಪಯೋಗಗಳು:
ಚರ್ಮಕ್ಕೆ ಪ್ರಯೋಜನಕಾರಿ: ನೀವು ಬಾಳೆಹಣ್ಣಿನ ಸಿಪ್ಪೆಯನ್ನು ಎಸೆಯುವ ಬದಲು ನಿಮ್ಮ ಚರ್ಮದ ಆರೈಕೆಗಾಗಿ ಉಪಯೋಗಿಸಿಕೊಳ್ಳಬಹುದು. ಇದರಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಖನಿಜಗಳಿದ್ದು, ಇವು ಚರ್ಮವನ್ನು ಪೋಷಿಸಲು ಸಹಕಾರಿ. ನೀವು ಮೊಡವೆ, ಸುಕ್ಕುಗಳು ಮತ್ತು ಚರ್ಮದ ಕಿರಿಕಿರಿಯನ್ನು ಕಡಿಮೆ ಮಾಡಲು ಬಯಸಿದರೆ ತ್ವಚೆಗೆ ಬಾಳೆಹಣ್ಣಿನ ಸಿಪ್ಪೆಯಿಂದ ಮಸಾಜ್ ಮಾಡಬಹುದು. ಅಲ್ಲದೆ ಇದು ನಿಮ್ಮ ಚರ್ಮವನ್ನು ಹ್ರೈಡ್ರೇಟ್ ಆಗಿಡುತ್ತದೆ ಮತ್ತು ಸನ್‌ಬರ್ನ್ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ. ಇದಲ್ಲದೆ ಸೊಳ್ಳೆ ಅಥವಾ ಕೀಟ ಕಚ್ಚಿದ ಚರ್ಮದ ಭಾಗಕ್ಕೆ ಬಾಳೆಹಣ್ಣಿನ ಸಿಪ್ಪೆಯ ಒಳಭಾಗವನ್ನು ಉಜ್ಜುವುದರಿಂದ ತುರಿಕೆ ಮತ್ತು ಊತ ಕಡಿಮೆಯಾಗುತ್ತದೆ.
ಕೂದಲಿನ ಆರೋಗ್ಯಕ್ಕೂ ಪ್ರಯೋಜನಕಾರಿ: ಬಾಳೆಹಣ್ಣಿನ ಸಿಪ್ಪೆಗಳು ಉತ್ಕರ್ಷಣ ನಿರೋಧಕಗಳನ್ನು ಹೊಂದಿದ್ದು, ಇದರ ಹೇರ್‌ಮಾಸ್ಕ್ ತಯಾರಿಸಿ ಕೂದಲಿಗೆ ಹಚ್ಚುವುದರಿಂದ ತಲೆಹೊಟ್ಟು ಸಮಸ್ಯೆಯಿಂದ ಮುಕ್ತಿ ಪಡೆಯಬಹುದು, ಅಲ್ಲದೆ ಇದು ಕೂದಲನ್ನು ಆರೋಗ್ಯಕ ಮತ್ತು ಬಲಶಾಲಿಯಾಗಿಸುತ್ತದೆ.
ಹಲ್ಲುಗಳ ಹೊಳಪು ಹೆಚ್ಚಿಸಲು ಸಹಕಾರಿ: ಇತ್ತೀಚಿನ ದಿನಗಳಲ್ಲಿ, ಅನೇಕ ಜನರು ಕಳಪೆ ಆಹಾರ ಪದ್ಧತಿ ಮತ್ತು ಬಾಯಿಯ ನೈರ್ಮಲ್ಯದ ಕೊರತೆಯ ಕಾರಣದಿಂದಾಗಿ ಹಳದಿ ಹಲ್ಲಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ಬಾಳೆಹಣ್ಣಿನ ಸಿಪ್ಪೆ ಸಹಕಾರಿ. ನೀವು ಸಿಪ್ಪೆಯ ಒಳಭಾಗವನ್ನು ಕೆಲವು ನಿಮಿಷಗಳ ಕಾಲ ಹಲ್ಲುಗಳ ಮೇಲೆ ಉಜ್ಜಿದರೆ, ಕ್ರಮೇಣ ಹಲ್ಲುಗಳ ಹೊಳಪು ಹೆಚ್ಚಾಗುತ್ತದೆ.
ಚರ್ಮದ ಶೂ, ಬೆಳ್ಳಿ ವಸ್ತುಗಳ ಸ್ವಚ್ಛತೆಗೆ ಸಹಕಾರಿ: ಚರ್ಮದ ಬೂಟುಗಳು, ಚೀಲಗಳು ಅಥವಾ ಬೆಳ್ಳಿ ವಸ್ತುಗಳನ್ನು ಪಾಲಿಶ್ ಮಾಡಲು ಬಾಳೆಹಣ್ಣಿನ ಸಿಪ್ಪೆಯನ್ನು ಬಳಕೆ ಮಾಡಬಹುದು. ಸಿಪ್ಪೆಯ ಒಳಭಾಗವನ್ನು ಉಜ್ಜಿ ಚೆಂದವಾಗಿ ಪಾಲಿಶ್ ಮಾಡಿ ನಂತರ ಸ್ವಚ್ಛವಾದ ಬಟ್ಟೆಯಿಂದ ಒರೆಸಿಕೊಳ್ಳಿ, ಹೀಗೆ ಮಾಡುವುದರಿಂದ ಬೆಳ್ಳೆ ವಸ್ತುಗಳು ಹೊಸದರಂತೆ ಕಾಣಿಸುತ್ತವೆ.
ಇದನ್ನೂ ಓದಿ: ಮನೆ ತುಂಬಾ ಜಿರಳೆಗಳ ಕಾಟವೇ? ಕಾಕ್ರೋಜ್‌ಗಳನ್ನು ಓಡಿಸಲು ಇಲ್ಲಿವೆ ಸಿಂಪಲ್ ಟ್ರಿಕ್ಸ್
ತಲೆನೋವಿನಿಂದ ಪರಿಹಾರ ನೀಡುತ್ತದೆ: ಬಾಳೆಹಣ್ಣಿನ ಸಿಪ್ಪೆಗಳು ತಲೆನೋವು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತವೆ. ಬಾಳೆಹಣ್ಣಿನ ಸಿಪ್ಪೆಗಳನ್ನು ಫ್ರಿಡ್ಜ್‌ನಲ್ಲಿಟ್ಟು, ಅವು ತಣ್ಣಗಾದ ಬಳಿಕ, ಒಂದು ಭಾಗವನ್ನು ಹಣೆಯ ಮೇಲೆ ಇನ್ನೊಂದನ್ನು ನಿಮ್ಮ ಕುತ್ತಿಗೆಯ ಮೇಲೆ ಇರಿಸಿ, ಹೀಗೆ ಮಾಡುವುದರಿಂದ ತಲೆ ನೋವು ಬೇಗನೆ ಕಡಿಮೆಯಾಗುತ್ತದೆ.
ನೈಸರ್ಗಿಕ ಗೊಬ್ಬರ: ಬಾಳೆಹಣ್ಣಿನ ಸಿಪ್ಪೆಗಳು ಪೊಟ್ಯಾಸಿಯಮ್, ರಂಜಕ ಮತ್ತು ಮೆಗ್ನೀಸಿಯಮ್‌ಗಳಲ್ಲಿ ಸಮೃದ್ಧವಾಗಿವೆ, ಇವು ಸಸ್ಯಗಳ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶಗಳಾಗಿವೆ. ಹಾಗಾಗಿ ಸಿಪ್ಪೆಯನ್ನು ಎಸೆಯುವ ಬದಲು ಗೊಬ್ಬರದ ರೀತಿಯಲ್ಲಿ ಬಳಸಬಹುದು.
ಆರೋಗ್ಯಕರ ಚಹಾ: ಒಣಗಿದ ಬಾಳೆಹಣ್ಣಿನ ಸಿಪ್ಪೆಗಳಿಂದ ತಯಾರಿಸಿದ ಚಹಾವು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಇದು ಒತ್ತಡವನ್ನು ಕಡಿಮೆ ಮಾಡಲು ಮತ್ತು ನಿದ್ರೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




