
ಕಾಫಿ (Coffee) ಪ್ರಪಂಚದಲ್ಲೇ ನೆಚ್ಚಿನ ಪಾನೀಯಗಳೊಂದು. ಒತ್ತಡವನ್ನು ಕಡಿಮೆ ಮಾಡಲು, ಸ್ನೇಹಿತರೊಂದಿಗೆ ಟೈಮ್ ಪಾಸ್ ಮಾಡಲು ಹೆಚ್ಚಿನವರು ಒಂದು ಕಪ್ ಬಿಸಿ ಬಿಸಿ ಕಾಫಿಯನ್ನೇ ಕುಡಿತಾರೆ. ಅದರಲ್ಲೂ ಕಾಫಿ ಪ್ರಿಯರಿಗಂತೂ ದಿನದಲ್ಲಿ ಒಂದೆರಡು ಕಪ್ ಕಾಫಿ ಕುಡಿಲಿಲ್ಲ ಎಂದ್ರೆ ಅವರಿಗೆ ತಮ್ಮ ದಿನವೇ ಪರಿಪೂರ್ಣ ಎನಿಸೋದಿಲ್ಲ. ಅಷ್ಟು ಇಷ್ಟಪಟ್ಟು ಕಾಫಿ ಕುಡಿತಾರೆ. ಒಟ್ಟಿನಲ್ಲಿ ಕಾಫಿ ಪ್ರತಿಯೊಬ್ಬರ ಜೀವನದ ಭಾಗವಾಗಿ ಹೋಗಿದೆ. ಇದರ ಹೊರತಾಗಿ ಕಾಫಿ ಕುಡಿಯುವುದರಿಂದ ಹಲವು ಆರೋಗ್ಯ ಪ್ರಯೋಜನಗಳು ಕೂಡ ಇವೆ. ಈ ಎಲ್ಲಾ ಜನಪ್ರಿಯತೆಯನ್ನು ಪರಿಗಣಿಸಿ, ಹಾಗೂ ಕಾಫಿ ಬೆಳೆಗಾರರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಜಾಗೃತಿ ಮೂಡಿಸಲು ಅಕ್ಟೋಬರ್ 1 ರಂದು ಪ್ರತಿವರ್ಷ ಅಂತಾರಾಷ್ಟ್ರೀಯ ಕಾಫಿ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಆಚರಣೆ ಹೇಗೆ ಆರಂಭವಾಯಿತು, ಅದರ ಹಿನ್ನೆಲೆಯೇನು ಎಂಬುದನ್ನು ತಿಳಿಯೋಣ ಬನ್ನಿ.
ಅಂತಾರಾಷ್ಟ್ರೀಯ ಕಾಫಿ ದಿನವನ್ನು ಮೊದಲ ಬಾರಿಗೆ 2015 ರಲ್ಲಿ ಆಚರಿಸಲಾಯಿತು. 1963 ರಲ್ಲಿ ಲಂಡನ್‌ನಲ್ಲಿ ಸ್ಥಾಪನೆಯಾದ ಅಂತಾರಾಷ್ಟ್ರೀಯ ಕಾಫಿ ಸಂಸ್ಥೆಯು ಅಂತಾರಾಷ್ಟ್ರೀಯ ಕಾಫಿ ದಿನವನ್ನು 2015 ರಲ್ಲಿ ಅಧಿಕೃತವಾಗಿ ಪ್ರಾರಂಭಿಸಿತು. ಇಟಲಿಯ ಮಿಲನ್‌ನಲ್ಲಿ ನಡೆದ ಎಕ್ಸ್‌ಪೋ 2015 ರ ಸಂದರ್ಭದಲ್ಲಿ ಈ ಕಾರ್ಯಕ್ರಮವನ್ನು ಪರಿಚಯಿಸಲಾಯಿತು ಮತ್ತು ಅಂದಿನಿಂದ ಪ್ರಪಂಚದಾದ್ಯಂತ ಈ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ಕಾಫಿ ಬೆಳೆಗಾರರು, ವಿಶೇಷವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಅವರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿದೆ. ಅಲ್ಲದೆ ನ್ಯಾಯಯುತ ವ್ಯಾಪಾರ, ಸುಸ್ಥಿರ ಕೃಷಿ ಮತ್ತು ಸಣ್ಣ ಪ್ರಮಾಣದ ರೈತರಿಗೆ ಬೆಂಬಲ ನೀಡುವುದು ಈ ಆಚರಣೆಗೆ ಮುಖ್ಯ ಉದ್ದೇಶವಾಗಿದೆ.
ಭಾರತವು ಏಷ್ಯಾದಲ್ಲಿ ಮೂರನೇ ಅತಿದೊಡ್ಡ ಕಾಫಿ ಉತ್ಪಾದಕ ಮತ್ತು ರಫ್ತುದಾರ ರಾಷ್ಟ್ರವಾಗಿದ್ದು, ವಿಶ್ವದ ಆರನೇ ಅತಿದೊಡ್ಡ ಉತ್ಪಾದಕ ಮತ್ತು ಐದನೇ ಅತಿದೊಡ್ಡ ಕಾಫಿ ರಫ್ತುದಾರ ರಾಷ್ಟ್ರವಾಗಿದೆ. ಭಾರತೀಯ ಕಾಫಿ ತನ್ನ ಅತ್ಯುನ್ನತ ಗುಣಮಟ್ಟಕ್ಕೆ ಹೆಸರುವಾಸಿಯಾಗಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಇದನ್ನು ಪ್ರೀಮಿಯಂ ಎಂದು ಪರಿಗಣಿಸಲಾಗಿದೆ. ಭಾರತದಲ್ಲಿ ಎರಡು ಪ್ರಮುಖ ವಿಧದ ಕಾಫಿಗಳಿವೆ, ಅರೇಬಿಕಾ ಮತ್ತು ರೋಬಸ್ಟಾ. ಕರ್ನಾಟಕವು ಅತಿದೊಡ್ಡ ಕಾಫಿ ಉತ್ಪಾದಕ ರಾಜ್ಯವಾಗಿದೆ.
ಇದನ್ನೂ ಓದಿ: ಹಿರಿ ಜೀವಗಳ ಬಗ್ಗೆ ತಾತ್ಸಾರ ಬೇಡ, ಇರಲಿ ಗೌರವ
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ