International Day for Biological Diversity 2026: ಜೀವ ವೈವಿಧ್ಯತೆಯನ್ನು ಉಳಿಸುವುದು ಪ್ರತಿಯೊಬ್ಬರ ಕರ್ತವ್ಯ

ಪರಿಸರ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ಸೂಕ್ಷ್ಮ ಜೀವಿಗಳು, ಪ್ರಾಣಿ ಪಕ್ಷಿಗಳು, ಸಸ್ಯರಾಶಿಗಳು ಸೇರಿದಂತೆ ಎಲ್ಲಾ ಜೀವವೈವಿಧ್ಯತೆ ಬಹುಮುಖ್ಯ ಪಾತ್ರ ವಹಿಸುತ್ತವೆ. ಆದರೆ ಇಂದು ಮಾನವನ ಸ್ವಾರ್ಥದಿಂದ ಅದೆಷ್ಟೋ ಜೀವರಾಶಿಗಳು ಅಳಿವಿನಂಚಿಗೆ ತಲುಪಿವೆ. ಇವುಗಳ ಸಂರಕ್ಷಣೆಯ ಉದ್ದೇಶವನ್ನಿಟ್ಟುಕೊಂಡು ಪ್ರತಿವರ್ಷ ಮೇ 22 ರಂದು ವಿಶ್ವ ಜೀವವೈವಿಧ್ಯ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವವವನ್ನು ತಿಳಿಯಿರಿ.

International Day for Biological Diversity 2026: ಜೀವ ವೈವಿಧ್ಯತೆಯನ್ನು ಉಳಿಸುವುದು ಪ್ರತಿಯೊಬ್ಬರ ಕರ್ತವ್ಯ
ಅಂತಾರಾಷ್ಟ್ರೀಯ ಜೀವ ವೈವಿಧ್ಯತೆಯ ದಿನ
Image Credit source: Pinterest

Updated on: May 22, 2026 | 10:32 AM

ಸೂಕ್ಷ್ಮ ಜೀವಿಗಳು, ಪ್ರಾಣಿ ಪಕ್ಷಿಗಳು, ಸಸ್ಯರಾಶಿಗಳು ಸೇರಿದಂತೆ ಈ ಭೂಮಿಯ ಮೇಲೆ ಸಹಸ್ರಾರು ಸಂಖ್ಯೆಯ ಜೀವವೈವಿಧ್ಯಗಳಿವೆ.  ಈ ಜೀವ ವೈವಿಧ್ಯತೆ (Biological Diversity) ಪರಿಸರ ವ್ಯವಸ್ಥೆಯನ್ನು ಸಮತೋಲದಲ್ಲಿಡುವಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತಿದೆ. ಇಂದು ಜೀವವೈವಿಧ್ಯತೆ ಅಪಾಯದಲ್ಲಿದೆ. ಹೌದು ಅರಣ್ಯನಾಶ, ಮಾಲಿನ್ಯ, ಹವಾಮಾನ ಬದಲಾವಣೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಅತಿಯಾದ ಬಳಕೆ ವನ್ಯಜೀವಿಗಳಿಗೆ, ಪಕ್ಷಿಗಳಿಗೆ, ಮರಗಿಡಗಳಿಗೆ  ಹಾನಿ ಮಾಡುತ್ತಿವೆ. ಅದೆಷ್ಟೋ ಪ್ರಭೇದಗಳು ಅಳಿವಿನಂಚಿಗೆ ತಲುಪಿವೆ. ನಮ್ಮ ಭವಿಷ್ಯಕ್ಕೆ ಜೀವವೈವಿಧ್ಯತೆಯನ್ನು ರಕ್ಷಿಸುವುದು ಅವಶ್ಯಕ.  ಹಾಗಾಗಿ ಈ ಜೀವವೈವಿಧ್ಯಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಪ್ರತಿವರ್ಷ ಮೇ 22 ರಂದು ಅಂತಾರಾಷ್ಟ್ರೀಯ ಜೀವವೈವಿಧ್ಯತೆಯ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ ಬನ್ನಿ.

ಅಂತಾರಾಷ್ಟ್ರೀಯ ಜೀವವೈವಿಧ್ಯತೆ ದಿನದ ಇತಿಹಾಸವೇನು?

1992 ರಲ್ಲಿ ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆದ ಭೂ ಶೃಂಗಸಭೆಯಲ್ಲಿ ಜೀವವೈವಿಧ್ಯತೆಯ ದಿನವನ್ನು ಆಚರಿಸುವ ಪರಿಕಲ್ಪನೆಯನ್ನು ತರಲಾಯಿತು. 1993 ಮೊದಲ ಬಾರಿಗೆ ಈ ದಿನವನ್ನು ಡಿಸೆಂಬರ್‌ 29 ರಂದು ಆಚರಿಸಲಾಯಿತು. ನಂತರ 2000 ನೇ ಇಸವಿಯಲ್ಲಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು ಈ ದಿನವನ್ನು ಮೇ 22 ರಂದು ಆಚರಿಸಲು ನಿರ್ಧರಿಸಿತು. ಅಂದಿನಿಂದ ಪ್ರತಿವರ್ಷ ವಿಶ್ವ ಜೀವವೈವಿಧ್ಯ ದಿನವನ್ನು ಮೇ 22 ರಂದು ಆಚರಿಸುತ್ತಾ ಬರಲಾಗುತ್ತಿದೆ.

ಇದನ್ನೂ ಓದಿ: ಚಹಾದ ಹಿತಮಿತ ಸೇವನೆಯಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳು ಲಭಿಸುತ್ತವೆ ನೋಡಿ

ಅಂತಾರಾಷ್ಟ್ರೀಯ ಜೀವವೈವಿಧ್ಯತೆ ದಿನದ ಮಹತ್ವವೇನು?

  • ವಿಶ್ವ ಜೀವವೈವಿಧ್ಯತೆಯ ದಿನವು ಈ ಭೂಮಿಯಲ್ಲಿರುವ ಜೀವವೈವಿಧ್ಯ ರಕ್ಷಣೆಗೆ ಆದ್ಯತೆ ನೀಡುವ ಮಹತ್ವದ ಜ್ಞಾಪನೆಯಾಗಿದೆ.
  • ಹವಾಮಾನವನ್ನು ನಿಯಂತ್ರಿಸುವಲ್ಲಿ, ನೀರಿನ ಮೂಲಗಳನ್ನು ಸ್ವಚ್ಛವಾಗಿಡುವಲ್ಲಿ ಸೇರಿದಂತೆ ಒಟ್ಟಾರೆ ಪರಿಸರವನ್ನು ಸಮತೋಲನದಲ್ಲಿಡುವಲ್ಲಿ ಜೀವವೈವಿದ್ಯತೆ ಬಹುಮುಖ್ಯ ಪಾತ್ರ ವಹಿಸುತ್ತದೆ. ಜೀವ ವೈವಿಧ್ಯತೆಯ ಈ ಪ್ರಾಮುಖ್ಯತೆಯ ಬಗ್ಗೆ ತಿಳಿಸಲು ಈ ವಿಶೇಷ ದಿನವನ್ನು ಆಚರಿಸಲಾಗುತ್ತದೆ.
  • ಈ ದಿನ ಜೀವವೈವಿಧ್ಯದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅದನ್ನು ರಕ್ಷಿಸಲು ಕ್ರಮ ಕೈಗೊಳ್ಳಲು ಒಂದು ಅವಕಾಶವಾಗಿದೆ ಅಂತಾನೇ ಹೇಳಬಹುದು.
  • ಈ ದಿನದಂದು ಹಲವು ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಮತ್ತು ಅವುಗಳ ಮೂಲಕ ಜನರಿಗೆ ಜೀವವೈವಿಧ್ಯ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ.
  • ಪರಿಸರ ಸಂರಕ್ಷಣೆಗೆ ಒತ್ತು ನೀಡುವುದು ಈ ದಿನದ ಮುಖ್ಯ ಉದ್ದೇಶವಾಗಿದೆ.
  • ಜೀವವೈವಿಧ್ಯತೆಯನ್ನು ರಕ್ಷಿಸುವ ತುರ್ತು ಅಗತ್ಯದ ಬಗ್ಗೆ ನಮ್ಮ ಗಮನವನ್ನು ಕೇಂದ್ರೀಕರಿಸಲು ಈ ದಿನ ಅವಕಾಶವನ್ನು ಒದಗಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us