Children Eye Health: ಮಕ್ಕಳ ಕಣ್ಣಿಗೆ ಕಪ್ಪು ಕಾಡಿಗೆ ಹಚ್ಚುವುದು ಆರೋಗ್ಯದ ದೃಷ್ಟಿಯಿಂದ ಎಷ್ಟು ಸುರಕ್ಷಿತ?
ಮಕ್ಕಳ ಕಣ್ಣಿಗೆ ಕಾಡಿಗೆ ಹಚ್ಚುವುದು ಆರೋಗ್ಯದ ದೃಷ್ಟಿಯಿಂದ ಸುರಕ್ಷಿತವೇ ಎಂಬುದನ್ನು ತಿಳಿಯಿರಿ. ಇದರಿಂದ ಏನೆಲ್ಲಾ ಸಮಸ್ಯೆಗಳು ಉಂಟಾಗಬಹುದು ಎಂಬುದರ ಕುರಿತಾದ ಮಾಹಿತಿ ಇಲ್ಲಿದೆ.
ಸಾಮಾನ್ಯವಾಗಿ ಮಕ್ಕಳ ಮುಖ ಅಂದವಾಗಿ ಕಾಣಲು ಜತೆಗೆ ಕಣ್ಣುಗಳ ಹೆಚ್ಚು ಆಕರ್ಷಕವಾಗಿ ಕಾಣಲು ಕಣ್ಣಿಗೆ ಕಾಜಲ್ ಹಚ್ಚುವುದು ಅಥವಾ ಕಪ್ಪು ಕಾಡಿಗೆ ಹಚ್ಚುವ ಅಭ್ಯಾಸವನ್ನು ಪೋಷಕರು ರೂಢಿಯಲ್ಲಿಟ್ಟುಕೊಂಡಿರುತ್ತಾರೆ. ಆದರೆ ರಾಸಾಯನಿಕಗಳಿಂದ ತುಂಬಿರುವ ಕಾಜಲ್ ಮಕ್ಕಳ ಕಣ್ಣಿನ ಸುರಕ್ಷತೆಯ ದೃಷ್ಟಿಯಿಂದ ಆರೋಗ್ಯಕರವಲ್ಲ. ಹಾಗಿರುವಾಗ ಮಕ್ಕಳ ಕಣ್ಣಿಗೆ ಕಾಡಿಗೆ ಹಚ್ಚುವುದರಿಂದ ಏನೆಲ್ಲಾ ಸಮಸ್ಯೆಗಳು ಎದುರಾಗಬಹುದು ಎಂಬುದರ ಕುರಿತಾಗಿ ತಿಳಿಯೋಣ.
ಕೆಲವರ ಮನೆಯಲ್ಲಿ ನೈಸರ್ಗಿಕವಾಗಿ ಕಪ್ಪು ಕಾಡಿಗೆ ತಯಾರಿಸುತ್ತಾರೆ. ಅದು ಮಕ್ಕಳ ಕಣ್ಣಿಗೆ ಹಾನಿಯುಂಟು ಮಾಡದೇ ಇರಬಹುದು. ಆದರೆ ಸಾಮಾನ್ಯವಾಗಿ ಅಂಗಡಿಗಳಲ್ಲಿ ಖರೀದಿಸಿದ ಕಪ್ಪು ಕಾಡಿಗೆಯನ್ನು ಅಥವಾ ಮಸ್ಕರಾ, ಕಾಜಲ್ಅನ್ನು ಮಕ್ಕಳ ಕಣ್ಣಿಗೆ ಹಚ್ಚುವುದರಿಂದ ಕೆಲವು ಸಮಸ್ಯೆಗಳು ಉಂಟಾಗಬಹುದು. ಮಕ್ಕಳ ಸೂಕ್ಷ್ಮವಾದ ಕಣ್ಣುಗಳಿಗೆ ಇದು ಪರಿಣಾಮವನ್ನು ಬೀರಬಹುದು ಎಂಬುದು ನೆನಪಿನಲ್ಲಿರಲಿ.
ದೃಷ್ಟಿ ಸುಧಾರಿಸುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಮಕ್ಕಳ ಕಣ್ಣಿಗೆ ಕಪ್ಪು ಹಚ್ಚುವುದರಿಂದ ದೃಷ್ಟಿ ಸುಧಾರಿಸುತ್ತದೆ ಎಂಬೆಲ್ಲಾ ಮಾತುಗಳನ್ನು ನೀವು ಕೇಳಿರಬಹುದು. ಆದರೆ ಇದಕ್ಕೆ ಸಂಬಂಧಿಸಿದಂತೆ ಯಾವುದೇ ಪುರಾವೆಗಳಿಲ್ಲ. ಕೆಲವರು ನಂಬಿಕೆಯಿಂದ ಮತ್ತು ಸಾಂಪ್ರದಾಯಿಕ ಆಚರಣೆಯಿಂದ ಕಣ್ಣಿಗೆ ಕಪ್ಪು ಹಚ್ಚುವ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಂಡಿರುತ್ತಾರೆ.
ಸೋಂಕಿನ ಅಪಾಯ ಮಕ್ಕಳ ಕಣ್ಣುಗಳು ಹೆಚ್ಚು ಸೂಕ್ಷ್ಮವಾಗಿರುತ್ತದೆ. ಕಣ್ಣಿಗೆ ಕಿರಿಕಿರಿ ಅನ್ನಿಸಿದಾಗ ಮಕ್ಕಳು ಕಣ್ಣನ್ನು ಉಜ್ಜಿಕೊಳ್ಳುತ್ತಿರುತ್ತಾರೆ. ಇದರಿಂದ ಕಪ್ಪು ಕಾಡಿಗೆ ಕಣ್ಣಿನ ಸುತ್ತ ಹರಡಬಹುದು. ಜತೆಗೆ ಸಣ್ಣ ಕಣಗಳು ಕಣ್ಣಿನೊಳಗೂ ಸೇರಿಸಿಕೊಳ್ಳುವ ಸಂಭವವಿರುತ್ತದೆ. ಇದರಿಂದ ಕಣ್ಣಿನ ಉರಿ, ಕಣ್ಣು ಕೆಂಪಾಗುವ ಲಕ್ಷಣಗಳು ಕಂಡು ಬರುವ ಸಾಧ್ಯತೆಗಳು ಹೆಚ್ಚಾಗಿರಬಹುದು.
ತುರಿಕೆ ಸಾಧ್ಯತೆ ಪ್ರತಿದಿನ ಕಣ್ಣಿಗೆ ಮಸ್ಕರಾ ಹಚ್ಚುವುದರಿಂದ ಹೆಚ್ಚು ಸಮಯದವರೆಗೆ ಕಣ್ಣಿನ ಮೇಲೆ ಕಾಡಿಗೆ ಇರುವುದರಿಂದ ಇದು ತುರಿಕೆಗೆ ಕಾರಣವಾಗಬಹುದು. ಅದರಲ್ಲಿಯೂ ಮಾರುಕಟ್ಟೆಯಲ್ಲಿ ಖರೀದಿಸಿದ ಇಂಕ್ ಬಳಸುವುದು ಇನ್ನಷ್ಟು ಅಪಾಯಕಾರಿ. ಆದ್ದರಿಂದ ಮಕ್ಕಳ ಕಣ್ಣಿಗೆ ಕಾಡಿಗೆ ಹಚ್ಚುವುದು ಆರೋಗ್ಯದ ದೃಷ್ಟಿಯಿಂದ ಅಷ್ಟು ಸೂಕ್ತವಲ್ಲ.
ಇದನ್ನೂ ಓದಿ:
Health Tips: ನಿಮ್ಮ ಹಲ್ಲುಗಳನ್ನು ಬಿಳುಪಾಗಿಸಲು ಇಲ್ಲಿವೆ ಸಲಹೆಗಳು
Health Tips: ಸಾತ್ವಿಕ ಆಹಾರ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು