Kanakadasa Jayanti 2025: ತಮ್ಮ ಕೀರ್ತನೆಗಳ ಮೂಲಕ ಸಮಾನತೆಯ ಸಂದೇಶ ಸಾರಿದವರು ದಾಸಶ್ರೇಷ್ಠ ಕನಕದಾಸರು

ಕನಕದಾಸರು ದಾರ್ಶನಿಕ ಮಾತ್ರರಲ್ಲದೆ ಸಮಾಜ ಸುಧಾರಕರೂ ಆಗಿದ್ದರು. ತಮ್ಮ ಕೀರ್ತನೆ, ಮುಂಡಿಗೆ, ಉಗಾಭೋಗ ಮಾತ್ರವಲ್ಲದೆ ಮೋಹನತರಂಗಿಣಿ, ನಳಚರಿತ್ರೆ, ಹರಿಭಕ್ತ ಸಾಗರ ಇತ್ಯಾದಿ ಕಾವ್ಯಗಳ ಮೂಲಕ ಸಾಹಿತ್ಯ, ಆಧ್ಯಾತ್ಮಿಕತೆ ಮಾತ್ರವಲ್ಲದೆ ಸಮಾಜ ಸುಧಾರಣೆಗೆ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ. ಇಂತಹ ದಾಸ ಶ್ರೇಷ್ಠರ ಜನ್ಮ ಜಯಂತಿಯಿಂದು. ಈ ಸುದಿನ ಕನಕದಾಸರಿಗೆ ಸಂಬಂಧಿಸಿದ ಒಂದಷ್ಟು ವಿಶೇಷ ಮಾಹಿತಿಗಳನ್ನು ತಿಳಿಯಿರಿ.

Kanakadasa Jayanti 2025: ತಮ್ಮ ಕೀರ್ತನೆಗಳ ಮೂಲಕ ಸಮಾನತೆಯ ಸಂದೇಶ ಸಾರಿದವರು ದಾಸಶ್ರೇಷ್ಠ ಕನಕದಾಸರು
ಕನಕದಾಸ ಜಯಂತಿ
Image Credit source: Social Media

Updated on: Nov 08, 2025 | 10:17 AM

ಕುಲ, ಕುಲ ಎಂದು ಹೊಡೆದಾಡದಿರಿ ಹುಚ್ಚಪ್ಪಗಳಿರಾ ನಿಮ್ಮ ಕುಲದ ನೆಲೆಯನ್ನು ಬಲ್ಲಿರಾ? ಆತ್ಮ, ಜೀವ, ಗಾಳಿ, ನೀರು, ಅನ್ನ ಯಾವ ಕುಲ?…. ಸಮಾಜದಲ್ಲಿ ಜಾತಿ ಪದ್ಧತಿ, ತಾರತಮ್ಯ ತಾಂಡವವಾಡುತ್ತಿದ್ದ ಕಾಲದಲ್ಲಿ ತಮ್ಮ ಕೀರ್ತನೆಗಳ ಮೂಲಕ  ಜಾತಿ ಪದ್ಧತಿ ಸೇರಿದಂತೆ ಸಮಾಜದಲ್ಲಿನ ಪಿಡುಗಗಳ ವಿರುದ್ಧ ಹೋರಾಡಿವರು, ಸಮಾನತೆಯ ತತ್ವ ಸಾರಿದವರು ದಾಸ ಶ್ರೇಷ್ಠ ಕನಕದಾಸರು (Kanakadasa). ಹೌದು ಇವರು ತಮ್ಮ ಕೀರ್ತನೆ, ಮುಂಡಿಗೆ, ಉಗಾಭೋಗ ಮಾತ್ರವಲ್ಲದೆ ಮೋಹನತರಂಗಿಣಿ, ನಳಚರಿತ್ರೆ, ಹರಿಭಕ್ತ ಸಾಗರ ಇತ್ಯಾದಿ ಕಾವ್ಯಗಳ ಮೂಲಕ ಸಾಹಿತ್ಯ, ಆಧ್ಯಾತ್ಮಿಕತೆ ಮಾತ್ರವಲ್ಲದೆ ಸಮಾಜ ಸುಧಾರಣೆಗೆ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ.ಜೊತೆಗೆ ಸಹಜ ಬದುಕಿನಿಂದ ಕೀರ್ತನಕಾರರಾಗಿ, ತತ್ವಜ್ಞಾನಿಯಾಗಿ, ಸಂತರಾಗಿ, ದಾರ್ಶನಿಕರಾಗಿ ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆಗೆ ಕನಕದಾಸರು ಅನನ್ಯ ಕೊಡುಗೆಯನ್ನು ನೀಡಿದ್ದಾರೆ. ಇಂತಹ ದಾಸ ಶ್ರೇಷ್ಠ ಕನಕದಾಸರ ಜನ್ಮ ಜಯಂತಿಯನ್ನು ಪ್ರತಿವರ್ಷ ಕಾರ್ತಿಕ ಮಾಸದ 18 ನೇ ದಿನದಂದು ಕನಕದಾಸ ಜಯಂತಿಯನ್ನು ಆಚರಿಸಲಾಗುತ್ತದೆ. ಈ ಬಾರಿ ನವೆಂಬರ್‌ 08 ರಂದು ಕನಕದಾಸ ಜಯಂತಿಯನ್ನು ಆಚರಿಸಲಾಗುತ್ತಿದ್ದು, ಈ ದಿನ ಕನಕದಾಸರಿಗೆ ಸಂಬಂಧಿಸಿದ ಒಂದಷ್ಟು ವಿಚಾರಗಳ ಬಗ್ಗೆ ತಿಳಿದುಕೊಳ್ಳಿ.

ಕನಕದಾಸರ ಜೀವನ ಪಯಣ:

ಕರ್ನಾಟಕದಲ್ಲಿನ 15, 16 ನೇ ಶತಮಾನದಲ್ಲಿ ಜನಪ್ರಿಯವಾದ ಭಕ್ತಿಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರಾದ ಕನಕದಾಸರು 1509 ರಲ್ಲಿ ಕರ್ನಾಟಕದ ಬಂಕಾಪುರ ಬಳಿಯ ಬಾಟ ಎಂಬ ಗ್ರಾಮದಲ್ಲಿ ಕುರುಬ ಸಮುದಾಯದಲ್ಲಿ ಜನಿಸಿದರು.  ಕನಕದಾಸರ ಮೂಲ ಹೆಸರು ತಿಮ್ಮಪ್ಪ ನಾಯಕ. ಯವೌನದಲ್ಲಿ ದಂಡನಾಯಕರಾಗಿದ್ದ ಇವರು ಯುದ್ಧದಲ್ಲಿ ಸೋತ ಬಳಿಕ ವೈರಾಗ್ಯ ಉಂಟಾಗಿ, ಈ ನೋವಿನಿಂದ ಅವರು ಆತ್ಮಾವಲೋಕನ ಮಾಡಲು ಕಾರಣವಾಯಿತು, ಇದು ಅವರನ್ನು ಆಧ್ಯಾತ್ಮಿಕತೆಯ ಕಡೆಗೆ ತಿರುಗಿಸಿತು, ಇದರಿಂದ ಅವರು ಹರಿಭಕ್ತ ದಾಸರಾದರು ಎಂದು ಹೇಳಲಾಗುತ್ತದೆ.

ಹೀಗೆ ಆಧ್ಯಾತ್ಮಿಕತೆಯ ಕಡೆಗೆ ತಿರುಗಿದ ಇವರು ತಮ್ಮ ಆಧ್ಯಾತ್ಮ ಗುರುವಾದ ವ್ಯಾಸರಾಜರ ಮಾರ್ಗದರ್ಶನದಲ್ಲಿ ಹರಿದಾಸ ಸಂಪ್ರದಾಯವನ್ನು ಅಳವಡಿಸಿಕೊಂಡು ಕನಕದಾಸ ಎಂದು ಹೆಸರನ್ನು ಪಡೆದುಕೊಂಡರು. ಹೀಗೆ ಇವರು ತಮ್ಮ ಭಕ್ತಿ ಮತ್ತು ಸಾಹಿತ್ಯ ಪ್ರತಿಭೆಯ ಮೂಲಕ ಭಕ್ತಿ ಚಳುವಳಿಯಲ್ಲಿ ಪ್ರಮುಖ ವ್ಯಕ್ತಿಯಾದರು. ಮತ್ತು ಕೀರ್ತನೆಗಳು, ಉಗಾಭೋಗಗಳ ಮೂಲಕ ಸಮಾಜ ಸುಧಾರಣೆಗೂ ಕೊಡುಗೆಯನ್ನು ನೀಡಿದರು.

ಕನಕದಾಸರು ಸಾಹಿತ್ಯ ಲೋಕಕ್ಕೆ ಅಪಾರ ಕೊಡಗೆ ನೀಡಿದ್ದಾರೆ. ಸುಮಾರು 316 ಕೀರ್ತನೆಗಳನ್ನು ರಚಿಸಿದ್ದಾರೆ, ಮೋಹನತರಂಗಿಣಿ, ನಳಚರಿತ್ರೆ, ರಾಮಧ್ಯಾನ ಚರಿತೆ, ಹರಿಭಕ್ತಿಸಾಗರ, ನೃಸಿಂಹಸ್ತವ ಎಂಬ ಐದು ಪ್ರಮುಖ ಕಾವ್ಯಕೃತಿಗಳನ್ನು ರಚಿಸಿದ್ದಾರೆ. ಇವರ ಈ ಶ್ರೇಷ್ಠ ಕೀರ್ತನೆಗಳು, ಬೋಧನೆಗಳು ಇಂದಿಗೂ ಪ್ರಸ್ತುತ.

ಕನಕದಾಸರು ಮತ್ತು ಉಡುಪಿಯ ಕೃಷ್ಣ ದೇವಾಲಯಕ್ಕಿರುವ ನಂಟು:

ಕಾಗಿನೆಲೆಯ ಆದಿಕೇಶವನ ಭಕ್ತರಾದ ಕನಕದಾಸರು ಶ್ರೀ ವ್ಯಾಸರಾಯರ ನೆಚ್ಚಿನ ಶಿಷ್ಯರಾಗಿದ್ದರು. ಅಲ್ಲದೆ ಇವರು ಶ್ರೀ ಕೃಷ್ಣನ ಅನನ್ಯ ಭಕ್ತರೂ ಹೌದು. ಒಂದು ಸಲ ವ್ಯಾಸರಾಯರ ಜೊತೆ ಕನಕದಾಸರು ಉಡುಪಿ ಕೃಷ್ಣ ದೇವಾಲಯಕ್ಕೆ ಆಗಮಿಸಿದ್ದರು. ಆದರೆ ಕೆಳಜಾತಿಯವರು ಎಂಬ ಕಾರಣಕ್ಕೆ ಕನಕದಾಸರಿಗೆ ದೇಗುಲದ ಒಳಗೆ ಪ್ರವೇಶ ಸಿಗಲಿಲ್ಲ. ತನ್ನ ಜಾತಿಯ ಕಾರಣದಿಂದ ಉಡುಪಿ ಶ್ರೀ ಕೃಷ್ಣನ ದೇವಾಲಯಕ್ಕೆ ಪ್ರವೇಶ ಕನಕದಾಸರಿಗೆ ಪ್ರವೇಶ ನಿರಾಕರಿಸಿದ ಸಂದರ್ಭದಲ್ಲಿ ಕನಕದಾಸರು ದೇವಾಲಯದ ಹಿಂಬದಿಯಲ್ಲಿ ನಿಂತು ಶ್ರದ್ಧಾ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರು. ಅವರ ಈ ಭಕ್ತಿ ಮತ್ತು ಪ್ರಾಮಾಣಿಕತೆಯಿಂದ ಸಂತೃಪ್ತನಾದ ಶ್ರೀಕೃಷ್ಣ, ದೇಗುಲದ ಗೋಡೆ ಒಡೆದು ಕನಕದಾಸರಿಗೆ ದರ್ಶನ ನೀಡಿದನು. ಅದನ್ನು ಇಂದಿಗೂ ಕನಕನ ಕಿಂಡಿಯೆಂದೇ ಕರೆಯಲಾಗುತ್ತಿದೆ.

ಇದನ್ನೂ ಓದಿ: ನ. 05 ಗುರುನಾನಕ್ ಜಯಂತಿ; ದಿನದ ಇತಿಹಾಸ, ಮಹತ್ವ ಮತ್ತು ಆಧ್ಯಾತ್ಮಿಕ ಸಂದೇಶ ತಿಳಿಯಿರಿ

ಕನಕದಾಸಜಯಂತಿಯ ಮಹತ್ವ:

  • ಈ ದಿನವನ್ನು ಸಂತ ಮತ್ತು ಸಂಗೀತಗಾರ ಕನಕದಾಸರಿಗೆ ಗೌರವ ಸಲ್ಲಿಸಲು ಮೀಸಲಿಡಲಾಗಿದೆ.
  • ಕರ್ನಾಟಕದಲ್ಲಿ ವಾರ್ಷಿಕವಾಗಿ ಆಚರಿಸಲಾಗುವ ಕನಕದಾಸ ಜಯಂತಿಯಂದು ಸಾಹಿತ್ಯ, ತತ್ವಶಾಸ್ತ್ರ ಮತ್ತು ಸಮಾಜ ಸುಧಾರಣೆಗೆ ಅಪಾರ ಕೊಡುಗೆಯನ್ನು ನೀಡಿದ ಕನಕದಾಸರನ್ನು ಗೌರವಿಸಲಾಗುತ್ತದೆ.
  • ಈ ದಿನ ಅವರ ಕೃತಿಗಳು, ವಚನಗಳು ಮತ್ತು ಬೋಧನೆಗಳ ಮೂಲಕ ಜನರಿಗೆ ಸಮಾನತೆ ಪಾಠವನ್ನು ಮಾಡಲಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:16 am, Sat, 8 November 25