ಅಡುಗೆ ಮನೆಯ ಸಿಂಕ್ ಡ್ರೈನ್‌ನಿಂದ ಬರುವ ಕೆಟ್ಟ ವಾಸನೆಯನ್ನು ತೊಡೆದು ಹಾಕಲು ಈ ಸಿಂಪಲ್ ಟಿಪ್ಸ್ ಪಾಲಿಸಿ
ಮನೆಯ ಕಿಚನ್ ಸಿಂಕ್‌ಗಳನ್ನು ಎಷ್ಟೇ ಸ್ವಚ್ಛಗೊಳಿಸಿದರೂ ಕೂಡ ಕೆಲವೊಮ್ಮೆ ಈ ಸಿಂಕ್‌ಗಳಿಂದ ಗಬ್ಬು ವಾಸನೆ ಬರುತ್ತದೆ. ಇದು ಇಡೀ ಅಡುಗೆ ಮನೆಯ ವಾತಾವರಣವನ್ನೇ ಕೆಡಿಸಿಬಿಡುತ್ತದೆ. ನಿಮ್ಮ ಮನೆಯ ಕಿಚನ್ ಸಿಂಕ್ ಡ್ರೈನ್ ಕೂಡ ಇದೇ ರೀತಿ ವಾಸನೆ ಬರುತ್ತಾ, ಹಾಗಿದ್ರೆ ಅಡುಗೆ ಮನೆಯಲ್ಲಿಯೇ ಲಭ್ಯವಿರುವಂತಹ ಈ ಕೆಲವೊಂದು ವಸ್ತುಗಳನ್ನು ಬಳಸಿ ಸಿಂಕ್ ಸ್ವಚ್ಛಗೊಳಿಸಿ, ಇದರಿಂದ ವಾಸನೆ ಹೋಗುವುದರ ಜೊತೆಗೆ ಸಿಂಕ್ ಪಳಪಳ ಹೊಳೆಯುತ್ತದೆ.

ಅಡುಗೆ ಮನೆಯನ್ನು ಸ್ವಚ್ಛಗೊಳಿಸುವುದರ ಜೊತೆಗೆ, ಪಾತ್ರೆ ತೊಳೆಯುವ ಸಿಂಕ್‌ಗಳನ್ನು (kitchen sink) ಕೂಡ ಪ್ರತಿನಿತ್ಯ ಕ್ಲೀನ್ ಮಾಡ್ಬೇಕು. ಎಷ್ಟೇ ಕ್ಲೀನ್ ಮಾಡಿದ್ರೂ ಕೂಡ ಸಿಂಕ್‌ನಿಂದ ವಾಸನೆ ಬರೋದು ಮಾತ್ರ ತಪ್ಪೋದಿಲ್ಲ ಎಂದು ಹಲವರು ಹೇಳುತ್ತಿರುತ್ತಾರೆ. ಸಿಂಕ್ ಡ್ರೈನ್‌ನಲ್ಲಿ ಉಳಿದುಕೊಳ್ಳುವ ಜಿಡ್ಡಿನಾಂಶ, ಚರಂಡಿಯಲ್ಲಿ ಸಿಲುಕಿಕೊಳ್ಳುವ ಅನ್ನ, ಚಹಾ ಪುಡಿ, ಇತ್ಯಾದಿ ಸಣ್ಣಪುಟ್ಟ ವಸ್ತುಗಳು, ಚರಂಡಿಯಲ್ಲಿ ಬ್ಯಾಕ್ಟೀರಿಯಾಗಳ ಬೆಳವಣಿಗೆ ಇವೆಲ್ಲದರ ಕಾರಣದಿಂದಾಗಿ ಎಷ್ಟೇ ಬಾರಿ ಸ್ವಚ್ಛಗೊಳಿಸಿದರೂ ಸಿಂಕ್‌ನಿಂದ ಕೆಟ್ಟ ವಾಸನೆ ಬರುತ್ತಿರುತ್ತವೆ. ಹೀಗಿರುವಾಗ ಅಡುಗೆ ಮನೆಯಲ್ಲಿಯೇ ಸುಲಭವಾಗಿ ಲಭ್ಯವರುವಂತಹ ಈ ಒಂದಷ್ಟು ವಸ್ತುಗಳನ್ನು ಬಳಸಿಕೊಂಡು ಈ ವಾಸನೆಯನ್ನು ಪರಿಣಾಮಕಾರಿಯಾಗಿ ಹೋಗಲಾಡಿಸಬಹುದು. ಅದು ಹೇಗೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಕಿಚನ್ ಸಿಂಕ್ ವಾಸನೆಯನ್ನು ಹೋಗಲಾಡಿಸಲಿರುವ ಸರಳ ಪರಿಹಾರ:
ನಿಂಬೆ ಮತ್ತು ಉಪ್ಪು: ನಿಂಬೆ ಅತ್ಯುತ್ತಮ ನೈಸರ್ಗಿಕ ಕ್ಲೀನರ್ ಆಗಿದೆ. ನಿಂಬೆಹಣ್ಣನ್ನು ಅರ್ಧದಷ್ಟು ಕತ್ತರಿಸಿ, ಅದರ ಮೇಲೆ ಉಪ್ಪನ್ನು ಸುರಿಯಿರಿ ಮತ್ತು ಇದರಿಂದ ಸಿಂಕ್ ಅನ್ನು ಚೆನ್ನಾಗಿ ಉಜ್ಜಿಕೊಳ್ಳಿ. ನಿಂಬೆಹಣ್ಣಿನ ಆಮ್ಲೀಯ ರಸ ಮತ್ತು ಉಪ್ಪಿನ ಒರಟುತನವು ಜಿಡ್ಡಿನಂಶ ಮತ್ತು ಕಲೆಗಳನ್ನು ತೆಗೆದುಹಾಕಲು ಒಟ್ಟಾಗಿ ಕೆಲಸ ಮಾಡುತ್ತದೆ ಮತ್ತು ವಾಸನೆಯನ್ನು ಸಹ ತೆಗೆದುಹಾಕುತ್ತದೆ. ಜೊತೆಗೆ ಸಿಂಕ್ ಸ್ವಚ್ಛವಾಗಿ ಕಾಣುವಂತೆ ಮಾಡುತ್ತದೆ.
ಬಿಸಿನೀರು: ವಾರಕ್ಕೊಮ್ಮೆಯಾದರೂ ಸಿಂಕ್ ಡ್ರೈನ್‌ಗೆ ಕುದಿಯುವ ನೀರನ್ನು ಸುರಿಯಿರಿ, ಇದರಿಂದ ಡ್ರೈನ್‌ನಲ್ಲಿ ಮುಚ್ಚಿಹೋಗಿರುವ ಜಿಡ್ಡು ಮತ್ತು ಕಸ ಕರಗುತ್ತದೆ. ಈ ವಿಧಾನವು ಸಿಂಕ್ ಮತ್ತು ಡ್ರೈನ್ ಎರಡನ್ನೂ ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಹೀಗೆ ಮಾಡುವುದರಿಂದ ಸಿಂಕ್‌ನಿಂದ ವಾಸನೆ ಬರುವುದಿಲ್ಲ.
ಅಡುಗೆ ಸೋಡಾ ಮತ್ತು ವಿನೆಗರ್: ಈ ಮಿಶ್ರಣವು ಚರಂಡಿಗಳಲ್ಲಿನ ಅಡಚಣೆಗಳನ್ನು ತೆಗೆದುಹಾಕಲು ತುಂಬಾ ಪರಿಣಾಮಕಾರಿಯಾಗಿದೆ. ಮೊದಲು, ಸಿಂಕ್ ಮತ್ತು ಚರಂಡಿಯನ್ನು ಲಘುವಾಗಿ ಸ್ವಚ್ಛಗೊಳಿಸಿ. ನಂತರ, ಅರ್ಧ ಕಪ್ ಅಡಿಗೆ ಸೋಡಾವನ್ನು ಚರಂಡಿಗೆ ಸುರಿಯಿರಿ. ಮತ್ತು ಅದಕ್ಕೆ ಅರ್ಧ ಕಪ್ ವಿನೆಗರ್ ಸೇರಿಸಿ. 10-15 ನಿಮಿಷಗಳ ನಂತರ, ಬೆಚ್ಚಗಿನ ನೀರಿನಿಂದ ಚರಂಡಿಯನ್ನು ತೊಳೆಯಿರಿ. ಇದು ಚರಂಡಿಯನ್ನು ಸ್ವಚ್ಛಗೊಳಿಸುತ್ತದೆ ಮತ್ತು ವಾಸನೆಯನ್ನು ನಿವಾರಿಸುತ್ತದೆ.
ಇದನ್ನೂ ಓದಿ: ತುಕ್ಕು ಹಿಡಿದ ವಸ್ತುಗಳನ್ನು ಸುಲಭವಾಗಿ ಸ್ವಚ್ಛಗೊಳಿಸಲು ಈ ಒಂದು ತರಕಾರಿಯ ಸಿಪ್ಪೆಯೇ ಸಾಕು
ನಿಯಮಿತವಾಗಿ ಈ ರೀತಿ ಸಿಂಕ್ ಸ್ವಚ್ಛಗೊಳಿಸುವುದರ ಪ್ರಯೋಜನಗಳು:
- ಸಿಂಕ್‌ನಿಂದ ಯಾವುದೇ ರೀತಿ ಕೆಟ್ಟ ವಾಸನೆ ಬರುವುದಿಲ್ಲ.
- ಸಿಂಕ್ ಯಾವಾಗಲೂ ಸ್ವಚ್ಛವಾಗಿ ಹೊಸದರಂತೆ ಕಾಣುತ್ತದೆ.
- ಸಿಂಕ್ ಡ್ರೈನ್‌ನಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯುವುದಿಲ್ಲ
- ಅಡುಗೆ ಮನೆ ಪರಿಸರವು ಸ್ವಚ್ಛವಾಗಿ ತಾಜಾವಾಗಿ ಇರುತ್ತದೆ.
- ದುಬಾರಿ ಶುಚಿಗೊಳಿಸುವ ಉತ್ಪನ್ನಗಳಿಗೆ ಹಣ ಖರ್ಚು ಮಾಡುವ ಅವಶ್ಯಕತೆಯೇ ಇರುವುದಿಲ್ಲ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




