Kitchen Tips: ಕಲಬೆರಕೆಯುಕ್ತ ಗೋಧಿ ಹಿಟ್ಟನ್ನು ಗುರುತಿಸುವುದು ಹೇಗೆ? ಇಲ್ಲಿದೆ ಸುಲಭ ವಿಧಾನ
ಹೆಚ್ಚಿನವರು ದಿನನಿತ್ಯ ಚಪಾತಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು ಎನ್ನುವ ಕಾರಣಕ್ಕೆ ಊಟಕ್ಕೆ ಅನ್ನದ ಬದಲು ಅದನ್ನೇ ತಿನ್ನುತ್ತಾರೆ. ಅದಲ್ಲದೇ ಮಧುಮೇಹಿಗಳಿಗೆ ಹಾಗೂ ತೂಕ ಇಳಿಸಿಕೊಳ್ಳುವವರ ಮೊದಲ ಆಯ್ಕೆಯೇ ಈ ಚಪಾತಿಯಾಗಿರುತ್ತದೆ. ಆದರೆ ಈ ಚಪಾತಿ ತಯಾರಿಸಲು ಬಳಸುವ ಈ ಗೋಧಿ ಹಿಟ್ಟು ಕೂಡ ಕಲಬೆರಕೆಯಾಗಿದೆ. ಈ ಕಲಬೆರಕೆಯುಕ್ತ ಗೋಧಿ ಹಿಟ್ಟನ್ನು ತಿನ್ನುವುದರಿಂದ ಅನೇಕ ಗಂಭೀರ ಸಮಸ್ಯೆಗಳು ಸಹ ಉದ್ಭವಿಸಬಹುದು. ಹೀಗಾಗಿ ನಕಲಿ ಅಥವಾ ಅಸಲಿ ಗೋಧಿ ಹಿಟ್ಟಿನ ವ್ಯತ್ಯಾಸವನ್ನು ಗುರುತಿಸುವುದು ಹೇಗೆ? ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಇತ್ತೀಚೆಗಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಪ್ರತಿಯೊಂದು ವಸ್ತುಗಳು ಕೂಡ ಕಲಬೆರಕೆಯುಕ್ತವಾಗಿದೆ. ಉಪ್ಪಿನಿಂದ ಹಿಡಿದು ಬೇಳೆಕಾಳಿನವರೆಗೂ ಕಲಬೆರಕೆ ಮಾಡಿ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ. ಈ ಗೋಧಿ ಹಿಟ್ಟಿಗೆ ಸೀಮೆಸುಣ್ಣದ ಪುಡಿ, ಬೋರಿಕ್ ಪೌಡರ್ ಅಥವಾ ಮೈದಾವನ್ನು ಮಿಶ್ರಣ ಮಾಡಿ ಮಾರಾಟ ಮಾಡಲಾಗುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಈ ಗೋಧಿಹಿಟ್ಟಿನಲ್ಲಿ ನಕಲಿ ಮತ್ತು ಶುದ್ಧ ಯಾವುದು ಎಂದು ಗುರುತಿಸೋದು ತುಂಬಾನೇ ಕಷ್ಟ. ಹೀಗಾಗಿ ಈ ಹಿಟ್ಟು ಅಸಲಿಯೇ ನಕಲಿಯೇ ಎಂದು ಗುರುತಿಸಲು ಈ ವಿಧಾನಗಳನ್ನು ಅನುಸರಿಸುವುದು ಉತ್ತಮ.
- ನಕಲಿ ಗೋಧಿಹಿಟ್ಟನ್ನು ಗುರುತಿಸಲು ಒಂದು ಲೋಟ ನೀರನ್ನು ತೆಗೆದುಕೊಳ್ಳಿ, ಆ ಬಳಿಕ ನೀರಿಗೆ ಅರ್ಧ ಚಮಚ ಗೋಧಿ ಹಿಟ್ಟನ್ನು ಸೇರಿಸಿ. 10 ರಿಂದ 20 ಸೆಕೆಂಡುಗಳ ಕಾಲ ಹಾಗೆಯೇ ಇರಿ. ಹಿಟ್ಟು ನೀರಿನಲ್ಲಿ ತೇಲುತ್ತಿದ್ದರೆ, ಅದು ನಕಲಿ ಎಂದು ತಿಳಿದುಕೊಳ್ಳಿ. ಹಿಟ್ಟು ನೀರಿನಲ್ಲಿ ಮುಳುಗಿದರೆ ಶುದ್ಧವಾಗಿದೆ ಎಂದರ್ಥ.
- ಗೋಧಿ ಹಿಟ್ಟನ್ನು ನಾದುವಾಗ ತುಂಬಾ ಮೃದುವಾಗಿದ್ದರೆ ಹಿಟ್ಟು ಶುದ್ಧವಾಗಿದೆ ಎಂದರ್ಥ. ನಕಲಿ ಗೋಧಿಹಿಟ್ಟಾಗಿದ್ರೆ ಅದು ಮೃದುವಾಗಿರುವುದಿಲ್ಲ, ನಾದಲು ಕೂಡ ಕಷ್ಟವಾಗುತ್ತದೆ. ಹಿಟ್ಟು ಬೇಗ ಮೆತ್ತಗಾಗದಿದ್ದರೆ ಕಲಬೆರಕೆ ಹಿಟ್ಟು ಎನ್ನುತ್ತಾರೆ ತಜ್ಞರು.
- ನಕಲಿ ಗೋಧಿಹಿಟ್ಟನ್ನು ನಾದಲು ಹೆಚ್ಚಿನ ನೀರು ತೆಗೆದುಕೊಳ್ಳುತ್ತದೆ. ಶುದ್ಧ ಹಿಟ್ಟನ್ನು ಬೇಗ ನಾದಿಕೊಳ್ಳಬಹುದು. ಸ್ವಲ್ಪ ಗಂಟೆಗಳ ಕಾಲ ಇಟ್ಟರೆ ತಾಜಾ ಮತ್ತು ಮೃದುವಾಗಿರುತ್ತದೆ. ಆದರೆ ಈ ನಕಲಿ ಗೋಧಿಹಿಟ್ಟಿನಿಂದ ಮಾಡಿದ ಚಪಾತಿ ಮೃದುವಾಗಿರುವುದಿಲ್ಲ.
- ಗೋಧಿ ಹಿಟ್ಟಿನ ಕಲಬೆರಕೆಯನ್ನು ನಿಂಬೆ ಹಣ್ಣನ್ನು ಬಳಸಿ ಪತ್ತೆ ಹಚ್ಚಬಹುದು. ಮೊದಲಿಗೆ ಅರ್ಧ ಚಮಚ ಗೋಧಿಹಿಟ್ಟನ್ನು ತೆಗೆದುಕೊಳ್ಳಿ,ಇದಕ್ಕೆ ನಿಂಬೆ ರಸ ಸೇರಿಸಿಕೊಳ್ಳಿ. ಈ ಹಿಟ್ಟಿನಿಂದ ಗುಳ್ಳೆಗಳು ಹೊರ ಬರಲು ಪ್ರಾರಂಭಿಸಿದರೆ, ಗೋಧಿಹಿಟ್ಟು ನಕಲಿ ಎನ್ನುವುದು ಖಚಿತ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ