Ajwain Leaf Bajji : ಆರೋಗ್ಯಕ್ಕೆ ಹಿತ ದೊಡ್ಡ ಪತ್ರೆ ಎಲೆಯ ಬಜ್ಜಿ, ರೆಸಿಪಿಯ ವಿಧಾನ ಇಲ್ಲಿದೆ
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಹೀಗಾಗಿ ಮನೆಯ ಸುತ್ತಮುತ್ತಲಿನಲ್ಲಿರುವ ಔಷಧೀಯ ಸಸ್ಯಗಳನ್ನು ಅಡುಗೆಗೆ ಬಳಸಲಾಗುತ್ತದೆ. ಆ ಸಾಲಿಗೆ ಎಲ್ಲರಿಗೂ ಚಿರಪರಿಚಿತವಾಗಿರುವ ದೊಡ್ಡ ಪತ್ರೆ ಎಲೆ ಕೂಡ ಸೇರಿದೆ. ಮನೆಯಲ್ಲಿ ಈ ಕೆಲವು ಐಟಂಗಳಿದ್ದರೆ ಸಾಕು, ರುಚಿಕರವಾದ ದೊಡ್ಡ ಪತ್ರೆಯ ಬಜ್ಜಿ ಮಾಡಿ ಸವಿದರೆ ಆರೋಗ್ಯಕ್ಕೂ ಹಿತಕರವಾಗಿದೆ. ಹಾಗಾದ್ರೆ ದೊಡ್ಡ ಪತ್ರೆ ಎಲೆಯ ಬಜ್ಜಿ ರೆಸಿಪಿಯ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.
ಮಳೆಗಾಲದಲ್ಲಿ ತುಂಬಾ ಶೀತದ ವಾತಾವರಣವಿರುವ ಕಾರಣ ಅನಾರೋಗ್ಯಕ್ಕೆ ಸಮಸ್ಯೆಗಳು ಎದುರಾಗುವುದೇ ಹೆಚ್ಚು.ಈ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಹಿತ್ತಲಿನಲ್ಲಿಯೇ ಸಿಗುವ ಈ ದೊಡ್ಡ ಪತ್ರೆ ಎಲೆಯೇ ಅತ್ಯುತ್ತಮ ಮನೆ ಮದ್ದಾಗಿದೆ. ಈ ದೊಡ್ಡಪತ್ರೆ ಗಿಡಗಳನ್ನು ಮಲೆನಾಡಿನಲ್ಲಿ ಹೆಚ್ಚಾಗಿ ಕಾಣ ಸಿಗುತ್ತವೆ. ವಿಟಮಿನ್ ಸಿ ಮತ್ತು ವಿಟಮಿನ್ ಎ ಪೋಷಕಾಂಶವು ಹೇರಳವಾಗಿದ್ದು, ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು ರೋಗವನ್ನು ದೂರ ಮಾಡುತ್ತವೆ. ಈ ಎಲೆಯಿಂದ ಗೊಜ್ಜು, ಚಟ್ನಿ, ತಂಬುಳಿ ಸೇರಿದಂತೆ ಬಗೆ ಬಗೆಯ ಅಡುಗೆಯನ್ನು ತಯಾರಿಸುತ್ತಾರೆ. ಮಳೆಗಾಲದಲ್ಲಿ ಜಾಸ್ತಿ ಮಾಡಲ್ಪಡುವ ದೊಡ್ಡ ಪತ್ರೆ ಎಲೆಯ ಬಜ್ಜಿಗೆ ಫಿದಾ ಆಗದವರೇ ಇಲ್ಲ. ಈ ಎಲೆಯ ಬಜ್ಜಿಯು ರುಚಿಕರವಾಗಿದ್ದು ಊಟದ ಜೊತೆಗೆ ತಿನ್ನಬಹುದು. ಇಲ್ಲವಾದರೆ ಸಂಜೆಯ ಟೀ ಕಾಫಿ ಜೊತೆಗೆ ಸವಿಯಬಹುದು.
ದೊಡ್ಡ ಪತ್ರೆ ಬಜ್ಜಿ ಮಾಡಲು ಬೇಕಾಗುವ ಸಾಮಗ್ರಿಗಳು
* ದೊಡ್ಡಪತ್ರೆ ಎಲೆ
* 1 ಕಪ್ ಕಡಲೆಹಿಟ್ಟು
* ಅರ್ಧ ಚಮಚ ಓಂಕಾಳು
* ಒಂದೆರಡು ಚಮಚ ಖಾರದಪುಡಿ
* ರುಚಿಗೆ ತಕ್ಕಷ್ಟು ಉಪ್ಪು
ಇದನ್ನೂ ಓದಿ: ಮಳೆಗಾಲದಲ್ಲಿ ಗಂಜಿ ಜತೆ ಕೆಸುವಿನೆಲೆ ಚಟ್ನಿ ಸೂಪರ್, ಅಮ್ಮನ ಕೈರುಚಿ ನೆನಪಿಗೆ ಬರುವುದು ಖಂಡಿತ
ದೊಡ್ಡ ಪತ್ರೆ ಎಲೆಯ ಬಜ್ಜಿ ಮಾಡುವ ವಿಧಾನ
* ಮೊದಲಿಗೆ ಒಂದು ಪಾತ್ರೆಯಲ್ಲಿ ಕಡಲೆಹಿಟ್ಟು ತೆಗೆದುಕೊಂಡು ಅದಕ್ಕೆ ಓಂಕಾಳು, ಖಾರದಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ನೀರು ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ.
* ಆ ಬಳಿಕ ಸ್ಟವ್ ಮೇಲೆ ಬಾಣಲೆಯಿಟ್ಟು, ಎಣ್ಣೆ ಬಿಸಿಯಾಗುತ್ತಿದ್ದಂತೆ ಕಲಸಿಟ್ಟ ಹಿಟ್ಟಿನಲ್ಲಿ ದೊಡ್ಡಪತ್ರೆ ಎಲೆಗಳನ್ನು ಒಂದೊಂದಾಗಿ ಮುಳುಗಿಸಿ ಎಣ್ಣೆಯಲ್ಲಿ ಮಧ್ಯಮ ಉರಿಯಲ್ಲಿ ಕರಿಯಿರಿ.
* ಕಂದು ಬಣ್ಣಕ್ಕೆ ತಿರುಗುತ್ತಿದ್ದಂತೆ ಎಣ್ಣೆಯಿಂದ ತೆಗೆದರೆ ರುಚಿಕರವಾದ ದೊಡ್ಡಪತ್ರೆ ಎಲೆಯ ಬಜ್ಜಿಯು ಸವಿಯಲು ಸಿದ್ಧವಾಗಿರುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:50 pm, Thu, 4 July 24