
ಹಚ್ಚಹಸಿರಿನ ಸೊಬಗು, ನಡುವೆ ಕಿರಿದಾದ ರಸ್ತೆ ಹಾಗೂ ಎತ್ತರದ ಬೆಟ್ಟ ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಯಾರಾದ್ರೂ ತಲೆ ಬಾಗಲೇ ಬೇಕು. ಮನಸ್ಸಿಗೆ ನೆಮ್ಮದಿಯೆನಿಸುವ ಈ ತಾಣಕ್ಕೆ ಬಂದರೆ ಸ್ವರ್ಗಕ್ಕೆ ಕಾಲಿಟ್ಟ ಅನುಭವವಾಗುವುದಂತೂ ಖಂಡಿತ. ಸೌಂದರ್ಯವೇ ಹೊದ್ದು ಮಲಗಿದಂತಿರುವ ಕುಂಜಾರುಗಿರಿ (Kunjarugiri) ಪ್ರದೇಶದಲ್ಲಿ ದುರ್ಗಾದೇವಿ (Durga Devi Temple) ನೆಲೆ ನಿಂತಿದ್ದು ಭಕ್ತವೃಂದವನ್ನು ಪೊರೆಯುತ್ತಿದ್ದಾಳೆ. ಹಾಗಾದರೆ ಈ ಪುಣ್ಯಕ್ಷೇತ್ರ ಉಡುಪಿಯಿಂದ ಎಷ್ಟು ದೂರದಲ್ಲಿದೆ? ಈ ಕ್ಷೇತ್ರಕ್ಕೆ ತಲುಪುವುದು ಹೇಗೆ? ಈ ಬಗ್ಗೆ ನೀವಿಲ್ಲಿ ತಿಳಿದುಕೊಳ್ಳಬಹುದು.
ದುರ್ಗಾದೇವಿಯ ನೆಲೆ ನಿಂತ ಈ ಪುಣ್ಯ ಕ್ಷೇತ್ರವಿರುವುದೇ ಉಡುಪಿ ಜಿಲ್ಲೆಯ ಶಂಕರಪುರದ ಸಮೀಪವಿರುವ ಕುಂಜಾರುಗಿರಿಯಲ್ಲಿ. ಭೂಮಟ್ಟಕ್ಕಿಂತ 100 ಅಡಿ ಎತ್ತರದಲ್ಲಿ ಗಿರಿದುರ್ಗೆಯೂ ನೆಲೆಸಿದ್ದು, ಹೀಗಾಗಿ ಈ ಬೆಟ್ಟವನ್ನು ದುರ್ಗಾ ಬೆಟ್ಟ, ವಿಮಾನಗಿರಿ ಹೀಗೆ ನಾನಾ ಹೆಸರಿನಿಂದಲೂ ಸಹ ಕರೆಯಲಾಗುತ್ತದೆ. ಇದೊಂದು ಪ್ರಶಾಂತ ಪರಿಸರ ಹಾಗೂ ಹಚ್ಚ ಹಸಿರಿನ ವನರಾಶಿಯಿಂದ ಆವೃತವಾಗಿರುವ ಪವಿತ್ರ ಪುಣ್ಯ ಕ್ಷೇತ್ರವಾಗಿದ್ದು, ನೂರಾರು ಭಕ್ತರು ಇಲ್ಲಿಗೆ ಬಂದು ತಾಯಿಯ ಕೃಪೆಗೆ ಪಾತ್ರರಾಗುತ್ತಾರೆ.
ಪೂರ್ವಾಭಿಮುಖವಾಗಿ ಈ ದೇವಾಲಯವು ನಿರ್ಮಾಣಗೊಂಡಿದ್ದು ಗರ್ಭಗೃಹ, ತೀರ್ಥ ಮಂಟಪ, ಪ್ರಾಕಾರ ಮಂಟಪ, ಚಂದ್ರಶಾಲೆ, ಬಲಿಪೀಠ ಹಾಗೂ ಧ್ವಜಸ್ತಂಭವನ್ನು ಒಳಗೊಂಡಿದೆ. ಗರ್ಭಗೃಹದ ಅಧಿಷ್ಠಾನವು ಎತ್ತರವಾಗಿದ್ದು, ಗರ್ಭಗೃಹದ ಒಳಗೆ ಪಾಣಿಪೀಠದ ಮೇಲೆ ಚತುರ್ಭುಜಧಾರಿ ದೇವಿಯೂ ನೆಲೆ ನಿಂತಿದ್ದಾಳೆ. ದೇವಿಯ ಮೇಲಿನ ಕೈಗಳಲ್ಲಿ ಶಂಖ-ಚಕ್ರ ಹಾಗೂ ಕೆಳಗಿನ ಕೈಗಳಲ್ಲಿ ತ್ರಿಶೂಲ ಮತ್ತು ಬಿಲ್ಲುಗಳಿವೆ. ಬಲಗಾಲಿನ ಬಳಿ ಮಹಿಷನ ಶಿರವಿದ್ದು, ಆತನನ್ನು ಶೂಲದಿಂದ ಇರಿಯುವಂತೆ ಕೆತ್ತಲಾಗಿದೆ.
ಪುರಾಣದ ಕಥೆಯ ಪ್ರಕಾರವಾಗಿ ಕುಂಜಾರುಗಿರಿಯ ದುರ್ಗೆಯನ್ನು ಪರಶುರಾಮನು ಪ್ರತಿಷ್ಠಾಪಿಸಿ ಪೂಜಿಸಿದನು ಎನ್ನಲಾಗಿದೆ. ಇನ್ನು ಈ ಬೆಟ್ಟದ ಪೂರ್ವ ದಿಕ್ಕಿನಲ್ಲಿರುವ ಪರಶು ತೀರ್ಥ, ಪಶ್ಚಿಮ ದಿಕ್ಕಿನಲ್ಲಿರುವ ಗದಾ ತೀರ್ಥ, ಉತ್ತರದಲ್ಲಿರುವ ಬಾಣ ತೀರ್ಥ ಮತ್ತು ದಕ್ಷಿಣದಲ್ಲಿರುವ ಧನುಸ್ ತೀರ್ಥಗಳು ಪರಶುರಾಮನ ಸೃಷ್ಟಿ ಎನ್ನಲಾಗಿದೆ.
ಇದನ್ನೂ ಓದಿ:ಮುಸ್ಲಿಂ ವಾಸ್ತು ಶಿಲ್ಪಿ ನಿರ್ಮಿಸಿದ ದೇವಾಲಯವಿದು, ಲಿಂಗರೂಪದಲ್ಲಿ ನೆಲೆನಿಂತ ಬ್ರಾಹ್ಮಿ ದುರ್ಗಾ ಪರಮೇಶ್ವರಿ
ಕುಂಜಾರುಗಿರಿಯು ಉಡುಪಿಯಿಂದ ಸುಮಾರು 11 ಕಿಲೋಮೀಟರ್ ದೂರದಲ್ಲಿದೆ.ಕಟಪಾಡಿಯಿಂದ 5 ಕಿಮೀ ದೂರ, ಸುಭಾಸನಗರ ಅಥವಾ ಕುಂಜಾರುಗಿರಿ ಕ್ರಾಸ್ ರಸ್ತೆಯಿಂದ 2 ಕಿಮೀ ದೂರದಲ್ಲಿದೆ. ಇಲ್ಲಿಗೆ ತಲುಪಲು ನಿಯಮಿತ ಬಸ್ಸುಗಳಿದ್ದರೂ ನಿಮ್ಮ ಬಳಿ ಸ್ವಂತ ವಾಹನವಿದ್ದರೆ ಸುಲಭವಾಗಿ ಈ ಸ್ಥಳಕ್ಕೆ ತೆರಳಬಹುದು. ಇನ್ನು, ಕುಂಜಾರುಗಿರಿ ಕ್ರಾಸ್ ರಸ್ತೆಯಿಂದ ಆಟೋ ಮಾಡಿಸಿಕೊಂಡು ಹೋದರೆ ಈ ದೇವಸ್ಥಾನವನ್ನು ತಲುಪಬಹುದು.
ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ