ಮುಸ್ಲಿಂ ವಾಸ್ತು ಶಿಲ್ಪಿ ನಿರ್ಮಿಸಿದ ದೇವಾಲಯವಿದು, ಲಿಂಗರೂಪದಲ್ಲಿ ನೆಲೆನಿಂತ ಬ್ರಾಹ್ಮಿ ದುರ್ಗಾ ಪರಮೇಶ್ವರಿ
ಸಾಮಾನ್ಯವಾಗಿ ನೀವು ಯಾವುದೇ ದೇವಿಯ ದೇವಸ್ಥಾನಕ್ಕೆ ಹೋದ್ರು ಅಲ್ಲಿ ದೇವಿಯ ವಿಗ್ರಹವನ್ನು ನೋಡಿರುತ್ತೀರಿ. ಲಿಂಗ ರೂಪ ಎಂದಾಗ ನೆನಪಿಗೆ ಬರುವುದೇ ಶಿವ. ಆದರೆ ಈ ದೇವಾಲಯದಲ್ಲಿ ಲಿಂಗರೂಪದಲ್ಲಿ ದುರ್ಗಾ ಪರಮೇಶ್ವರಿ ದೇವಿಯನ್ನು ಪೂಜಿಸಲಾಗುತ್ತದೆ. ಹಾಗಾದ್ರೆ ಈ ದೇವಾಲಯ ಇರುವುದು ಎಲ್ಲಿ? ದೇವಿಯನ್ನು ಲಿಂಗ ರೂಪದಲ್ಲಿ ಪೂಜಿಸುವುದು ಏಕೆ, ಏನಿದರ ವಿಶೇಷತೆ? ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಕೆಲವರಿಗೆ ಐತಿಹಾಸಿಕ ಹಿನ್ನಲೆಯುಳ್ಳ ದೇವಸ್ಥಾನಗಳ ಬಗ್ಗೆ, ಪ್ರವಾಸಿ ತಾಣಗಳ ಬಗ್ಗೆ ತಿಳಿದುಕೊಳ್ಳುವ ಹಂಬಲ. ಹೀಗಾಗಿ ಬಿಡುವು ಸಿಕ್ಕಾಗಲೆಲ್ಲಾ ಇತಿಹಾಸ ಪ್ರಸಿದ್ಧ ತಾಣಗಳಿಗೆ ಭೇಟಿ ನೀಡಿ ಅಲ್ಲಿನ ಇತಿಹಾಸದ ಬಗ್ಗೆ ಕೆದಕಿ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಾರೆ. ನೀವೇನಾದ್ರೂ ಈ ಕಮಲಶಿಲೆ ಭೇಟಿ ನೀಡಿದ್ರೆ ಈ ವಿಶೇಷ ದೇವಾಲಯದ ಬಗ್ಗೆ ತಿಳಿದುಕೊಳ್ಳುತ್ತಾ ದೇವಿಯ ದರ್ಶನ ಮಾಡಬಹುದು. ಹೌದು, ಹಚ್ಚಹಸಿರಿನ ಪರಿಸರದ ನಡುವೆ ಬ್ರಾಹ್ಮಿ ದುರ್ಗಾ ಪರಮೇಶ್ವರಿಯೂ (Brahmi durgaparameshwari) ನೆಲೆ ನಿಂತ ಪುಣ್ಯಕ್ಷೇತ್ರವಿದು. ಇದು ಮಲೆನಾಡಿನ ಹಚ್ಚ ಹಸಿರಾದ ಗಿಡಮರಗಳ ನಡುವೆ ಹರಿಯುವ ಈ ಕುಬ್ಜಾ ನದಿಯ ದಡದ ಮೇಲಿದೆ. ಇಲ್ಲಿ ದೇವಿಯನ್ನು ಲಿಂಗ ರೂಪದಲ್ಲಿ ಪೂಜಿಸುವುದೇ ವಿಶೇಷ. ಉಡುಪಿ ಜಿಲ್ಲೆಯ ಕುಂದಾಪುರದಿಂದ (Kundapur, Udupi district) ಕೇವಲ 35 ಕಿ.ಮೀ ದೂರದಲ್ಲಿರುವ ಈ ಕಮಲಶಿಲೆಯು ಸುತ್ತಲೂ ಸುಂದರವಾದ ಪರ್ವತಗಳು, ನಿತ್ಯಹರಿದ್ವರ್ಣ ಕಾಡುಗಳಿಂದ ಸುತ್ತುವರಿದಿದ್ದು ಪರಿಸರ ಪ್ರೇಮಿಗಳನ್ನು ಕೈ ಬೀಸಿ ಕರೆಯುತ್ತದೆ.
ಲಿಂಗ ರೂಪದಲ್ಲಿ ನೆಲೆ ನಿಂತಿದ್ದರ ಹಿಂದಿದೆ ಈ ಪುರಾಣದ ಕಥೆ:
ಕಮಲಶಿಲೆಯ ಬ್ರಾಹ್ಮಿ ದುರ್ಗಾ ಪರಮೇಶ್ವರಿ ದೇವಿಯು ಲಿಂಗ ರೂಪದಲ್ಲಿ ನೆಲೆ ನಿಂತಿರುವುದರ ಹಿಂದೆ ಈ ಪುರಾಣ ಕಥೆಯಿದೆ. ಈ ಕುಬ್ಜಾನದಿ ದಡದಲ್ಲಿ ‘ರೈಕ್ವ ಮುನಿ’ ಎಂಬ ಮಹರ್ಷಿಯ ಆಶ್ರಮ ಸೇರಿದಂತೆ ಹೀಗೆ ಅನೇಕ ಖುಷಿ ಮುನಿಗಳ ಆಶ್ರಮವಿದ್ದವು. ಆದರೆ ಈ ಕರಾಸುರ ಮತ್ತು ರಕ್ತಾಸುರ ಎಂಬ ಇಬ್ಬರೂ ರಾಕ್ಷಸರು ಋಷಿಮುನಿಗಳಿಗೆ ತುಂಬಾನೇ ತೊಂದರೆ ಕೊಡುತ್ತಿದ್ದರು. ಹೀಗಾಗಿ ಈ ರಾಕ್ಷಸರಿಬ್ಬರ ಉಪಟಳ ಹೆಚ್ಚಾಗುತ್ತಿದ್ದಂತೆ ಖುಷಿಗಳು ಆದಿಪರಾಶಕ್ತಿಯ ತಪಸ್ಸು ಮಾಡಿ ದೇವಿಯ ಬಳಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡರು. ಆ ಇಬ್ಬರೂ ರಾಕ್ಷಸರನ್ನು ಸಂಹರಿಸಲು ಪ್ರಾರ್ಥಿಸಿಕೊಂಡರು. ದೇವಿಯೂ ಪ್ರತ್ಯಕ್ಷಳಾಗಿ ಇಬ್ಬರನ್ನು ಸಂಹರಿಸಿ, ಋಷಿಗಳ ಪ್ರಾರ್ಥನೆಗೆ ಒಪ್ಪಿ ದೇವಿಯು ಈ ನದಿಯ ತಟದಲ್ಲಿ ಲಿಂಗ ರೂಪದಲ್ಲಿ ನೆಲೆನಿಂತಳು ಎನ್ನಲಾಗಿದೆ. ಅಂದಿನಿಂದ ಇಲ್ಲಿ ದುರ್ಗಾ ಪರಮೇಶ್ವರಿ ದೇವಿಯನ್ನು ಲಿಂಗರೂಪದಲ್ಲಿ ದೇವಿಯನ್ನು ಪೂಜಿಸಲಾಗುತ್ತಿದೆ. ಹೀಗಿರುವಾಗ ಒಂದು ದಿನ ದೇವಿಯ ಪೂಜೆ ಮಾಡುತ್ತಿದ್ದ ಬ್ರಾಹ್ಮಣನ ಕನಸಿನಲ್ಲಿ ಬಂದ ದೇವಿಯೂ ಲಿಂಗರೂಪದಲ್ಲಿ ನೆಲೆನಿಂತ ತಾನು ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಿ ಎನ್ನುತ್ತಾಳೆ. ಈ ಬಗ್ಗೆ ಊರಿನ ಗ್ರಾಮಸ್ಥರು ಹಾಗೂ ಮುಖ್ಯಸ್ಥರಿಗೆ ತಿಳಿಸಿದಾಗ ಅವರು ದೇವಿಯ ವಿಗ್ರಹವನ್ನು ಪ್ರತಿಷ್ಠಾಪಿಸಲು ಮುಂದಾಗುತ್ತಾರೆ. ಆ ಬಳಿಕ ಲಿಂಗ ರೂಪದ ಜೊತೆಗೆ ದೇವಿಯ ವಿಗ್ರಹಕ್ಕೆ ಪೂಜೆ ಸಲ್ಲಿಸಲಾಗುತ್ತದೆ.
ಇಲ್ಲಿನ ವಿಶೇಷವೇ ಈ ಸಲಾಂ ಪೂಜೆ:
ಕಮಲಶಿಲೆಯ ಬ್ರಾಹ್ಮಿ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಸಲಾಂ ಪೂಜೆ ಬಹಳ ವಿಶೇಷ. ಮುಸ್ಲಿಂ ಆಡಳಿತಗಾರರಾದ ಹೈದರ್ ಅಲಿ ಹಾಗೂ ಅವರ ಮಗ ಟಿಪ್ಪು ಸುಲ್ತಾನ್ ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಪ್ರತಿದಿನ ಸಂಜೆಯ ವೇಳೆ ಸಲಾಂ ಪೂಜೆ ಮಾಡಲಾಗುತ್ತದೆ. ಇನ್ನು ಪ್ರತಿವರ್ಷ ಏಪ್ರಿಲ್ ತಿಂಗಳಲ್ಲಿ ನಡೆಯುವ ಈ ವಾರ್ಷಿಕ ಕಾರ್ ಉತ್ಸವದಲ್ಲೂ ಸಾವಿರಾರು ಭಕ್ತರು ಭಾಗಿಯಾಗುತ್ತಾರೆ.

ಮುಸ್ಲಿಂ ವಾಸ್ತು ಶಿಲ್ಪಿ ನಿರ್ಮಿಸಿದ ದೇವಾಲಯ:
ಕಮಲಶಿಲೆ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಾಲಯವನ್ನು ಮುಸ್ಲಿಂ ವಾಸ್ತುಶಿಲ್ಪಿ ಬಪ್ಪ ನಿರ್ಮಿಸಿದನು ಎನ್ನಲಾಗಿದೆ. ದೇವಾಲಯದ ಉತ್ಸವದ ವೇಳೆ ಹಿಂದೂಗಳು ಮಾತ್ರವಲ್ಲ ಮುಸ್ಲಿಮರು ಭಾಗಿಯಾಗುವುದು ಮತ್ತೊಂದು ಇಲ್ಲಿನ ವಿಶೇಷ.

ಇದನ್ನೂ ಓದಿ: ಬಾವಲಿಗೆ ಪೂಜೆ ಮಾಡುವ ಗ್ರಾಮವಿದು, ಇದು ಎಲ್ಲಿದೆ ಗೊತ್ತಾ?
ಕಮಲಶಿಲೆಗೆ ತಲುಪುವುದು ಹೇಗೆ?
ಕಮಲಶಿಲೆಗೆ ಸಮೀಪದಲ್ಲಿರುವ ವಿಮಾನ ನಿಲ್ದಾಣವೆಂದರೆ ಅದುವೇ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ. ಹೀಗಾಗಿ ವಿಮಾನದ ಮೂಲಕ ಬರುವಿರಿಯಾದರೆ ಮಂಗಳೂರಿಗೆ ಬಂದು ತಲುಪಿದರೆ ಅಲ್ಲಿಂದ ಖಾಸಗಿ ಬಸ್ ಅಥವಾ ವಾಹನದ ಮೂಲಕ ಕಮಲಶಿಲೆಗೆ ತಲುಪಬಹುದು. ಇನ್ನು ಸಮೀಪದಲ್ಲೇ ಕುಂದಾಪುರ ರೈಲು ನಿಲ್ದಾಣವಿದ್ದು, ಇದು ಸುಮಾರು 35 ಕಿ. ಮೀ ದೂರದಲ್ಲಿದೆ. ರೈಲಿನ ಮೂಲಕ ಕುಂದಾಪುರಕ್ಕೆ ಬಂದಿಳಿದರೆ ಇಲ್ಲಿ ಖಾಸಗಿ ವಾಹನ ಮಾಡಿಕೊಂಡು ಕಮಲಶಿಲೆಗೆ ಹೋಗಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:00 am, Fri, 5 September 25








