ಚಳಿಗಾಲದ ಹೊರತಾಗಿಯೂ ತುಟಿ ಒಡೆಯಲು ಕಾರಣವೇನು? ತಜ್ಞರು ನೀಡಿರುವ ಸಲಹೆ ಇಲ್ಲಿದೆ
ನಿಮ್ಮ ತುಟಿಗಳಿಗೆ ಆಗಾಗ ಉಗುಳು ತಾಗಿಸಿಕೊಳ್ಳುವ ಅಥವಾ ಕಚ್ಚುವ ಅಭ್ಯಾಸವಿದ್ದರೆ, ಈಗಲೇ ಬಿಟ್ಟು ಬಿಡಿ ಎಂದು ತಜ್ಞರು ಸಲಹೆ ನೀಡುತ್ತಾರೆ.
ಚಳಿಗಾಲದಲ್ಲಿ ತುಟಿ ಒಡೆದುಕೊಳ್ಳುವುದು ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆಯಾಗಿದೆ. ಇದು ಬಿರುಕು ಬಿಡುವುದಲ್ಲದೇ ಸಾಕಷ್ಟು ನೋವನ್ನುಂಟು ಮಾಡುತ್ತದೆ. ಚಳಿಗಾಲದಲ್ಲಿ ವಿಶೇಷವಾಗಿ ಕಾಳಜಿ ವಹಿಸಿಕೊಳ್ಳದ್ದಿದ್ದರೆ, ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಕಡಿಮೆ ನೀರು ಕುಡಿಯುವುದು ಈ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಇದಲ್ಲದೇ ನಿಮ್ಮ ತುಟಿಗಳನ್ನು ನೆಕ್ಕುವ ಅಥವಾ ಕಚ್ಚುವ ಅಥವಾ ಕಿರಿಕಿರಿಯುಂಟುಮಾಡುವ ಅಭ್ಯಾಸಗಳಿದ್ದರೂ ಸಹ ತುಟಿ ಒಡೆದುಕೊಳ್ಳಲು ಕಾರಣವಾಗುತ್ತದೆ. ಇವೆಲ್ಲಾ ಕಾರಣಗಳನ್ನು ಹೊರತುಪಡಿಸಿ ಕೂಡ ತುಟಿ ಬಿರುಕು ಬಿಡುತ್ತದೆ. ಅಂತಹ ಕಾರಣಗಳ ಕುರಿತು ಚರ್ಮಶಾಸ್ತ್ರಜ್ಞರಾದ ಡಾ.ಜೈಶ್ರೀ ಶರದ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ತುಟಿ ಬಿರುಕುಗಳನ್ನು ಉಂಟುಮಾಡುವ ಕೆಲವು ಸಾಮಾನ್ಯ ಕಾರಣಗಳು ಇಲ್ಲಿವೆ:
- ನೀವು ಬಳಸುವ ಕೆಲವೊಂದು ಫೇಸ್ ವಾಶ್‌ಗಳು ನಿಮ್ಮ ತುಟಿಗೆ ಅಲರ್ಜಿಯುಂಟು ಮಾಡಬಹುದು.
- ಮಹಿಳೆಯರು ಬಳಸುವ ಕೆಲವು ಮೇಕಪ್ ರಿಮೂವರ್‌ಗಳಲ್ಲಿ ಹೆಚ್ಚಿನ ಕೆಮಿಕಲ್ ಹೊಂದಿರುವುದರಿಂದ ಇದು ತುಟಿಗಳನ್ನು ಹಾನಿಗೊಳಿಸಬಹುದು.
- ಕೆಲವು ಸಂದರ್ಭಗಳಲ್ಲಿ ನೀವು ತಿನ್ನುವ ಬಬಲ್ ಗಮ್, ಚೂಯಿಂಗ್ ಗಮ್ ಮತ್ತು ಮೌತ್ ವಾಶ್ಗಳಿಂದಲೂ ಕೂಡ ಅಲರ್ಜಿಯಾಗುವ ಸಾಧ್ಯತೆ ಹೆಚ್ಚಿದೆ.
- ವಿಶೇಷವಾಗಿ ಮ್ಯಾಟ್ ಲಿಪ್‌ಸ್ಟಿಕ್‌ಗಳು ಅಥವಾ ಲಿಪ್ ಬಾಮ್‌ಗಳಲ್ಲಿ ಹೆಚ್ಚಿನ ಸುಗಂಧ ದ್ರವ್ಯಗಳನ್ನು ಹಾಕಲಾಗುತ್ತದೆ.
- ಇಂತಹ ಕೆಮಿಕಲ್ ಅಂಶಗಳು ಕೂಡ ನಿಮ್ಮ ತುಟಿ ಬಿರುಕುಬಿಡಲು ಕಾರಣವಾಗುತ್ತದೆ ಎಂದು ಡಾ ಜೈಶ್ರೀ ಶರದ್ ಹೇಳುತ್ತಾರೆ.
- ಚರ್ಮಶಾಸ್ತ್ರಜ್ಞರ ಪ್ರಕಾರ, ನೀವು ಬಳಸುವ ನೇಲ್ ಪಾಲಿಷ್‌ಗಳು ಕೂಡ ತುಟಿಯ ಅಲರ್ಜಿಗೆ ಕಾರಣವಾಗಬಹುದು. ಧೂಮಪಾನವು ನಿಮ್ಮ ಒಟ್ಟಾರೆ ಆರೋಗ್ಯವನ್ನು ಕೆಡಿಸುತ್ತದೆ ಎಂಬುದು ಈಗಾಗಲೇ ತಿಳಿದಿರುವ ವಿಷಯ. ಇದು ನಿಮ್ಮ ತುಟಿಗಳ ಮೇಲೆಯೂ ಕೂಡ ಕೆಟ್ಟ ಪರಿಣಾಮ ಬೀರುತ್ತದೆ.
- ತಜ್ಞರ ಪ್ರಕಾರ ಹೆಚ್ಚು ಆಲ್ಕೋಹಾಲ್ ಸೇವನೆಯು ತುಟಿಗಳಿಗೆ ಹಾನಿ ಮಾಡುತ್ತದೆ ಮತ್ತು ನಿರ್ಜಲೀಕರಣಗೊಳಿಸುತ್ತದೆ.
ಇದನ್ನೂ ಓದಿ: ಪ್ಯಾನಿಕ್ ಅಟ್ಯಾಕ್ ಸಮಸ್ಯೆಯಿಂದ ಬಳಲುತ್ತಿರುವವರಿಗೆ, ನೀವು ಈ ರೀತಿ ಸಹಾಯಮಾಡಿ
ಡಾ ಜೈಶ್ರೀ ಶರದ್ ಒಡೆದ ತುಟಿಗಳಿಗೆ ಚಿಕಿತ್ಸೆ ನೀಡಲು ಕೆಲವು ಸಲಹೆಗಳನ್ನು ನೀಡಿದ್ದಾರೆ:
ಪ್ರತಿದಿನ 2ಲೀಟರ್ ನೀರು ಕುಡಿಯಿರಿ. ಕೆಫೀನ್ ತಪ್ಪಿಸುವುದು ಮತ್ತು ದೀರ್ಘಕಾಲ ಉಳಿಯುವ ಲಿಪ್‌ಸ್ಟಿಕ್‌ಗಳನ್ನು ಅನ್ವಯಿಸದಿರುವುದು. ಸುಗಂಧ, ಮೆಂಥಾಲ್ ಮತ್ತು ಕ್ಯಾಪ್ಸೈಸಿನ್ ಹೊಂದಿರದ ಲಿಪ್ ಬಾಮ್ ಬಳಸಲು ಚರ್ಮರೋಗ ತಜ್ಞರು ಸಲಹೆ ನೀಡುತ್ತಾರೆ. ಒಡೆದ ತುಟಿಗಳಿಗೆ ಚಿಕಿತ್ಸೆ ನೀಡಲು ನೀವು ಲಿಪ್ ಬಾಮ್ಗಳ ಬದಲಾಗಿ ತುಪ್ಪ, ಬೆಣ್ಣೆ ಹಚ್ಚಿ ಎಂದು ಸಲಹೆ ನೀಡುತ್ತಾರೆ. ಹೆಚ್ಚುವರಿಯಾಗಿ, ವಿಟಮಿನ್ ಸಿ, ವಿಟಮಿನ್ ಇ ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳು ಸಮೃದ್ಧವಾಗಿರುವ ಆಹಾರ ಸೇವಿಸಿ ಎಂದು ಸಲಹೆ ನೀಡುತ್ತಾರೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 10:44 am, Sun, 29 January 23