ಸಾಂದರ್ಭಿಕ ಚಿತ್ರ
ಮಕರ ಸಂಕ್ರಾಂತಿಯು ಕ್ಯಾಲೆಂಡರ್ ನಲ್ಲಿ ಮೊದಲ ಹಬ್ಬವಾಗಿದೆ. ಸುಗ್ಗಿಯನ್ನು ಸಾರುವ ಹಬ್ಬವಿದು, ದ್ರಾವಿಡ ಸಂಪ್ರದಾಯವನ್ನು ಪಾಲಿಸುವವರಿಗೆ ಇದೊಂದು ವಿಶೇಷ ದಿನವಾಗಿದೆ. ಈ ಸಂಕ್ರಾಂತಿ ದಿನದಂದು ಉತ್ತರ ಕರ್ನಾಟಕ ಸೇರಿದಂತೆ ವಿವಿಧ ಭಾಗಗಳಲ್ಲಿ ವಿವಾಹಿತ ಹಾಗೂ ಅವಿವಾಹಿತ ಹೆಣ್ಣುಮಕ್ಕಳು ಎಳ್ಳು-ಬೆಲ್ಲ, ಕೊಬ್ಬರಿ, ನೆಲಗಡಲೆ, ಕಬ್ಬು, ಬಾಳೆಹಣ್ಣು, ಸಕ್ಕರೆ ಅಚ್ಚು ಹೀಗೆ ನಾನಾ ರೀತಿ ತಿನಿಸುಗಳನ್ನು ಎಲ್ಲರಿಗೂ ಹಂಚಿ ಸಂಭ್ರಮಿಸುತ್ತಾರೆ. ಈ ಹಬ್ಬಕ್ಕೆ ಮನೆಯಲ್ಲಿ ವಿವಿಧ ಸಿಹಿ ತಿಂಡಿ ಹಾಗೂ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಈ ಉತ್ತರ ಕರ್ನಾಟಕದ ಭಾಗಗಳಲ್ಲಿ ಹುಗ್ಗಿಯು ವಿಶೇಷವಾಗಿದ್ದು, ಈ ರೆಸಿಪಿ ಮಾಡುವ ವಿಧಾನ ಇಲ್ಲಿದೆ.
ಹುಗ್ಗಿ ಮಾಡಲು ಬೇಕಾಗುವ ಸಾಮಗ್ರಿಗಳು
- ನಾಲ್ಕು ಕಪ್ ಅಕ್ಕಿ
- ಎರಡು ಕಪ್ ಹೆಸರು ಬೇಳೆ
- 50 ಗ್ರಾಂ ಶೇಂಗಾ
- ಕಾಲು ಚಮಚ ಅರಿಶಿನ ಪುಡಿ
- ಒಂದು ಚಮಚ ಜೀರಿಗೆ
- ಅರ್ಧ ಚಮಚ ಮೆಣಸಿನ ಕಾಳು
- ಅರ್ಧ ಒಣ ಕೊಬ್ಬರಿ ತುರಿ
- ಒಂದು ಚಮಚ ತುಪ್ಪ
- ರುಚಿಗೆ ತಕ್ಕಷ್ಟು ಉಪ್ಪು
ಹುಗ್ಗಿ ಮಾಡುವ ವಿಧಾನ
- ಮೆಣಸು, ಜೀರಿಗೆ, ಒಣ ಕೊಬ್ಬರಿಯನ್ನು ತುಪ್ಪದಲ್ಲಿ ಹುರಿದು ಪುಡಿ ಮಾಡಿಟ್ಟುಕೊಳ್ಳಿ.
- ತದನಂತರದಲ್ಲಿ ಒಂದು ಪಾತ್ರೆಯಲ್ಲಿ 10 ಕಪ್ ನೀರು ಹಾಕಿ, ಅದರಲ್ಲಿ ಅಕ್ಕಿ ಮತ್ತು ಹೆಸರು ಬೇಳೆ ಹಾಕಿಕೊಳ್ಳಿ.
- ಅದಕ್ಕೆ ಅರಿಶಿಣ, ಶೇಂಗಾ, ಪುಡಿ ಮಾಡಿಕೊಂಡಿಟ್ಟ ಮಿಶ್ರಣ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕುಕ್ಕರಿನಲ್ಲಿ ಇಟ್ಟು 4 ಸೀಟಿ ಬರುವವರೆಗೆ ಬೇಯಿಸಿಕೊಳ್ಳಿ.
- ಐದು ನಿಮಿಷದ ಬಳಿಕ ಕುಕ್ಕರ್ ಮುಚ್ಚಳ ತೆಗೆದು ಬೆಣ್ಣೆ ಹಾಕಿಕೊಂಡು ಈ ರುಚಿಕರವಾದ ಹುಗ್ಗಿಯನ್ನು ಸವಿಯಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ