Ganesha Chaturthi 2023: ಗಣೇಶನ ನೈವೇದ್ಯಕ್ಕಾಗಿ ತಯಾರಿಸಿ ಸಾಂಪ್ರದಾಯಿಕ  ಶೈಲಿಯ ಮೋದಕ

ನೀವು ಗಣೇಶ ಚತುರ್ಥಿಯ ಸಂದರ್ಭದಲ್ಲಿ ಗಣಪನಿಗೆ ಮೋದಕವನ್ನು ಅರ್ಪಿಸಲು ಬಯಸಿದರೆ, ಸಾಂಪ್ರದಾಯಿಕ ಶೈಲಿಯ  ಮೋದಕ ಪ್ರಸಾದವನ್ನು ನೈವೇದ್ಯ ರೂಪದಲ್ಲಿ ಅರ್ಪಿಸಬಹುದು. ಹಾಗಾದರೆ ಸಾಂಪ್ರದಾಯಿಕ ಶೈಲಿಯ ಮೋದಕವನ್ನು ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ.

Ganesha Chaturthi 2023: ಗಣೇಶನ ನೈವೇದ್ಯಕ್ಕಾಗಿ ತಯಾರಿಸಿ ಸಾಂಪ್ರದಾಯಿಕ  ಶೈಲಿಯ ಮೋದಕ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ

Updated on:Sep 19, 2023 | 9:55 AM

ಗಣೇಶ ಚತುರ್ಥಿ (Ganesha Chaturthi) ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ವರ್ಷಂಪ್ರತಿ ದೇಶಾದ್ಯಂತ ಈ ಹಬ್ಬವನ್ನು ಬಹಳ ವಿಜೃಂಭನೆಯಿಂದ ಆಚರಿಸಲಾಗುತ್ತದೆ. ಗಣೇಶ ಚತುರ್ಥಿಯ ದಿನದಂದು ಹಲವರ ಮನೆಯಲ್ಲಿ ಗಣೇಶ ವಿಗ್ರಹವನ್ನು ಪ್ರತಿಷ್ಠಾಪಿಸುವ ಸಂಪ್ರದಾಯವಿದೆ. ಮತ್ತು ಚೌತಿಯ  ದಿನದಂದು ಹಲವು ಬಗೆಯ ಸಿಹಿಗಳನ್ನು ತಯಾರಿಸಿ ಗಣೇಶನಿಗೆ ನೈವೇದ್ಯ ಇಡಲಾಗುತ್ತದೆ.  ಈ ನೈವೇದ್ಯ ಪ್ರಸಾದದಲ್ಲಿ ಮುಖ್ಯವಾಗಿ ಮೋದಕ ಇರಲೇಬೇಕು. ಏಕೆಂದರೆ ಮೋದಕವು ಗಣಪನಿಗೆ ಅತ್ಯಂತ ಪ್ರಿಯವಾದ ಸಿಹಿಯಾಗಿದೆ. ಅದಕ್ಕಾಗಿಯೇ ಗಣೇಶನನ್ನು ʼಮೋದಕ ಪ್ರಿಯʼ ಎಂದು ಕರೆಯಲಾಗುತ್ತದೆ. ಹಲವು ರೀತಿಯಲ್ಲಿ, ಹಲವು ವಿಧಗಳಲ್ಲಿ ಮೋದಕವನ್ನು ತಯಾರಿಸಲಾಗುತ್ತದೆ. ಆದರೆ ಸಾಂಪ್ರದಾಯಿಕ ಶೈಲಿಯಲ್ಲಿ ತಯಾರಿಸಿ ದೇವರಿಗೆ ಅರ್ಪಿಸುವುದು ಹೆಚ್ಚು ಸೂಕ್ತ. ಹಾಗಾದರೆ ಸಾಂಪ್ರದಾಯಿಕ ಶೈಲಿಯ ಮೋದಕವನ್ನು ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ.

ಸಾಂಪ್ರದಾಯಿಕ ಶೈಲಿಯ ಮೋದಕವನ್ನು ತಯಾರಿಸಲು ಬೇಕಾಗುವ ಸಾಮಾಗ್ರಿಗಳು

• 1 ಕಪ್ ಅಕ್ಕಿ ಹಿಟ್ಟು
• 1 ಕಪ್ ನೀರು
• ದೇಸಿ ಹಸುವಿನ ತುಪ್ಪ
• ರುಚಿಗೆ ತಕ್ಕಷ್ಟು ಉಪ್ಪು

ಹೂರಣಕ್ಕಾಗಿ ಬೇಕಾಗುವ ಸಾಮಾಗ್ರಿಗಳು

• ತೆಂಗಿನಕಾಯಿ ತುರಿ
• ಬೆಲ್ಲ
• ಏಲಕ್ಕಿ ಪುಡಿ
• ಜಾಯಿಕಾಯಿ ಪುಡಿ
• ಗಸಗಸೆ
• ಒಣದ್ರಾಕ್ಷಿ, ಬಾದಮಿ ಪಿಸ್ತಾ (ಐಚ್ಛಿಕ)
• ದೇಸಿ ಹಸುವಿನ ತುಪ್ಪ
• ಅಕ್ಕಿ ಹಿಟ್ಟು

ಸಾಂಪ್ರದಾಯಿಕ ಶೈಲಿಯ ಮೋದಕವನ್ನು ತಯಾರಿಸುವ ವಿಧಾನ:

ಮೊದಲನೆಯದಾಗಿ ಹೂರಣವನ್ನು ತಯಾರಿಸಿಕೊಳ್ಳಬೇಕು. ಅದಕ್ಕಾಗಿ ಒಂದು ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿ ಮತ್ತು ಅದರಲ್ಲಿ ಗಸಗಸೆಯನ್ನು ಹುರಿದುಕೊಳ್ಳಿ. ನಂತರ ಅದಕ್ಕೆ ತಾಜಾ ತುರಿದ ತೆಂಗಿನಕಾಯಿಯನ್ನು ಸೇರಿಸಿ ಮತ್ತು ಅದರೊಂದಿಗೆ ನಿಮ್ಮ ಸಿಹಿಗೆ ಅನುಗುಣವಾಗಿ ತುರಿದ ಬೆಲ್ಲವನ್ನು  ಹಾಕಿ, ಚೆನ್ನಾಗಿ ಮಿಶ್ರಣ ಮಾಡಿಕೊಂಡು ಕಡಿಮೆ ಉರಿಯಲ್ಲಿ ಹುರಿದುಕೊಳ್ಳಿ. ನಂತರ ಅದಕ್ಕೆ ಏಲಕ್ಕಿ ಪುಡಿ, ಜಾಯಿಕಾಯಿ ಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿಕೊಳ್ಳಿ. ಅದರೊಂದಿಗೆ ದ್ರಾಕ್ಷಿ, ಸಣ್ಣಗೆ ಹೆಚ್ಚಿ ಪಿಸ್ತಾ ಮತ್ತು ಬಾದಾಮಿಯನ್ನು ಕೂಡಾ ಸೇರಿಸಿಕೊಳ್ಳಿ.  ಈ ಎಲ್ಲಾ ಮಿಶ್ರಣವನ್ನು ಬೆಲ್ಲ ಕರಗಿ ಅದರ ತೇವಾಂಶ ಹೋಗುವವರೆಗೆ ಹುರಿಯಿರಿ. ಮತ್ತು ಹೂರಣ ಗಟ್ಟಿಯಾಗದಂತೆ ನೋಡಿಕೊಳ್ಳಿ. ನಂತರ ಗ್ಯಾಸ್ ಆಫ್ ಮಾಡಿ ಹೂರಣವನ್ನು ತಣ್ಣಗಾಗಲು ಬಿಡಿ.
ಈಗ ಮೋದಕದ ಹಿಟ್ಟನ್ನು ತಯಾರಿಸಿಕೊಳ್ಳಬೇಕು.  ಅದಕ್ಕಾಗಿ ಒಂದು ಬಾಣಲೆಗೆ ತುಪ್ಪ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ನೀರನ್ನು ಹಾಕಿ ಕುದಿಸಿಕೊಳ್ಳಿ. ನೀರು ಕುದಿಯಲು ಆರಂಭಿಸಿದಾಗ ಗ್ಯಾಸ್ ಉರಿಯನ್ನು ಕಡಿಮೆ ಮಾಡಿಕೊಳ್ಳಿ ಮತ್ತು ಅಕ್ಕಿ ಹಿಟ್ಟನ್ನು ಅದಕ್ಕೆ ಸೇರಿಸಿಕೊಳ್ಳಿ. ಅಕ್ಕಿ ಹಿಟ್ಟು ನೀರನ್ನು ಹೀರಿಕೊಳ್ಳುವವರೆಗೆ ಚೆನ್ನಾಗಿ ಬೆರೆಸಿ. ನಂತರ ಸ್ಟವ್ ಆಫ್ ಮಾಡಿ. ಹಿಟ್ಟು ತಣ್ಣಗಾದ ಬಳಿಕ ಅದನ್ನು ಚೆನ್ನಾಗಿ ನಾದಿಕೊಳ್ಳಿ, ಹಾಗೂ  ಹಿಟ್ಟನ್ನು ಮೃದುವಾಗಿಡಲು ಒದ್ದೆ ಬಟ್ಟೆಯಿಂದ ಅದನ್ನು ಸುತ್ತಿಡಿ.
ಈಗ ಹಿಟ್ಟಿನಿಂದ ಸಣ್ಣ ಸಣ್ಣ ಉಂಡೆಗಳನ್ನು ತಯಾರಿಸಿ, ನಂತರ ಸಣ್ಣ ಪೂರಿಯ ಆಕಾರಕ್ಕೆ ಹಿಟ್ಟನ್ನು ತಟ್ಟಿಕೊಂಡು  ಅದರಲ್ಲಿ ಮೊದಲೇ ತಯಾರಿಸಿಟ್ಟ ಹೂರಣವನ್ನು ತುಂಬಿ  ಮೋದದಕವನ್ನು ತಯಾರಿಸಿ. ಅಥವಾ ನೀವು ಮೋದಕವನ್ನು ಮೋದಕದ ಅಚ್ಚಿನ ಸಹಾಯದಿಂದಲೂ ತಯಾರಿಸಬಹುದು. ಎಲ್ಲಾ ಮೋದಕವನ್ನು ಹೂರಣ ಹಾಕಿ ತುಂಬಿಸಿದ ಬಳಿಕ, ಅದನ್ನು ಹಬೆಯಲ್ಲಿ ಬೇಯಿಸಬೇಕಾಗುತ್ತದೆ. ಇದಕ್ಕಾಗಿ ಸ್ಟೀಮರ್ ಮೇಲೆ ತುಪ್ಪವನ್ನು ಅನ್ವಯಿಸಿ, ಅಥವಾ ಬಾಳೆ ಎಲೆಯನ್ನಿಟ್ಟು, ತಯಾರಿಸಿದ ಎಲ್ಲಾ ಮೋದಕವನ್ನು ಸ್ಟೀಮರ್ ನಲ್ಲಿ ಇರಿಸಿ, ಮುಚ್ಚಳ ಮುಚ್ಚಿ  10 ರಿಂದ 15 ನಿಮಿಷಗಳ ಕಾಲ ಬೇಯಿಸಿ. ಹೀಗೆ ಹಬೆಯಲ್ಲಿ ಬೇಯಿಸಿದ ಸಾಂಪ್ರದಾಯಿಕ ಶೈಲಿಯ ಮೋದಕವನ್ನು ಗಣೇಶನಿಗೆ ನೈವೇದ್ಯ ರೂಪದಲ್ಲಿ ಅರ್ಪಿಸಿ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 6:40 pm, Fri, 15 September 23