
ಮದುವೆ (Marriage) ಅನ್ನೋದು ಪ್ರತಿಯೊಬ್ಬರ ಜೀವನದ ಪ್ರಮುಖ ಘಟ್ಟ. ವಿವಾಹ ಅನ್ನೋದು ಗಂಡು-ಹೆಣ್ಣಿನ ಬಾಳಿನ ಹೊಸ ಅಧ್ಯಾಯ, ಶಾಶ್ವತ ಬಂಧ ಕೂಡಾ ಹೌದು. ಇದೇ ಕಾರಣಕ್ಕೆ ಗಡಿಬಿಡಿಯಲ್ಲಿ ಮದುವೆಯಾಗ್ಬಾರ್ದು, ಮದುವೆಯ ವಿಷಯದಲ್ಲಿ ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ಹಲವರು ಹೇಳುತ್ತಾರೆ. ಈ ಮದುವೆಯ ವಿಷಯಕ್ಕೆ ಬಂದಾಗ ಹೆಚ್ಚಿನವರಿಗೆ ಒಂದು ಕಡೆಯಲ್ಲಿ ಎಂತಹ ಸಂಗಾತಿಯನ್ನು (Partner) ಆಯ್ಕೆ ಮಾಡಿದರೆ ಸೂಕ್ತ ಎಂಬ ಪ್ರಶ್ನೆ ಮೂಡಿದರೆ, ಇನ್ನೊಂದು ಕಡೆಯಲ್ಲಿ ಯಾವ ವಯಸ್ಸಲ್ಲಿ ಮದುವೆಯಾದ್ರೆ ಸೂಕ್ತ, ನಾನೇನಾದ್ರೂ ಮದುವೆ ವಿಷಯದಲ್ಲಿ ಲೇಟ್ ಮಾಡ್ತಿದ್ದೀನಾ, ಮ್ಯಾರೇಜ್ ಆಗೋಕೆ ಸೂಕ್ತ ವಯಸ್ಸೆಷ್ಟು (Age) ಎಂಬ ಪ್ರಶ್ನೆ ಮೂಡುತ್ತದೆ. ಹಾಗಾದ್ರೆ ಮದುವೆ ಆಗೋಕೆ ನಿಜಕ್ಕೂ ವಯಸ್ಸು ಮುಖ್ಯನಾ? ಮ್ಯಾರೇಜ್ ಆಗೋಕೆ ಪರ್ಫೆಕ್ಟ್ ಏಜ್ ಯಾವುದು? ಈ ಕುರಿತ ಮಾಹಿತಿ ಇಲ್ಲಿದೆ.
ಸಾಮಾನ್ಯವಾಗಿ ನಮ್ಮ ಸಮಾಜದಲ್ಲಿ ಹುಡುಗಿಗೆ 20, 25 ವರ್ಷ ಆಗ್ತಿದ್ದಂಗೆ ಎಲ್ಲರೂ ಯಾವಾಗ ಮದುವೆ, ಬೇಗ ಮದುವೆ ಮಾಡ್ಕೋ, ವಯಸ್ಸಾದ್ರೆ ಗಂಡು ಸಿಗೊಲ್ಲ ಅಂತೆಲ್ಲಾ ಹೇಳ್ತಾರೆ. ಅದೇ ರೀತಿ ಹುಡುಗರಿಗೆ 30 ವರ್ಷ ಆಗ್ತಿದ್ದಂಗೆ ಬೇಗ ಮದುವೆ ಆಗು ಎಂದು ಒತ್ತಾಯ ಮಾಡ್ತಾರೆ. ಹೀಗಿರುವಾಗ 25 ರಿಂದ 30 ವರ್ಷದ ಒಳಗೆ ಮದುವೆ ಆಗ್ಲೇ ಬೇಕಾ, ವಯಸ್ಸು ಅಷ್ಟು ಮುಖ್ಯನಾ ಅಂತ ನೋಡಿದಾಗ, ಈ ಬಗ್ಗೆ ತಜ್ಞರು ಏನು ಹೇಳ್ತಾರೆ ಅಂದ್ರೆ “ಮದುವೆಗೆ ಪರಿಪೂರ್ಣ ವಯಸ್ಸು ಅನ್ನೋದು ಇಲ್ಲ. ಒಬ್ಬ ವ್ಯಕ್ತಿ ಮಾನಸಿಕವಾಗಿ ಪ್ರಬುದ್ಧನಾಗಿದ್ದಾಗ, ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಸಿದ್ಧರಿದ್ದಾಗ ಮತ್ತು ಆರ್ಥಿಕವಾಗಿ ಸದೃಢವಾಗಿದ್ದಾಗ ಮದುವೆಯಾಗಬಹುದು.” ಹೀಗೆ ಮದುವೆಗೆ ವಯಸ್ಸಿಗಿಂತ ಜೀವನವನ್ನು ಸರಿಯಾಗಿ ನಡೆಸಿಕೊಂಡು ಹೋಗುವ ಪ್ರಬುದ್ಧತೆ ಮುಖ್ಯ ಎನ್ನುತ್ತಾರೆ ತಜ್ಞರು.
ನಮ್ಮ ಭಾರತದ ಕಾನೂನಿನಲ್ಲಿ ಮದುವೆಯಾಗಲು ಹುಡುಗಿಯ ವಯಸ್ಸು 21 ಆಗಿರಬೇಕು ಹಾಗೂ ಹುಡುಗನ ವಯಸ್ಸು 22 ವರ್ಷ ಆಗಿರಬೇಕು. ಆದ್ರೆ ಹೆಚ್ಚಿನವರು ಮದುವೆಗೆ ವಯಸ್ಸಲ್ಲ, ಪ್ರಬುದ್ಧತೆ ಮುಖ್ಯ ಎನ್ನುತ್ತಾರೆ. ಇನ್ನೂ ಕೆಲವರು ಬಂಜೆತನದ ಸಮಸ್ಯೆ ಬರಬಾರದು, ಬೇಗ ಮಕ್ಕಳಾಗಬೇಕು ಅಂದ್ರೆ 25 ರಿಂದ 30 ವರ್ಷದ ಒಳಗೆ ಮದುವೆ ಆಗ್ಲೇಬೇಕು ಎನ್ನುತ್ತಾರೆ. 30 ವರ್ಷದ ಬಳಿಕ ಮಹಿಳೆಯರಲ್ಲಿ ಹಾಗೂ 35 ವರ್ಷಗಳ ಬಳಿಕ ಪುರುಷರಲ್ಲಿ ಫಲವತ್ತತೆ ಕ್ಷೀಣಿಸಲು ಪ್ರಾರಂಭವಾಗುತ್ತದೆ. ಆದ್ದರಿಂದ 25 ರಿಂದ 30 ವರ್ಷದೊಳಗೆ ಮದುವೆಯಾದರೆ ಸೂಕ್ತ ಎನ್ನುತ್ತಾರೆ.
ಇದನ್ನೂ ಓದಿ: ನೀವು ಭಾವನೆಗಳನ್ನು ಹೇಗೆ ನಿಭಾಯಿಸುತ್ತೀರಿ? ಈ ಚಿತ್ರ ನೋಡಿ ನಿಮ್ಮ ವ್ಯಕ್ತಿತ್ವ ತಿಳಿಯಿರಿ
ಕೆಲವರು ನಾನು ಜೀವನದಲ್ಲಿ ಯಶಸ್ಸು ಸಾಧಿಸಬೇಕು, ಲೈಫ್ ಎಂಜಾಯ್ ಮಾಡ್ಬೇಕು ಅಂತ ಹೇಳಿ 30 ದಾಟಿದರೂ ಮದುವೆ ಬೇಡ ಎನ್ನುತ್ತಾರೆ. ಹೀಗೆ 35 ವರ್ಷಗಳ ಬಳಿಕ ತಡವಾಗಿ ಮದುವೆಯಾಗುತ್ತೇನೆ ಎನ್ನುವವರು, ಮದುವೆಯಾದ ಬಳಿಕ ಮಕ್ಕಳು ಮಾಡಿಕೊಳ್ಳುವ ದೃಷ್ಟಿಯಿಂದ ಐವಿಎಫ್ ಮತ್ತು ಇತರ ಸಂತಾನೋತ್ಪತ್ತಿ ತಂತ್ರಗಳ ಸಹಾಯದಿಂದ ಅಂಡಾಣು, ವೀರ್ಯ ಘನೀಕರಿಸಬಹುದು ( ಸ್ಪರ್ಮ್ ಫ್ರೀಜಿಂಗ್). ಇದರ ಮೂಲಕ ಭವಿಷ್ಯದಲ್ಲಿ ಪೋಷಕರಾಗಲು ಬಯಸಿದಾಗ ಸಂರಕ್ಷಿಸಿಟ್ಟ ಅಂಡಾಣು, ವೀರ್ಯ ಬಳಕೆ ಮಾಡಿಕೊಳ್ಳಬಹುದು. ಆಗ ಯಾವುದೇ ಸಮಸ್ಯೆ ಕೂಡ ಇರೋದಿಲ್ಲ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ