Grapes Pickle: ಮನೆಯಲ್ಲೇ ಥಟ್ಟಂತ ಮಾಡಿ ರುಚಿಕರವಾದ ದ್ರಾಕ್ಷಿ ಉಪ್ಪಿನಕಾಯಿ; ಸಿಂಪಲ್ ರೆಸಿಪಿ ಇಲ್ಲಿದೆ
ದ್ರಾಕ್ಷಿ ಸೀಸನ್ ಈಗಾಗ್ಲೆ ಆರಂಭವಾಗಿದ್ದು, ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದ್ರೂ ಗೊಂಚಲು ಗೊಂಚಲು ದ್ರಾಕ್ಷಿಣಗಳೇ ಕಾಣಸಿಗುತ್ತಿವೆ. ಸಿಹಿ, ಹುಳಿ ರುಚಿಯ ಈ ಹಣ್ಣು ತಿನ್ನಲು ತುಂಬಾನೇ ರುಚಿಕರವಾಗಿರುತ್ತದೆ. ಅಷ್ಟೇ ಯಾಕೆ ಈ ದ್ರಾಕ್ಷಿಯಿಂದ ತಯಾರಿಸುವ ಉಪ್ಪಿನಕಾಯಿ ಕೂಡ ತಿನ್ನಲು ಅಷ್ಟೇ ರುಚಿಕರವಾಗಿರುತ್ತದೆ. ದ್ರಾಕ್ಷಿ ಹಣ್ಣಿನಿಂದ ಜಾಮ್, ಜ್ಯೂಸ್ ತಯಾರಿಸುವಂತೆ ಉಪ್ಪಿನಕಾಯಿಯನ್ನು ಕೂಡಾ ತಯಾರಿಸಬಹುದು. ಥಟ್ಟಂತ ಹತ್ತೇ ನಿಮಿಷದಲ್ಲಿ ಮಾಡಬಹುದಾದ ಈ ಉಪ್ಪಿನಕಾಯಿ ತಿನ್ನಲು ಬಲು ರುಚಿಕರವಾಗಿರುತ್ತದೆ.

ಉಪ್ಪಿನಕಾಯಿ (pickle) ಅಂದ ತಕ್ಷಣ ನೆನಪಾಗೋದೆ ಮಾವಿನಕಾಯಿ ಉಪ್ಪಿನಕಾಯಿ. ಇದಲ್ಲದೆ ನಿಂಬೆ, ಹಸಿ ಮೆಣಸಿನಕಾಯಿ, ಕ್ಯಾರೆಟ್ ಮೂಲಂಗಿ ಉಪ್ಪಿನಕಾಯಿ, ಹಸಿ ಮೆಣಸಿನಕಾಯಿ ಉಪ್ಪಿನಕಾಯಿ ಸೇರಿದಂತೆ ತರಹೇವಾರಿ ಉಪ್ಪಿನಕಾಯಿಗಳನ್ನು ತಯಾರು ಮಾಡುತ್ತಾರೆ. ಈ ಉಪ್ಪಿನಕಾಯಿಗಳನ್ನು ನೀವು ಕೂಡ ಟೇಸ್ಟ್ ಮಾಡಿರುತ್ತೀರಿ ಅಲ್ವಾ. ಆದ್ರೆ ಯಾವತ್ತಾದ್ರೂ ದ್ರಾಕ್ಷಿ ಹಣ್ಣಿನ (Grapes) ಉಪ್ಪಿನಕಾಯಿಯನ್ನು ಸವಿದಿದ್ದೀರಾ? ಅರೇ ದ್ರಾಕ್ಷಿಯಿಂದ ಉಪ್ಪಿನಕಾಯಿ ಮಾಡ್ತಾರಾ ಅಂತ ಹುಬ್ಬೇರಿಸಬೇಡಿ, ದ್ರಾಕ್ಷಿ ಹಣ್ಣಿನ ಜ್ಯೂಸ್, ಜಾಮ್‌ಗಳಂತೆ ಈ ರೆಸಿಪಿ ಕೂಡಾ ಬಲು ರುಚಿಕರವಾಗಿರುತ್ತೆ. ಥಟ್ಟನೆ ಈಸಿಯಾಗಿ ಮಾಡಬಹುದಾದ ದ್ರಾಕ್ಷಿ ಉಪ್ಪಿನಕಾಯಿಯ (grape pickle) ರೆಸಿಪಿ ಇಲ್ಲಿದೆ ನೋಡಿ.
ಥಟ್ಟಂತ ಮನೆಯಲ್ಲೇ ಮಾಡಿ ದ್ರಾಕ್ಷಿ ಉಪ್ಪಿನಕಾಯಿ:
ಥಟ್ಟಂತ ಹತ್ತೇ ಹತ್ತು ನಿಮಿಷದಲ್ಲಿ ಮಾಡಬಹುದಾದ ಈ ದ್ರಾಕ್ಷಿ ಉಪ್ಪಿನಕಾಯಿ ತಿನ್ನಲು ಬಲು ರುಚಿಕರವಾಗಿರುತ್ತದೆ. ಈ ಸಿಂಪಲ್ ರೆಸಿಪಿಯನ್ನು sophiescookingspree ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾಗಿದೆ.
ವಿಡಿಯೋ ಇಲ್ಲಿದೆ ನೋಡಿ:
View this post on Instagram
ದ್ರಾಕ್ಷಿ ಉಪ್ಪಿನಕಾಯಿ ಮಾಡಲು ಬೇಕಾದ ಸಾಮಾಗ್ರಿಗಳು:
ಬೀಜ ತೆಗೆದಿಟ್ಟ ದ್ರಾಕ್ಷಿ, ಮೆಂತ್ಯ, ಸಾಸಿವೆ, ಕರಿಬೇವಿನ ಎಲೆ, ಬೆಳ್ಳುಳ್ಳಿ, ಇಂಗು, ಅಚ್ಚ ಖಾರದ ಪುಡಿ, ಉಪ್ಪು, ಅರಶಿನ ಪುಡಿ, ಬೆಲ್ಲ, ವಿನೆಗರ್ ಅಥವಾ ನಿಂಬೆ ರಸ
ಇದನ್ನೂ ಓದಿ: ಕಿವಿ, ಹಾವು; ಚಿತ್ರದಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು? ಇದುವೇ ಹೇಳುತ್ತೆ ನಿಮ್ಮ ವ್ಯಕ್ತಿತ್ವ
ದ್ರಾಕ್ಷಿ ಉಪ್ಪಿನಕಾಯಿ ತಯಾರಿಸುವ ವಿಧಾನ:
- ಮೊದಲಿಗೆ ಹಸಿರು ಬಣ್ಣದ ದ್ರಾಕ್ಷಿಯನ್ನು ಚೆನ್ನಾಗಿ ತೊಳೆದು, ಬಟ್ಟೆಯಲ್ಲಿ ಒರೆಸಿ, ಅದನ್ನು ಎರಡು ಭಾಗಗಳನ್ನಾಗಿ ಕತ್ತರಿಸಿ, ಬೀಜ ತೆಗೆದಿಡಿ.
- ಇದಾಗ ಬಳಿಕ ಒಂದು ಪ್ಯಾನ್‌ಗೆ ಎಳ್ಳೆಣ್ಣೆ ಹಾಕಿ ಅದು ಕಾದ ಬಳಿಕ, ಅದಕ್ಕೆ ಸ್ವಲ್ಪ ಮೆಂತ್ಯೆ, ಸ್ವಲ್ಪ ಸಾಸಿವೆ, ಕರಿಬೇವಿನ ಎಲೆ ಹಾಕಿ ಫ್ರೈ ಮಾಡಿಕೊಳ್ಳಿ ಜೊತೆಗೆ ಅದಕ್ಕೆ ಕಟ್ ಮಾಡಿಟ್ಟುಕೊಂಡಂತಹ ಬೆಳ್ಳುಳ್ಳಿಯನ್ನು ಸೇರಿಸಿ, ಬೆಳ್ಳುಳ್ಳಿ ಕಂದು ಬಣ್ಣಕ್ಕೆ ತಿರುಗುವವರೆಗೆ ಫ್ರೈ ಮಾಡಿಕೊಳ್ಳಿ.
- ಇದಾದ ಬಳಿಕ ಅದಕ್ಕೆ ಇಂಗು, ನಿಮ್ಮ ಖಾರಕ್ಕೆ ತಕ್ಕಂತೆ ಅಚ್ಚ ಖಾರದ ಪುಡಿ, ಸ್ವಲ್ಪ ಅರಶಿನ ಪುಡಿ ಸೇರಿಸಿ ಎಲ್ಲವನ್ನು ಮಿಶ್ರಣ ಮಾಡಿಕೊಳ್ಳಿ. ಹಾಗೂ ಉಪ್ಪು ಮತ್ತು ಸ್ಪಲ್ಪ ಬೆಲ್ಲದ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿ, ಅದಕ್ಕೆ ಸ್ವಲ್ಪ ನೀರು ಸೇರಿಸಿ ಕುದಿಯಲು ಬಿಡಿ.
- ಮಸಾಲೆ ಚೆನ್ನಾಗಿ ಫ್ರೈ ಆದ ಬಳಿಕದ ಅದಕ್ಕೆ ಮೊದಲೇ ಕಟ್ ಮಾಡಿ ಇಟ್ಟುಕೊಂಡಂತಹ ದ್ರಾಕ್ಷಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ (ದ್ರಾಕ್ಷಿ ಜಾಸ್ತಿ ಬೇಯಲು ಬಿಡಬೇಡಿ)
- ಕೊನೆಯಲ್ಲಿ ಈ ಮಿಶ್ರಣಕ್ಕೆ ನಿಂಬೆ ರಸ ಅಥವಾ ಬಿಳಿ ವಿನೆಗರ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಂಡರೆ ದ್ರಾಕ್ಷಿ ಉಪ್ಪಿನಕಾಯಿ ಸಿದ್ಧ. ನಂತರ ಇದನ್ನು ಗಾಳಿಯಾಡದ ಗಾಜಿನ ಜಾರ್‌ನಲ್ಲಿ ಸಂಗ್ರಹಿಸಿ ಒಂದು ತಿಂಗಳವರೆಗೂ ಇಡಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








