
ಭಾರತವು ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶವಾಗಿದೆ. ಇಲ್ಲಿ ವಿವಿಧ ಧರ್ಮಗಳು, ಭಾಷೆಗಳು, ಸಂಸ್ಕೃತಿಗಳು ಮತ್ತು ಸಂಪ್ರದಾಯಗಳಿವೆ. ಅದಕ್ಕಾಗಿಯೇ ಸಂವಿಧಾನವನ್ನು ರಚಿಸುವಾಗ ಪ್ರತಿಯೊಂದು ಅಂಶವನ್ನು ಎಚ್ಚರಿಕೆಯಿಂದ ಪರಿಗಣಿಸಿ, ದೇಶದ ಒಟ್ಟು ಜನಸಂಖ್ಯೆಗೆ ಹೋಲಿಸಿದರೆ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ಸಮುದಾಯಗಳನ್ನು ಅಲ್ಪಸಂಖ್ಯಾತರು (Minorities) ಎಂದು ವರ್ಗೀಕರಿಸಲಾಯಿತು. ಈ ಅಲ್ಪಸಂಖ್ಯಾತರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಜಾಗೃತಿ ಮೂಡಿಸಲು, ಅಲ್ಪಸಂಖ್ಯಾತ ಸಮುದಾಯಗಳ ಹಕ್ಕುಗಳನ್ನು ರಕ್ಷಿಸಲು ಹಾಗೂ ಹಕ್ಕುಗಳು, ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಕಲ್ಯಾಣದ ಬಗ್ಗೆ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಜಾಗೃತಿ ಮೂಡಿಸಲು ಪ್ರತಿವರ್ಷ ಡಿಸೆಂಬರ್ 18 ರಂದು ಭಾರತದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ ಬನ್ನಿ.
1992 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಅಲ್ಪಸಂಖ್ಯಾತ ಹಕ್ಕುಗಳ ದಿನವನ್ನು ಸ್ಥಾಪಿಸಿತು. ಡಿಸೆಂಬರ್ 18, 1992 ರಂದು, ವಿಶ್ವಸಂಸ್ಥೆಯು ರಾಷ್ಟ್ರೀಯ, ಜನಾಂಗೀಯ, ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರ ಹಕ್ಕುಗಳ ಘೋಷಣೆಯನ್ನು ಅಂಗೀಕರಿಸಿತು. ಈ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತರ ರಕ್ಷಣೆ ಮತ್ತು ಅವರ ಹಕ್ಕುಗಳನ್ನು ಬಲಪಡಿಸುವ ಸಲುವಾಗಿ ಭಾರತದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳ ದಿನಾಚರಣೆ ಪ್ರಾರಂಭವಾಯಿತು. ಇಂದಿಗೂ ಸಹ ಪ್ರತಿ ವರ್ಷ ಡಿಸೆಂಬರ್ 18 ರಂದು ಈ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ಅಲ್ಪಸಂಖ್ಯಾತ ಎಂದು ಪದದ ವ್ಯಾಪ್ತಿ ಭಾರತೀಯ ಸಂವಿಧಾನದ ಅಡಿಯಲ್ಲಿ ಬಹಳ ಸ್ಪಷ್ಟವಾಗಿದೆ. ಆರಂಭದಲ್ಲಿ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಬೌದ್ಧ ಮತ್ತು ಪಾರ್ಸಿ ಈ ಐದು ಸಮುದಾಯಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನವನ್ನು ನೀಡಲಾಯಿತು. ನಂತರ 2014 ರಲ್ಲಿ ಜೈನಸಮುದಾಯವನ್ನೂ ಈ ಪಟ್ಟಿಯಲ್ಲಿ ಸೇರಿಸಲಾಯಿತು. ದೇಶದ ಒಟ್ಟು ಜನಸಂಖ್ಯೆಗೆ ಹೋಲಿಸಿದರೆ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ಸಮುದಾಯಗಳನ್ನು ಅಲ್ಪಸಂಖ್ಯಾತರು ಎಂದು ಕರೆಯಲಾಗುತ್ತದೆ. ಭಾರತೀಯ ಸಂವಿಧಾನವು ಅಲ್ಪಸಂಖ್ಯಾತರನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸದಿದ್ದರೂ, ಸಂವಿಧಾನದ 29 ಮತ್ತು 30 ನೇ ವಿಧಿಗಳು ಅವರ ಹಿತಾಸಕ್ತಿಗಳನ್ನು ರಕ್ಷಿಸಲು ಹಲವಾರು ನಿಬಂಧನೆಗಳನ್ನು ಒಳಗೊಂಡಿವೆ. ಇದರ ಹೊರತಾಗಿ ಶಿಕ್ಷಣ, ಉದ್ಯೋಗ, ಸಾಮಾಜಿಕ ಭದ್ರತೆ ಮತ್ತು ಸಮಾನ ಅವಕಾಶಗಳ ಕೊರತೆಯು ಅಲ್ಪಸಂಖ್ಯಾತ ಸಮುದಾಯಗಳಿಗೆ ಪ್ರಮುಖ ಸವಾಲಾಗಿ ಉಳಿದಿದೆ. ಈ ಸವಾಲುಗಳನ್ನು ನಿರ್ಮೂಲನೆ ಮಾಡಲು ಅಲ್ಪಸಂಖ್ಯಾತರ ಹಕ್ಕುಗಳ ದಿನವನ್ನು ಆಚರಿಸಲಾಗುತ್ತದೆ.
ಇದನ್ನೂ ಓದಿ: ಮಾನವ ಹಕ್ಕುಗಳ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ