
ಸ್ಯಾನ್ ಜುವಾನ್: 75ನೇ ಆವೃತ್ತಿಯ ಪ್ರತಿಷ್ಠಿತ ‘ಮಿಸ್ ಯೂನಿವರ್ಸ್ 2026’ (ವಿಶ್ವ ಸುಂದರಿ) ಸ್ಪರ್ಧೆಯಲ್ಲಿ ಪೋರ್ಟೊ ರಿಕೊದ ಜೆನಿಫರ್ ಬರೇಟೋ ವಿಜೇತರಾಗಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ತವರು ನೆಲದಲ್ಲೇ ನಡೆದ ಈ ಭವ್ಯ ಸಮಾರಂಭದಲ್ಲಿ ಜೆನ್ನಿಫರ್ ಜಯಭೇರಿ ಬಾರಿಸಿದ್ದು, ಡೊಮಿನಿಕನ್ ರಿಪಬ್ಲಿಕ್ ರನ್ನರ್-ಅಪ್ ಸ್ಥಾನ ಪಡೆದರೆ, ವೆನೆಜುವೆಲಾ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಈ ಬಾರಿ ಭಾರತವನ್ನು ಪ್ರತಿನಿಧಿಸಿದ್ದ ಕಜಿಯಾ ಲಿಜ್ ಮೆಜೊ (Kaziah Liz Mejo) ಕಿರೀಟ ಗೆಲ್ಲುವ ಅವಕಾಶ ಕೈ ತಪ್ಪಿದೆ. ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿದ ಅವರು ಟಾಪ್ 30 ಸುತ್ತಿಗೆ ಅರ್ಹತೆ ಪಡೆದಿದ್ದರಾದರೂ, ಟಾಪ್ 12 ಸುತ್ತಿಗೂ ಮುನ್ನವೇ ಸ್ಪರ್ಧೆಯಿಂದ ಹೊರಬೀಳುವ ಮೂಲಕ ನಿರಾಸೆ ಅನುಭವಿಸಿದರು.
27 ವರ್ಷದ ಜೆನ್ನಿಫರ್ ಬ್ಯಾರೆಟೊ ಕೇವಲ ಸೌಂದರ್ಯವತಿ ಮಾತ್ರವಲ್ಲ, ಉನ್ನತ ಶಿಕ್ಷಣ ಪಡೆದ ವೃತ್ತಿಪರರೂ ಹೌದು. ಅವರು ‘ಪ್ರಿವೆಷನ್ ತಜ್ಞ’ರಾಗಿ (Prevention Specialist) ಕಾರ್ಯನಿರ್ವಹಿಸುತ್ತಿದ್ದು, ಸಂಶೋಧನಾ ಮನೋವಿಜ್ಞಾನದಲ್ಲಿ (Research Psychology) ಪದವಿ ಹಾಗೂ ‘ಮನೋವಿಜ್ಞಾನ’ ಮತ್ತು ‘ಕ್ಲಿನಿಕಲ್ ಸೋಶಿಯಲ್ ವರ್ಕ್’ನಲ್ಲಿ ಎರಡು ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದಾರೆ.
2021ರಲ್ಲಿ ಟೆಕ್ಸಾಸ್‌ನ ಫೋರ್ಟ್ ಹುಡ್‌ನಲ್ಲಿರುವ ಯುನೈಟೆಡ್ ಸ್ಟೇಟ್ಸ್ ರಕ್ಷಣಾ ಇಲಾಖೆಯಲ್ಲಿ (Department of Defense) ಸೇವೆ ಸಲ್ಲಿಸುವ ಮೂಲಕ ಜೆನ್ನಿಫರ್ ತಮ್ಮ ವೃತ್ತಿಜೀವನ ಆರಂಭಿಸಿದರು. ‘ಫ್ಯಾಮಿಲಿ ಅಡ್ವೊಕಸಿ ಪ್ರೋಗ್ರಾಂ’ ಅಡಿಯಲ್ಲಿ ಶಿಕ್ಷಕಿಯಾಗಿ ಮತ್ತು ಬಿಕ್ಕಟ್ಟು ನಿರ್ವಹಣಾ ಸಹ-ಪ್ರತಿಸ್ಪಂದಕರಾಗಿ (Crisis Co-responder) ಕೆಲಸ ಮಾಡಿದ ಅವರು, ಕೌಟುಂಬಿಕ ಹಿಂಸಾಚಾರ ಮತ್ತು ಮಕ್ಕಳ ಮೇಲಿನ ದೌರ್ಜನ್ಯದಿಂದ ಬಳಲುತ್ತಿರುವ ಸೇನಾ ಕುಟುಂಬಗಳಿಗೆ ಆಸರೆಯಾಗಿದ್ದರು. ಇದರೊಂದಿಗೆ, ಕಾರ್ಲ್ ಆರ್. ಡಾರ್ನಾಲ್ ಆರ್ಮಿ ಮೆಡಿಕಲ್ ಸೆಂಟರ್‌ನಲ್ಲಿ ಸ್ವಯಂಸೇವಕಿಯಾಗಿ ಹಾಗೂ ಪೋರ್ಟೊ ರಿಕೊದ ಪೀಡಿಯಾಟ್ರಿಕ್ ಡಯಾಬಿಟಿಸ್ ಅಸೋಸಿಯೇಷನ್‌ನೊಂದಿಗೆ ನಿರಂತರವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
2021ರಲ್ಲಿ ಹರ್ನಾಜ್ ಸಂಧು ಮಿಸ್ ಯೂನಿವರ್ಸ್ ಕಿರೀಟ ಗೆದ್ದ ನಂತರ, ಭಾರತವು ಈ ಪ್ರತಿಷ್ಠಿತ ಪ್ರಶಸ್ತಿಗಾಗಿ ಕಾಯುತ್ತಿರುವ ಐದನೇ ವರ್ಷ ಇದಾಗಿದೆ. ಇದಕ್ಕೂ ಮೊದಲು 1994ರಲ್ಲಿ ಸುಶ್ಮಿತಾ ಸೇನ್ ಮತ್ತು 2000ರಲ್ಲಿ ಲಾರಾ ದತ್ತಾ ಭಾರತಕ್ಕೆ ವಿಶ್ವ ಸುಂದರಿ ಕಿರೀಟವನ್ನು ತಂದುಕೊಟ್ಟಿದ್ದರು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:35 am, Wed, 25 November 26