ಮೊಬೈಲ್ ಕಂಡಾಗಲೆಲ್ಲ ಸೆಲ್ಫೀ ತೆಗೆದುಕೊಳ್ಳುತ್ತೀರಾ?; ಮುಖ ವಿರೂಪವಾಗಬಹುದು ಎನ್ನುತ್ತಿದೆ ಅಧ್ಯಯನ

ಕ್ಯಾಮೆರಾವನ್ನು ನಮ್ಮ ಮುಖದ ಬಳಿ ಹಿಡಿದು ಸೆಲ್ಫೀ ಕ್ಲಿಕ್ಕಿಸಿಕೊಂಡಾಗ ಮುಖ ಇನ್ನಷ್ಟು ದೊಡ್ಡದಾಗಿ ಕಾಣುತ್ತದೆ. ಮುಖವನ್ನು ದೂರದಿಂದ ಫೋಟೋ ತೆಗೆಯುವುದಕ್ಕೂ ಹತ್ತಿರದಿಂದ ತೆಗೆಯುವುದಕ್ಕೂ ವ್ಯತ್ಯಾಸವಿದೆ.

ಮೊಬೈಲ್ ಕಂಡಾಗಲೆಲ್ಲ ಸೆಲ್ಫೀ ತೆಗೆದುಕೊಳ್ಳುತ್ತೀರಾ?; ಮುಖ ವಿರೂಪವಾಗಬಹುದು ಎನ್ನುತ್ತಿದೆ ಅಧ್ಯಯನ
ಸೆಲ್ಫೀ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Apr 10, 2022 | 4:29 PM

ಮೊಬೈಲ್ ಫೋನ್ ಕೈಗೆ ಬಂದಮೇಲೆ ಜನರ ಜೀವನಶೈಲಿಯೇ ಬದಲಾಗಿಹೋಗಿದೆ. ಹೋದಲ್ಲೆಲ್ಲ ಸೆಲ್ಫೀ (Selfie) ಕ್ಲಿಕ್ಕಿಸಿಕೊಳ್ಳುವುದು, ಮೊಬೈಲ್ ಕಂಡಾಗಲೆಲ್ಲ ಸೆಲ್ಫೀ ಕ್ಯಾಮೆರಾ ಆನ್ ಮಾಡುವವರ ಸಂಖ್ಯೆ ಜಾಸ್ತಿಯಾಗಿದೆ. ನಿಮಗೂ ಸೆಲ್ಫೀ ಹುಚ್ಚಿದ್ದರೆ ಈ ಸುದ್ದಿಯನ್ನು ಮಿಸ್ ಮಾಡದೆ ಓದಿ. ಮೊಬೈಲ್​ನಲ್ಲಿ ತೆಗೆದುಕೊಳ್ಳುವ ಸೆಲ್ಫಿಗಳು ಮುಖದ ರಚನೆಯನ್ನು ವಿರೂಪಗೊಳಿಸಬಹುದು ಎಂದು ಸಂಶೋಧಕರು ಕಂಡುಹಿಡಿದಿದ್ದಾರೆ. ಇದರ ಪರಿಣಾಮವಾಗಿ ಪ್ಲಾಸ್ಟಿಕ್ ಸರ್ಜರಿ ಮಾಡಿಕೊಳ್ಳಬೇಕಾದ ಸಂದರ್ಭವೂ ಬರಬಹುದು.

ಈ ಕುರಿತು ‘ಪ್ಲಾಸ್ಟಿಕ್ ಮತ್ತು ರೀಕನ್‌ಸ್ಟ್ರಕ್ಟಿವ್ ಸರ್ಜರಿ’ ಜರ್ನಲ್‌ನಲ್ಲಿ ಅಧ್ಯಯನವೊಂದು ಪ್ರಕಟವಾಗಿದೆ. ಯುವಜನರು ಹೆಚ್ಚಾಗಿ ಸೆಲ್ಫಿಗಳನ್ನು ತೆಗೆದುಕೊಳ್ಳುತ್ತಿದ್ದು, ಅವರು ಸಾಮಾಜಿಕ ಮಾಧ್ಯಮದ ಪ್ರಪಂಚವನ್ನು ಹೊರತುಪಡಿಸಿ ಅಸ್ತಿತ್ವದಲ್ಲಿಲ್ಲದ ಸಮಸ್ಯೆಗಳನ್ನು ಸರಿಪಡಿಸಲು ಪ್ಲಾಸ್ಟಿಕ್ ಸರ್ಜನ್‌ಗಳ ಬಳಿಗೆ ಬರುವ ಸಂದರ್ಭಗಳು ಎದುರಾಗಬಹುದು ಎಂದು ಯುಟಿಯ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಬರ್ಡಿಯಾ ಅಮಿರ್ಲಾಕ್ ಹೇಳಿದ್ದಾರೆ.

ರೋಗಿಗಳು ತಮ್ಮ ಮುಖ ಯಾವ ರೀತಿ ಕಾಣಬೇಕೆಂದು ಪ್ಲಾಸ್ಟಿಕ್ ಸರ್ಜನ್‌ನೊಂದಿಗೆ ಚರ್ಚಿಸಲು ಸ್ಮಾರ್ಟ್‌ಫೋನ್ ಕ್ಯಾಮೆರಾದಲ್ಲಿ ತೆಗೆದ ಸೆಲ್ಫೀ ಫೋಟೋಗಳನ್ನು ಹೆಚ್ಚಾಗಿ ಬಳಸುತ್ತಾರೆ ಎಂದು ಡಾ. ಅಮಿರ್ಲಾಕ್ ವಿವರಿಸಿದ್ದಾರೆ. ಸೆಲ್ಫಿ ಛಾಯಾಚಿತ್ರಗಳ ಹೆಚ್ಚಳ ಮತ್ತು ರೈನೋಪ್ಲ್ಯಾಸ್ಟಿಗಾಗಿ ವಿನಂತಿಗಸುವವರಲ್ಲಿ ಹೆಚ್ಚಿನವರು ಮೂಗಿನ ವಿನ್ಯಾಸ ಬದಲಿಸಬೇಕೆಂದು, ಕೆನ್ನೆಯನ್ನು ಇನ್ನೂ ಚೂಪಾಗಿ ಮಾಡಬೇಕೆಂದು, ತುಟಿಯನ್ನು ತೆಳುವಾಗಿಸಬೇಕೆಂದು ಪ್ಲಾಸ್ಟಿಕ್ ಸರ್ಜನ್​ಗಳ ಬಳಿ ಬರುತ್ತಿದ್ದಾರೆ.

ಕ್ಯಾಮೆರಾವನ್ನು ನಮ್ಮ ಮುಖದ ಬಳಿ ಹಿಡಿದು ಸೆಲ್ಫೀ ಕ್ಲಿಕ್ಕಿಸಿಕೊಂಡಾಗ ಮುಖ ಇನ್ನಷ್ಟು ದೊಡ್ಡದಾಗಿ ಕಾಣುತ್ತದೆ. ಮುಖವನ್ನು ದೂರದಿಂದ ಫೋಟೋ ತೆಗೆಯುವುದಕ್ಕೂ ಹತ್ತಿರದಿಂದ ತೆಗೆಯುವುದಕ್ಕೂ ವ್ಯತ್ಯಾಸವಿದೆ. ಇದೇ ಕಾರಣದಿಂದ ಸೆಲ್ಫೀಯನ್ನು ನೋಡಿ ಅನೇಕರು ತಮ್ಮ ಮುಖದ ಬಗ್ಗೆ ಅಸಮಾಧಾನ ಬೆಳೆಸಿಕೊಳ್ಳುತ್ತಿದ್ದಾರೆ. ಹೀಗಾಗಿ, ಸೆಲ್ಫಿಗಳು ಜನರ ನೋಟವನ್ನು ಹೇಗೆ ಬದಲಾಯಿಸಬಹುದು ಎಂಬುದನ್ನು ತನಿಖೆ ಮಾಡಲು ಡಾ. ಅಮಿರ್ಲಾಕ್ ಮತ್ತು ಅವರ ಸಹೋದ್ಯೋಗಿಗಳು 23 ಮಹಿಳೆಯರು ಮತ್ತು ಏಳು ಪುರುಷರು ಸೇರಿದಂತೆ ಒಟ್ಟು 30 ಸ್ವಯಂಸೇವಕರೊಂದಿಗೆ ಅಧ್ಯಯನ ನಡೆಸಿದ್ದಾರೆ.

ಸಂಶೋಧಕರು ಪ್ರತಿ ವ್ಯಕ್ತಿಯ ಮೂರು ಛಾಯಾಚಿತ್ರಗಳನ್ನು ತೆಗೆದರು. ಬಾಗಿದ ಅಥವಾ ನೇರವಾದ ತೋಳಿನಿಂದ ತೆಗೆದ ಸೆಲ್ಫಿಗಳನ್ನು ಅನುಕರಿಸಲು ಸೆಲ್‌ಫೋನ್‌ನಿಂದ 12 ಇಂಚುಗಳು ಮತ್ತು 18 ಇಂಚುಗಳಷ್ಟು ದೂರದಲ್ಲಿ ಮತ್ತು 5 ಅಡಿಗಳಿಂದ ಡಿಜಿಟಲ್ ಸಿಂಗಲ್-ಲೆನ್ಸ್ ಕ್ಯಾಮೆರಾದಲ್ಲಿ ಫೋಟೋ ತೆಗೆಯಲಾಯಿತು. ಈ ಮೂರೂ ಫೋಟೋಗಳನ್ನು ಸ್ಟ್ಯಾಂಡರ್ಡ್ ಬೆಳಕಿನಲ್ಲಿ ಒಂದೇ ರೀತಿ ಕುಳಿತು ತೆಗೆಯಲಾಗಿದೆ.

ಆ ಫೋಟೋಗಳನ್ನು ಪರಿಶೀಲಿಸಿದಾಗ ಸೆಲ್ಫಿಗಳು ಸಿಂಗಲ್ ಲೆನ್ಸ್​ ಕ್ಯಾಮೆರಾದ ಫೋಟೋಗಳಿಗಿಂತಲೂ ವಿರೂಪವಾಗಿದ್ದವು. ಈ ಫೋಟೋಗಳಲ್ಲಿ 12 ಇಂಚುಗಳ ದೂರದ ಸೆಲ್ಫಿಗಳಲ್ಲಿ ಮೂಗು ಶೇ. 6.4ರಷ್ಟು ಉದ್ದವಾಗಿ ಮತ್ತು 18 ಇಂಚಿನ ದೂರದ ಸೆಲ್ಫಿಗಳಲ್ಲಿ ಶೇ. 4.3ರಷ್ಟು ಉದ್ದವಾಗಿದೆ. 12 ಇಂಚಿನ ಸೆಲ್ಫಿಗಳಲ್ಲಿ ಗಲ್ಲದ ಉದ್ದದಲ್ಲಿ ಶೇ.12ರಷ್ಟು ಇಳಿಕೆ ಕಂಡುಬಂದಿದೆ. ಸೆಲ್ಫಿಗಳು ಮುಖದ ಅಗಲಕ್ಕೆ ಹೋಲಿಸಿದರೆ ಮೂಗಿನ ಬುಡವನ್ನು ಅಗಲವಾಗಿ ಕಾಣುವಂತೆ ಮಾಡಿವೆ.

“ನಮ್ಮ ಸಮಾಜದಲ್ಲಿ ಸೆಲ್ಫಿಗಳು, ಸಾಮಾಜಿಕ ಮಾಧ್ಯಮಗಳು ಸೇರಿದಂತೆ ಅನೇಕ ಬದಲಾವಣೆಗಳು ಯುವಜನಾಂಗದವರಲ್ಲಿ ಖಿನ್ನತೆ, ಆತಂಕ, ವ್ಯಸನ ಮತ್ತು ಹಸಿವಿನ ಅಸ್ವಸ್ಥತೆಗಳನ್ನು ಒಳಗೊಂಡಂತೆ ಮಾನಸಿಕ ಆರೋಗ್ಯ ಸಮಸ್ಯೆಗಳ ದರವನ್ನು ಹೆಚ್ಚಿಸಲು ಕಾರಣವಾಗಿವೆ” ಎಂದು ಅಧ್ಯಯನಕಾರರು ಹೇಳಿದ್ದಾರೆ.

ಇದನ್ನೂ ಓದಿ: Moto Edge 30 Pro: 60MP ಸೆಲ್ಫೀ ಕ್ಯಾಮೆರಾ: ಇಂದು ಬಹುನಿರೀಕ್ಷಿತ ಮೋಟೋ ಎಡ್ಜ್ 30 ಪ್ರೊ ಸ್ಮಾರ್ಟ್‌ಫೋನ್‌ ಬಿಡುಗಡೆ

ಮಿಸ್​ ಯೂನಿವರ್ಸ್​ ಹರ್ನಾಜ್​ ಸಂಧು ಭಾರತಕ್ಕೆ ಬರುತ್ತಿದ್ದಂತೆ ಭೇಟಿಯಾಗಿ ಸೆಲ್ಫೀ ತೆಗೆದುಕೊಂಡ ಶಶಿ ತರೂರ್​; ಸಮಚಿತ್ತ, ಆಕರ್ಷಕ ಎಂದು ಹೊಗಳಿಕೆ