Mother’s Day 2022: ಅವಳು ಕೇವಲ ತಾಯಿಯಲ್ಲ ಭುವಿಯೊಳಗಿದ್ದ ದೇವತೆ

| Updated By: ಅಕ್ಷಯ್​ ಪಲ್ಲಮಜಲು​​

Updated on: May 08, 2022 | 6:30 AM

Mother’s Day 2022: ಅವಳೇನೂ ಸಂಪತ್ತಿನಲ್ಲಿ ಶ್ರೀಮಂತಳಾಗಿರಲಿಲ್ಲ ಆದರೆ ಪ್ರೀತಿಯಲ್ಲಿ ಯಾರನ್ನಾದರೂ ಮುಳುಗಿಸುವ ಪ್ರೇಮದ ಗಣಿಯಾಗಿದ್ದಳು. ಅವಳ ಬದುಕನ್ನು ಕಂಡಾಗ ಒಮ್ಮೊಮ್ಮೆ ನನಗನ್ನಿಸುತ್ತಿತ್ತು, ಇವಳೇಕೆ ಸಹನಾಮೂರ್ತಿಯಾದಳು. ಜೀವನವೆಲ್ಲ ಅವಳು ತನಗಾಗಿ ಬದುಕಿದ್ದು ತುಂಬಾ ಕಡಿಮೆ ತನ್ನವರ ಖುಷಿಗಾಗಿಯೇ ಜೀವ ಜೀವನ ಸವೆಸಿದ್ದಳು.

Mother’s Day 2022: ಅವಳು ಕೇವಲ ತಾಯಿಯಲ್ಲ ಭುವಿಯೊಳಗಿದ್ದ ದೇವತೆ
ಸಾಂದರ್ಭಿಕ ಚಿತ್ರ
Follow us on

ಯಾಕೋ ಗೊತ್ತಿಲ್ಲ ಅವಳ ಬಗ್ಗೆ ಬರೀಬೇಕು ಅಂದೊಕೊಂಡು ಲೇಖನಿ ಹಿಡಿದುಕೊಂಡಾಗಳೆಲ್ಲ ಏನೋ ಒಂಥರ ತಳಮಳ. ಸಾವಿರ ಭಾವನೆಗಳು ಒಮ್ಮೆಗೆ ಪ್ರವಾಹ ರೂಪದಿ ಬಂದಂತೆ ಮನ ನಡುಗಿ ಹೋಗುತ್ತದೆ. ಆದರೂ ಈ ಬಾರಿ ಅವಳ ಬಗ್ಗೆ ಬರಿಯಲೇ ಬೇಕೆಂದು ಭಾವನೆಗಳಿಗೆ ಆಣೆಕಟ್ಟು ಕಟ್ಟಿ ಲೇಖನವನ್ನು ಪೂರ್ಣಗೊಳಿಸಿದ್ದೇನೆ. ಅವಳೆಂದರೆ ಬರಿಯ ಸಂಬಂಧವಲ್ಲ ಭಾವನೆಗಳಿಗೆ ನಿಲುಕದ ಅನುಬಂಧ. ಅವಳ ಪ್ರೀತಿಯ ವರ್ಣಿಸಲು ಕವಿರತ್ನ ಕಾಳಿದಾಸನಿಗೊ ಪದಗಳ ಕೊರತೆಯಾಗಬಹುದೇನು ಎಂಬಂತಿತ್ತು ಅವಳ ಹೃದಯವೈಶಾಲ್ಯತೆ. ಅವಳು ನನಗೆ ಕೇವಲ ಜನ್ಮ ನೀಡಿಲ್ಲ ಜೀವನ ನೀಡಿದ್ದಾಳೆ. ಅವಳೊಂತರ ವಿಚಿತ್ರ ಒಮ್ಮೊಮ್ಮೆ ಸಾವಿರ ನೆನಪೊಳಗೆ ನನ್ನ ಕುಗ್ಗಿಸಿಬಿಡುತ್ತಾಳೆ. ಮಗದೊಮ್ಮೆ ಜಗವ ಗೆಲ್ಲುವ ಆತ್ಮಸ್ಥೈರ್ಯ ತುಂಬುತ್ತಾಳೆ. ಅವಳೊಬ್ಬಳು ನನ್ನೊಂದಿಗಿದ್ದರೆ ಸಾಕಿತ್ತು ಎಂತಹ ಕಷ್ಟಗಳನ್ನು ಮೆಟ್ಟಿ ನಿಲ್ಲ ಬಲ್ಲೆ ಎಂಬ ಧೈರ್ಯ ನನ್ನೊಳಗಿರುತ್ತಿತ್ತು. ಯಾರ ಹಂಗಿಲ್ಲದೆ ಬದುಕ ಬಲ್ಲೆನು ಎಂಬ ಛಲವಿರುತ್ತಿತ್ತು.

ಅವಳೇನೂ ಸಂಪತ್ತಿನಲ್ಲಿ ಶ್ರೀಮಂತಳಾಗಿರಲಿಲ್ಲ ಆದರೆ ಪ್ರೀತಿಯಲ್ಲಿ ಯಾರನ್ನಾದರೂ ಮುಳುಗಿಸುವ ಪ್ರೇಮದ ಗಣಿಯಾಗಿದ್ದಳು. ಅವಳ ಬದುಕನ್ನು ಕಂಡಾಗ ಒಮ್ಮೊಮ್ಮೆ ನನಗನ್ನಿಸುತ್ತಿತ್ತು, ಇವಳೇಕೆ ಸಹನಾಮೂರ್ತಿಯಾದಳು. ಜೀವನವೆಲ್ಲ ಅವಳು ತನಗಾಗಿ ಬದುಕಿದ್ದು ತುಂಬಾ ಕಡಿಮೆ ತನ್ನವರ ಖುಷಿಗಾಗಿಯೇ ಜೀವ ಜೀವನ ಸವೆಸಿದ್ದಳು. ಹೊಟ್ಟೆ ಯೊಳಗೆ ಮಗುವ ಹೊತ್ತುಕೊಂಡು ಗುಡ್ಡ ಹತ್ತತ್ತಿದ್ದಳು, ಕಟ್ಟಿಗೆ ಹೊರುತ್ತಿದ್ದಳು. ಕಂಕುಳಲಿ ಮಗುವ ಹಿಡಿದು ಮನೆಯ ಮುನ್ನಡೆಸಿದಳು. ಇದ್ದ ಒಂದು ರೂಪಾಯಿಯಲ್ಲಿ ತನ್ನ ಮಕ್ಕಳಿಗೆ ಜಗವ ತೋರಿದ ಮಹಾಮಾತೆ ಅವಳು. ತನ್ನ ಮಕ್ಕಳಿಗಾಗಿ ಅದೆಷ್ಟೋ ಬಾರಿ ಊಟ ಬಿಟ್ಟಿದ್ದಳು , ಅದೆಷ್ಟೋ ರಾತ್ರಿ ನಿದ್ದೆಯನ್ನು ತ್ಯಾಗ ಮಾಡಿದ್ದಾಳೆ. ಅವಳೊಳಗೆ ಇದ್ದದೊಂದೆ ಆಸೆ ನನ್ನ ಮಕ್ಕಳು ಎತ್ತರಕ್ಕೆ ಬೆಳೆಯಬೇಕು ಎಂಬುವುದು.

ಅವಳ ಮಮತಮಯಿ ಮನಸಿಗೆ ಕರಗದವರೇ ಇಲ್ಲ. ಕುಟುಂಬದಿಂದ ಹೊರಗಿನವರನ್ನು ಕೂಡಾ ಕರೆದು ಹೊಟ್ಟೆ ತುಂಬಾ ಊಟ ಮಾಡಿಸುತ್ತಿದ್ದಳು. ಬೇರೆಯವರ ಕಷ್ಟಗಲೋದಗಿದಾಗ ತನಗೆ ಕಷ್ಟ ಬಂದಿದೆ ಎಂಬಂತೆ ಮರುಗುತ್ತಿದ್ದಳು. ಎಲ್ಲ ಮಕ್ಕಳಿಗೂ ತಾಯಿ ಪ್ರೀತಿ ತೋರುತ್ತಿದ್ದಳು. ವಾತ್ಸಲ್ಯವೆ ಮೂರ್ತಿವೆತ್ತಂತಿತ್ತು ಅವಳ ಗುಣ. ವಿಧಿಯಾಟವೊ ಅಥವಾ ನಮ್ಮ ದುರದೃಷ್ಟವು ಗೊತ್ತಿಲ್ಲ ಸುಖವ ಅನುಭವಿಸುವ ಮೊದಲೇ ಜಗವ ತೊರೆದಳು. ಈಗ ಅವಳು ನಮ್ಮೊಂದಿಗಿಲ್ಲ ಆದರೆ ಅವಳು ಬಿಟ್ಟು ಹೋದ ಸಾವಿರ ನೆನೆಪುಗಳು ಎದೆ ಗೂಡಲ್ಲಿ ಭದ್ರವಾಗಿ ಬಿಟ್ಟಿದೆ. ಅವಳು ಹೇಳಿದ ಒಂದು ಮಾತು ಇಂದಿಗೂ ನನ್ನ ಕಣ್ಣಂಚಿನಿಂದ ಭೂಮಿಗೆ ಧುಮುಕಲು ಸಿದ್ದವಾಗಿರುವ ಸಾವಿರಾರು ಕಣ್ಣೀರ ಹನಿಯನ್ನು ತಡೆದು ನಿಲ್ಲಿಸಿದೆ.
ಅವಳು ಮತ್ತಾರು ಅಲ್ಲ ನನ್ನ ಅಮ್ಮ , ಉದರದಿ ಹೊತ್ತು , ಮಡಿಲಲಿ ಲಾಲಿ ಹಾಡಿ ಬಿದ್ದಾಗ ಕೈ ಹಿಡಿದು ಎತ್ತಿ. ಅತ್ತಾಗ ಕಣ್ಣೀರ ಒರೆಸಿ ,ನಕ್ಕಾಗ ತಾನು ನಕ್ಕು ಸಂಭ್ರಮಿಸಿದವಳು. ಅವಳು ಕೇವಲ ತಾಯಿಯಲ್ಲ ಭುವಿಯೊಳಗಿದ್ದ ದೇವತೆಯವಳು.

– ಜಗದೀಶ್ ಬಳಂಜ

ಅಮ್ಮಂದಿರ ಬಗ್ಗೆ ಅದ್ಭುತ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ