
ಕಣ್ಣಿಗೆ ಕಾಣುವ ದೇವರು (God) ಎಂದರೆ ಅದು ಅಮ್ಮ(Mother) ಅಂತ ಹೇಳ್ತಾರೆ. ಈ ಮಾತು ಅಕ್ಷರಶಃ ನಿಜ, ತನ್ನ ಮಕ್ಕಳು ಹಾಗೂ ಮನೆಯವರಿಗಾಗಿ ಎಂತಹ ತ್ಯಾಗಕ್ಕೂ ಸಿದ್ಧಳಿರುವ ತಾಯಿಯ ತ್ಯಾಗ,, ಆಕೆಯ ಪರಿಶುದ್ಧ, ನಿಶ್ಕಲ್ಮಶ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಅದರಲ್ಲೂ ಆಕೆ ತನ್ನ ಮಕ್ಕಳ ಮೇಲೆ ಇಟ್ಟಿರುವ ಪ್ರೀತಿ ಬೆಟ್ಟದಷ್ಟು. ತಾನು ನೋವು, ಕಹಿಯುಂಡರೂ ತಾಯಿ ತನ್ನ ಮಕ್ಕಳಿಗೆ ಮಾತ್ರ ಸಿಹಿ ಮತ್ತು ಖುಷಿಯನ್ನೇ ಹಂಚುತ್ತಾಳೆ. ಇಂತಹ ತ್ಯಾಗಮಯಿ ಹಾಗೂ ದೇವರ ಪ್ರತಿರೂಪವಾದ ತಾಯಿಗೆ ಗೌರವವನ್ನು ಸಲ್ಲಿಸಲು, ಆಕೆಯ ತ್ಯಾಗ ಮತ್ತು ಪ್ರೀತಿಗೆ ಧನ್ಯವಾದ ತಿಳಿಸಲು ಪ್ರತಿ ವರ್ಷ ಮೇ ತಿಂಗಳ ಎರಡನೇ ಭಾನುವಾರದಂದು ವಿಶ್ವ ತಾಯಂದಿರ (World Mother’s Day) ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಇತಿಹಾಸ ಮತ್ತು ಈ ದಿನಕ್ಕೆ ಸಂಬಂಧಿಸಿದ ಆಸಕ್ತಿದಾಯಕ ಕಥೆಯನ್ನು ತಿಳಿಯೋಣ ಬನ್ನಿ.
ಪ್ರತಿವರ್ಷ ವಿಶ್ವ ತಾಯಂದಿರ ದಿನವನ್ನು ಮೇ ತಿಂಗಳ ಎರಡನೇ ಭಾನುವಾರದಂದು ಆಚರಿಸಲಾಗುತ್ತದೆ. ಈ ಬಾರಿ ಮೇ 11 ರಂದು ವಿಶ್ವ ತಾಯಂದಿರ ದಿನವನ್ನು ಆಚರಿಸಲಾಗುವುದು. ಈ ವಿಶೇಷ ದಿನ ನಿಮ್ಮ ಪ್ರೀತಿಯ ತಾಯಿಗೆ ಉಡುಗೊರೆಗಳನ್ನು ನೀಡುವ ಮೂಲಕ, ತಾಯಿಕೆ ಆಕೆಯ ಇಷ್ಟದ ತಿನಿಸುಗಳನ್ನು ಉಣಬಡಿಸುವ ಮೂಲಕ, ಆಕೆಯನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುವ ಮೂಲಕ ಈ ಬಾರಿಯ ತಾಯಂದಿರ ದಿನವನ್ನು ಸ್ಪೆಷಲ್ ಆಗಿ ಆಚರಿಸಿ.
ತಾಯಂದಿರನ್ನು ಗೌರವಿಸುವ ಸಂಪ್ರದಾಯವು ಪ್ರಾಚೀನ ಕಾಲದಿಂದಲೂ ರೂಢಿಯಲ್ಲಿದ್ದರೂ, ತಾಯಂದಿರ ದಿನದ ಆಚರಣೆಯ ಪರಿಕಲ್ಪನೆ ಹುಟ್ಟಿಕೊಂಡಿದ್ದು, ಅಮೆರಿಕದಲ್ಲಿ. ಈ ದಿನದ ಆಚರಣೆಯನ್ನು ಅನ್ನಾ ಜಾರ್ವಿಸ್ ಎಂಬವರು ಪ್ರಾರಂಭಿಸಿದರು. ಅವರು ತಮ್ಮ ತಾಯಿ ಆನ್ ರೀವ್ಸ್ ಜಾರ್ವಿಸ್ ಅವರ ಸ್ಮರಣಾರ್ಥ ದಿನವನ್ನು ಪ್ರಾರಂಭಿಸಿದರು. ಆನ್ ರೀವ್ಸ್ ಜಾರ್ವಿಸ್ ಒಬ್ಬ ಸಾಮಾಜಿಕ ಕಾರ್ಯಕರ್ತೆಯಾಗಿದ್ದು, ಅವರು ಅಮೇರಿಕನ್ ಅಂತರ್ಯುದ್ಧದ ಸಮಯದಲ್ಲಿ ಗಾಯಗೊಂಡ ಸೈನಿಕರ ಆರೈಕೆ ಮಾಡಿದರು, ಆರೋಗ್ಯ ಮತ್ತು ಶಾಂತಿಗಾಗಿ ಸಾಕಷ್ಟು ಕೆಲಸ ಮಾಡಿದರು. ಮತ್ತು ಅವರ ಮರಣ ನಂತರ ಅನ್ನಾ ತನ್ನ ತಾಯಿಯ ಸೇವೆ ಮತ್ತು ತ್ಯಾಗವನ್ನು ಗೌರವಿಸಲು ತಾಯಂದಿರ ದಿನವನ್ನು ಪ್ರಾರಂಭಿಸಿದರು.
ತಾಯಂದಿರ ದಿನದ ಆಚರಣೆಗೆ ಅಡಿಪಾಯ ಹಾಕಿದವರು ಅನ್ನಾ ಜಾರ್ವಿಸ್, ಆದರೆ ಔಪಚಾರಿಕವಾಗಿ ತಾಯಂದಿರ ದಿನವನ್ನು ಮೇ 9, 1914 ರಂದು ಅಮೆರಿಕದ ಅಂದಿನ ಅಧ್ಯಕ್ಷ ವುಡ್ರೋ ವಿಲ್ಸನ್ ಪ್ರಾರಂಭಿಸಿದರು. ಈ ಸಮಯದಲ್ಲಿ, ಯುಎಸ್ ಸಂಸತ್ತಿನಲ್ಲಿ ಒಂದು ಕಾನೂನನ್ನು ಅಂಗೀಕರಿಸಲಾಯಿತು ಮತ್ತು ಪ್ರತಿ ವರ್ಷ ಮೇ ತಿಂಗಳ ಎರಡನೇ ಭಾನುವಾರದಂದು ತಾಯಂದಿರ ದಿನವನ್ನು ಆಚರಿಸಲು ಘೋಷಿಸಲಾಯಿತು. ಅಂದಿನಿಂದ ಅಮೆರಿಕ, ಯುರೋಪ್ ಮತ್ತು ಭಾರತ ಸೇರಿದಂತೆ ಪ್ರಪಂಚದ ಅನೇಕ ಸ್ಥಳಗಳಲ್ಲಿ ತಾಯಂದಿರ ದಿನವನ್ನು ಆಚರಿಸಲು ಪ್ರಾರಂಭಿಸಲಾಯಿತು. ಈ ದಿನವನ್ನು ಆಯ್ಕೆ ಮಾಡಲು ಕಾರಣವೆಂದರೆ, ಸಾಮಾನ್ಯವಾಗಿ ಎಲ್ಲರಿಗೂ ಭಾನುವಾರ ರಜೆ ಇರುತ್ತೆ. ಆದ್ದರಿಂದ ಈ ದಿನ ಪ್ರತಿಯೊಬ್ಬರು ತಮ್ಮ ಕುಟುಂಬದೊಂದಿಗೆ, ವಿಶೇಷವಾಗಿ ತನ್ನ ತಾಯಿಯೊಂದಿಗೆ ಸಮಯ ಕಳೆಯಬಹುದು ಎಂಬ ಉದ್ದೇಶದಿಂದ ಈ ದಿನವನ್ನು ಆಯ್ಕೆ ಮಾಡಲಾಯಿತು.
ಇದನ್ನೂ ಓದಿ: ತಾಯಂದಿರ ದಿನದಂದು ಪ್ರೀತಿಯ ಅಮ್ಮನಿಗೆ ಈ ಕೆಲವು ಸರ್‌ಪ್ರೈಸ್ ಗಿಫ್ಟ್‌ಗಳನ್ನು ನೀಡಿ
ಇದು ತಾಯಂದಿರಿಗೆ ಗೌರವ ಸಲ್ಲಿಸಲಿರುವ ವಿಶೇಷ ದಿನವಾಗಿದೆ. ಇದು ನಿಮ್ಮ ತಾಯಂದಿರ ಪ್ರೀತಿ ಮತ್ತು ತ್ಯಾಗವನ್ನು ಗೌರವಿಸಲು ಮತ್ತು ತಾಯಂದಿರಿಗೆ ಧನ್ಯವಾದ ತಿಳಿಸಲಿರುವ ವಿಶೇಷ ದಿನವಾಗಿದೆ. ಈ ದಿನವು ತಾಯಿಯೊಂದಿಗೆ ನಿಮ್ಮ ಸಂಬಂಧವನ್ನು ಮತ್ತಷ್ಟು ಬಲ ಪಡಿಸಲು ಒಂದು ಅವಕಾಶವನ್ನು ಕೂಡಾ ನೀಡುತ್ತದೆ.
ಹೀಗೆ ತಾಯಂದಿರ ದಿನವನ್ನು ಪ್ರತಿಯೊಬ್ಬರೂ ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಾರೆ. ಕೆಲವರು ಈ ದಿನದಂದು, ತಮ್ಮ ತಾಯಂದಿರಿಗೆ ಮನೆಕೆಲಸಗಳಿಂದ ವಿರಾಮ ನೀಡಿ ಅವರನ್ನು ಪ್ರವಾಸಕ್ಕೆ ಹಾಗೂ ಹೊರಗಡೆ ಸುತ್ತಾಡಲು ಕರೆದುಕೊಂಡು ಹೋದರೆ, ಕೆಲವರು ಅಮ್ಮಂದಿರಿಗೆ ಅವರ ನೆಚ್ಚಿನ ಉಡುಗೊರೆಯನ್ನು ನೀಡುವ ಮೂಲಕ ಈ ದಿನವನ್ನು ಬಹಳ ವಿಶೇಷವಾಗಿ ಆಚರಿಸುತ್ತಾರೆ. ಒಟ್ಟಾರೆಯಾಗಿ ಇದು ನಿಮ್ಮ ತಾಯಿಯ ಪ್ರೀತಿ ಮತ್ತು ತ್ಯಾಗಕ್ಕೆ ಗೌರವ ಸಲ್ಲಿಸಲು ಮತ್ತು ಧನ್ಯವಾದ ಹೇಳಲು ಇರುವಂತಹ ವಿಶೇಷ ದಿನವಾಗಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ