Mother’s Day 2026: ತಾಯಂದಿರ ದಿನವನ್ನು ಆಚರಿಸುವ ಸಂಪ್ರದಾಯ ಆರಂಭವಾದದ್ದು ಹೇಗೆ ಗೊತ್ತಾ?

ಈ ಜಗತ್ತಿನಲ್ಲಿ ತಾಯಿಯ ಪ್ರೀತಿಗಿಂತ ಮಿಗಿಲಾದದ್ದು ಯಾವುದೂ ಇಲ್ಲ. ಯಾವುದೇ ಷರತ್ತು, ನಿರೀಕ್ಷೆ, ಅಪೇಕ್ಷೆಗಳಿಲ್ಲದ ಪ್ರೀತಿ ಎಂದರೆ ಅದು ತಾಯಿ ಪ್ರೀತಿ. ಅದರಲ್ಲೂ ಆಕೆಯ ತ್ಯಾಗ ಮತ್ತು ಪ್ರೀತಿಗೆ ಬೆಲೆಲ ಕಟ್ಟಲೂ ಸಾಧ್ಯವೇ ಇಲ್ಲ. ಅದಕ್ಕಾಗಿಯೇ ತಾಯಂದಿರ ಗೌರವಾರ್ಥವಾಗಿ ವಿಶ್ವಾದ್ಯಂತ ಮೇ ತಿಂಗಳ ಎರಡನೇ ಭಾನುವಾರದಂದು ತಾಯಂದಿರ ದಿನವನ್ನು ಆಚರಿಸಲಾಗುತ್ತದೆ. ತಾಯಂದಿರನ್ನು ಸಂಭ್ರಮಿಸಲಿರುವ ಈ ವಿಶೇಷ ದಿನದ ಆಚರಣೆಯ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ ಬನ್ನಿ.

Mothers Day 2026: ತಾಯಂದಿರ ದಿನವನ್ನು ಆಚರಿಸುವ ಸಂಪ್ರದಾಯ ಆರಂಭವಾದದ್ದು ಹೇಗೆ ಗೊತ್ತಾ?
ತಾಯಂದಿರ ದಿನ
Image Credit source: Getty Images

Updated on: May 09, 2026 | 5:46 PM

ದೇವರು ಎಲ್ಲೆಡೆ ವಾಸಿಸಲು ಸಾಧ್ಯವಿಲ್ಲ ಆದ್ದರಿಂದ ಅವನು ‘ತಾಯಿ’ಯನ್ನು ಸೃಷ್ಟಿಸಿದನು ಎಂದು ಹೇಳಲಾಗುತ್ತದೆ. ಈ ಮಾತು ಅಕ್ಷರಶಃ ನಿಜ. ತನ್ನ ಕುಟುಂಬ ಮುಖ್ಯವಾಗಿ ತನ್ನ ಮಕ್ಕಳ ಒಳಿತಿಗಾಗಿ ಎಂತಹ ತ್ಯಾಗಕ್ಕೂ ಹಾಗೂ ಯಾವುದೇ ಸವಾಲನ್ನು ಎದುರಿಸಲು ಸಿದ್ಧಳಿರುವ ಅಮ್ಮ (Mother) ನಿಜಕ್ಕೂ ದೇವರ ಪ್ರತಿರೂಪವೇ ಸರಿ. ಇಂತಹ ತಾಯಿಯ ಋಣ ತೀರಿಸಲು ಸಾಧ್ಯವಿಲ್ಲ, ಆಕೆಯ ಪ್ರೀತಿ ಮಮತೆಗೆ ಬೆಲೆ ಕಟ್ಟಲು ಕೂಡಾ ಸಾಧ್ಯವಿಲ್ಲ. ಅದಕ್ಕಾಗಿಯೇ ಮಕ್ಕಳಿಗಾಗಿ ತನ್ನ ಬದುಕನ್ನೇ ಸವೆಸುವ ತಾಯಿಗೆ ಗೌರವ ಸಲ್ಲಿಸಲು, ತಾಯಿಯ ಪ್ರೀತಿ ತ್ಯಾಗಕ್ಕೆ ಧನ್ಯವಾದವನ್ನು ತಿಳಿಸಲು ಪ್ರಪಂಚದಾದ್ಯಂತ ಪ್ರತಿವರ್ಷ ಮೇ ತಿಂಗಳ ಎರಡನೇ ಭಾನುವಾರದಂದು ವಿಶ್ವ ತಾಯಂದಿರ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿಯೋಣ ಬನ್ನಿ.

ತಾಯಂದಿರ ದಿನವನ್ನು ಯಾವಾಗ ಆಚರಿಸಲಾಗುತ್ತದೆ?

ಪ್ರತಿವರ್ಷ ವಿಶ್ವ ತಾಯಂದಿರ ದಿನವನ್ನು ಮೇ ತಿಂಗಳ ಎರಡನೇ ಭಾನುವಾರದಂದು ಆಚರಿಸಲಾಗುತ್ತದೆ. ಈ ಬಾರಿ ಮೇ 10 ರಂದು ವಿಶ್ವ ತಾಯಂದಿರ ದಿನವನ್ನು ಆಚರಿಸಲಾಗುವುದು. ತಾಯಂದಿರ ದಿನವು ಕೇವಲ ಹಬ್ಬವಲ್ಲ, ಬದಲಾಗಿ ತಾಯಂದಿರನ್ನು ಗೌರವಿಸುವ ಸಂದರ್ಭವಾಗಿದೆ.

ಮೊದಲ ಬಾರಿಗೆ ತಾಯಂದಿರ ದಿನವನ್ನು ಆಚರಿಸಿದವರು ಯಾರು?

ತಾಯಂದಿರ ದಿನವನ್ನು ಪ್ರಾರಂಭಿಸಿದ ಕೀರ್ತಿ ಅನ್ನಾ ಜಾರ್ವಿಸ್ ಅವರಿಗೆ ಸಲ್ಲುತ್ತದೆ. ಅವರ ತಾಯಿಯ ಮರಣದ ನಂತರ, ಅವರ ಗೌರವಾರ್ಥವಾಗಿ ವಿಶೇಷ ದಿನವನ್ನು ಆಚರಿಸುವ ಆಲೋಚನೆಯನ್ನು ಅನ್ನಾ ಪ್ರಾರಂಭಿಸಿದರು. ಪ್ರತಿಯೊಬ್ಬರೂ ತಮ್ಮ ತಾಯಂದಿರ ಪ್ರೀತಿ ಮತ್ತು ತ್ಯಾಗವನ್ನು ಗೌರವಿಸಬೇಕೆಂದು ಅನ್ನಾ ಬಯಸಿದ್ದರು. ಈ ಕಲ್ಪನೆಯು ನಂತರ ತಾಯಂದಿರ ದಿನದ ರೂಪವನ್ನು ಪಡೆದುಕೊಂಡಿತು.

ಮೇ ತಿಂಗಳ ಎರಡನೇ ಭಾನುವಾರದಂದೇ  ಏಕೆ ದಿನವನ್ನು ಆಚರಿಸಲಾಗುತ್ತದೆ?

ತಾಯಂದಿರ ದಿನದ ಆಚರಣೆಗೆ ಅಡಿಪಾಯ ಹಾಕಿದವರು ಅನ್ನಾ ಜಾರ್ವಿಸ್, ಆದರೆ ಔಪಚಾರಿಕವಾಗಿ ತಾಯಂದಿರ ದಿನವನ್ನು ಮೇ 9, 1914 ರಂದು ಅಮೆರಿಕದ ಅಂದಿನ ಅಧ್ಯಕ್ಷ ವುಡ್ರೋ ವಿಲ್ಸನ್ ಪ್ರಾರಂಭಿಸಿದರು. ಈ ಸಮಯದಲ್ಲಿ, ಯುಎಸ್ ಸಂಸತ್ತಿನಲ್ಲಿ ಒಂದು ಕಾನೂನನ್ನು ಅಂಗೀಕರಿಸಲಾಯಿತು ಮತ್ತು ಪ್ರತಿ ವರ್ಷ ಮೇ ತಿಂಗಳ ಎರಡನೇ ಭಾನುವಾರದಂದು ತಾಯಂದಿರ ದಿನವನ್ನು ಆಚರಿಸಲು ಘೋಷಿಸಲಾಯಿತು. ಅಂದಿನಿಂದ ಅಮೆರಿಕ, ಯುರೋಪ್ ಮತ್ತು ಭಾರತ ಸೇರಿದಂತೆ ಪ್ರಪಂಚದ ಅನೇಕ ಸ್ಥಳಗಳಲ್ಲಿ ತಾಯಂದಿರ ದಿನವನ್ನು ಆಚರಿಸಲು ಪ್ರಾರಂಭಿಸಲಾಯಿತು.   ಈ ದಿನವನ್ನು ಆಯ್ಕೆ ಮಾಡಲು ಕಾರಣವೆಂದರೆ, ಸಾಮಾನ್ಯವಾಗಿ  ಎಲ್ಲರಿಗೂ ಭಾನುವಾರ ರಜೆ ಇರುತ್ತೆ. ಆದ್ದರಿಂದ ಈ ದಿನ ಪ್ರತಿಯೊಬ್ಬರು ತಮ್ಮ ಕುಟುಂಬದೊಂದಿಗೆ, ವಿಶೇಷವಾಗಿ ತನ್ನ ತಾಯಿಯೊಂದಿಗೆ ಸಮಯ ಕಳೆಯಬಹುದು ಎಂಬ ಉದ್ದೇಶದಿಂದ ಈ ದಿನವನ್ನು ಆಯ್ಕೆ ಮಾಡಲಾಯಿತು.

ಇದನ್ನೂ ಓದಿ: ಬಾರಿಯ ತಾಯಂದಿರ ದಿನವನ್ನು ಹೀಗೆ ವಿಶೇಷವಾಗಿ ಆಚರಿಸಿ

ತಾಯಂದಿರ ದಿನದ ಮಹತ್ವವೇನು?

  • ತಾಯಿಯ ತ್ಯಾಗ ಮತ್ತು ನಿಸ್ವಾರ್ಥ ಪ್ರೀತಿಗೆ ಕೃತಜ್ಞತೆ ವ್ಯಕ್ತಪಡಿಸಲು ತಾಯಂದಿರ ದಿನವನ್ನು ಆಚರಿಸಲಾಗುತ್ತದೆ.
  • ತಾಯಂದಿರ ದಿನವು ನಮ್ಮ ತಾಯಂದಿರ ಪ್ರೀತಿ ಮತ್ತು ತ್ಯಾಗವನ್ನು ಶ್ಲಾಘಿಸಲು ನೆನಪಿಸುತ್ತದೆ. ಈ ದಿನವು ಸಂಬಂಧಗಳನ್ನು ಬಲಪಡಿಸಲು ಮತ್ತು ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಒಂದು ಅದ್ಭುತ ಅವಕಾಶವಾಗಿದೆ.
  • ಮಕ್ಕಳನ್ನು ಬೆಳೆಸುವುದು, ಕುಟುಂಬವನ್ನು ನೋಡಿಕೊಳ್ಳುವುದು, ಭಾವನಾತ್ಮಕ ಬೆಂಬಲವನ್ನು ನೀಡುವುದು ಮತ್ತು ಕಷ್ಟದ ಸಮಯದಲ್ಲಿ ಅವರ ಜೊತೆ ನಿಲ್ಲುವುದು, ಹೀಗೆ ಪ್ರತಿ ಕುಟುಂಬದಲ್ಲಿ ತಾಯಿಯ ಪಾತ್ರವು ನಿರ್ಣಾಯಕವಾಗಿದೆ. ಅದಕ್ಕಾಗಿಯೇ ತಾಯಂದಿರ ದಿನ ಕೇವಲ ಆಚರಣೆಯಲ್ಲ, ಇದು ನಮ್ಮ ಸಂಬಂಧಗಳನ್ನು ಗಾಢವಾಗಿಸುವ ದಿನವೂ ಆಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us