18ನೇ ಶತಮಾನದ ಪಾಕಪದ್ಧತಿಗಳಲ್ಲಿ ಸೂಪ್‌ಗಳು ಕೂಡಾ ಒಂದು. ಮುಲ್ಲಿಗಾಟೌನಿ ಸೂಪ್ (Mulligatawny Soup) ಬಗ್ಗೆ ಕೆಲವು ದಂತಕಥೆಗಳಿವೆ. ಹಿಂದಿನ ಮದ್ರಾಸ್ ಪ್ರೆಸಿಡೆನ್ಸಿಯಲ್ಲಿನ ಬ್ರಿಟೀಷ್ ವಸಾಹತುಶಾಹಿ ಮನೆಗಳಲ್ಲಿನ ಪಾಕಶಾಲೆಯ ಸಿಬ್ಬಂದಿಗಳು ಸಾಮಾನ್ಯ ಶೀತ ಅಥವಾ ಜ್ವರಕ್ಕೆ ಮೆಣಸಿನ ರಸ ನೀಡಬೇಕೆಂದು ಹೇಳಿದರು. ಈ ಕಾಳುಮೆಣಸಿನ ರಸವೇ ಅಂತಿಮವಾಗಿ ಮುಲ್ಲಿಗಾಟವ್ನಿ ಆಯಿತು. ಅನೇಕ ಆಂಗ್ಲೋ ಇಂಡಿಯನ್ ಮನೆಗಳಲ್ಲಿ ಇದನ್ನು ಮೆಣಸು ನೀರು ಎಂದು ಕರೆಯುತ್ತಿದ್ದರು. ಮುಲ್ಲಿಗಾಟವ್ನಿ ಸೂಪ್ ಮೂಲತಃ ಆಂಗ್ಲೋಇಂಡಿಯನ್ ಪಾಕ ಪದ್ಧತಿಯಾಗಿದೆ.
ರಾಡಿಸನ್ ಬ್ಲೂ ಹೋಟೆಲ್ ಜಿಆರ್‌ಟಿ ಚೆನ್ನೈನ ಎಕ್ಸಿಕ್ಯೂಟಿವ್ ಚೆಫ್ ಕಿಶೋರ್ ಅವರು ಮುಲ್ಲಿಗಾಟವ್ನಿ ಸೂಪ್ ಯಾವ ರೀತಿ ತಯಾರಿಸುವುದು ಎಂಬುದರ ಪಾಕ ಪದ್ಧತಿಯನ್ನು ಹಂಚಿಕೊಂಡಿದ್ದಾರೆ. ಬಹಳ ಸುಲಭವಾಗಿ ತಯಾರಿಸಬಹುದಾದ ಮುಲ್ಲಿಗಾಟವ್ನಿ ಸೂಪ್‌ಗೆ ಬೇಕಾಗುವ ಪದಾರ್ಥಗಳು: ತೆಂಗಿನ ಎಣ್ಣೆ 20ಮಿಲಿ, ಈರುಳ್ಳಿ 20ಗ್ರಾಂ, ಕತ್ತರಿಸಿದ ಶುಂಠಿ 5ಗ್ರಾಂ, ಹಸಿಮೆಣಸಿನಕಾಯಿ 2, ಅರಶಿನ ಪುಡಿ 5ಗ್ರಾಂ, ಸ್ವಲ್ಪ ಕರಿಬೇವಿನ ಎಲೆ, ಕೊತ್ತಂಬರಿ ಬೀಜ 15ಗ್ರಾಂ, ಜೀರಿಗೆ 15ಗ್ರಾಂ, ಮದ್ರಾಸ್ ಕರಿ ಪೌಡರ್ 10ಗ್ರಾಂ, ಸೇಬು 15ಗ್ರಾಂ, ಸೆಲರಿ(ಅಜ್ಮೋದ) 15ಗ್ರಾಂ, ಆಲೂಗಡ್ಡೆ 40ಗ್ರಾಂ, ಮಸೂರ್ ದಾಲ್ 35ಗ್ರಾಂ, ಕೊತ್ತಂಬರಿ ಕಾಂಡ 35ಗ್ರಾಂ, ತೆಂಗಿನ ಹಾಲು 15ಮಿಲಿ, ಬೇಯಿಸಿದ ಅಕ್ಕಿ 5ಗ್ರಾಂ.
ಇದನ್ನು ಓದಿ; Immunity Booster Soup: ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಈ ಸೂಪ್ ಪ್ರಯತ್ನಿಸಿ
ಮಾಡುವ ವಿಧಾನ: ಒಂದು ಪ್ಯಾನ್‌ನಲ್ಲಿ ತೆಂಗಿನ ಎಣ್ಣೆ ಹಾಕಿ ಅದು ಕಾದ ಬಳಿಕ ಅದಕ್ಕೆ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ, ಹಸಿ ಮೆಣಸಿನ ಕಾಯಿ, ಕರಿಬೇವಿನ ಎಲೆ ಹಾಕಿ ಚೆನ್ನಾಗಿ ಫ್ರೆ ಮಾಡಿ. ನಂತರ ಎಲ್ಲಾ ಮಸಾಲೆಗಳನ್ನು ಸೇರಿಸಿ. ಹಾಗು ಮದ್ರಾಸ್ ಕರಿ ಪೌಡರ್ ಸೇರಿಸಿ 2 ನಿಮಿಷಗಳ ಕಾಲ ಬೇಯಿಸಿ. ನೆನೆಸಿಟ್ಟ ಮಸೂರ್ ದಾಲ್, ಆಲೂಗಡ್ಡೆ, ಸೇಬು, ಕೊತ್ತಂಬರಿ ಕಾಂಡವನ್ನು ಪ್ಯಾನ್‌ಗೆ ಸೇರಿಸಿ. ದಾಲ್ ಮೆತ್ತಗಾಗುವವರೆಗೆ ಅದನ್ನು ಚೆನ್ನಾಗಿ ಬೇಯಿಸಿ. ನಯವಾದ ಪ್ಯೂರಿ ಆಗುವವರೆಗೆ ಸೂಪ್‌ನ್ನು ಮಿಶ್ರಣ ಮಾಡಿ. ನಂತರ ಅದಕ್ಕೆ ತೆಂಗಿನ ಹಾಲು, ಬೇಯಿಸಿದ ಅಕ್ಕಿ ಮತ್ತು ನಿಂಬೆರಸ ಸೇರಿಸಿ ಬೆರೆಸಿಕೊಳ್ಳಿ. ನಂತರ ತಾಜಾ ಕೊತ್ತಂಬರಿ ಸೊಪ್ಪಿನೊಂದಿಗೆ ಅಲಂಕರಿಸಿದರೆ ಮುಲ್ಲಿಗಾಟವ್ನಿ ಸೂಪ್ ಸವಿಯಲು ಸಿದ್ಧ.